ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳ ಪ್ರತಿಭಟನೆ

ವಿಬ್ಗಯೊರ್‌್: ಒಂದನೇ ತರಗತಿ ವಿದ್ಯಾರ್ಥಿನಿ ಅತ್ಯಾಚಾರ
Last Updated 21 ಜುಲೈ 2014, 19:43 IST
ಅಕ್ಷರ ಗಾತ್ರ

ಬೆಂಗಳೂರು: ಮಾರತ್‌ಹಳ್ಳಿಯ ವಿಬ್ಗಯೊರ್‌ ಶಾಲಾ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) ಕಾರ್ಯಕರ್ತರು  ಸೋಮವಾರ ನಡೆಸಿದ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದ್ದು,  ಪ್ರತಿಭಟನಾ­ಕಾರರು ಶಾಲೆ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು.

ಮಕ್ಕಳ ಸುರಕ್ಷತೆಗಾಗಿ ಶಾಲಾ ಆಡಳಿತ ಮಂಡಳಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಲು ಶಾಲೆಯ ಪ್ರಾಂಶುಪಾಲರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟುಹಿಡಿದ ಪ್ರತಿಭಟ ನಾಕಾರರು  ಪೊಲೀಸರ ಜೊತೆಗೆ ವಾಗ್ವಾದ ನಡೆಸಿದರು. ಪ್ರಾಂಶುಪಾಲರನ್ನು ಸ್ಥಳಕ್ಕೆ ಕರೆಸದೆ ಇದ್ದಿದ್ದರಿಂದ ಆಕ್ರೋಶಗೊಂಡ ಪ್ರತಿಭಟ­ನಾ­­ಕಾರರು ಶಾಲೆಯ ಆವರಣ­ದೊಳಗೆ ನುಗ್ಗಲು ಯತ್ನಿಸಿದರು.

ಆಗ ಪೊಲೀಸರು ಪ್ರತಿಭಟ ನಾಕಾರನ್ನು  ಬ್ಯಾರಿಕೇಡ್‌ ಹಾಕಿ ತಡೆದರು. ಸಮೀಪದ ಇನ್ನೊಂದು ದ್ವಾರದ ಮೂಲಕ ಹೋಗಲು ಯತ್ನಿಸಿದ ಪ್ರತಿಭಟನಾಕಾರರು ಪೊಲೀಸರು ಹಾಗೂ ಶಾಲೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ ವಾದ್ದರಿಂದ ಪ್ರತಿಭಟನಾಕಾರರನ್ನು ಚದುರಿಸಲು  ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು  ಗಾಯಗೊಂಡಿದ್ದಾರೆ.

ಈ ವೇಳೆ ಮಾತನಾಡಿದ ಎಬಿವಿಪಿಯ ಬೆಂಗಳೂರು ಪೂರ್ವ ವಲಯದ ಸಂಚಾಲಕ ನಿತಿನ್‌ಗೌಡ, ‘ಶಾಲೆಯಲ್ಲಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯನ್ನು ನೇಮಿಸಬೇಕು.  ಶಾಲಾ ವಾಹನಗಳಲ್ಲಿ ಕಡ್ಡಾಯವಾಗಿ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸಬೇಕು.  ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ನಡೆಸುತ್ತಿರುವ ತನಿಖೆಗೆ  ಶಾಲೆಯ ಆಡಳಿತ ಮಂಡಳಿ ಸಹಕಾರ ನೀಡಬೇಕು’ ಎಂದು ಆಗ್ರಹಿಸಿದರು.
ಮಕ್ಕಳ ಸುರಕ್ಷತೆಗೆ ಒಂದು ವಾರದಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ:   ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಸದಸ್ಯರು ನಗರದಲ್ಲಿ ರ್‌್ಯಾಲಿ ಮೂಲಕ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಸ್ವಾತಂತ್ರ್ಯ ಉದ್ಯಾನದಿಂದ  ರ್‌್ಯಾಲಿ ಆರಂಭಿಸಿದ 700ಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಆನಂದರಾವ್ ವೃತ್ತದಲ್ಲಿ ಬ್ಯಾರಿಕೇಡ್‌ ಹಾಕಿ ತಡೆದರು. ಇದರಿಂದ ಆಕ್ರೋಶ­ಗೊಂಡ ಅವರು ಬ್ಯಾರಿಕೇಡ್‌ಗಳನ್ನು ಹತ್ತಿ ಮುನ್ನುಗ್ಗಲು ಯತ್ನಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಮುನಿರಾಜುಗೌಡ, ‘ನಗರದಲ್ಲಿ ಕಳೆದ ಹತ್ತು ದಿನದಲ್ಲಿ 15ಕ್ಕೂ ಹೆಚ್ಚು ಅತ್ಯಾ ಚಾರ ಪ್ರಕರಣ­ಗಳು ನಡೆದಿದ್ದರೂ ರಾಜ್ಯ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ. ಇಂತಹ ಪ್ರಕರ­ಣ­ಗಳಲ್ಲಿ ಭಾಗಿಯಾಗಿರುವ ಕೂಡಲೇ ಬಂಧಿಸಬೇಕು’ ಎಂದು ಆಗ್ರಹಿಸಿದರು. ಮುಂಜಾಗ್ರತಾ ಕ್ರಮವಾಗಿ ಕಾರ್ಯ­ಕ­ರ್ತ­ರನ್ನು ಬಂಧಿಸಿದ ಪೊಲೀಸರು ಸಂಜೆ ಬಿಡುಗಡೆ ಮಾಡಿದರು.

ವಿವಿಧ ಸಂಘಟನೆಗಳಿಂದ ಪ್ರತಿಭಟನೆ: ಬಿಜೆಪಿಯ ಬೆಂಗಳೂರು ನಗರ ಘಟಕದ ಮಹಿಳಾ ಮೋರ್ಚಾ ಸದಸ್ಯರು ಸೇರಿ­ದಂತೆ  ವಿವಿಧ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು ಪುರಭವನದ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಧರಣಿಯಲ್ಲಿ ಮಾತನಾ­ಡಿದ ಬಿಜೆಪಿಯ ತೇಜಸ್ವಿನಿ ಗೌಡ, ‘ಅತ್ಯಾಚಾರ ಪ್ರಕರಣ­ದಲ್ಲಿ ಭಾಗಿಯಾಗಿ­ರುವ ಆರೋಪಿ ನಿರ್ದಿಷ್ಟ ಕೋಮಿಗೆ ಸೇರಿದವನು ಎಂದು ತಿಳಿದು, ಅವನನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ’    ಎಂದು ದೂರಿದರು.

‘ಅತ್ಯಾಚಾರಿಗಳ ಮೇಲೆ ಪೊಲೀಸರು ನೇರವಾಗಿ ಕ್ರಮ ಕೈಗೊಳ್ಳುವಂತೆ ಕಾನೂ­ನಿ­ನಲ್ಲಿ ಪರಿಷ್ಕರಣೆ ಆಗಬೇಕು. ರಾಜ್ಯ­ದಲ್ಲಿ ಮಹಿಳಾ ಪೊಲೀಸ್‌ ಸಿಬ್ಬಂದಿಗಳ ಕೊರತೆ ಇದೆ. ಆದ್ದ ರಿಂದ ಹೆಚ್ಚಿನ ಮಹಿಳಾ ಸಿಬ್ಬಂದಿ ನೇಮಿಸಬೇಕು’ ಎಂದರು. ವಿಧಾನ ಪರಿಷತ್‌ನ ಮಾಜಿ ಸದಸ್ಯೆ ಭಾರತಿ ಶೆಟ್ಟಿ ಮಾತನಾಡಿ, ‘ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ 467ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿವೆ. ಇದು ಇಡೀ ಸಮಾಜವೇ ತಲೆ ತಗ್ಗಿಸುವ ಸಂಗತಿ. ಕೆ.ಜೆ.ಜಾರ್ಜ್‌ ಒಬ್ಬ ಅಸಮರ್ಥ ಗೃಹ ಸಚಿವರಾಗಿದ್ದು  ಕೂಡಲೇ ಅವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ರೂಪಿಸಿದ ಗೂಂಡಾ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ­ಗೊಳಿ­ಸ­­ಬೇಕು. ಕಾಂಗ್ರೆಸ್‌ ಸರ್ಕಾರ ಅನ್ನ ಭಾಗ್ಯ­ದಂತಹ ಯೋಜನೆಗಳ ಜೊತೆಗೆ ಮಹಿಳೆ­ಯರ ಭದ್ರತೆಗೆ ಯೋಜನೆಗಳನ್ನು ರೂಪಿಸ­ಬೇಕು’ ಎಂದರು.
ನಗರದಲ್ಲಿ ನಡೆಯುತ್ತಿರುವ ಸರಣಿ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ  ಜನವಾದಿ ಮಹಿಳಾ ಸಂಘಟನೆ ಮತ್ತು ಸ್ಟೂಡೆಂಟ್‌ ಫೆಡರೇಷನ್‌ ಆಫ್ ಇಂಡಿಯಾದ (ಎಸ್‌ಎಫ್‌ಐ) ಸದಸ್ಯರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್‌.­ವಿಮಲಾ, ‘ಅತ್ಯಾಚಾರ ಪ್ರಕರಣದ ಆರೋಪಿ­ಗಳ ವಿಚಾರಣೆಗೆ ಶೀಘ್ರ ತ್ವರಿತ­ಗತಿಯ ನ್ಯಾಯಾಲಗಳನ್ನು ಸ್ಥಾಪಿಸ­ಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಗಮನ ಹರಿಸದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಕೀಲರ ಸಂಘದ ಸದಸ್ಯರು ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸಂಘದ ಅಧ್ಯಕ್ಷ ಕೆ.ಎನ್‌.ಸುಬ್ಬಾರೆಡ್ಡಿ ಮಾತನಾಡಿ, ‘ನಗರದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಅಮಾನವೀಯವಾಗಿ ಅತ್ಯಾಚಾರ ನಡೆಯುತ್ತಿರುವುದು ಖಂಡ­ನೀಯ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸ­ಬೇಕು’ ಎಂದರು. ಪುಲಿಕೇಶಿನಗರದ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ವಿಮೋಚನಾ ಸಂಘಟನೆಯ ಸದಸ್ಯರು ಪುಲಿಕೇಶಿನಗರ ಠಾಣೆಯ ಎದುರು ಪ್ರತಿಭಟನೆ      ನಡೆಸಿದರು.

ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸಲು  ರಾಜ್ಯ ಸರ್ಕಾರ ಸಂಪೂರ್ಣವಾಗಿ  ವಿಫಲವಾಗಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು, ಗೃಹ ಸಚಿವರು ರಾಜೀನಾಮೆ ನೀಡಬೇಕು.
– ಮಾಜಿ ಸಂಸದೆ ತೇಜಸ್ವಿನಿ ಗೌಡ

ನ್ಯಾಯಮೂರ್ತಿ ಜೆ.ಎಸ್.ವರ್ಮಾ ಸಮಿತಿಯ ವರ ದಿಯ ಪ್ರಕಾರ ದೌರ್ಜನ್ಯಕ್ಕೆ ಒಳಗಾದವರ ಜೊತೆಗೆ ಮಾನ ವೀಯತೆಯಿಂದ ನಡೆದುಕೊಳ್ಳುವಂತೆ ಎಲ್ಲ ಪೊಲೀಸ್‌ ಸಿಬ್ಬಂದಿಗಳಿಗೂ  ಲಿಂಗ ಸಂವೇದನೆಯ ಬಗ್ಗೆ ತರಬೇತಿ ನೀಡಬೇಕು.
– ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ಕೆ.ಎಸ್‌.ವಿಮಲಾ

ಅತ್ಯಾಚಾರಿಗಳಿಗೆ ಗಲ್ಫ್‌ ರಾಷ್ಟ್ರಗಳಲ್ಲಿರುವಂತೆ ಕಠಿಣ ಶಿಕ್ಷೆ ವಿಧಿಸಬೇಕು. ಸರ್ಕಾರ ಬರೀ ಆಶ್ವಾಸನೆ ನೀಡುವುದನ್ನು ನಿಲ್ಲಿಸಬೇಕು.
– ವಿಜಯನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಫ್ಯಾಷನ್ ಟೆಕ್ನಾಲಜಿಯ ವಿದ್ಯಾರ್ಥಿನಿ ಕವಿತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT