ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣವ್‌ಗೆ ಹುದ್ದೆ ತಪ್ಪಲು ಐ.ಬಿ ವರದಿ ಕಾರಣ

ಮಾಜಿ ಪ್ರಧಾನಿ ನರಸಿಂಹ ರಾವ್‌ ಆಡಳಿತದ ಮೇಲೆ ಬೆಳಕು ಚೆಲ್ಲಿದ ಪುಸ್ತಕ
Last Updated 26 ಜೂನ್ 2016, 22:30 IST
ಅಕ್ಷರ ಗಾತ್ರ

ನವದೆಹಲಿ: ಪಿ.ವಿ. ನರಸಿಂಹ ರಾವ್‌ ಪ್ರಧಾನಿಯಾಗಿದ್ದ ಅವಧಿಯಲ್ಲಿ ಪ್ರಣವ್‌ ಮುಖರ್ಜಿ ಅವರು ಹಣಕಾಸು ಸಚಿವರಾಗುವ ಅವಕಾಶ ಕಳೆದುಕೊಳ್ಳಲು ಗುಪ್ತಚರ ಇಲಾಖೆಯ (ಐ.ಬಿ) ವರದಿ ಕಾರಣವೇ?

ಪತ್ರಕರ್ತ ಮತ್ತು ಪ್ರಾಧ್ಯಾಪಕ ವಿನಯ್‌ ಸೀತಾಪತಿ ಬರೆದಿರುವ ‘ಹಾಫ್‌ ಲಯನ್‌: ಹೌ ಪಿ.ವಿ. ನರಸಿಂಹ ರಾವ್‌ ಟ್ರಾನ್ಸ್‌ಫಾರ್ಮ್‌ಡ್‌ ಇಂಡಿಯಾ’ ಎಂಬ ಪುಸ್ತಕ ಹೌದೆನ್ನುತ್ತದೆ.1991 ರಲ್ಲಿ ರಾವ್‌ ನೇತೃತ್ವದ ಸಚಿವ ಸಂಪುಟದಲ್ಲಿ ಹಣಕಾಸು ಸಚಿವರಾಗುವುದು ಖಚಿತ ಎಂದು ಪ್ರಣವ್‌ ಭಾವಿಸಿದ್ದರು.

1991ರ ಜೂನ್‌ 20 ರಂದು ರಾವ್‌ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದರು. ಇದಾದ ಕೆಲ ಗಂಟೆಗಳ ಬಳಿಕ ಪ್ರಣವ್‌ ಅವರು ಜೈರಾಮ್‌ ರಮೇಶ್‌ (ಈಗ ಕಾಂಗ್ರೆಸ್‌ ಸಂಸದ) ಅವರಲ್ಲಿ, ‘ನೀನು ಒಂದೋ ನನ್ನೊಂದಿಗೆ ಹಣಕಾಸು ಸಚಿವಾಲಯಕ್ಕೆ ಬರುವಿ ಅಥವಾ ಪ್ರಧಾನ ಮಂತ್ರಿ ಕಚೇರಿಯಲ್ಲಿ ರಾವ್‌ ಜತೆಗೆ ಇರುವೆ’ ಎಂದು ಹೇಳಿರುವ ವಿವರ ಪುಸ್ತಕದಲ್ಲಿದೆ. ಜೈರಾಮ್‌ ಆ ಬಳಿಕ ಪ್ರಧಾನಿ ಕಚೇರಿಯ ವಿಶೇಷಾಧಿಕಾರಿಯಾಗಿ ನೇಮಕಗೊಂಡಿದ್ದರು.

ಆದರೆ ಅದೇ ದಿನ ಮಧ್ಯಾಹ್ನ ರಾವ್‌ ಅವರು ಗುಪ್ತಚರ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ ಎಂದು ಪತ್ರಕರ್ತ ಸಂಜಯ ಬಾರು ಅವರನ್ನು ಉದ್ಧರಿಸಿ ಪುಸ್ತಕದಲ್ಲಿ ಬರೆಯಲಾಗಿದೆ.

‘ಕೆಲ ಗಂಟೆಗಳ ಬಳಿಕ ಪ್ರಣವ್‌ ಅವರಿಗೆ ಸಂಬಂಧಿಸಿದ ರಹಸ್ಯ ಕಡತವೊಂದು ರಾವ್‌ ಕೈಸೇರಿದೆ. ರಾವ್‌ ಆ ಕಡತವನ್ನು ಪ್ರಣವ್‌ ವಿರುದ್ಧ ಬಳಸಿದ್ದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೆ ಕಡತ ಕೈಸೇರಿದ ಬಳಿಕ ಹಣಕಾಸು ಸಚಿವರಾಗುವ ಅವಕಾಶವನ್ನು ಪ್ರಣವ್ ಕಳೆದುಕೊಂಡದ್ದು ಖಚಿತ’ ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

ರಾವ್‌ ಅವರು ಪ್ರಣವ್‌ ಬದಲು ಮನಮೋಹನ್‌ ಸಿಂಗ್‌ ಅವರನ್ನು ಹಣಕಾಸು ಸಚಿವರಾಗಿ ನೇಮಿಸಿದ್ದರು. ರಾಜಕೀಯ ಉದ್ದೇಶಕ್ಕೆ ಹಲವು ಸಲ ಗುಪ್ತಚರ ಇಲಾಖೆಯನ್ನು ರಾವ್‌ ಬಳಸಿಕೊಂಡಿದ್ದರು ಎಂದು ಪುಸ್ತಕ ತಿಳಿಸಿದೆ.

ಕಾಂಗ್ರೆಸ್‌ನಲ್ಲಿ ಯಾವೆಲ್ಲಾ ಸಂಸದರು ಆರ್ಥಿಕ ಸುಧಾರಣೆಯ ವಿರುದ್ಧ ಇದ್ದಾರೆ ಮತ್ತು ಸೋನಿಯಾ ಗಾಂಧಿ ಅವರನ್ನು ಯಾರೆಲ್ಲಾ ಭೇಟಿಯಾಗುತ್ತಿದ್ದರು ಎಂಬ ವಿವರಗಳನ್ನು ಗುಪ್ತಚರ ದಳದ ನೆರವಿನಿಂದ ತಿಳಿದುಕೊಳ್ಳುತ್ತಿದ್ದರು.

ಮಾಧವರಾವ್‌ ಸಿಂಧಿಯಾ ಮತ್ತು ಬಲರಾಮ್‌ ಜಾಖಡ್‌ ಸೇರಿದಂತೆ ಕಾಂಗ್ರೆಸ್‌ನ ಸುಮಾರು 55 ಸಂಸದರು ಜಾಗತೀಕರಣ ಮತ್ತು ಆರ್ಥಿಕ ಸುಧಾರಣೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂಬ ವಿವರ 1991ರ ಕೊನೆಯಲ್ಲಿ ಗುಪ್ತಚರ ದಳ ಸಲ್ಲಿಸಿದ್ದ ದಾಖಲೆಯಲ್ಲಿದೆ.

ಅರ್ಜುನ್ ಸಿಂಗ್‌ ಮತ್ತು ದಿಗ್ವಿಜಯ್‌ ಸಿಂಗ್‌ ಒಳಗೊಂಡಂತೆ 22 ಸಂಸದರು ಸುಧಾರಣೆಯ ವಿಷಯದಲ್ಲಿ ಕಾಂಗ್ರೆಸ್‌–ಬಿಜೆಪಿ ನಡುವೆ ಹೊಂದಾಣಿಕೆಯನ್ನು ವಿರೋಧಿಸಿದ್ದರು ಎಂಬ ವಿವರ ರಾವ್‌ ಅವರ ಖಾಸಗಿ ದಾಖಲೆಗಳಲ್ಲಿತ್ತು ಎಂದು ಪುಸ್ತಕ ತಿಳಿಸಿದೆ.

ಸೋನಿಯಾ ಮೇಲೆ ನಿಗಾ
ಬಾಬ್ರಿ ಮಸೀದಿ ಧ್ವಂಸದ ಬಳಿಕ ರಾವ್ ಗುಪ್ತಚರ ಇಲಾಖೆ ಅಧಿಕಾರಿಗಳ ಮುಖಾಂತರ ಸೋನಿಯಾ ಗಾಂಧಿ ಮೇಲೆ ನಿಗಾ ಇರಿಸಿದ್ದರು ಎಂಬ ವಿವರ ಕೂಡಾ ಪುಸ್ತಕದಲ್ಲಿದೆ. ಕಾಂಗ್ರೆಸ್‌ನ ಯಾರೆಲ್ಲಾ ಸೋನಿಯಾ ಪರ ಇದ್ದಾರೆ ಎಂಬುದನ್ನು ತಿಳಿಯುವುದು ಇದರ ಉದ್ದೇಶವಾಗಿತ್ತು. 

ರಾವ್‌ ಸರ್ಕಾರ ಬಾಬ್ರಿ ಮಸೀದಿ ಧ್ವಂಸ ಘಟನೆಯನ್ನು ನಿಭಾಯಿಸಿದ ರೀತಿಯನ್ನು ಸೋನಿಯಾ ಬಹಿರಂಗವಾಗಿ ಟೀಕಿಸಿದ್ದರು.

‘ಬಾಬ್ರಿ ಮಸೀದಿ ಧ್ವಂಸ ಘಟನೆಯ 12 ದಿನಗಳ ಬಳಿಕ ಗುಪ್ತಚರ ಇಲಾಖೆ ರಾವ್‌ ಅವರಿಗೆ ವರದಿ ಸಲ್ಲಿಸಿತ್ತು. ಅರ್ಜುನ್‌ ಸಿಂಗ್‌ ಮತ್ತು ದಿಗ್ವಿಜಯ್‌  ಅವರೂ ಮಸೀದಿ ಧ್ವಂಸ ಘಟನೆಯನ್ನು ಸರ್ಕಾರ ನಿಭಾಯಿಸಿದ ರೀತಿ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದರು ಎಂಬ ವಿವರ ವರದಿಯಲ್ಲಿತ್ತು’ ಎಂದು ಪುಸ್ತಕ ಹೇಳಿದೆ.

ವಿಶ್ವಾಸಮತ ಗೆಲ್ಲಲು ಸ್ವಾಮಿ ನೆರವು: ಬಿಜೆಪಿಯ ಈಗಿನ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರು 1990 ರ ದಶಕದಲ್ಲಿ ಜನತಾ ದಳವನ್ನು ಒಡೆಯುವ ಮೂಲಕ ನರಸಿಂಹ ರಾವ್‌ ಅವರಿಗೆ ವಿಶ್ವಾಸಮತ ಗೆಲ್ಲಲು ನೆರವಾಗಿದ್ದರು ಎಂಬ ವಿವರ ಪುಸ್ತಕದಲ್ಲಿದೆ.

‘ಜನತಾ ದಳವನ್ನು ಒಡೆಯುವಲ್ಲಿ ಸ್ವಾಮಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಪ್ರಯತ್ನದ ಫಲವಾಗಿ ಅಜಿತ್‌ ಸಿಂಗ್‌ ಹಾಗೂ ಇತರರು ಪಕ್ಷದಿಂದ ಹೊರಬಂದಿದ್ದರು’ ಎಂಬ ವಿವರ ಇದೆ. ಈ ಪುಸ್ತಕ ಸೋಮವಾರ ಬಿಡುಗಡೆಯಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT