ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿ ಕುಂಠಿತ: ಮನಮೋಹನ್‌ ಟೀಕೆ

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ನವದೆಹಲಿ: ‘ನರೇಂದ್ರ ಮೋದಿ ಅವರ ಆಡಳಿತದಲ್ಲಿ ದೇಶದ ಆರ್ಥಿಕತೆ ಯಾವ ಪ್ರಮಾಣದಲ್ಲಿ ಪ್ರಗತಿ ಆಗಬೇಕಿತ್ತೋ ಅಷ್ಟು ಬೆಳವಣಿಗೆ ಆಗಿಲ್ಲ’  ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ವಿಷಾದಿಸಿದ್ದಾರೆ.

ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲಿಷ್‌ ನಿಯತಕಾಲಿಕ ‘ಇಂಡಿಯಾ ಟುಡೆ’ಗೆ ಸಂದರ್ಶನ ನೀಡಿರುವ ಮನಮೋಹನ್‌ ಸಿಂಗ್‌ ಆರ್ಥಿಕ ಪರಿಸ್ಥಿತಿ, ಅಸಹಿಷ್ಣುತೆ, ವಿದೇಶಾಂಗ ನೀತಿ ಒಳಗೊಂಡಂತೆ ಹಲವು ವಿಷಯಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಇದ್ದ ಪರಿಸ್ಥಿತಿಗಿಂತ ಈಗ ಅನುಕೂಲಕರ ವಾತಾವರಣವಿದೆ. ಆಗ ತೈಲ ಬೆಲೆ ಬ್ಯಾರಲ್‌ಗೆ ಡಾಲರ್‌ಗೆ 150 ಡಾಲರ್‌ ಮುಟ್ಟಿತ್ತು. ಇದೀಗ ಡಾಲರ್‌ಗೆ 30ಕ್ಕೆ ಕುಸಿದಿದೆ. ಇದರಿಂದ ಆರ್ಥಿಕ ಕೊರತೆ ಸರಿದೂಗಿಸಬಹುದಾಗಿದೆ. ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಉತ್ತೇಜಿಸಬಹುದು ಎಂದು ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

ಎನ್‌ಡಿಎ ಸರ್ಕಾರ ಸದ್ಯದ ಅನುಕೂಲಕರ ಪರಿಸ್ಥಿತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯಮಿಗಳನ್ನು ಒಟ್ಟುಗೂಡಿಸಿ ಹೂಡಿಕೆ ಹೆಚ್ಚಿಸಲು ಅವಕಾಶವಿದೆ. ಆದರೆ, ಆ ಕೆಲಸ ಮಾಡಿಲ್ಲ. ಕಳೆದ ಎರಡು ವರ್ಷಗಳಲ್ಲಿ ಬಂಡವಾಳ ಹೂಡಿಕೆ ಶೇ 33ಕ್ಕೆ ಇಳಿದಿದೆ. ನಾವು ಅಧಿಕಾರದಲ್ಲಿದ್ದಾಗ ಪ್ರತಿಕೂಲ ಪರಿಸ್ಥಿತಿ ನಡುವೆಯೂ ಹೂಡಿಕೆ ಶೇ 35ರಷ್ಟಿತ್ತು ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ವಿಶ್ವಾಸದ ಕೊರತೆ ಇದೆ. ವ್ಯಾಪಾರಿಗಳು ಸರ್ಕಾರದ ಮಂತ್ರಿಗಳನ್ನು ಭೇಟಿ ಮಾಡಿ ಸಮಾಲೋಚಿಸಿದಾಗ ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಾರೆ. ಹೊರಗೆ ಬಂದ ಬಳಿಕ ಎನೇನೂ ಬದಲಾವಣೆ ಆಗಿಲ್ಲವೆಂದು ವ್ಯಾಖ್ಯಾನಿಸುತ್ತಾರೆ ಎಂದು ಟೀಕಿಸಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಕಹಿ ಭಾವನೆ ಬೆಳೆದಿದೆ. ಪ್ರಜಾಪ್ರಭುತ್ವದಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ. 2 ಪಕ್ಷಗಳ ನಡುವಿನ ಸಂಬಂಧ ಆ ರೀತಿ ಇರಬೇಕಾದ್ದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಮೋದಿ ಅವರ ಆಡಳಿತದಲ್ಲಿ ಪ್ರಬಲ ರಾಷ್ಟ್ರಗಳ ಜತೆಗಿನ ಸಂಬಂಧ ವೃದ್ಧಿಯಾಗಿದೆ ನಿಜ. ಆದರೆ, ಭಾರತದ ಕಡು ವೈರಿ ರಾಷ್ಟ್ರವಾಗಿರುವ ಪಾಕಿಸ್ತಾನ ಮತ್ತು ನೇಪಾಳ ಜತೆಗಿನ ಸಂಬಂಧ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೋದಿ ಮೌನ: ಸಿಂಗ್‌ ಲೇವಡಿ

ಗೋಮಾಂಸ ವಿವಾದ ಹಾಗೂ ದಾದ್ರಿ ಘಟನೆಗಳ ಬಗ್ಗೆ ಯಾವುದೇ ನಿಲುವು ವ್ಯಕ್ತಪಡಿಸದೆ ಮೌನವಾಗಿರುವ ಪ್ರಧಾನಿ ಮೋದಿ ಅವರನ್ನು ಡಾ. ಸಿಂಗ್‌ ಪ್ರಶ್ನಿಸಿದ್ದಾರೆ.

ನಮ್ಮೆಲ್ಲರ ಒಳಿತನ್ನು ಪ್ರಧಾನಿ ಬಯಸುತ್ತಾರೆ ಎನ್ನುವ ಭಾವನೆಯನ್ನು ಮೋದಿ ಅವರು ಪ್ರತಿಯೊಬ್ಬರಲ್ಲೂ ಮೂಡಿಸುವ ಅಗತ್ಯವಿದೆ ಎಂದೂ ಕಿವಿ ಮಾತು ಹೇಳಿದ್ದಾರೆ.

ಸಾರ್ವಜನಿಕವಾಗಿ ವ್ಯಕ್ತವಾಗುವ ಅಭಿಪ್ರಾಯಗಳ ಮೇಲೆ ಪ್ರಧಾನಿ ತಮ್ಮ ನಿಲುವು ವ್ಯಕ್ತಪಡಿಸಬೇಕೆಂದು ದೇಶದ ಜನ ಅಪೇಕ್ಷೆ ಪಡುತ್ತಾರೆ. ಆದರೆ, ಗೋಮಾಂಸ ವಿವಾದ ಇರಬಹುದು. ಮುಜಾಫರ್‌ನಗರದ ಘಟನೆಯೇ ಆಗಿರಬಹುದು ಇವೆಲ್ಲದರ ಬಗ್ಗೆ ನರೇಂದ್ರ ಮೋದಿ ಮೌನವಾಗಿದ್ದಾರೆಂದು ಸೂಚ್ಯವಾಗಿ ಟೀಕಿಸಿದ್ದಾರೆ.

ಮೋದಿ ಏಕೆ ಮೌನವಾಗಿದ್ದಾರೆಂದು ಗೊತ್ತಿಲ್ಲ. ಅವರ ಮನಸಿನೊಳಗೇನಿದೆ ಎಂದು ಅರ್ಥವಾಗುವುದಿಲ್ಲ. ಆದರೆ, ಅವರು ಇಡೀ ದೇಶದ ಪ್ರಧಾನಿ. ನಮ್ಮ ಒಳಿತಿನ ಬಗ್ಗೆ ಪ್ರಧಾನಿ ಯೋಚಿಸುತ್ತಾರೆಂಬ ಭಾವನೆಯನ್ನು ಪ್ರತಿಯೊಬ್ಬರಲ್ಲೂ ಹುಟ್ಟಿಸಬೇಕು ಎಂದು ಸಿಂಗ್‌ ಸಲಹೆ ಮಾಡಿದ್ದಾರೆ.

ನರೇಂದ್ರ ಮೋದಿ ಅವರಿಗೂ ಅದ್ಭುತವಾಗಿ ಬೆಳೆಯುವ ಅವಕಾಶಗಳಿವೆ. ಸಾಮಾಜಿಕ ಸಂಘರ್ಷಗಳಿಗೆ ಕಡಿವಾಣ ಹಾಕಿದರೆ ಪ್ರಗತಿ ಆಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT