ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾತಂತ್ರ ನೆಲೆಸಲಿ

Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹಾಂಕಾಂಗ್‌ ಬೀದಿ­ಗಳಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರವಾಗಿ ನಡೆಯುತ್ತಿದ್ದ ಪ್ರಜಾಪ್ರಭುತ್ವ ಪರ ಪ್ರತಿ­ಭಟನೆಗಳು ಸದ್ಯಕ್ಕೆ ಇಳಿಮುಖವಾಗಿವೆ. ಚಳವಳಿ ನಿರತರ ಜೊತೆ ಸರ್ಕಾರ ಮಾತುಕತೆಗೆ ಒಪ್ಪಿ­ಕೊಂಡಿದೆ. 2017ರಲ್ಲಿ ಹಾಂಕಾಂಗ್‌ನ ಮುಖ್ಯ ಆಡಳಿತಾಧಿಕಾರಿಯ ಚುನಾ­ವಣೆ ನಡೆಯಲಿದೆ. ‘ಈ ಚುನಾವಣೆಯಲ್ಲಿ ಮುಕ್ತತೆ ಇರಬೇಕು.

ಚುನಾ­ವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಜನರ ಆಯ್ಕೆಯಾಗಿರಬೇಕು’ ಎಂಬುದು ಚಳವಳಿನಿರತರ ಬೇಡಿಕೆ. ಆದರೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ­ಗಳ ಆಯ್ಕೆ ಚೀನಾದ ಪರಿಶೀಲನೆ ಹಾಗೂ ಅನುಮೋದನೆಗೆ ಒಳ­ಪಟ್ಟಿರಬೇಕು ಎಂಬಂಥ ನಿಲುವು,  ಚೀನಾ ಪರ ಅಭ್ಯರ್ಥಿಗಳನ್ನಷ್ಟೇ ಚುನಾ­ವಣಾ ಕಣದಲ್ಲಿ ಉಳಿಸುತ್ತದೆ ಎಂಬುದು ಚಳವಳಿನಿರತರ ಆರೋಪ.  ಚೀನಾದ ಮೇಲಿನ ಅವಲಂಬನೆಯನ್ನು ಹಾಂಕಾಂಗ್‌ನ ಯುವಜನಾಂಗ ವಿರೋ­­ಧಿಸಿಕೊಂಡುಬರುತ್ತಿದೆ.

ತರಗತಿಗಳನ್ನು ಬಹಿಷ್ಕರಿಸಿ ಬೀದಿಗಿಳಿದ ಯುವ ­ವಿದ್ಯಾರ್ಥಿಗಳ ಪ್ರತಿಭಟನೆ ಕ್ರಮೇಣ ಪ್ರಜಾಪ್ರಭುತ್ವ ಪರ  ಆಂದೋಲ­ನ­ವಾಗಿ ದೊಡ್ಡದಾಗಿ ಬೆಳೆಯಿತು. 1989ರಲ್ಲಿ ಬೀಜಿಂಗ್‌ನ ಟೈಯಾನಾನ್ ಮೆನ್  ಚೌಕದಲ್ಲಿ ನಡೆದ  ಪ್ರಜಾತಂತ್ರ ಪರ ವಿದ್ಯಾರ್ಥಿ ಚಳವಳಿಯ ನಂತರ  ಇದು ಚೀನಾ ಎದುರಿಸುತ್ತಿರುವ ದೊಡ್ಡ ರಾಜಕೀಯ ಸವಾಲಾಗಿದೆ. 155 ವರ್ಷ­ಗಳ ಕಾಲ ಬ್ರಿಟಿಷ್ ವಸಾಹತಾಗಿದ್ದ ಹಾಂಕಾಂಗ್ 1997ರಲ್ಲಿ ಚೀನಾಗೆ ಮರಳಿ ಸೇರ್ಪಡೆಯಾಯಿತು. ಆಗ ಅಳವಡಿಸಿಕೊಂಡಿದ್ದು  ‘ಒಂದು ದೇಶ, ಎರಡು ಆಡಳಿತ ವ್ಯವಸ್ಥೆ’ ಮಾದರಿಯನ್ನು. ಈ ವ್ಯವಸ್ಥೆ 50 ವರ್ಷಗಳ ಕಾಲ ಎಂದರೆ ಮುಂದಿನ 2047ರವರೆಗೂ ಮುಂದುವರಿಯ­ಲಿದೆ.

ಈ ಪ್ರಕಾರ, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರ ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳಲ್ಲಿ ಹಾಂಕಾಂಗ್‌ಗೆ ಸಂಪೂರ್ಣ ಸ್ವಾಯತ್ತತೆ ಇದೆ.  ಹಾಂಕಾಂಗ್‌ನ ಬಹುತ್ವದ ಅನನ್ಯತೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸಬೇಕು ಎಂಬುದು ಪ್ರಜಾಪ್ರಭುತ್ವಪರವಾದಿಗಳ ಅಭಿಮತ. ಹಾಂಕಾಂಗ್‌ನಲ್ಲಿ ಪ್ರಜಾತಂತ್ರ ವ್ಯವಸ್ಥೆ ಬಲಪಡಿಸುವ ಯಾವ ಕ್ರಮ-­ವನ್ನೂ ಚೀನಾ ಕೈಗೊಂಡಿಲ್ಲ ಎಂಬಂಥ ಟೀಕೆಗಳನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಮಾಡುತ್ತಿವೆ. ಇವು ಆಷಾಢಭೂತಿತನದ ಮಾತುಗಳಾಗುತ್ತವೆ.

ವಾಸ್ತವ­ವಾಗಿ ಹಾಂಕಾಂಗ್‌ನಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತ ಇದ್ದಾಗಲೂ ಪ್ರಜಾ­ಸತ್ತೆಯ ಅಂಶ ಇರಲಿಲ್ಲ. ಆದರೆ ಈ ವಿಚಾರದಲ್ಲಿ ಚೀನಾ ಆತ್ಮಾವ­ಲೋಕನ ಮಾಡಿಕೊಳ್ಳಬೇಕು ಎಂಬುದೂ ನಿಜ. ‘ಹೊರಗಿನ ಶಕ್ತಿಗಳು’ ಪ್ರಜಾ­ತಂತ್ರಪರ ಪ್ರತಿಭಟನೆಗಳಿಗೆ ಪ್ರಚೋದನೆ ನೀಡುತ್ತಿವೆ ಎಂದು ಚೀನಾ ಪ್ರತಿ­ಪಾದಿಸುತ್ತಿದೆ. ಇಂತಹ ಮಾತುಗಳನ್ನಾಡುತ್ತಾ ತನ್ನ ಜವಾಬ್ದಾರಿಯಿಂದ  ಚೀನಾ ನುಣುಚಿಕೊಳ್ಳಲಾಗದು.  2017ರಲ್ಲಿ ನಡೆಯುತ್ತಿರುವ ಮತದಾನ, ಹಾಂಕಾಂಗ್‌ನ ಮೊದಲ ನೇರ ಚುನಾವಣೆಯಾಗಿದೆ.

ಇಂತಹ ಚುನಾವಣೆ­ಯಲ್ಲಿ ವಿಭಿನ್ನ ವರ್ಗಗಳು ಹಾಗೂ ದೃಷ್ಟಿಕೋನಗಳನ್ನು ಪ್ರತಿನಿಧಿಸುವ ಅಭ್ಯರ್ಥಿಗಳ ಆಯ್ಕೆಗೆ ಅವಕಾಶವನ್ನು ಹಾಂಕಾಂಗ್ ಜನತೆಗೆ ನಿರಾಕರಿಸು­ವುದು ಸರಿಯಲ್ಲ. ಆ ಮೂಲಕ  ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಕೊಡಲಿ­ಪೆಟ್ಟು ನೀಡುವುದು  ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT