ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾನ್ವೇಷಣೆಯ ಹಾದಿ...

Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ಒಂದೆಡೆ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್‌) ಟೂರ್ನಿಯ ನಾಲ್ಕನೇ ಅವೃತ್ತಿಯ ಸಿದ್ಧತೆಗಳು ನಡೆಯುತ್ತಿವೆ. ಹೊಸ ರಣಜಿ ಋತು ಆರಂಭಕ್ಕೂ ಹೆಚ್ಚು ಸಮಯವಿಲ್ಲ. ಹೀಗಾಗಿ ರಾಜ್ಯದಲ್ಲಿ ಕ್ರಿಕೆಟ್ ಚಟುವಟಿಕೆ ಗರಿಗೆದರಿದೆ. ಬೆಂಗಳೂರಿನಲ್ಲಿ ಈಗ ಕಿರಿಯರ ಕ್ರಿಕೆಟ್ ಸಂಭ್ರಮ. 23 ವರ್ಷದೊಳಗಿನವರ ಶ್ರೀನಿವಾಸನ್ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಪಂದ್ಯಗಳ ಮೊದಲ ಸುತ್ತಿನಲ್ಲಿ ಯುವ ಆಟಗಾರರು ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್‌, ಬ್ಯಾಟಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಮಿಂಚು ಹರಿಸಿದ್ದಾರೆ.

ಎರಡೂ ಇನಿಂಗ್ಸ್‌ಗಳಲ್ಲಿ ತಲಾ ಆರು ವಿಕೆಟ್ ಕಬಳಿಸಿದ ಎಡಗೈ ಸ್ಪಿನ್ನರ್‌ ಲಿಖಿತ್ ಬನ್ನೂರು, ಅಮೋಘ ಶತಕ ಸಿಡಿಸಿದ ಮಹಮ್ಮದ್‌ ಅಜೀಂ, ಕೆ.ಎಲ್‌.ಶ್ರೀಜಿತ್‌, ಮಾಸೂಖ್ ಹುಸೇನ್‌, ಆರ್‌.ಪ್ರತೀಕ್‌, ವೈ.ಎಸ್.ಶರತ್‌ ಹಾಗೂ ಶತಕ ವಂಚಿತರಾದ ಅತ್ರೇಯ ಇನಾಮದಾರ, ಕೆ.ವಿ.ಸಿದ್ದಾರ್ಥ ಮುಂತಾದವರು ಭರವಸೆ ಮೂಡಿಸಿ ದ್ದಾರೆ. ಇವರ ಪೈಕಿ ಬಹುತೇಕರು ಗ್ರಾಮೀಣ ಪ್ರತಿಭೆಗಳು. ಅವರನ್ನು ಈ ಮಟ್ಟಕ್ಕೆ ಬೆಳೆಸಿದ ಶ್ರೇಯ ಕೆಎಸ್‌ಸಿಎ ಅಕಾಡೆಮಿಗೆ (ಆರ್‌ಸಿ–ಕೆಎಸ್‌ಸಿಎ) ಸಲ್ಲುತ್ತದೆ.

ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ಗುರುತಿಸಿ ಅವರ ಪ್ರತಿಭೆಗೆ ಸಾಣೆ ಹಿಡಿಯುವುದು ಅಕಾಡೆಮಿಯ ಮುಖ್ಯ ಧ್ಯೇಯ. ಈ ಮೂಲಕ ವಯೋಮಾನದವರ ವಿಭಾಗದ ಕ್ರಿಕೆಟ್‌ನ ಬಲ ಹೆಚ್ಚಿಸಿ ರಾಜ್ಯ ಕ್ರಿಕೆಟ್‌ಗೆ ಶಕ್ತಿ ತುಂಬುವ ಕನಸು ಕೆಎಸ್‌ಸಿಎ ಆಡಳಿತದ್ದು.

2012ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡ ಅಕಾಡೆಮಿ ನಂತರ ಕಾರ್ಯವ್ಯಾಪ್ತಿಯನ್ನು ವಿವಿಧ ವಲಯಗಳಿಗೆ ವಿಸ್ತರಿಸಿ ದೇಶದಲ್ಲೇ ಅಪರೂಪದ ಪ್ರಯೋಗಕ್ಕೆ ನಾಂದಿ ಹಾಡಿತು. 14, 16 ಮತ್ತು 19 ವರ್ಷದೊಳಗಿನವರ ವಿಭಾಗದಲ್ಲಿ ಪ್ರತಿಭೆಗಳನ್ನು ವಿಂಗಡಿಸಿ ವ್ಯವಸ್ಥಿತ ಮತ್ತು ವೈಜ್ಞಾನಿಕ ತರಬೇತಿ ನೀಡಲಾಗುತ್ತದೆ. ಬೆಂಗಳೂರು ಹೊರತುಪಡಿಸಿ ಆರು ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕಾಡೆಮಿ ಯಲ್ಲಿ ವಾರದ ಕೊನೆಯಲ್ಲಿ ಮೂರು ದಿನ ತರಬೇತಿ ನಡೆಯುತ್ತದೆ. ಶುಕ್ರವಾರ ವಲಯ ಕೇಂದ್ರದ ಜಿಲ್ಲೆ ಯವರು ಮಾತ್ರ ಪಾಲ್ಗೊಂಡರೆ, ಶನಿವಾರ ಮತ್ತು ಭಾನು ವಾರ ಸಮೀಪದ ಜಿಲ್ಲೆಗಳಿಂದ ಆಟಗಾರರು ಬರುತ್ತಾರೆ. ಟರ್ಫ್‌ ಪಿಚ್‌ನಲ್ಲಿ ಬ್ಯಾಟಿಂಗ್‌ ಕಲಿಯುವ ಅವಕಾಶ ಅಕಾಡೆಮಿ ತರಬೇತಿಯ ಪ್ರಮುಖ ಅಂಶ. ಬೌಲಿಂಗ್ ಮೆಷಿನ್‌ನಿಂದ ತೂರಿಬರುವ ಚೆಂಡನ್ನು ಎದುರಿಸುವುದ ಕ್ಕೂ ಇಲ್ಲಿ ಅವಕಾಶವಿದೆ.

ಈ ಸೌಲಭ್ಯಗಳ ಬಳಕೆಯೇ ಮುಖ್ಯ ಎಂದು ಮೇಲ್ನೋಟಕ್ಕೆ ಕಂಡುಬಂದರೂ ಕೆಎಸ್‌ಸಿಎ ಅಕಾಡೆ ಮಿಯಲ್ಲಿ ಪರಿಪೂರ್ಣ ಆಟಗಾರನನ್ನು ರೂಪಿಸುವ ಕಾರ್ಯ ನಡೆಯುತ್ತಿದೆ ಎಂಬುದು ವಿಶೇಷ. ಬೌಲರ್‌ನ ತಪ್ಪಾದ  ಶೈಲಿ, ಬ್ಯಾಟ್ಸ್‌ಮನ್‌ನ ಸರಿ ಇಲ್ಲದ ಗ್ರಿಪ್‌, ಕ್ಷೇತ್ರ ರಕ್ಷಕನ ದೇಹದ ಅಸಮತೋಲನ ಮುಂತಾದವುಗಳನ್ನು ಗುರುತಿಸಿ ಸರಿಪಡಿಸುವುದರೊಂದಿಗೆ ಭವಿಷ್ಯದಲ್ಲಿ ಕಾಡಬಹುದಾದ ‘ನೋವಿಗೆ’ ಈಗಲೇ ಮದ್ದು ಅರೆಯುವ ಕೆಲಸವನ್ನು ಕೂಡ ಇಲ್ಲಿ ಮಾಡಲಾಗುತ್ತದೆ.

‘ಆಟಗಾರನನ್ನು ತಿದ್ದಿ ತೀಡಿ ಸರಿಯಾದ ರೂಪ ಕೊಡುವುದು ಅಕಾಡೆಮಿಯ ಕೆಲಸ. ಇದಕ್ಕೆ ಸಂಪೂರ್ಣ ವೈಜ್ಞಾನಿಕ ವಿಧಾನಗಳನ್ನು ಬಳಸಲಾಗುತ್ತದೆ. ರಾಜ್ಯದಲ್ಲಿ ಪರಿಪೂರ್ಣ ಕ್ರಿಕೆಟ್ ಪಟುಗಳನ್ನು ರೂಪಿಸುವುದು ನಮ್ಮ ಧ್ಯೇಯ’ ಎನ್ನುತ್ತಾರೆ ಅಕಾಡೆಮಿಯ ಮುಖ್ಯ ಕೋಚ್‌ ಸೋಮಶೇಖರ ಶಿರಗುಪ್ಪಿ.

ಫಿಜಿಯೊ, ಟ್ರೇನರ್‌ ನೇಮಕ
ಅಕಾಡೆಮಿ ಈ ವರ್ಷದಿಂದ ಫಿಜಿಯೊ ಮತ್ತು ಟ್ರೇನರ್‌ ನೇಮಕ ಮಾಡುತ್ತಿದೆ. ಇದಕ್ಕೆ ಧಾರವಾಡ ವಲಯದಿಂದ ಚಾಲನೆ ನೀಡಲಾಗಿದೆ. ಅಂತರರಾಷ್ಟ್ರೀಯ ಅಥ್ಲೀಟ್‌ ವಿಲಾಸ್ ನೀಲಗುಂದ ಟ್ರೇನರ್‌ ಆಗಿ ಮತ್ತು ಡಾ.ಅಮಿತ್‌ ಹೊಸೂರ ಫಿಜಿಯೋ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಗಳೂರು ವಲಯದಲ್ಲಿ ಟ್ರೇನರ್‌ ನೇಮಕವಷ್ಟೇ ಆಗಿದೆ.

***
ಪ್ರತಿಭಾ ಶೋಧ
ಬೇಸಿಗೆ ಶಿಬಿರ ಮತ್ತು ಬೌಲರ್‌ಗಳ ಪ್ರತಿಭಾ ಶೋಧದ ಮೂಲಕ ಅಕಾಡೆಮಿಗೆ ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ವಯೋಮಾನದ ವಿಭಾಗದಲ್ಲೂ 20 ಮಂದಿ ಆಟಗಾರರು ಇರುತ್ತಾರೆ. ಪ್ರತಿ ವಲಯದಲ್ಲಿ ಒಂದೊಂದು ವಿಭಾಗಕ್ಕೂ ಒಬ್ಬೊಬ್ಬ ತರಬೇತುದಾರ ಇರುತ್ತಾರೆ. ಇವರಿಬ್ಬರಿಗೂ ಮಾರ್ಗದರ್ಶನ ನೀಡಲು ಬೆಂಗಳೂರಿನಲ್ಲಿ ಮುಖ್ಯ ಕೋಚ್‌ ರಾಜೇಶ್‌ ಕಾಮತ್‌ ಇದ್ದಾರೆ. 

‘ಆಟಗಾರರು ತಂತ್ರಗಳನ್ನು ಸರಿಯಾಗಿ ಬಳಸುವಂತೆ ಹಾಗೂ ಮಾನಸಿಕವಾಗಿ ಸದೃಢರಾಗುವಂತೆ ಮಾಡುವುದಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಅವರನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಸಣ್ಣ ಪುಟ್ಟ ತಪ್ಪುಗಳಿಂದಾಗಿ ಪಂದ್ಯಗಳಲ್ಲಿ ದೊಡ್ಡ ನಷ್ಟ ಉಂಟಾಗುವುದನ್ನು ತಪ್ಪಿಸಲು ಈಗಲೇ ಅಭ್ಯಾಸ ಮಾಡುವಂತೆ ಹೇಳಿ ಕೊಡಲಾಗುತ್ತದೆ’ ಎನ್ನುತ್ತಾರೆ ಅಕಾಡೆಮಿಯ ಧಾರವಾಡ ವಲಯದ ಕೋಚ್‌ ಆರ್ಮುಗಂ.

‘ಅಕಾಡೆಮಿಯಲ್ಲಿ ನಡೆಯುವ ತರಬೇತಿಗೆ ಸರಿಯಾದ ಚೌಕಟ್ಟು ಇದೆ. ಇದಕ್ಕಾಗಿ ತರಬೇತುದಾರರಿಗೂ ‘ಪಾಠ’ ನಡೆದಿರುತ್ತದೆ. ಎಲ್ಲ ಪೂರಕ ಅಂಶಗಳನ್ನು ಒಗ್ಗೂಡಿಸಿ ಆಟಗಾರರನ್ನು ತಯಾರು ಮಾಡುವುದು ನಮ್ಮ ಕರ್ತವ್ಯ. ಇದರ ಪರಿಣಾಮ ಈಗಾಗಲೇ ರಾಜ್ಯದಲ್ಲಿ ಕಂಡುಬಂದಿದ್ದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಸಮರ್ಥ ಕ್ರಿಕೆಟ್ ಪಟುಗಳು ನಮ್ಮಲ್ಲಿ ಮೂಡಿಬರಲಿದ್ದಾರೆ’ ಎಂಬುದು ಹಿರಿಯ ಕೋಚ್‌ ಪ್ರಮೋದ ಕಾಮತ್‌ ಅವರ ಅಭಿಪ್ರಾಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT