ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿದಿನದ ಪ್ರೀತಿ!

Last Updated 22 ಜುಲೈ 2016, 19:30 IST
ಅಕ್ಷರ ಗಾತ್ರ

ನಮ್ಮ ಶರೀರದ ಯಾವುದಾದರೂ ಬಾಗಕ್ಕೆ ನೋವಾಗದ ಹೊರತೂ ನಾವು ಅದರ ಬಗ್ಗೆ ಗಮನವನ್ನು ಕೊಡುವುದಿಲ್ಲ. ಬಹಳಷ್ಟು ಸಲ ನಮ್ಮ ಬೈಕಿಗೋ, ಕಾರಿಗೋ, ಮೊಬೈಲಿಗೋ ಕೊಡುವಷ್ಟು ಕಾಳಜಿಯಲ್ಲಿ ರವಷ್ಟು ಕಾಳಜಿಯನ್ನು ಸಹ ನಾವು ನಮ್ಮ ಶರೀರದ ಸೌಖ್ಯಕ್ಕಾಗಿ ಕೊಡುವುದಿಲ್ಲ.
ನಾವು ಬಹುತೇಕರು ಹೀಗೆಯೇ ಇರುವುದು.

ನಮ್ಮ ಕೈಗೆ ಕೊಟ್ಟಷ್ಟು ಕಾಳಜಿಯನ್ನು ಕಾಲಿಗೆ ಜೊಡುವುದಿಲ್ಲ. ಬಲಗೈಗೆ ಕೊಟ್ಟಷ್ಟು ಮಹತ್ವವನ್ನು ಎಡಗೈಗೆ ಕೊಡುವುದಿಲ್ಲ.  ಕೈಬೆರಳುಗಳ ಉಗುರನ್ನು ಕತ್ತರಿಸಿಕೊಂಡಷ್ಟೇ ಆಸ್ತೆಯಿಂದ ಕಾಲುಬೆರಳುಗಳ ಉಗುರನ್ನು ಒಪ್ಪವಾಗಿ ಕತ್ತರಿಸಿಕೊಳ್ಳುವುದಿಲ್ಲ.

ಮುಖಕ್ಕೆ ಕೊಡುವಷ್ಟು ಪ್ರಾಮುಖ್ಯತೆಯನ್ನು ಖಂಡಿತವಾಗಿಯೂ ಕುತ್ತಿಗೆಗೂ, ಹೊಟ್ಟೆಗೂ ಕೊಡುವುದಿಲ್ಲ. ತಲೆಗೆ ಕೊಬ್ಬರಿ ಎಣ್ಣೆಯನ್ನು ಹಾಕುವ ಗೋಜಿಗೇ ಹೋಗದವರೂ ಬಹಳಷ್ಟು ಜನರಿದ್ದಾರೆ.  
ನಾವು ಬಹುತೇಕರು ಹೀಗೆಯೇ ಇರುವುದು.

ನಮ್ಮದೇ ಶರೀರದ ಬಗ್ಗೆ ನಾವು ಗಮನವನ್ನು ಕೊಡುವುದಿಲ್ಲ. ಬೀದಿ ಬದಿಯ ದೀಪದ ಕಂಬಕ್ಕೆ ಕೊಟ್ಟಷ್ಟೇ ಗಮನವನ್ನು ನಮ್ಮದೇ ದೇಹಕ್ಕೂ ಕೊಡುತ್ತಿರುತ್ತೇವೆ ಅಂದರೆ ಅತಿಶಯೋಕ್ತಿಯಾಗಲಾರದು.

ತಮ್ಮ ಕಾಲುಬೆರಳುಗಳ ಉಗುರನ್ನು ವರ್ಷಗಟ್ಟಲೇ ಕತ್ತರಿಸಿಕೊಳ್ಳದೇ ಇರುವವರನ್ನು, ವಾರಕ್ಕೊಮ್ಮೆಯೋ, ಎರಡುವಾರಕ್ಕೆ ಒಮ್ಮೆಯೋ ಸ್ನಾನಮಾಡುವವರನ್ನೂ, ವರ್ಷಗಟ್ಟಲೇ ಹಾಸಿಗೆ ಚಾದರಗಳನ್ನು ತೊಳೆಯದೇ ಇರುವವರನ್ನೂ ನಾನು ನೋಡಿದ್ದೇನೆ. ಇವರೇನೋ ಯುದ್ಧಕೈದಿಗಳಲ್ಲ. ಸೋಮಾಲಯಾದ ಸುಡುಗಾಡಿನವರಲ್ಲ. ಇಲ್ಲಿಯೇ ಇರುವವರು. ಆಸ್ತಿವಂತರು.

ವಿದ್ಯಾವಂತರು. ಉದ್ಯೋಗಸ್ಥರು. ಆದರೂ ಅವರು ಬದುಕುತ್ತಿರುವುದು ಮಾತ್ರ ನಿರಾಶ್ರಿತರಂತೆ. ಮನೆಯ ಅಂದದ ಬಗ್ಗೆ, ಶರೀರದ ಸ್ವಚ್ಛತೆಯ ಬಗ್ಗೆ ಇವರದ್ದು ದಿವ್ಯ ನಿರ್ಲಕ್ಷ್ಯ. ಕಾಲುಬೆರಳಿಗೆ ಕೀವು ತುಂಬಿದಾಗಲೋ, ಕಿಡ್ನಿಯಲ್ಲಿ ಕಲ್ಲು ಪತ್ತೆಯಾದಾಗಲೋ ಇವರು ಆಸ್ಪತ್ರೆಗೆ ಹೋಗುತ್ತಾರೆ.
ನಾವು ಕೆಲವರು ಹೀಗೆಯೇ ಇರುವುದು.

ಬಹುತೇಕ ನಮ್ಮೆಲ್ಲರ ದಿನನಿತ್ಯದ ಬದುಕು ಕೀಲಿಕೊಟ್ಟ ಗಡಿಯಾರದಂತೆ ಸಾಗುತ್ತಿರುತ್ತದೆ. ಬಹಳ ಸಲ ನಿಂತ ನೀತರಿನಂತೆ ನಾರುತ್ತಿದೆಯೇನೋ ಅಂತಲೂ ಅನ್ನಿಸುತ್ತದೆ. ಪ್ರತಿದಿನವೂ ಬೆಳಗಾಗುತ್ತದೆ, ಮಧ್ಯಾಹ್ನವಾಗುತ್ತದೆ, ರಾತ್ರಿಯಾಗುತ್ತದೆ.

ಆಫೀಸು, ಕೆಲಸ, ಟ್ರಾಫಿಕ್ಕು, ಗೌಜು, ಗದ್ದಲ, ಸಿನೀಮ, ಸಂಬಳ, ವಾರಾಂತ್ಯ, ಜಗಳ, ಮನಸ್ತಾಪ, ದೇವಸ್ಥಾನ, ಹರಕೆ, ಪೂಜೆ, ಕಿರಿಕಿರಿ, ರಗಳೆ, ಜಿಗುಪ್ಸೆ, ಆಸೆ, ಭರವಸೆ, ವಾರಾಂತ್ಯದ್ದೊ ಮಾಸಾಂತ್ಯದ್ದೋ ದಾಂಪತ್ಯದ ಸಾಂಗತ್ಯ – ಹೀಗೇ ಎಲ್ಲವೂ ಬಂದು ಹೋಗುತ್ತ ಇರುತ್ತವೆ.

ಭಾನುವಾರದಿಂದ ಭಾನುವಾರದವರೆಗೆ ಬರುವುದು ಹೋಗುವುದು ನಡೆದೇ ಇರುತ್ತದೆ. ಬಹಳಷ್ಟು ಹರಕೆಗಳು ಫಲವನ್ನು ಕೊಡದೇ ಮರೆತುಹೋಗಿರುತ್ತವೆ. ಬೇರೆ ಬೇರೆ ಬಯಕೆಗಳ ಈಡೇರಿಕೆಗಾಗಿ ಬೇರೆ ಬೇರೆ ಊರುಗಳ ದೇವರಿಗೆ ಮತ್ತಷ್ಟು ಹೊಸ ಹೊಸ ಹರಕೆಗಳನ್ನು ಮಾಡಿಕೊಂಡಿರುತ್ತೇವೆ. ತೀರಿಸಲಾರದ ಹರಕೆಗಳ ಭಯದಲ್ಲಿಯೂ, ಮುಂದಿನ ಹರಕೆಗಳ ಧಾವಂತದಲ್ಲಿಯೂ ದಿನಕಳೆಯುತ್ತಿರುತ್ತೇವೆ.

ಇದು ನಮ್ಮ ಬದುಕಿನ ದಿನನಿತ್ಯದ ಮುಂದುವರಿಕೆ.  ಇವೆಲ್ಲದರ ಮಧ್ಯೆ ಬದುಕಿನಲ್ಲಿ ನಾವು ನಮ್ಮವರೊಂದಿಗೆ ಹೇಗೆ ಸಂಬಂಧವನ್ನು ಇಟ್ಟುಕೊಂಡಿದ್ದೇವೆ? ನಮ್ಮವರಿಂದ ನಮಗೆ ಸುಖ ಶಾಂತಿ ನೆಮ್ಮದಿ ಸಿಗುತ್ತಿದೆಯೆ? ಅವರಿಗೆ ನಮ್ಮಿಂದ ಸುಖ ಸಂತೋಷ ಇದೆಯೆ? ನಾವು ನಮ್ಮವರ ಸಂತೋಷಕ್ಕಾಗಿ ಬದುಕಬೇಕಲ್ಲ. ಹೀಗೆಲ್ಲ ನಾವು ಆಲೋಚಿಸಿರುವುದು ಬಹಳ ಕಡಿಮೆ.

ಡಿ. ಎಂ. ಹೆಗಡೆ (ಸಂಮೋಹನ ತಜ್ಙ, ಆಪ್ತಸಮಾಲೋಚಕ ಮತ್ತು ತರಬೇತುದಾರರು) ಆರೋಗ್ಯ ಹೋಲಿಸ್ಟಿಕ್ ಹೆಲ್ತ್ ಕೇರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT