ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದ ಮೂಲಕ್ಕೇ ಏಟು

Last Updated 7 ಜುಲೈ 2014, 19:30 IST
ಅಕ್ಷರ ಗಾತ್ರ

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಶಾಸಕರ ಮತಕ್ಕೂ ಒಂದು ಕೋಟಿ ರೂಪಾಯಿ ಕೊಡ­ಬೇಕಾ­ಗುತ್ತದೆ ಎನ್ನುವ ಮಾತು ಜನತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ. ತಮ್ಮ ಪಕ್ಷದ ವಿಜಾ­ಪುರ ಜಿಲ್ಲೆಯ ಮುಖಂಡರೊಬ್ಬರ ಅಭಿ­ಮಾನಿ­ಗಳ ಜತೆಗೆ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಮಾತ­ನಾಡಿ­ದ್ದೆನ್ನಲಾದ ಧ್ವನಿ­ಮುದ್ರಿ­ಕೆಯ ವಿವರ ಮಾಧ್ಯಮಗಳಲ್ಲಿ ಬಹಿರಂಗ­ವಾಗಿದೆ. ‘ವಿಧಾನ ಪರಿಷತ್‌ ಚುನಾ­ವಣೆಗೆ ಸ್ಪರ್ಧಿಸುವ ಅಭ್ಯರ್ಥಿ­ಗಳಿಂದ ತಲಾ ಒಂದು ಕೋಟಿ ರೂಪಾಯಿ ಕೊಡಿ­ಸುವಂತೆ ನಮ್ಮ ಶಾಸ­ಕರು ಬೇಡಿಕೆ ಇಟ್ಟಿದ್ದಾರೆ’ ಎಂದು  ಕುಮಾರ­ಸ್ವಾಮಿ­ಯ­ವರು ಖುದ್ದಾಗಿ ಹೇಳಿ­ರುವುದು ಇಡೀ ವ್ಯವಸ್ಥೆ ಎಷ್ಟೊಂದು ಕೊಳಕು ತುಂಬಿ ನಾರುತ್ತಿದೆ ಎನ್ನುವುದಕ್ಕೆ ಸ್ಪಷ್ಟಸಾಕ್ಷಿ.

‘ನಾನು ಯಾರಿಂ­ದಲೂ ಹಣ ಕೇಳಿಲ್ಲ. ವಾಸ್ತವ ಸ್ಥಿತಿ ಬಗ್ಗೆಯಷ್ಟೆ ಮಾತನಾಡಿದ್ದೇನೆ. ಯಾವ ಪಕ್ಷವೂ ಸಾಚಾ ಅಲ್ಲ. ಕಾಂಗ್ರೆಸ್‌ ಮತ್ತು ಬಿಜೆಪಿ ಕೂಡಾ ಉದ್ಯಮಿ­ಗಳಿಂದ ಹಣ ಸಂಗ್ರಹಿಸುತ್ತವೆ’ ಎಂದೆಲ್ಲಾ ಆ ಬಳಿಕ ಕುಮಾರ­ಸ್ವಾಮಿ­ಯವರು ಮಾಧ್ಯಮಗಳಲ್ಲಿ ಸ್ಪಷ್ಟನೆ ನೀಡಿ­ದ್ದಾರೆ. ಆದರೆ ಒಂದು ರಾಜಕೀಯ ಪಕ್ಷದ ಜವಾಬ್ದಾರಿಯುತ ನಾಯಕ­ರಾಗಿ ಅವರು ಆಡಿ­ರುವ ಮಾತು ಯಾವುದೇ ರೀತಿಯಿಂದಲೂ ಸಮರ್ಥನೆಗೆ ಅರ್ಹ­ವಲ್ಲ. ಮೇಲ್ಮನೆಗೆ ಅದ­ರದ್ದೇ ಆದ ಘನತೆ, ಗೌರವ ಇದೆ. ನೇರವಾಗಿ ಚುನಾ­ವಣೆ­­ಯಲ್ಲಿ ಗೆದ್ದು ಕೆಳ­ಮನೆ ಪ್ರವೇಶಿಸುವ ಶಾಸಕರು ಮಾಡುವ ಕಾನೂನು­ಗಳನ್ನು ಪರಾ­­ಮರ್ಶಿ­ಸಲೆಂದೇ ವಿಧಾನ ಪರಿಷತ್ತನ್ನು ಸ್ಥಾಪಿಸಲಾಗಿದೆ. ಅಲ್ಲಿ ರಾಜ­­ಕೀಯ ರಂಗದ ಅನುಭವಿ ಮುತ್ಸದ್ದಿಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರು ಸ್ಥಾನ ಪಡೆಯ­ಬೇಕು. ಅದು ಬಿಟ್ಟು ಕೋಟಿಗಟ್ಟಳೆ ಹಣ ಸುರಿಯುವ ಏಕೈಕ ಅರ್ಹ­ತೆ­ಯುಳ್ಳ­ವರಿಗೆ ಅಲ್ಲಿ ಮಣೆ ಹಾಕಲಾಗುತ್ತದೆ ಎನ್ನುವುದು ನಾಚಿಕೆಗೇಡಿನ ಸಂಗತಿ.

ವಿಧಾನ ಪರಿಷತ್‌ಗೆ ಕಾಂಗ್ರೆಸ್‌ ಸರ್ಕಾರ ವಿವಿಧ ಕ್ಷೇತ್ರಗಳ ತಜ್ಞರನ್ನು ನಾಮ­ನಿರ್ದೇ­ಶನ ಮಾಡುವ ಸಂದರ್ಭದಲ್ಲೂ ಕೇವಲ ಪಕ್ಷನಿಷ್ಠ ರಾಜಕಾರಣಿಗಳನ್ನು ನೇಮಕ ಮಾಡಿರುವ ಇತ್ತೀಚಿನ ಉದಾಹರಣೆ ನಮ್ಮ ಕಣ್ಣಮುಂದಿದೆ. ಈ ದುಷ್ಟ­ಪ್ರವೃತ್ತಿಯನ್ನು ಪಕ್ಷಭೇದವಿಲ್ಲದೆ ಎಲ್ಲರೂ ಅನುಸರಿಸಿಕೊಂಡು ಬರುತ್ತಿದ್ದಾರೆ. ಪ್ರಜಾಪ್ರಭುತ್ವದ ಮೂಲತತ್ವಗಳನ್ನೇ ನಾಶ ಮಾಡುವ ಇಂತಹ ರೊಕ್ಕಸೊಕ್ಕಿನ ರಾಜಕೀಯವನ್ನು ಬುಡಮಟ್ಟ­ದಲ್ಲೇ ಚಿವುಟಿ ಹಾಕಬೇಕಾದ ಅಗತ್ಯವಿದೆ. ದುಡ್ಡಿನ ಕುಳಗಳ ಪ್ರತಿಷ್ಠೆ ಮೆರೆ­ಸುವ ಅಥವಾ ಸೋತ ಪುಢಾರಿಗಳ ರಾಜ­ಕೀಯ ಪುನರ್ವಸತಿ ಕೇಂದ್ರವಾಗಿ­ಯಷ್ಟೇ ಪರಿಷತ್ತು ಉಳಿದುಕೊಳ್ಳು­ವು­ದಾ­­ದರೆ ಅದರ ಅಗತ್ಯವಾದರೂ ಏನು? ಸಂಸದೀಯ ವ್ಯವಸ್ಥೆಯಲ್ಲಿ ಜನರ ನಂಬಿಕೆ­­­­ಯನ್ನು ನಾಶಗೊಳಿಸು­ವಂತಹ ವಿದ್ಯಮಾನಗಳು ಹೆಚ್ಚಾಗುತ್ತಿವೆ.

ಲೋಕ­ಸಭೆ­­ಯಲ್ಲಿ ಪ್ರಶ್ನೆಗಳನ್ನು ಕೇಳಲೂ ಕೆಲವು ಸಂಸದರು ಹಣ ಪಡೆಯುತ್ತಿ­ದ್ದರೆಂಬ ಸಂಗತಿ  ಬಹಿರಂಗ­ವಾಗಿದೆ. ರಾಜ್ಯಸಭೆ ಚುನಾವಣೆಗೂ ಕೆಲವೊಮ್ಮೆ ಕಾಂಚಾ­­­­ಣದ ‘ಕಳಂಕ’ ಅಂಟಿದ ನಿದರ್ಶನಗಳಿವೆ. ಚುನಾವಣೆಯಲ್ಲಿ ಗೆಲ್ಲಲು ಅಕ್ರಮ ದಾರಿಗಳಲ್ಲಿ ಕೋಟಿಗಟ್ಟಳೆ ಖರ್ಚು ಮಾಡಿ, ಅದನ್ನು ಮರಳಿ ಗಳಿಸಲು ಸಂಸತ್ತು ಮತ್ತು ವಿಧಾನಮಂಡಲವನ್ನು ದುರ್ಬಳಕೆ ಮಾಡಿಕೊಳ್ಳುವ ಈ ಪ್ರವೃತ್ತಿ ಪ್ರಜಾ­­ಪ್ರಭುತ್ವದ ಮೂಲಬೇರುಗಳನ್ನೇ ನಾಶ ಮಾಡಲಿದೆ. ಈ ಅನಿಷ್ಟ ಪ್ರವೃತ್ತಿ­ಯಿಂದ  ಪ್ರಜಾಪ್ರಭುತ್ವದ ಬುನಾದಿ ಕುಸಿದುಬೀಳುವ ಮುನ್ನ ಜನರು ಎಚ್ಚೆ­­ತ್ತು­­­ಕೊಳ್ಳಬೇಕಿದೆ. ವ್ಯವಸ್ಥೆಯನ್ನು ಶುದ್ಧೀಕರಿಸಲು ಪ್ರಬಲ ಜನಾಂ­ದೋಲನವೇ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT