ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಷಕಾಂಶಗಳ ಸಾರ ಪಾಕ್ ಚಾಯ್

Last Updated 30 ನವೆಂಬರ್ 2015, 19:59 IST
ಅಕ್ಷರ ಗಾತ್ರ

ತರಕಾರಿ, ಸೊಪ್ಪುಗಳಲ್ಲಿ ಸಾವಿರಾರು ವೈವಿಧ್ಯ. ವಿದೇಶದಲ್ಲಿ ಬೆಳೆದಿದ್ದನ್ನು ಇಲ್ಲಿ ಬೆಳೆಯುವ, ಇಲ್ಲಿನ ಬೆಳೆಯನ್ನು ವಿದೇಶದಲ್ಲಿ ಬೆಳೆಯುವ ಪ್ರಯತ್ನಗಳೂ ಸಾಗುತ್ತಲೇ ಇವೆ. ಅಂಥದ್ದೇ ಒಂದು ಪ್ರಯತ್ನ ಕಂಡು ಬಂದಿದ್ದು ಈ ಬಾರಿ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ.

ಕೃಷಿ ವಿಶ್ವ ವಿದ್ಯಾಲಯದಲ್ಲಿ ಈ ಬಾರಿ ಚೈನೀಸ್ ಕ್ಯಾಬೇಜ್‌ನ ಒಂದು ತಳಿಯಾದ ‘ಪಾಕ್‌ ಚಾಯ್’ ಅನ್ನು ಪ್ರಾತ್ಯಕ್ಷಿಕೆಗೆ ಇಡಲಾಗಿತ್ತು. ಕೋಸಿನ ತಳಿ ಪಾಕ್‌ ಚಾಯ್ ಅನ್ನು ಪ್ರಯೋಗ ರೂಪವಾಗಿ ಬೆಳೆಸಿದ್ದರು ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ನರಸೇಗೌಡ. ಇದೇ ಸಂದರ್ಭದಲ್ಲಿ ಪಾಕ್‌ ಚಾಯ್, ಅದರ ವಿಶೇಷಗಳ ಕುರಿತು ಮಾತು ಹಂಚಿಕೊಂಡರು ಅವರು.

ಪಾಕ್‌ ಚಾಯ್‌ ಚೈನೀಸ್‌ ಕ್ಯಾಬೇಜ್‌ನ ಒಂದು ತಳಿ. ಹೆಸರೇ ಹೇಳುವಂತೆ ಇದು ಚೀನಾ ಮೂಲದ್ದು. ‘ಬ್ರಾಸಿಕಾ’ ಕುಟುಂಬಕ್ಕೆ ಸೇರಿದ ಈ ಚೈನೀಸ್‌ ಕ್ಯಾಬೇಜ್‌ನಲ್ಲಿ ಪ್ರಮುಖವಾಗಿ ಎರಡು ತಳಿಗಳು. ಪಾಕ್ ಚಾಯ್ ಹಾಗೂ ಪೀ ಸಾಯ್. ಪಾಕ್‌ ಚಾಯ್‌ ಅನ್ನು ಬಾಕ್‌ ಚಾಯ್ ಎಂದೂ ಕರೆಯುತ್ತಾರೆ. ಎರಡರ ನಡುವೆ ಬಣ್ಣದ ಹೊರತು ಅಷ್ಟೇನೂ ಭಿನ್ನವಿಲ್ಲ.

ಚೈನೀಸ್ ಕ್ಯಾಬೇಜ್ ತರಕಾರಿ ಸೊಪ್ಪಿನ ಮಾದರಿ ಬೆಳೆ. ಸೊಪ್ಪಿನ ರೂಪದ ಈ ಬೆಳೆ ಬೇರೆ ಕೋಸುಗಳಂತೆ ಗಡ್ಡೆಯನ್ನು ಹೊಂದಿರುವುದಿಲ್ಲ. ಅದಕ್ಕೆ ಇದನ್ನು ‘ನಾನ್‌ ಹೆಡಿಂಗ್’ ಎನ್ನುತ್ತಾರೆ.

ಮೆದುವಾದ, ದೊಡ್ಡ ಚಮಚದ ರೂಪದ ಎಲೆಗಳು ಒತ್ತೊತ್ತಾಗಿ ಇರುತ್ತವೆ. ಚಳಿಗಾಲದಲ್ಲಿ ಸೊಂಪಾಗಿ ಬೆಳೆಯಬಲ್ಲದು. ಉತ್ತರ ಭಾರತದಲ್ಲಿ ಇತ್ತೀಚೆಗೆ ಇದನ್ನು ಅಧಿಕವಾಗಿ ಬೆಳೆಯಲಾಗುತ್ತಿದೆ. ಉತ್ತರ ಭಾರತದ ಮೈದಾನ ಪ್ರದೇಶ ಇದಕ್ಕೆ ತಕ್ಕ ವಾತಾವರಣ ಹೊಂದಿರುವುದು ಇದಕ್ಕೆ ಕಾರಣ. ಆದರೆ ದಕ್ಷಿಣ ಭಾಗದಲ್ಲಿ ಇನ್ನೂ ಆರಂಭಿಕ ಹಂತದಲ್ಲಿದ್ದು, ಮಾಲ್‌ಗಳಲ್ಲಿ ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ಮಾತ್ರ ಆಮದು ಮಾಡಿಕೊಂಡು ಖಾದ್ಯಗಳಿಗೆ ಬಳಸಲಾಗುತ್ತಿದೆ. ಕರ್ನಾಟಕದಲ್ಲಿ ಒಂದೆರಡು ಕಡೆ ಬೆಳೆದ ಉದಾಹರಣೆಗಳಿವೆ. ಬೇಬಿ ಪಾಕ್‌ ಚಾಯ್‌ ಕೂಡ ಲಭ್ಯವಿದ್ದು, ಅದು ಇನ್ನಷ್ಟು ಮೃದುವಾಗಿರುತ್ತದೆ. ಸೂಪುಗಳಲ್ಲಿ, ಫ್ರೈಗಳಲ್ಲಿ, ಸಲಾಡ್‌ಗಳಲ್ಲಿ ಪಾಕ್ ಚಾಯ್‌ ಅನ್ನು ಹೆಚ್ಚೆಚ್ಚು ಬಳಸಲಾಗುತ್ತಿದೆ

ಬೆಳೆಯುವುದು ಹೀಗೆ: ನೋಡಲು ಪೂರ್ಣ ಸೊಪ್ಪಿನಂತೆ ಕಾಣುವ ಇದರ ಬುಡ ಬೆಳ್ಳಗಿದ್ದು, ಮೃದುವಾಗಿರುತ್ತದೆ. ನೆಲದಿಂದ ಮೇಲ್ಮುಖವಾಗಿ ಬೆಳೆಯುವ ಈ ಪಾಕ್‌ ಚಾಯ್ 12ರಿಂದ 18 ಇಂಚಿನವರೆಗೂ ಬೆಳೆಯಬಲ್ಲದು. ಎಲೆಕೋಸನ್ನು ಬೆಳೆಸುವ ರೀತಿಯನ್ನೇ ಇದಕ್ಕೂ ಅನುಸರಿಸಬೇಕಾಗುತ್ತದೆ.

50° ಮತ್ತು 70° ಉಷ್ಣತೆಯಲ್ಲಿ ಬೆಳೆದರೆ ಹೂವು ಬಿಡುತ್ತದೆ. ತುಂಬಾ ಚಳಿಯೂ ಅಲ್ಲದ, ತುಂಬಾ  ಶಾಖವೂ ಇಲ್ಲದ ವಾತಾವರಣ ಇದಕ್ಕೆ ಸೂಕ್ತ. ಕರ್ನಾಟಕದಲ್ಲೂ ಎಲ್ಲೆಲ್ಲಿ ನವಿಲುಕೋಸು, ಹೂ ಕೋಸು, ಎಲೆ ಕೋಸುಗಳನ್ನು ಬೆಳೆಯುತ್ತಾರೋ ಅಲ್ಲೆಲ್ಲಾ ಈ ಪಾಕ್‌ ಚಾಯ್ ಅನ್ನೂ ಬೆಳೆಯಬಹುದು. ಇಲ್ಲಿಯ ಮಣ್ಣಿಗೂ ಅದು ಹೊಂದುಕೊಳ್ಳುತ್ತದೆ. ಅಕ್ಟೋಬರ್‌ ತಿಂಗಳಿನಿಂದ ಫೆಬ್ರುವರಿವರೆಗೆ ಇದನ್ನು ಬೆಳೆಯಲು ಸೂಕ್ತಕಾಲ. 

‘ಅಕ್ಟೋಬರ್‌ನಲ್ಲಿ ಸಸಿ ಮಡಿ ಮಾಡಿದ್ದೆವು. ನಂತರ ಒಂದು ತಿಂಗಳ ಸಸಿಯನ್ನು ನಾಟಿ ಮಾಡಿದೆವು. ಕ್ಯಾಬೇಜ್‌ಗೆ ನೀಡಿದ ಗೊಬ್ಬರವನ್ನೇ ಇದಕ್ಕೆ ನೀಡಿದೆವು. ಅರವತ್ತೈದರಿಂದ ಎಪ್ಪತ್ತು ದಿನಗಳ ಒಳಗೆ ಇಳುವರಿ ಬಂತು. ಒಂದು ಎಕರೆಗೆ 250 ರಿಂದ 300 ಗ್ರಾಂ ಬೀಜವನ್ನು ಹಾಕಬೇಕಾಗುತ್ತದೆ. ತಣ್ಣನೆ ಹವಾಮಾನಕ್ಕೆ ಇದು ಹೊಂದಿಕೊಳ್ಳುತ್ತದೆ. ಲಾಭ ನೀಡುವ ತರಕಾರಿ ಎನ್ನುವುದಕ್ಕಿಂತ ಹೊಸ ರೀತಿಯ ತರಕಾರಿ ಎಂಬುದು ಇದರ ಪ್ರಯೋಗಕ್ಕೆ ಕುತೂಹಲ ಮೂಡಿಸಿತ್ತು’ ಎಂದರು ನರಸೇಗೌಡರು.

ಹವ್ಯಾಸಕ್ಕೆ ಬೆಳೆಸಲು ಇಷ್ಟಪಡುವವರು ಅಂಗಳದಲ್ಲೋ, ತಾರಸಿ ತೋಟದಲ್ಲೂ ಬೆಳೆದು ನೋಡಬಹುದು. ಪೋಷಕಾಂಶಗಳ ಆಗರ ಎಂದು ಗುರುತಿಸಿಕೊಂಡಿರುವ ಪಾಕ್‌ ಚಾಯ್‌ನಲ್ಲಿ 21 ರೀತಿಯ ಪೋಷಕಾಂಶಗಳಿವೆ. ಒಮೆಗಾ3, ಆ್ಯಂಟಿಯಾಕ್ಸಿಡಂಟ್‌, ಖನಿಜಾಂಶಗಳು, ಬೆಟಾ ಕೆರೊಟಿನ್, ಲ್ಯುಟೀನ್ ಅಂಶ ಹೆಚ್ಚಿದ್ದು ಆರೋಗ್ಯಕ್ಕೆ ಪೂರಕವಾಗಿದೆ. ಮೂಳೆ ಗಟ್ಟಿಯಾಗಿರಲು, ರಕ್ತ ಹೆಪ್ಪುಗಟ್ಟುವಲ್ಲಿಯೂ ಪಾಕ್‌ ಚಾಯ್ ಸಹಕಾರಿ. ಹಲವು ರೀತಿಯ ಕ್ಯಾನ್ಸರ್ ವಿರುದ್ಧ ಹೋರಾಡಬಲ್ಲ ಶಕ್ತಿಯನ್ನು ನೀಡಿ ಹೃದಯವನ್ನು ಸ್ವಸ್ಥವಾಗಿಡುತ್ತದೆ.

ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡವನ್ನು ನಿವಾರಿಸುವಲ್ಲೂ ಇದರ ಪಾತ್ರವಿದೆ. ದೃಷ್ಟಿ ಸಮಸ್ಯೆ ನಿವಾರಣೆಗೂ ಉಪಯೋಗಕ್ಕೆ ಬರುತ್ತದೆ.   ಗರ್ಭಿಣಿಯರು ಸೇವಿಸಿದರೆ ಎದೆ ಹಾಲಿನ ಹೆಚ್ಚಳಕ್ಕೆ ಸಹಕಾರಿ. ಡಯಟ್ ಮಾಡುವವರಿಗಂತೂ ಒಳ್ಳೆಯ ಆಯ್ಕೆ. ಬೆಂಗಳೂರಿನ ಕೆಲವು ಸಾವಯವ ಮಳಿಗೆಗಳಲ್ಲಿ ಪಾಕ್‌ ಚಾಯ್‌ ಬೀಜಗಳು ಮಾರಾಟಕ್ಕೆ ಲಭ್ಯವಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT