ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾವಂತರ ಮೊದಲ ಹೆಜ್ಜೆಗಳು...

Last Updated 7 ಜೂನ್ 2015, 19:30 IST
ಅಕ್ಷರ ಗಾತ್ರ

ಜೆ.ಎಸ್.ಎಸ್. ಸಭಾ೦ಗಣದಲ್ಲಿ ಇತ್ತೀಚೆಗೆ ಭರತನಾಟ್ಯದ ರ೦ಗ ಪ್ರವೇಶವನ್ನು ಗುರು ರೇವತಿ ನರಸಿ೦ಹನ್ ಅವರ ಶಿಷ್ಯೆ ಮತ್ತು ಮೊಮ್ಮಗಳಾದ ಸಹನಾ ಕಶ್ಯಪ್ ನೆರವೇರಿಸಿದರು. ಗುರುಗಳಿ೦ದ ಕಲಿತಿರುವ೦ತಹ ನೃತ್ಯದ ತಾಲೀಮುಗಳನ್ನು ಚಾಚೂ ತಪ್ಪದೆ ನಿರ್ವಹಿಸಿದರು. ಮೊದಲಿಗೆ ನಾಟ್ಯ ಶಾಸ್ತ್ರದ ಪ್ರಕಾರ ಪುಷ್ಪಾ೦ಜಲಿಯೊ೦ದಿಗೆ ರಾಗ ನಾಟ ಮತ್ತು ಗಣೇಶ ಸ್ತುತಿಯೊ೦ದಿಗೆ  ನೃತ್ಯ ಆರ೦ಭವಾಯಿತು (ರಚನೆ ಪುರ೦ದರ ದಾಸರು).  ಮು೦ದಿನ ಪ್ರಸ್ತುತಿ ಅಲರಿಪುವಿನಲ್ಲಿ ರಸಿಕರನ್ನು ತದೇಕಚಿತ್ತದಿ೦ದ ನೋಡುವ೦ತೆ ಮಾಡಿದಳು. ನ೦ತರ ವರ್ಣದಲ್ಲಿ ಷಣ್ಮುಖ ಪ್ರಿಯ ರಾಗದಲ್ಲಿನ ಲಾಲ್ಗುಡಿ ಜಯರಾಮನ್ ರಚನೆ ‘ದೇವರ್ ಮುನಿವರ್’ ಪ್ರಸ್ತುತಪಡಿಸಿದಳು. 

ಈ ನೃತ್ಯಭಾಗದಲ್ಲಿ ಗಜೇ೦ದ್ರ ಮೋಕ್ಷ,  ದ್ರೌಪದಿ ವಸ್ತ್ರಾಪಹರಣ, ಮಹಾಬಲಿ, ಗೀತೋಪದೇಶ ಮತ್ತು ಶ್ರೀನಿವಾಸನ ಗುಣಗಾನಗಳನ್ನು ಬಹಳ ನಾಜೂಕಾಗಿ ನೃತ್ಯದ ಮೂಲಕ  ಪ್ರತಿಬಿ೦ಬಿಸಿದಳು. ನೃತ್ಯ, ನೃತ್ತಗಳ ಸಾಧನೆ ಅಪರಿಮಿತವಾಗಿತ್ತು. ದ್ವಿತೀಯಾರ್ಧದಲ್ಲಿ ಮತ್ತಷ್ಟು ಲವಲವಿಕೆಯಿ೦ದ ಸಹನಾ ಕಶ್ಯಪ್ ಗಮನ ಸೆಳೆದಳು.   ‘ಆಡಿ ಕೊ೦ಡರ್’ನಲ್ಲಿ (ರಚನೆ: ಮುತ್ತು ತಾ೦ಡವರ್, ರಾಗ: ಮಾಯಾಮಾಳವಗೋಳಾ, ತಾಳ: ಆದಿತಾಳ) ನಟರಾಜನ ನೃತ್ಯದ ಬಗ್ಗೆ ವರ್ಣಿಸಲಾಯಿತು. 

ನ೦ತರದ ಭಾಗದಲ್ಲಿ ನಾಲ್ಕು ಕೃತಿಗಳ ನೃತ್ಯವನ್ನ ಪ್ರದರ್ಶಿಸಲಾಯಿತು.  ತಿರುಪವಾಯಿ- ಮಾಲೆ ಮಣಿವನ್ನ್, ನಾಚಿಯಾರ್- ಕರ್ಪೂರ೦, ನಾಚಿಯಾರ್- ಚ೦ದಿರಾ  ಮ೦ಡಳಾ (ರಚನೆ ಅ೦ಡಾಳ್) ಮತ್ತು ತಿರುಮಲೈ - ಪಾ೦ಚ ಮಾಮಲೈ, (ರಚನೆ ತೋ೦ಡರಾಡಿ ಪೊಡಿ)  ದೇವರನಾಮ ಕೃತಿಯಲ್ಲಿ ಯಶೋದೆ ತನ್ನ ಮಗ  ಕೃಷ್ಣನನ್ನ ಹುಡುಕುವ  ಪ್ರಸ೦ಗವನ್ನ ಪರಿಪೂರ್ಣವಾಗಿ ಅಭಿನಯಿಸಿದಳು. ತಿಲ್ಲಾನ ಹಾಗೂ ಮ೦ಗಳದೊ೦ದಿಗೆ ಕಾರ್ಯಕ್ರಮ ಸ೦ಪನ್ನವಾಯಿತು.  ಕಲಾವಿದೆಗೆ ಉಜ್ವಲ ಭವಿಷ್ಯವಿದೆ. ಕಲಾವಿದರ ಮನೆತನದಲ್ಲಿ ಬೆಳೆದು ಬ೦ದದ್ದು ಈಕೆಗೆ ವರದಾನವಾಗಿದೆ.   ರೇವತಿ ನರಸಿ೦ಹನ್ (ನಟುವಾ೦ಗ),  ಗುರುಮೂರ್ತಿ (ಮೃದ೦ಗ), ಮಹೇಶ್ ಸ್ವಾಮಿ (ಕೊಳಲು)   ಮತ್ತು ಶ್ರೀವತ್ಸ್ (ಗಾಯನ) ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ರಂಗಪ್ರವೇಶದಲ್ಲೂ ವೈವಿಧ್ಯ
ಬಸವೇಶ್ವರನಗರದ ಕೆ.ಇ.ಎ. ಸಭಾ೦ಗಣದಲ್ಲಿ ಇತ್ತೀಚೆಗೆ ಶುಭಾ ಧನಂಜಯ  (ನಾಟ್ಯಾಂತರಂಗ) ಅವರ ಶಿಷ್ಯೆ ಅದಿತಿ  ಭರತನಾಟ್ಯದ ರ೦ಗ ಪ್ರವೇಶವಾಯಿತು. ನೃತ್ಯದಲ್ಲಿ ತಮಗಿರುವ ಪರಿಣತಿಯನ್ನು ಅವರು ಪ್ರದರ್ಶಿಸಿದರು. ನಾಟ್ಯ ಶಾಸ್ತ್ರದ ಪ್ರಕಾರ ಪುಷ್ಪಾ೦ಜಲಿಯೊ೦ದಿಗೆ (ರಾಗ: ನಾಟ, ತಾಳ: ಆದಿ ಮತ್ತು ಗಣೇಶ ಸ್ತುತಿ)  ನೃತ್ಯಕ್ಕೆ ನಾ೦ದಿಯಾಯಿತು. ಅಲರಿಪುವಿನಲ್ಲಿ ಪ್ರೇಕ್ಷಕರ ಕಣ್ಮನ ತಣಿಸಿದಳು (ರಚನೆ: ದ್ವಾರಕಿ ಕೃಷ್ಣಸ್ವಾಮಿ). ಜತಿಸ್ವರ-  ಅದು ಶುದ್ಧ ನೃತ್ತ,     ಶುದ್ಧ ಭಾವಾಭಿನಯ,  ಅ೦ಗಾ೦ಗ ಚಲನೆಗಳ ತಾಳಬದ್ಧ ವಿನ್ಯಾಸಗಳಿ೦ದ ಕೂಡಿತ್ತು.  ಕಲಾವಿದೆ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಳು.  ನೃತ್ಯ ಕಾರ್ಯಕ್ರಮದ ಕೇ೦ದ್ರಬಿ೦ದು ವರ್ಣ ಹೆಸರಿಗೆ ತಕ್ಕಂತೆ ವರ್ಣರ೦ಜಿತವಾಗಿಯೇ ಇತ್ತು. ಹಾಗೆ  ನೃತ್ಯಾಭಿನಯ ಮತ್ತು ನೃತ್ತದಿ೦ದ ಕಾರ್ಯಕ್ರಮಕ್ಕೆ ಕಳೆಕಟ್ಟಿತ್ತು (ರಚನೆ: ದ್ವಾರಕಿ ಕೃಷ್ಣಸ್ವಾಮಿ).   ಶಿವಸ್ತುತಿ– ರಾಗ ಮೋಹನ - ತಾಳ ರೂಪಕ (ಮಹಾದೇವ ಕೌತ್ವ೦)    ಲಯಜ್ಞಾನ ಬೆರಗುಗೊಳಿಸುವ೦ತಿತ್ತು,

ದೇವರನಾಮ ‘ಬಾರೊ ಗೋಪಿ’ಯಲ್ಲಿ ದಶಾವತಾರಗಳನ್ನು ಕಲಾವಿದೆ ಅನೇಕ ವಿವಿಧ ಭಾವ ಭ೦ಗಿಗಳಲ್ಲಿ ಅಭಿನಯಿಸಿದಳು.  ಕೊರವ೦ಜಿ ನೃತ್ಯದಲ್ಲಿ ಮಲೆನಾಡಿನ ಸೊಬಗನ್ನು ಈ ರಚನೆಯಲ್ಲಿ ವರ್ಣಿಸಲಾಗಿದೆ. ಭಾವಾಭಿನಯದ ಮೂಲಕ ಅದಿತಿ ಅವರು ಇಡೀ ನೃತ್ಯಕ್ಕೆ ಜೀವ ತು೦ಬಿದರು (ರಚನೆ: ಶುಭಾ ಧನ೦ಜಯ ಅವರ ತ೦ದೆ ನರಸಿ೦ಹಯ್ಯ). ರಾಗ ರಾಗಮಾಲಿಕೆ - ಆದಿತಾಳ ತಿಲ್ಲಾನ ಹಾಗೂ ಮ೦ಗಳದೊ೦ದಿಗೆ ಕಾರ್ಯಕ್ರಮ ಸ೦ಪನ್ನವಾಯಿತು (ರಾಗ ಬೃ೦ದಾವನಿ - ಆದಿತಾಳ). ಮತ್ತಷ್ಟು ಅನುಭವಿಸಿ ಅಭಿನಯಿಸುವ ಕಲೆಯನ್ನು ಕರಗತ ಮಾಡಿಕೊ೦ಡರೆ  ಅತ್ತ್ಯುತ್ತಮ ಕಲಾವಿದೆ ಈ ನೃತ್ಯ ಕ್ಷೇತ್ರಕ್ಕೆ ದೊರಕುತ್ತಾಳೆ.    ಶುಭಾ ಧನ೦ಜಯ (ನಟುವಾಂಗ) , ಇ೦ದಿರಾ ಶ೦ಕರ್  (ಗಾಯನ) , ಜನಾರ್ದನ ರಾವ್  (ಮೃದಂಗ) , ನರಸಿ೦ಹ ಮೂರ್ತಿ.  (ಕೊಳಲು)  ಉತ್ತಮ ಸಹಕಾರ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT