ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಸತ್ತೆಗೆ ಮಾರಕ

Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗುಜರಾತದಲ್ಲಿ ತಾನು ಮುಖ್ಯಮಂತ್ರಿಯಾ­ದಂದಿ­ನಿಂದ ಆಗಿರುವ ಆರ್ಥಿಕ ಉತ್ಕರ್ಷವೆಲ್ಲ ತನ್ನ ಕರ್ತೃತ್ವಶಕ್ತಿಯ ಪರಿಣಾಮ ಎಂದು ಕೊಚ್ಚಿಕೊಳ್ಳುತ್ತಾರೆ ಮೋದಿ. ಹಾಗಾದರೆ ೨೦೦೨ರಲ್ಲಿ ಅವರೇ ಮುಖ್ಯ­ಮಂತ್ರಿ ಸ್ಥಾನದಲ್ಲಿ ಕೂತಿರುವಾಗ ಅವ್ಯಾಹತವಾಗಿ ನಡೆದ ಹಿಂಸೆ­ಯನ್ನು ಮಾತ್ರ ತನ್ನ ಹೊಣೆಯೆಂದು ಒಪ್ಪಿಕೊಳ್ಳಲು ಇಷ್ಟೇಕೆ ನುಣುಚಿಕೊಳ್ಳುತ್ತಾರೆ? ಮುಖ್ಯಮಂತ್ರಿಯಾಗಿದ್ದಾಗ ತನ್ನ ರಕ್ಷಣೆಯಲ್ಲಿದ್ದ ಸಾವಿರಾರು ಪ್ರಜೆಗಳ ಹತ್ಯಾಕಾಂಡ ಕಣ್ಣೆದುರಿಗೇ ನಡೆದಾಗ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ತಾನು ಕೈಕಟ್ಟಿ ಕೂತಿದ್ದೆ ಎಂಬ ಅವರ ಒಪ್ಪಿಗೆ  ನಾಳೆ ಈತ ಪ್ರಧಾನಿಯಾದರೆ ಅದಕ್ಕೂ ಹೆಚ್ಚಿನ ಸಂಭ್ರಮದಿಂದ ನರಮೇಧ­ವನ್ನು ವೀಕ್ಷಿಸುತ್ತ ಕೂತಿರಲಾರರೇ ಎಂಬ ಶಂಕೆ ಹುಟ್ಟಿಸುತ್ತದೆ.

ಈ ಚುನಾವಣೆಯಲ್ಲಿ ಬಿಜೆಪಿಯ ಪ್ರಚಾರ ವೈಖರಿ ಯಾವುದೋ ಅಮೆರಿಕನ್ ಪಿ.ಆರ್.ಓ ಕಮ್ಮಟದಲ್ಲಿ ರೂಪುಗೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲಿ  ಅಧ್ಯಕ್ಷನೊಬ್ಬನ ಆಯ್ಕೆಯಾಗುತ್ತದೆ ಹೊರತು ಪಕ್ಷದ ಅಸ್ತಿತ್ವವೇ ಗೌಣವಾಗುತ್ತದೆ. ಇಂಥ ವ್ಯಕ್ತಿಕೇಂದ್ರಿತ ಪ್ರಚಾರ ಮೋದಿಯ ಆತ್ಮ­ಲೋಲು­ಪತೆಗೆ ಒಪ್ಪವಾಗಿ ಹೊಂದುವ ವಿಧಾನವಾದರೂ ಅವರ  ಪಕ್ಷ ತೋರಿಸು­ತ್ತಿರುವ ಮೂಕ ದೈನ್ಯ ಆಶ್ಚರ್ಯ­ಕರ.

ಇಲ್ಲಿಯ ತನಕದ ಪ್ರಚಾರದಲ್ಲಿ ಪಕ್ಷದ ತಾತ್ವಿಕ ಪ್ರಣಾಳಿ­ಕೆಗೆ ಸ್ಥಾನ­ವಿಲ್ಲ. ಅದನ್ನು ರೂಪಿಸಿದ ಅಡ್ವಾಣಿಯಂಥ ನಾಯಕರಿಗೆ ಸ್ಥಾನವಿಲ್ಲ. ಪಕ್ಷ ಕಟ್ಟುವುದ­ರಲ್ಲಿ ವರ್ಷಾನುಗಟ್ಟಲೆ ದುಡಿದ ಸುಷ್ಮಾ ಸ್ವರಾಜರಂಥ ನೇತಾರರಿಗೂ ಸ್ಥಾನವಿಲ್ಲ. ಎಲ್ಲಿ ನೋಡಿದರೂ ಮೋದಿ. ಕಳೆದ 64 ವರ್ಷಗಳಿಂದ  ಸ್ಪಷ್ಟ ಸ್ವರೂಪ ತಾಳಿರುವ ನಮ್ಮ ದೈನಂದಿನ ರಾಷ್ಟ್ರೀಯ ಆಡಳಿತದಲ್ಲಿ ಈ  ಹೊಸ ವ್ಯಕ್ತಿ­ಪೂಜೆ ಯಾವ ಕುಚೋದ್ಯಕ್ಕೆ ಎಡೆ ಮಾಡಿ ಕೊಟ್ಟೀತೋ ಹೇಳುವಂತಿಲ್ಲ.

ಭಾರತದಲ್ಲಿ ಇಂದಿನ ಪರಿಸ್ಥಿತಿಯಲ್ಲಂತೂ ಏಕಾಧಿಪತ್ಯ ಸಾಧ್ಯವಿಲ್ಲ ನಿಜ. ಮೋದಿ ಪ್ರಧಾನಿಯಾದರೆ 2–3 ವರ್ಷ ಕೂಡ ತನ್ನ ಸ್ಥಾನ ಉಳಿಸಿಕೊಳ್ಳಲಾರರು. ಅವರ ಪತ­ನಕ್ಕೆ ವಿರೋಧಿಗಳಿಗಿಂತ ಪಕ್ಷದ ಅತೃಪ್ತ ಸಹಚರರೇ  ಕಾರಣರಾಗು­ವುದೂ ಸಾಧ್ಯವಿದೆ. ಏಕಾಧಿ­ಪ­ತ್ಯದ ಹಪಾಹಪಿಯುಳ್ಳ ಎಲ್ಲ ರಾಜಕಾರಣಿಗಳ ಹಣೆ­ಬರಹವೇ ಅದು. ಆದರೆ ಆತಂಕದ ವಿಷಯವೆಂದರೆ ಮೋದಿ ರಂಗ ಬಿಟ್ಟು ತೆರಳುವ ಮೊದಲು ನಮ್ಮ ಸಂವಿಧಾನಕ್ಕೆ ಎಂಥ  ಹಾನಿ ಬಗೆಯಬಹುದು ಹೇಳು­ವಂತಿಲ್ಲ. ಆತನ ಅಧಿ­ಕಾರದ ಪಿಪಾಸೆ ನಮ್ಮ ಪ್ರಜಾಸತ್ತಾತ್ಮಕ, ಸೆಕ್ಯುಲರ್ ವ್ಯವಸ್ಥೆಯನ್ನೇ ಹದಗೆಡಿಸು­ವುದಲ್ಲದೆ ನಮ್ಮ ರಾಷ್ಟ್ರವನ್ನೇ ತುಂಡರಿಸಿ ವಿಚ್ಛಿನ್ನಗೊಳಿಸುವುದೂ  ಸಾಧ್ಯವಿದೆ. l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT