ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗಾಥ

Last Updated 3 ಜೂನ್ 2012, 6:10 IST
ಅಕ್ಷರ ಗಾತ್ರ

ನಮ್ಮ ಹಿಂದಿನ ತಲೆಮಾರಿನ ಲೇಖಕರ ಚಿಂತನೆಗಳು, ವಿದ್ವತ್ ವಿಶ್ಲೇಷಣೆಗಳು ವಿಸ್ಮೃತಿಗೆ ಜಾರದಂತೆ ಮಾಡುವ ಸಣ್ಣ ಪ್ರಯತ್ನ ಈ ಅಂಕಣ. ಎಸ್. ಅನಂತನಾರಾಯಣ ಅವರು 1962ರಲ್ಲಿ ಪ್ರಕಟಿಸಿದ `ಹೊಸಗನ್ನಡ ಕವಿತೆಯ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ~ ಪುಸ್ತಕದಿಂದ  ಆಯ್ದ ಕೆಲ ಭಾಗಗಳು ಇಲ್ಲಿವೆ.


ಪ್ರಗಾಥವು ಭಾವಗೀತೆಯ ಮುಖ್ಯ ರೂಪಗಳಲ್ಲೊಂದು. ನಾವು `ಪ್ರಗಾಥ~ ಎಂಬ ಪದವನ್ನು  The Ode ಎಂಬುದರ ಸಮಾನಾರ್ಥದಲ್ಲಿ ಉಪಯೋಗಿಸುತ್ತೇವೆ, `ಲಿರಿಕ್~ಗೆ `ಭಾವಗೀತೆ~ ಎಂಬ ಪದವನ್ನು ಪಯೋಗಿಸುತ್ತಿರುವಂತೆಯೇ ಇಂಗ್ಲಿಷಿನಲ್ಲಿ ಓಡ್ ಎಂಬುದು ಬೇರೆಯ ಒಂದು ಸ್ವತಂತ್ರ ಕಾವ್ಯ ರೂಪವಾಗಿತ್ತು. ಅದು ಕೂಟಗಾನ ಮತ್ತು ನರ್ತನ (Choric Song and Dance) ಗಳಿಗಾಗಿ ರಚಿತವಾಗುತ್ತಿದ್ದ ಹಾಡು.
 
ಇಂಗ್ಲಿಷಿನಲ್ಲಿ ಲಿರಿಕ್ ಎಂಬ ಪದವು ಮಹಾಕಾವ್ಯ ಮತ್ತು ನಾಟಕ ಇವುಗಳನ್ನು ಬಿಟ್ಟು ಉಳಿದೆಲ್ಲ ಕಾವ್ಯಪ್ರಕಾರಕ್ಕೂ ಬಳಕೆಯಾಗುತ್ತಿರುವು ದರಿಂದ ಓಡ್ ಕೂಡ ಲಿರಿಕ್‌ನ ಒಂದು ರೂಪವೆಂದೇ ನಿಯತವಾಗಿದೆ. `ಸಣ್ಣ ಕವಿತೆಯೆಲ್ಲಕ್ಕೂ ಈ ಲಿರಿಕ್ ಎಂಬ ಪದವು ಬಳಕೆಯಾಗುತ್ತದೆ, ಆದ್ದರಿಂದ ಈ ಪದಕ್ಕೆ ತಾನು ನಿರ್ದೇಶಿಸುತ್ತಿರುವ ಕಾವ್ಯ ಕೃತಿಯ ವಸ್ತು ಅಥವಾ ಛಂದೋರೂಪ ಇವುಗಳ ಸಂಬಂಧ ಸ್ವಲ್ಪವೂ ಇಲ್ಲ. ವೈಯಕ್ತಿಕ ಕಾವ್ಯ ಮತ್ತು ಹಾಡುವ ಗುಣವುಳ್ಳ ಕಾವ್ಯಕ್ಕೆಲ್ಲ ಲಿರಿಕ್ ಪದವೇ ಉಪಯೋಗವಾಗುತ್ತಿದೆ~.

ಅಂತೆಯೇ ಓಡ್ ಎನ್ನುವುದು ಲಿರಿಕ್‌ನ ಒಂದು ರೂಪವಾಗಿ ಎಣಿಸಲ್ಪಟ್ಟಿದೆ.
ಇಂಗ್ಲಿಷಿನ ಲಿರಿಕ್ ಕನ್ನಡದ ಭಾವಗೀತೆಯಾದಂತೆಯೇ `ಓಡ್~ ಪ್ರಗಾಥವಾಯಿತು. ಪ್ರಗಾಥವು ಭಾವಗೀತೆಯ ಒಂದು ರೂಪ ಎಂದಾಯಿತು. `ಪ್ರಗಾಥ~ ಎಂಬ ಪದ ಬಹಳ ಹಿತವಾದ ಮತ್ತು ಹದವಾದ ಪದ. `ಗಾಥ~ ಎಂಬುದು ಹಾಡನ್ನು ಸೂಚಿಸುತ್ತದೆ. ಈ `ಹಾಡು~ತನವೇ ಓಡ್‌ನ ಮುಖ್ಯ ಲಕ್ಷಣ. ಓಡ್ ಎನ್ನುವುದು ಸಾಮಾನ್ಯವಾಗಿ ಪ್ರಾಸವುಳ್ಳ ಗೀತೆ. ಗಂಭೀರವಾದ ಮತ್ತು ಘನವಾದ ಶೈಲಿಯಲ್ಲಿರುತ್ತದೆ; ಬದಲಾಯಿಸುವ ಮತ್ತು ಅನಿಯತ ಛಂದಸ್ಸಿನಲ್ಲಿರುತ್ತದೆ. ಸಾಮಾನ್ಯವಾಗಿ 50 ರಿಂದ 200 ಸಾಲುಗಳಷ್ಟಿರುತ್ತದೆ.

  ಇದು ಸಂಬೋಧನೆಯ ರೂಪದಲ್ಲಿರುತ್ತದೆ. ವಸ್ತು, ಭಾವಗಳಲ್ಲಿಯೂ ಶೈಲಿಯಂತೆಯೇ ಗಂಭೀರವಾಗಿರುತ್ತದೆ.  ಎಡ್ಮಂಡ್ ಗಾಸ್ ಅದನ್ನು `ಉತ್ಸಾಹಪೂರ್ಣ ಮತ್ತು ಗಂಭೀರವಾದ ಭಾವಗೀತೆ, ಒಂದೇ ಗುರಿಯನ್ನುಳ್ಳದ್ದು, ಪ್ರೌಢವಾದ ವಸ್ತುವಿನ ಬಗ್ಗೆ ಗಂಭೀರವಾದ ನಡೆಯುಳ್ಳದ್ದು~ ಎಂದು ನಿರ್ದೇಶಿಸಿದ್ದಾನೆ. ಇದರ ಲಕ್ಷಣಗಳ ಬಗ್ಗೆ ವಿಮರ್ಶಕರಲ್ಲಿ ಒಮ್ಮತದ ಅಭಿಪ್ರಾಯವಿಲ್ಲದಿದ್ದರೂ ಇದಲ್ಲಿ ಗಂಭೀರಶೈಲಿ ಮತ್ತು ಪ್ರೌಢವಾದ ವಸ್ತು ಇರಬೇಕೆಂದು ಎಲ್ಲ ವಿಮರ್ಶಕರೂ ಒಪ್ಪುತ್ತಾರೆ.

ಸಾಧಾರಣವಾಗಿ ಪ್ರಾಸವುಳ್ಳದ್ದು, ಗಂಭೀರವಾದ ಕಾವ್ಯ (Majestic Poem) ಮತ್ತು ನಿರ್ದಿಷ್ಟ ಛಂದಸ್ಸಿಲ್ಲದುದು.  ಈ ವಿಮರ್ಶಕರೇ ಹೇಳಿರುವಂತೆ ಗ್ರೀಕಿನ ಓಡ್ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇಂಗ್ಲೀಷಿಗೆ ತಂದುದೇ ಈ ರೀತಿಯ ಅವ್ಯವಸ್ಥೆಗೆ ಕಾರಣ.

`ಓಡ್ ಎಂಬುದು ವಾದ್ಯದ ಜೊತೆಗೆ ಹಾಡಲು ಬರೆದ ಘೋಷ (Chant) ರೂಪವಾದ ಕವಿತೆ~ ಎಂದು ಗ್ರೀಕರಲ್ಲಿ ಪ್ರಚುರವಾಗಿದ್ದ ಅರ್ಥ. ಹಾಡುಗಬ್ಬವು ಕೂಟಗಾನವಾಗಿ ಓಡ್ ಆಯಿತು; ವೈಯಕ್ತಿಕ ಗಾನವಾಗಿ ಲಿರಿಕ್ ರೂಪವನ್ನು ಪಡೆಯಿತು. ಓಡ್‌ಗಳನ್ನು ಬರೆಯುವ ಕವಿಯ ಕೆಲಸ ಸುಲಭವಾಗಿರಲಿಲ್ಲ. ಛಂದಸ್ಸು ಮತ್ತು ಸಂಗೀತ ಅವುಗಳ ಆಳವಾದ ಅಭ್ಯಾಸವೂ ಮತ್ತು ಕೂಟನರ್ತನಗಳ ತೊಡಕು ನಡೆಗಳ ತಾಳಲಯಗಳೂ ಚೆನ್ನಾಗಿ ತಿಳಿದಿದ್ದು, ಒಂದಕ್ಕೊಂದನ್ನು ಹೊಂದಿಸಿಕೊಳ್ಳುವ ಶಕ್ತಿಯಿರಬೇಕಾಗಿತ್ತು.
 
ಜಟಿಲ ಛಂದೋರೂಪಗಳು, ಸಂಗೀತ ಶಾಸ್ತ್ರ, ಮತ್ತು ನರ್ತನದ ಸಂಶ್ಲಿಷ್ಟ, ಜಟಿಲ ನಡೆಗಳು (Complex and intricate movements), ಇವುಗಳೆಲ್ಲವನ್ನೂ ಸಾಮರಸ್ಯದಿಂದ ಬೆಸೆದು ಓಡ್‌ಗಳನ್ನು ರಚಿಸಬೇಕಾಗಿತ್ತು. ಪಿಂಡಾರನ ಓಡ್‌ಗಳನ್ನು ನೋಡಿದರೆ ಎಷ್ಟು ಕಲಾತ್ಮಕವಾಗಿ ಈ ರೂಪವು ಬೆಳೆಯಿತೆಂಬುದು ತಿಳಿದು ಆಶ್ಚರ್ಯವಾಗುತ್ತದೆ. ಆದರೆ ವಿಮರ್ಶಕರೂ, ಕವಿಗಳೂ ಬಹಳ ಕಾಲದ ತನಕ ಪಿಂಡಾರನ ಓಡುಗಳಲ್ಲಿರುವ ನಿಯತ ಛಂದಸ್ಸನ್ನೇ ಆಗಲಿ, ನಿರೂಪಣೆಯ ವೈಖರಿಯನ್ನೇ ಆಗಲಿ ಗುರುತಿಸಿರಲಿಲ್ಲ. ಅವನದೆಲ್ಲ ನಿಯಮವಿಲ್ಲದ ರಚನೆಯೆಂದೇ ಎಲ್ಲರೂ ತಿಳಿದಿದ್ದರು.

ಪಿಂಡಾರನ ಓಡಿನಂತಹ ರಚನೆಯನ್ನು ಇಂಗ್ಲಿಷಿಗೆ ತರಲು ಮೊತ್ತಮೊದಲ ಬಾರಿ ಪ್ರಯತ್ನಿಸಿದವನು ಅಬಹಾಂ ಕೌಲಿ . ಪಿಂಡಾರನ ಓಡುಗಳ ಕಟ್ಟಡ ಬಹಳ ಜಾಣ್ಮೆಯಿಂದ ಕಟ್ಟಿದುದೆಂಬ ಅರಿವು ಕೌಲಿಗಿತ್ತು. ಆದರೆ ಆ ಓಡುಗಳ ನಿಯಮವೇನೆಂಬುದರ ಗೊತ್ತು ಅವನಿಗಿರಲಿಲ್ಲ. ತನ್ನ ಓಡುಗಳನ್ನು ಕೌಲಿ ಪಿಂಡಾರನ ರೀತಿಯ ಓಡುಗಳು ಎಂದು ಕರೆದುದರಿಂದ ಜನರ ಮನಸ್ಸಿನಲ್ಲಿ ಒಂದು ತಪ್ಪು ಕಲ್ಪನೆ ಮೂಡಲು ಅವಕಾಶವಾಯಿತು.

`ಓಡ್~ ಎನ್ನುವುದು ಗಂಭೀರವಾದ ಮತ್ತು ತೀವ್ರೋದ್ರೇಕವುಳ್ಳ ನಿಯತರೂಪವಿಲ್ಲದ ಕಾವ್ಯ. ಕವಿಯ ಉತ್ಸಾಹ ಹರಿದೆಡೆಗೆ ಹಾಯಿಯಾಗಲಿ ಹುಟ್ಟಾಗಲಿ ಇಲ್ಲದೆ ತೇಲಿ ಹೋಗುತ್ತದೆ~ ಎಂದು ಜನರಲ್ಲಿ ಕೌಲಿಯು ತಪ್ಪಭಿಪ್ರಾಯವನ್ನು ಮೂಡಿಸಿದನೆಂದು ಎಡ್ಮಂಡ್ ಗಾಸ್ ಹೇಳಿದಾನೆ.

ಮತ್ತೊಂದು ಕಡೆಯಲ್ಲಿ ಲ್ಯಾಟಿನ್ ಕವಿಗಳ ಪ್ರಭಾವದಿಂದ ಭಾವಗೀತೆಯಂತಹ ಬೇರೆ ಬೇರೆ ನುಡಿಗಳುಳ್ಳ ಕವಿತೆಯ ರೂಪವಾಗಿಯೂ ಓಡ್ ಬೆಳೆಯಿತು. ಗ್ರೇ, ಷೆಲ್ಲಿ, ವರ್ಡ್ಸ್‌ವರ್ತ್, ಕೋಲ್‌ರಿಜ್ ಮುಂತಾದವರು ಈ ರೀತಿಯ ಓಡುಗಳನ್ನು ಬರೆದರು.
`ಶ್ರೀ~ಯವರೇ ಪ್ರಗಾಥವನ್ನು ಕನ್ನಡಕ್ಕೆ ತಂದರು.

ಇದಕ್ಕೆ ಹೆಸರನ್ನು ಸಂಸ್ಕೃತದಿಂದ ತಂದರೂ, ಈ ಭಾವಗೀತೆಯ ರೂಪವು ಇಂಗ್ಲಿಷ್ ಕಾವ್ಯದಿಂದಲೇ ಕನ್ನಡಕ್ಕೆ ಬಂದಿತೆಂಬುದರಲ್ಲಿ ಯಾವ ಸಂಶಯವೂ ಇಲ್ಲ. ಕನ್ನಡದ ಪ್ರಗಾಥಗಳು ಇಂಗ್ಲಿಷಿನ ಓಡ್‌ಗಳಿಂದ ಸ್ಫೂರ್ತಿಗೊಂಡು ಬಂದುವು ಎಂಬುದನ್ನು ನೆನಪಿನಲ್ಲಿಡಬೇಕು....

ಮಂಜೇಶ್ವರದ ಗೋವಿಂದ ಪೈಯವರು `ಬಾನಕ್ಕಿಗೆ~ ಎಂಬ ಹೆಸರಿನಲ್ಲೂ `ಶ್ರೀ~ ಯವರು `ಬಾನಾಡಿ~ ಎಂದೂ ಷೆಲ್ಲಿಯ `‘Ode to a skylark~ ಎಂಬುದನ್ನು ಅನುವಾದಿಸಿದರು. `ಶ್ರೀ~ಯವರ ಸ್ವತಂತ್ರ ಪ್ರಗಾಥಗಳು - `ಶ್ರೀ ಕೃಷ್ಣರಾಜ ರಜತ ಮಹೋತ್ಸವ ಪ್ರಗಾಥ~ (1927) `ಕನ್ನಡ ತಾಯ ನೋಟ~ ಮತ್ತು `ಶುಕ್ರಗೀತೆ~.

`ರಜತ ಮಹೋತ್ಸವ ಪ್ರಗಾಥ~ ಬರೆದ ಸಂದರ್ಭ, ನಾಲ್ವಡಿ ಕೃಷ್ಣರಾಜ ಒಡೆಯರ 25 ವರ್ಷಗಳ ಆಳ್ವಿಕೆಯ ಸವಿಹಬ್ಬದಲ್ಲಿ .`ಕನ್ನಡ ತಾಯ್ ನೋಟ~ವನ್ನು ಬರೆದುದು ವಿಜಯನಗರ ಸಾಮ್ರಾಜ್ಯದ ಆರು ನೂರು ವರ್ಷದ ಹಬ್ಬದಲ್ಲಿ (1936) ಮತ್ತು `ಶುಕ್ರಗೀತೆ~ಯನ್ನು ರಚಿಸಿದುದು ಮೈಸೂರು ವಿಶ್ವವಿದ್ಯಾನಿಲಯದ ಬೆಳ್ಳಿಯ ಹಬ್ಬದಲ್ಲಿ (1941). ಈ ಮೂರು ಪ್ರಗಾಥಗಳಿಗೂ ಗಂಭೀರವಾದ ಹಿನ್ನೆಲೆಯಿದೆ. ಬರವಣಿಗೆಯ ಸಂದರ್ಭವೂ ಉತ್ಸಾಹ ತುಂಬಿದ ಹಬ್ಬ, ಗಂಭೀರ ಸನ್ನಿವೇಶ.

`ಶ್ರೀ~ಯವರೇ ಅಲ್ಲದೆ ಕನ್ನಡದಲ್ಲಿ ಬೇರೆಯ ಕವಿಗಳೂ ಪ್ರಗಾಥಗಳನ್ನು ಬರೆದಿದಾರೆ. `ಶ್ರೀ~ ಯವರಿಗಿಂತಲೂ ಮೊದಲು `ಪ್ರಗಾಥ~ ಎಂಬ ಹೆಸರನ್ನುಪಯೋಗಿಸದಿದ್ದರೂ ಆ ರೂಪದ ಕವಿತೆಗಳನ್ನು ಕೆಲವರು ಬರೆದಿದ್ದರು. ಅವುಗಳಲ್ಲಿ ನಮಗೆ ತಿಳಿದ ಮಟ್ಟಿಗೆ, ಮೊತ್ತಮೊದಲು ಬಂದುದು 1912ರಲ್ಲಿ `ಶ್ರೀ ಕೃಷ್ಣ ಸೂಕ್ತಿ~ಯ ಸಂಪಾದಕರಾದ ಎನ್. ರಾಜಗೋಪಾಲ ಕೃಷ್ಣರಾಯರು ಬರೆದ `ಪಟ್ಟಾಭಿಷೇಕಾಷ್ಟಕಂ~ (Ode on the Coronation). ವೃತ್ತ. ಕಂದಗಳೇ ಈ ಕವಿತೆಯ ಛಂದಸ್ಸು. ಏಳುವೃತ್ತಗಳ, ಎರಡು ಕಂದ ಪದ್ಯಗಳಿರುವ ಈ ಕವಿತೆಯೂ ಮಂಗಳವನ್ನು ಕೋರುವ ಪದ್ಯವಾಗಿದೆ. ..... ಈ ಕವಿತೆಯ ಮೂಲವು ಕಾಳಿದಾಸನಲ್ಲಿದೆ.

ಡಿ. ವಿ. ಗುಂಡಪ್ಪನವರು ಬರೆದಿರುವ `ಬೇಲೂರಿನ ಶಿಲಾಬಾಲಿಕೆಯರು~ ಮೊತ್ತ ಮೊದಲ ಪ್ರಗಾಥವೆಂದು ಹೇಳಬಹುದು. ಇದು `ಸೀಸಪದ್ಯದ ರೂಪದಲ್ಲಿದೆ. ಆರಂಭದಲ್ಲಿ ಮಾತ್ರ ಒಂದು ಕಂದ ಪದ್ಯ ಹೆಚ್ಚಾಗಿದ್ದರೂ ಇದನ್ನು ನಿಯತ ಪ್ರಗಾಥ (Regular Ode) ಎಂದು ಕರೆಯಬಹುದು. ಈ ಪ್ರಗಾಥಕ್ಕೆ ಎರಡು ಸ್ಫೂರ್ತಿಗಳಿವೆ. ಒಂದು ಸ್ಪೂರ್ತಿ ಬೇಲೂರಿನ ಚನ್ನಕೇಶವ ದೇವಾಲಯದ ಶಿಲಾಬಾಲಿಕೆಯರ ಚೆಲುವು. ಆ ವಿಗ್ರಹಗಳ ಸೊಗಸು `ಸಂವೇದನೆ~ (sensatio)ಯ ರೂಪದಲ್ಲಿ ಕವಿ ಹೃದಯಕ್ಕೆ ಸ್ಫೂರ್ತಿಯನ್ನು ಕೊಟ್ಟಿತು. ಈ ಎರಡು ಸ್ಫೂರ್ತಿಗಳ ಸಮನ್ವಯವನ್ನು `ಬೇಲೂರಿನ ಶಿಲಾಬಾಲಕಿಯರ~ಲ್ಲಿ ಕಾಣುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT