ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿದಿನ ಬತ್ತುತ್ತಿವೆ ಹತ್ತಾರು ಕೊಳವೆಬಾವಿಗಳು!

ಅರ್ಧ ಬೆಂಗಳೂರಿನ ದಾಹಕ್ಕೆ ಅಂತರ್ಜಲವೇ ಬರಿದು
Last Updated 3 ಮೇ 2016, 20:06 IST
ಅಕ್ಷರ ಗಾತ್ರ

ಬೆಂಗಳೂರು: ಸಾವಿರಾರು ಕೋಟಿ ರೂಪಾಯಿ ವ್ಯಯಿಸಿ ನಾಲ್ಕು ಹಂತದ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೂ ನಗರದ ಅರ್ಧದಷ್ಟು ಮಂದಿಗೆ ಕಾವೇರಿ ನೀರು ಸಿಗುತ್ತಿಲ್ಲ. ಆ  ಜನರ ನೀರಿನ ದಾಹ ಇಂಗಿಸುತ್ತಿದ್ದ ಕೊಳವೆಬಾವಿಗಳು ಸಹ ಬತ್ತಲಾರಂಭಿಸಿವೆ.

ನಗರದ ನಿತ್ಯದ ನೀರಿನ ಬೇಡಿಕೆ 200 ಕೋಟಿ ಲೀಟರ್‌ನಷ್ಟು ಇದೆ.  135 ಕೋಟಿ ಲೀಟರ್‌ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಉಳಿದ ನೀರು ಕೊಳವೆ ಬಾವಿಗಳಿಂದಲೇ ಪೂರೈಕೆಯಾಗುತ್ತಿದೆ. ಕಾವೇರಿ ನೀರು ಪೂರ್ಣ ಪೂರೈಕೆ ಆಗುತ್ತಿರುವುದು ನಗರದ ಹೃದಯ ಭಾಗದಲ್ಲಿ (245 ಚದರ ಕಿ.ಮೀ). 2007ರಲ್ಲಿ ನಗರಕ್ಕೆ ಹೊಸದಾಗಿ ಸೇರ್ಪಡೆಯಾದ ನಗರಸಭೆ ಹಾಗೂ ಪುರಸಭೆ  (330 ಚದರ ಕಿ.ಮೀ) ಪ್ರದೇಶಗಳಿಗೆ ನಾಲ್ಕು ವರ್ಷಗಳಿಂದ ಕಾವೇರಿ ನೀರನ್ನು ಕೊಡಲಾಗುತ್ತಿದೆ. ಅಲ್ಲಿನ ಶೇ 50ರಷ್ಟು ಕುಟುಂಬಗಳು ಇನ್ನೂ ಕಾವೇರಿ ನೀರಿನ ಸಂಪರ್ಕ ಪಡೆದಿಲ್ಲ.  110 ಹಳ್ಳಿಗಳ ಜನರಿಗೆ  (225 ಚದರ ಕಿ.ಮೀ) ಇರುವ ಏಕೈಕ ಮೂಲವೇ ಕೊಳವೆಬಾವಿಗಳು.

ನಗರದಲ್ಲಿ 4 ಲಕ್ಷಕ್ಕೂ ಅಧಿಕ ಕೊಳವೆಬಾವಿಗಳು ಇವೆ ಎಂದು ಅಂದಾಜಿಸಲಾಗಿದೆ. ಕಾವೇರಿ ನೀರಿನ ಸಂಪರ್ಕ ಪಡೆದಿರುವ ಬಹುತೇಕ ಕಟ್ಟಡಗಳ ಮಾಲೀಕರು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ಹೆಚ್ಚಿನವರು ಕುಡಿಯುವ ನೀರು ಬಿಟ್ಟು ಉಳಿದ ಕೆಲಸಗಳಿಗೆ ಬಳಸುವುದು ಕೊಳವೆ ಬಾವಿಗಳ ನೀರನ್ನು. ಈ ಬೇಸಿಗೆಯಲ್ಲಿ ನೀರಿನ ಬೇಡಿಕೆ ಪ್ರಮಾಣ ಶೇ 30ರಷ್ಟು ಜಾಸ್ತಿಯಾಗಿದೆ. ನಗರದ ಹೊರವಲಯ ಹಾಗೂ ಪೂರ್ವ ಭಾಗದ ಪ್ರದೇಶದಲ್ಲಿ ಈಗಾಗಲೇ ನೀರಿನ ಬರ ಕಾಣಿಸಿಕೊಂಡಿದೆ. ಅಂತರ್ಜಲದ ಅತೀ ಅವಲಂಬನೆಯಿಂದಾಗಿ ಕೊಳವೆಬಾವಿ ಗಳು ಬತ್ತಲಾರಂಭಿಸಿವೆ.

ರಾಜಧಾನಿಯಲ್ಲಿರುವ ಕೊಳವೆಬಾವಿಗಳ ಬಗ್ಗೆ ಈವರೆಗೆ ಅಧಿಕೃತ ಸಮೀಕ್ಷೆ ನಡೆದಿಲ್ಲ. ಗೃಹಬಳಕೆಗೆ ಎಷ್ಟು, ನೀರಿನ ವ್ಯಾಪಾರಕ್ಕೆ ಎಷ್ಟು ಮತ್ತು ಕೃಷಿ ಉದ್ದೇಶಕ್ಕಾಗಿ ತೋಡಲಾಗಿರುವ ಕೊಳವೆಬಾವಿಗಳೆಷ್ಟು ಎಂಬ ಖಚಿತ ಮಾಹಿತಿ ಯಾವುದೇ ಇಲಾಖೆಯಲ್ಲಿ, ಪ್ರಾಧಿಕಾರಗಳಲ್ಲಿ ಸಿಗುತ್ತಿಲ್ಲ. ಜತೆಗೆ ಕೊಳವೆಬಾವಿಗಳ ಸಮರ್ಪಕ ನಿರ್ವಹಣೆಯೂ ಆಗುತ್ತಿಲ್ಲ. ನಗರದಲ್ಲಿ ಕೊಳವೆಬಾವಿಗಳು ಕನಿಷ್ಠ 700–800 ಅಡಿಗಳಷ್ಟು ಭೂಗರ್ಭಕ್ಕೆ ಇಳಿಯುತ್ತವೆ. ಹೊರವಲಯದಲ್ಲಂತೂ ಸಾವಿರ ಅಡಿ ಕೊರೆದರೂ ನೀರು ಸಿಗುತ್ತಿಲ್ಲ.

ನಗರದಲ್ಲಿ ಪ್ರತಿ ತಿಂಗಳು 300ಕ್ಕೂ ಅಧಿಕ ಕೊಳವೆಬಾವಿಗಳು ಒಣಗುತ್ತಿವೆ. ಅದಕ್ಕಿಂತ ದುಪ್ಪಟ್ಟು ಪ್ರಮಾಣದ ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ ಎಂದು ಜಲಮಂಡಳಿಯ ಅಧಿಕಾರಿಗಳು ಅಂದಾಜಿಸಿದ್ದಾರೆ. ‘ಪ್ರತಿ ತಿಂಗಳು ನಾಲ್ಕೈದು ಸಾವಿರ ಕೊಳವೆಬಾವಿಗಳು ಬತ್ತುತ್ತಿವೆ. ದಶಕಗಳಿಂದ ಅಂತರ್ಜಲದ ಮೇಲೆ ಅತೀ ಒತ್ತಡ ಹೇರಿದ ಪರಿಣಾಮ ಈಗ ಗೋಚರಿಸುತ್ತಿದೆ ಎಂದು ತಜ್ಞರು  ವಿಶ್ಲೇಷಿಸುತ್ತಾರೆ.

‘ನಗರದಲ್ಲಿ ಅಂತರ್ಜಲಕ್ಕೆ ಕನ್ನ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ನಗರದ ಎಲ್ಲ ಜನರಿಗೆ ಜಲಮಂಡಳಿ ಕಾವೇರಿ ನೀರು ಪೂರೈಕೆ ಮಾಡುತ್ತಿಲ್ಲ. ಟ್ಯಾಂಕರ್‌ ಮಾಫಿಯಾದವರು ಇದರ ಲಾಭ ಪಡೆಯುತ್ತಿದ್ದಾರೆ. ಸಿಕ್ಕಸಿಕ್ಕಲ್ಲಿ ಭೂಮಿಯನ್ನು ಬಗೆದು ನೀರು ಕೊಳ್ಳೆ ಹೊಡೆಯುತ್ತಿದ್ದಾರೆ. ರಾಜ್ಯ ಸರ್ಕಾರದ ದೂರದೃಷ್ಟಿಯ ಯೋಜನೆಯ ಕೊರತೆಯಿಂದ ಹೀಗಾಗುತ್ತಿದೆ’ ಎಂದು ನಗರ ಯೋಜನಾ ತಜ್ಞ ಅಶ್ವಿನ್‌ ಮಹೇಶ್‌ ಹೇಳುತ್ತಾರೆ.

‘ನಾನು ಕೊಳವೆಬಾವಿ ಕೊರೆಸಿದ್ದು 8 ವರ್ಷಗಳ ಹಿಂದೆ. ಬೇಸಿಗೆಯಲ್ಲಿ ಪ್ರತಿವರ್ಷ ಬೇಕಾದಷ್ಟು ನೀರು ಸಿಗುತ್ತಿತ್ತು. ಕಳೆದ 10 ದಿನಗಳಿಂದ ಕೊಳವೆಬಾವಿ ಬತ್ತಿ ಹೋಗಿದೆ. ಇನ್ನೊಂದು ಕೊಳವೆಬಾವಿ ಕೊರೆಸಲು ನಾಲ್ಕೈದು ಲಕ್ಷ ಬೇಕು. ಅದರಲ್ಲಿ ನೀರು ಸಿಗುತ್ತದೆ ಎಂಬ ಭರವಸೆ ಇಲ್ಲ’ ಎಂದು ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಜಯಶಂಕರ್‌ ಹೇಳುತ್ತಾರೆ. ಶ್ರೀನಿವಾಸನಗರದ ನಾಗೇಶ್‌ ಹಾಗೂ ಕಾಮಾಕ್ಷಿಪಾಳ್ಯದ ರಾಮಯ್ಯ ಅವರೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇವರ ಮನೆಗಳ ಕೊಳವೆಬಾವಿಗಳು ಕೆಲವು ದಿನಗಳ ಹಿಂದೆ ಬತ್ತಿ ಹೋಗಿವೆ.

‘ಕೆಂಪೇಗೌಡರು ನಗರ ನಿರ್ಮಾಣ ಮಾಡುವ ಯೋಜನೆ ಕೈಗೆತ್ತಿಕೊಂಡಾಗ ಇದ್ದ ವಿಸ್ತೀರ್ಣ 29 ಚದರ ಕಿ.ಮೀ. ಪ್ರಸ್ತುತ ಬಿಬಿಎಂಪಿ ವ್ಯಾಪಿಸಿರುವುದು 800 ಚದರ ಕಿ.ಮೀ.ಗಳಲ್ಲಿ. ಇಷ್ಟೊಂದು ವ್ಯಾಪಕವಾಗಿ ಭೂವಿಸ್ತೀರ್ಣವನ್ನು ವೃದ್ಧಿಸಿಕೊಂಡಿರುವ ನಗರದ ಮೂಲಸೌಕರ್ಯಗಳ ಬೇಡಿಕೆಯೂ ಸಹಜವಾಗಿಯೇ ಹೆಚ್ಚಳವಾಗಿದೆ. ಅದರಲ್ಲಿ ನೀರು ಮೊದಲ ಅವಶ್ಯಕತೆ. 3–4 ದಶಕಗಳ ಹಿಂದೆ 300 ಅಡಿಗೂ ಹೆಚ್ಚು ಕೊಳವೆಬಾವಿ ಕೊರೆಸಲು ಜನರು ಮುಂದಾಗುತ್ತಿರಲಿಲ್ಲ. ಈಗ ಜನರಿಗೆ ಅಂತಹ ಕಾಳಜಿ ಇಲ್ಲ. ಜತೆಗೆ ಅವರಿಗೆ ಅನಿವಾರ್ಯವೂ ಆಗಿದೆ’ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

‘110 ಹಳ್ಳಿಗಳಿಗೆ ಕಾವೇರಿ ನೀರು ಒದಗಿಸುವ ಯೋಜನೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಯೋಜನೆ ಅನುಷ್ಠಾನಕ್ಕೆ ಜೈಕಾ ಅನುದಾನಕ್ಕಾಗಿ ಕಾಯುತ್ತಿದ್ದೇವೆ. 3 ವರ್ಷಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಬಳಿಕ ಪರಿಸ್ಥಿತಿ ಸುಧಾರಿಸಲಿದೆ’ ಎಂದು ಅವರು ಭರವಸೆ ನೀಡುತ್ತಾರೆ.

‘750 ಅಡಿ ಆಳದಲ್ಲಿ ನೀರಿಲ್ಲ’
‘ನಗರದ ನೆಲದಡಿಯ 750  ಅಡಿ (300 ಮೀಟರ್‌) ಆಳದಲ್ಲಿ ಹಾಸುಬಂಡೆ ಇದೆ. ಅದಕ್ಕಿಂತ ಆಳಕ್ಕೆ ಹೋದರೆ ಅಂತರ್ಜಲದಲ್ಲಿ ನೀರು ಸಿಗುವುದಿಲ್ಲ. ರಾಜಧಾನಿಯಲ್ಲಿ ಹೆಚ್ಚಿನ ಕೊಳವೆಬಾವಿಗಳು ಸಾವಿರ ಅಡಿ ಆಳದಲ್ಲಿವೆ. 10–15 ವರ್ಷಗಳಿಂದ ಕೊಳವೆಬಾವಿಗಳನ್ನು ಕೊರೆಸುವ ಪ್ರವೃತ್ತಿ ವ್ಯಾಪಕವಾಗಿದೆ. ಈಗ ಸಹಜವಾಗಿ ಕೊಳವೆಬಾವಿಗಳು ಬತ್ತಲಾರಂಭಿಸಿವೆ’ ಎಂದು ನಿವೃತ್ತ ಭೂವಿಜ್ಞಾನಿ ಕೆ.ಸಿ. ಸುಭಾಸ್‌ಚಂದ್ರ ಅಭಿಪ್ರಾಯಪಡುತ್ತಾರೆ.

‘ನಗರದ ಪೂರ್ವಭಾಗದ (ಹೆಬ್ಬಾಳ, ಬೆಳ್ಳಂದೂರು, ಚಲ್ಲಘಟ್ಟ ಕಣಿವೆ ಪ್ರದೇಶ) ಶಿಲಾಪ್ರಕೃತಿ ಭಿನ್ನವಾದುದು. ಇಲ್ಲಿ 50 ಮೀಟರ್‌ ಆಳದವರೆಗೆ ಜೇಡಿಮಣ್ಣಿನ ಹಾಸು ಇದೆ. ಇಲ್ಲಿ ನೀರು ಆಳಕ್ಕೆ ಇಳಿಯುವ ಪ್ರಮಾಣ ಕಡಿಮೆ. ಹೀಗಾಗಿ ಈ ಭಾಗದಲ್ಲಿ ಅಂತರ್ಜಲದ ನೀರಿನ ಲಭ್ಯತೆಯೂ ಕಡಿಮೆ. ಈ ಭಾಗಕ್ಕೆ ಕಾವೇರಿ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಹಾಗಾಗಿ ಜನರು ಕೊಳವೆಬಾವಿಗಳನ್ನೇ ನೆಚ್ಚಿಕೊಂಡಿದ್ದಾರೆ. ಈ ಭಾಗದಲ್ಲಿ ಕೊಳವೆಬಾವಿ ಬರಡಾಗುವ ಪ್ರಮಾಣ ಜಾಸ್ತಿ ಇದೆ’ ಎಂದು ಅವರು ತಿಳಿಸುತ್ತಾರೆ.

‘ಇರುವ ಜಲಮೂಲವನ್ನು ಕೊಳವೆಬಾವಿಗಳ ಮೂಲಕ ಅನಾಮತ್ತು ಎತ್ತುತ್ತಿರುವ ನಾವು ಅಂತರ್ಜಲ ಹೆಚ್ಚಳ, ಮಳೆ ನೀರು ಸಂಗ್ರಹ ಅಥವಾ ಸಂಸ್ಕರಿತ ತ್ಯಾಜ್ಯ ನೀರಿನ ಪುನರ್ಬಳಕೆ ಬಗ್ಗೆ ಗಂಭೀರ ಪ್ರಯತ್ನ ಮಾಡದೇ ಇರುವ ಕಾರಣ ಪೂರ್ಣಪ್ರಮಾಣದ ಕ್ಷಾಮವನ್ನು ಎದುರಿಸಬೇಕಾದ ಅಪಾಯ ತಪ್ಪಿದ್ದಲ್ಲ’ ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ.

‘ಅಂತರ್ಜಲ ಅತಿ ಬಳಕೆ’
‘ನಗರದಲ್ಲಿ ವಾರ್ಷಿಕ 830 ಮಿ.ಮೀ. ಮಳೆಯಾಗುತ್ತಿದೆ. ಇದರಲ್ಲಿ ಶೇ 71ರಷ್ಟು ಮಳೆ ನೀರು ಆವಿಯಾಗಿ ಹೋಗುತ್ತದೆ. ಶೇ 25.66ರಷ್ಟು ನೀರು ಮೇಲ್ಮೈಯಲ್ಲಿ ಉಳಿಯುತ್ತದೆ. ಉಳಿದಂತೆ ಶೇ 4ರಷ್ಟು ಮಳೆನೀರು ಅಂತರ್ಜಲಕ್ಕೆ ಸೇರುತ್ತದೆ. ವ್ಯಾಪಕ ನಿರ್ಮಾಣ ಕಾಮಗಾರಿಗಳಿಂದಾಗಿ ಮಳೆ ನೀರು ಅಂತರ್ಜಲಕ್ಕೆ ಸೇರಲು ಅವಕಾಶವಿಲ್ಲದಂತಾಗಿದೆ’ ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್‌ ತಿಳಿಸುತ್ತಾರೆ.

‘ರಾಜಧಾನಿಯ ಶೇ 60ರಷ್ಟು ಜನರು ಈಗಲೂ ಕೊಳವೆಬಾವಿಗಳ ನೀರನ್ನೇ ಅವಲಂಬಿಸಿದ್ದಾರೆ. ನಗರದ ಭೂಗರ್ಭದಿಂದ ನಿತ್ಯ 20 ಕೋಟಿ ಲೀಟರ್‌ ನೀರನ್ನು ಮಾತ್ರ ಪಡೆಯಬಹುದು. ಆದರೆ ಪ್ರತಿದಿನ 35 ಕೋಟಿ ಲೀಟರ್‌ನಿಂದ 75 ಕೋಟಿ ಲೀಟರ್‌ ವರೆಗೆ ಕೊಳವೆಬಾವಿಗಳ ಮೂಲಕ ನೀರು ಎತ್ತಲಾಗುತ್ತಿದೆ. ಅಂದರೆ ನಗರದ ಸಾಮರ್ಥ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು (ಶೇ 378)’ ಎಂದು ಅವರು ಮಾಹಿತಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT