ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿರೂಪ

ಆತ್ಮಾವೈ ಪುತ್ರನಾಮಾಸಿ
Last Updated 23 ಜನವರಿ 2016, 19:56 IST
ಅಕ್ಷರ ಗಾತ್ರ

ಗರ್ಭಿಣಿಯರ ಎಮೆರ್ಜೆನ್ಸಿ ವಾರ್ಡಿನಲ್ಲಿ ಕ್ಷಣಕ್ಕೊಮ್ಮೆ ತೆರೆದು ಮುಚ್ಚುವ ಹಸಿರು ಪರದೆಗಳು ಆ ಮಗುವಿನ ಅಳುವಿಗೆ ನಿಂತಲ್ಲೇ ಕಂಪಿಸುತ್ತಿದ್ದವು. ಗಡಿಬಿಡಿಯಲ್ಲಿ ಓಡಾಡುವ ನರ್ಸುಗಳೆಲ್ಲ ಒಮ್ಮೆಲೇ ಆವಿಯಾಗಿ ಮಾಯವಾದರೋ ಎನ್ನುವಂತೆ ಕಣ್ಣೆದುರಿನ ಕೋಣೆ ಖಾಲಿಯಾಗಿತ್ತು. ಪಕ್ಕದಲ್ಲಿದ್ದ ಹಿರಿಯ ನರ್ಸು ಕೈ ಚಾಚುತ್ತಿರುವಂತೆ– ಅದಕ್ಕಾಗಿಯೇ ಕಾದಿರುವವಳ ಹಾಗೆ– ಕೊಂಚವೂ ತಡಮಾಡದೆ– ಮಾಧುರಿ ತನ್ನ ಕೈಯಲ್ಲಿದ್ದ ಮಗುವನ್ನು ಎತ್ತಿ ಮುಂದಕ್ಕೆ ಬಾಗಿದಳು. ಒಂದು ತಿಂಗಳ ಮಗು ಮಾಧುರಿಯ ಕೈಯಿಂದ ಆ ನರ್ಸಿನ ಕೈಗೆ ಜಾರುತ್ತಲೇ ಇಡಿಯ ಎಮರ್ಜೆನ್ಸಿ ವಾರ್ಡು ನಿಶ್ಶಬ್ದವಾಯಿತು. ಮಾಧುರಿಗೆ ಕೊಂಚ ನಿರಾಳವೆನಿಸಿತು. ಅವಳು ಬೆನ್ನು ಬಗ್ಗಿಸಿ ಕುಳಿತ ಭಂಗಿಯಿಂದಲೇ ತಿಳಿಯುತ್ತಿತ್ತು ಅವಳು ಸಂಪೂರ್ಣ ಹೈರಾಣಾಗಿದ್ದಾಳೆಂದು. ಕಳೆದ ಒಂದು ತಿಂಗಳಿನಿಂದ ಹಗಲು ರಾತ್ರಿಯೆನ್ನದೆ ಅಳುತ್ತಿರುವ ಮಗು, ಹೇಗಾದರೂ ಹಾಲು ಕುಡಿದು ಅಳು ನಿಲ್ಲಿಸಿದರೆ ಸಾಕು ಎಂಬಂತಾಗಿತ್ತು, ಮಾಧುರಿಗೆ ಮತ್ತು ಅವಳ ಅಮ್ಮನಿಗೆ.

ಮಾಧುರಿ ಆಸ್ಪತ್ರೆ ತಲುಪಿದ ಕೆಲವೇ ಕ್ಷಣಗಳಲ್ಲಿ ಚಿನ್ಮಯನೂ ಅಲ್ಲಿಗೆ ಬಂದ. ‘ಮಗು ಹಾಲು ಕುಡೀತಿಲ್ಲ’ ಎಂದು ಮಾಧುರಿ ಫೋನು ಮಾಡಿ ಬಿಕ್ಕಿ ಬಿಕ್ಕಿ ಅತ್ತಾಗ, ಏನು ಹೇಳಬೇಕೋ ತೋಚದೆ, ಸ್ನೇಹಿತರೊಂದಿಗೆ ಹೋಟೆಲಿನಲ್ಲಿ ಊಟಕ್ಕೆ ಕುಳಿತವನು ಖಾಲಿಹೊಟ್ಟೆಯಲ್ಲೆ ಎದ್ದು ಹೊರಟಿದ್ದ. ಮೊದಲೇ ಖಾಲಿ ಹೊಟ್ಟೆ. ಜೊತೆಗೆ ಟ್ರಾಫಿಕ್ಕು, ಪಾರ್ಕಿಂಗ್ ಸಮಸ್ಯೆ ಅವನ ಆತಂಕ ಅಸಹನೆಗಳನ್ನು ಹೆಚ್ಚಿಸಿತ್ತು. ಎಮೆರ್ಜೆನ್ಸಿ ವಾರ್ಡಿಗೆ ಬಂದವನೇ, ‘ಡಾಕ್ಟರ್ ಬರ್ಲಿಲ್ವಾ ಇನ್ನೂ? ಡಾಕ್ಟರ್ ಎಲ್ಲಿ?’ ಎಂದು ಕೊಂಚ ದನಿ ಏರಿಸಿಯೇ ಕೇಳಿದ.

‘ಡಾಕ್ಟರ್ ಈಗಷ್ಟೇ ಮತ್ತೊಬ್ಬ ಹೆಂಗಸಿನ ಹೆರಿಗೆ ಮುಗಿಸಿ ಹೊಲಿಗೆ ಹಾಕ್ತಿದ್ದಾರೆ. ಸ್ವಲ್ಪ ಕಾಯಬೇಕು. ಅರ್ಧ ಹೊಲಿಗೆ ಹಾಕಿ ಬಿಡೋದಕ್ಕೆ ಆಗಲ್ವಲ್ಲ...’ ಎಂದ ನರ್ಸು, ಮಗುವನ್ನು ಮತ್ತೆ ಮಾಧುರಿಯ ಕೈಗಿತ್ತು, ‘ಎಲ್ಲಿ ಹಾಲು ಕುಡಿಸು ನೋಡೋಣ’ ಎಂದಳು. ಮಾಧುರಿಯ ಅಮ್ಮ, ಅಕ್ಕ, ಮತ್ತು ಆ ನರ್ಸಿನ ಎದುರು, ತಾನು ನಿಂತಿರುವಾಗಲೇ ಮಾಧುರಿ ಎದೆ ತೆರೆದು ಮಗುವಿಗೆ ಹಾಲು ಕುಡಿಸಲು ಮುಂದಾದಾಗ, ಚಿನ್ಮಯನಿಗೆ ಇದ್ದಕ್ಕಿದ್ದಂತೆ ಸಂಕೋಚವಾಯಿತು. ತಣ್ಣಗಾದ. ಅತ್ಯಂತ ಖಾಸಗೀತನವೊಂದು ಬಟಾಬಯಲಾಗಿತ್ತು.

ಮಾಧುರಿ ಗರ್ಭಿಣಿಯಾಗಿರುವಾಗ ಡಾಕ್ಟರು ಅವಳನ್ನು ಪರೀಕ್ಷಿಸಲು ಹೊರಟಾಗ ಹೇಳುವಂತೆ ಈ ನರ್ಸೂ ಕೂಡ, ‘ಸಾರ್, ನೀವು ಸ್ವಲ್ಪ ಹೊರಗಿರಿ’ ಎನ್ನಬಹುದಿತ್ತು. ಅಥವ ಪರದೆ ಹಾಕಿಕೊಳ್ಳಬಹುದಿತ್ತು. ಆದರೆ ಗಂಡಸೊಬ್ಬ ಅಲ್ಲಿ ನಿಂತಿರುವುದನ್ನು ಗಣನೆಗೇ ತೆಗೆದುಕೊಳ್ಳದೆ, ಚಿನ್ಮಯನನ್ನೂ ಆ ಹೆಂಗಸರ ಗುಂಪಿಗೆ ಸೇರಿಸಿಕೊಂಡುಬಿಟ್ಟಿದ್ದರು. ಹೀಗೆ ಅಚಾನಕ್ಕಾಗಿ ಎಲ್ಲರೆದುರು ಕಾಣಿಸಿದ ಮಾಧುರಿಯ ನಗ್ನತೆ ಚಿನ್ಮಯನಲ್ಲಿ ಒಂದು ಬಗೆಯ ಬಿಡುಗಡೆಯನ್ನೂ ತಂದಿತ್ತು. ಇದೊಂದು ಹೊಸ ಬಗೆಯ ಬಿಡುಗಡೆ ಎನ್ನಿಸಿತು. ಮಾಧುರಿಯ ಬಗೆಗಿನ ಮಾನಸಿಕ ಬಿಗಿಯೂ ಸಡಿಲಾದ ಹಾಗಾಯಿತು.
***
ಚಿನ್ಮಯ್ ಮತ್ತು ಮಾಧುರಿ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಒಂದೇ ಪ್ರಾಜೆಕ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ತೀಕ್ಷ್ಣಮತಿಗಳು. ಕೆಲಸದಲ್ಲಿ ನಿಪುಣರು. ನುರಿತ ಮಾತಿನವರು. ಅವರಿಬ್ಬರು ಪ್ರೀತಿಸಿ ಮದುವೆಯಾದಾಗ ಆಫೀಸಿನಲ್ಲಿ ಎಲ್ಲರೂ ‘ಐಡಿಯಲ್ ಕಪಲ್‘ ಎಂದು ಹೊಗಳಿದರು.

ಚಿನ್ಮಯನ ಅಪ್ಪ–ಅಮ್ಮನಿಗೂ ಮಗನ ಲವ್ ಮ್ಯಾರೇಜ್ ಬಗ್ಗೆ ತಕರಾರಿರಲಿಲ್ಲ. ಹಾಗೆ ನೋಡಿದರೆ ತಾವು ಹುಡುಕಿದ್ದರೂ ತಮ್ಮ ಎಣ್ಣೆಗಪ್ಪು ಹುಡುಗನಿಗೆ ತೆಳ್ಳಗೆ ಬೆಳ್ಳಗಿರುವ ಇಷ್ಟು ಚೆಂದದ ಹುಡುಗಿ ಸಿಗುತ್ತಿರಲಿಲ್ಲ ಎಂದುಕೊಂಡರು. ಆದರೆ, ಮದುವೆಯಾಗಿ ಎರಡು ವರ್ಷವಾದರೂ ಮಕ್ಕಳಾಗದಿರುವ ಬಗ್ಗೆ ಚಿಂತೆಯಿತ್ತು. ಮದುವೆಯಾಗಿ ಎರಡು ವರ್ಷದೊಳಗೆ ಮಗುವಾದರೆ ಡೈವೋರ್ಸ್ ಆಗುವ ಸಂಭವ ಕಡಿಮೆ ಎನ್ನುವ ನಂಬಿಕೆ ಚಿನ್ಮಯನ ಅಮ್ಮನದು.

‘ಹಾಗೇನೂ ಇಲ್ವೇ. ಮಕ್ಕಳು ದೊಡ್ಡವರಾದ ಮೇಲೂ ಎಷ್ಟೊಂದು ಜನ ಡೈವೋರ್ಸ್ ಪಡೆದಿದ್ದಾರೆ. ನಮ್ಮಲ್ಲೇ ಅಂಥ ಮೂರ್ನಾಲ್ಕು ಕೇಸ್ ಇದ್ದಾವೆ’ ಅಂತ ಗಂಡ ಹೇಳಿದರೂ, ‘ಏನೇ ಇದ್ದರೂ ಕೂಡಲೇ ಮಕ್ಕಳಾಗಿಬಿಡಬೇಕು. ಆಗ ಸಣ್ಣಪುಟ್ಟ ಸಮಸ್ಯೆಗಳು ದೊಡ್ಡದಾಗುವುದಿಲ್ಲ’ ಎನ್ನುತ್ತಿದ್ದಳು. ‘ಇಬ್ಬರೂ ಆಫೀಸಿನಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದೀರ. ಇರುವುದಕ್ಕೆ ಮನೆಯಿದೆ. ತಿಂಗಳಿಗೆ ಎರಡು ಲಕ್ಷ ಸಂಪಾದನೆಯಿದೆ. ಇನ್ನೇನಾಗಬೇಕು. ಸುಮ್ಮನೆ ಮುಂದೂಡಬೇಡಿ. ನೀವಿಬ್ಬರೂ ಆಫೀಸಿಗೆ ಹೋರಟುಬಿಡುತ್ತೀರಿ. ಇವರು ಅಲ್ಲಿ ಇಲ್ಲಿ ಸುತ್ತಾಡಲು ಹೋಗುತ್ತಾರೆ. ಮನೆಯಲ್ಲಿ ಒಬ್ಬಳೇ ಕೂತು ತಲೆ ಚಿಟ್ಟು ಹಿಡಿಯುತ್ತಿದೆ.

ಬೇಗ ಒಂದು ಮಗುವನ್ನು ಹೆತ್ತು ಕೊಡು. ಆಗ ನನಗೆ ನಿಮ್ಮ ಯಾರ ಉಸಾಬರಿಯೂ ಬೇಡ’ ಎಂದು ಸೊಸೆಯನ್ನು ಓಲೈಸುತ್ತಿದ್ದಳು. ಆಗಾಗ ಕುಟುಂಬದ ಹಿರಿಯರಿಂದಲೂ ಹೇಳಿಸುತ್ತಿದ್ದಳು.

‘ನಮ್ಮ ಕಾಲದಲ್ಲಿ ಮೂವತ್ತಕ್ಕೆಲ್ಲ ಮೂರ್ನಾಲ್ಕು ಮಕ್ಕಳಾಗಿ ಸಂಸಾರದ ಜವಾಬ್ದಾರಿ ಹೊರಲು ಅಣಿಯಾಗುತ್ತಿದ್ದೆವು. ಆಗುವುದೇನಿದ್ದರು ಮೂವತ್ತರೊಳಗೆ ಆಗಿಬಿಡಬೇಕು. ಆಮೇಲೆ ದೇಹಕ್ಕೆ ಆ ಶ್ರಮವನ್ನು ಹೊರುವ ತಾಕತ್ತು ಕಮ್ಮಿ. ನಾನು, ನನ್ನಮ್ಮ, ನನ್ನ ಅತ್ತಿಗೆ– ಒಂದು ಮನೆಯಲ್ಲಿ ಮೂವರು ಬಾಣಂತಿಯರು ಗೊತ್ತಾ? ಯಾರು ಯಾರ ಮಗುವಿಗೆ ಬೇಕಾದರೂ ಹಾಲು ಕುಡಿಸಬಹುದಿತ್ತು’ ಎಂದು ಅಮ್ಮನ ದೊಡ್ಡಮ್ಮ ಮುಸಿಮುಸಿ ನಕ್ಕಾಗ, ಚಿನ್ಮಯನೂ ತಡೆಯಲಾಗದೆ ನಕ್ಕ. ‘ನೀನು ಹುಳಿ ಹಾಕುವುದು ಯಾವಾಗ ಮಾರಾಯ? ಬೇಗ ಒಂದು ಬೆಟ್ಟದ ಪೂಜೆ ಊಟ ಹಾಕಿಸು. ಮದುವೆಯಾದ ಹೊಸತರ ಆಕರ್ಷಣೆಯಲ್ಲಿ ಹುಟ್ಟಿದ ಮಕ್ಕಳು ಹೆಚ್ಚು ಚುರುಕಾಗಿರುತ್ತವೆ. ತಡ ಮಾಡಬೇಡ’ ಎಂದು ಹೇಳಿದಾಗ, ಈ ಮುದಿ ಹೆಂಗಸು ಎಲ್ಲರೆದುರು ಈ ಎಲ್ಲ ವಿಷಯವನ್ನು ಎಷ್ಟು ಸರಾಗವಾಗಿ ಸಂಕೋಚವಿಲ್ಲದೆ ಮುಜುಗರವಾಗದಂತೆ ಆಡುತ್ತಿದ್ದಾಳಲ್ಲ ಎಂದು ಆಶ್ಚರ್ಯವಾಯಿತು.

ಚಿನ್ಮಯನಿಗೂ ಮಗುವಿನ ಆಸೆಯಿತ್ತು. ಮದುವೆಯಾಗಿ ಮೂರು ವರ್ಷ ಮಕ್ಕಳೇ ಬೇಡ ಎಂದು ಹಟ ಹಿಡಿದ ಮಾಧುರಿಯ ಮಾತೂ ಸರಿ ಎನ್ನಿಸುತ್ತಿತ್ತು . ‘ಈ ದೇಶದ ಅರ್ಧವಾಸಿ ಜನ ತಮಗೆ ಬೇಕೋ ಬೇಡವೋ ಅಂತಾನೂ ಯೋಚ್ನೆ ಮಾಡ್ದೆ, ಸಮಾಜದ ಒತ್ತಡಕ್ಕೆ ಮದುವೆ ಮಕ್ಕಳು ಅಂತ ಮಾಡ್ಕೋತಾರೆ. ಜಸ್ಟ್ ಬೈ ದಿ ಸೋಶಿಯಲ್ ಪ್ರೆಶರ್. ಐಯಾಮ್ ನಾಟ್ ಪ್ರಿಪೇರ್ಡ್ ಯೆಟ್. ನನಗೆ ನನ್ನ ಮೇಲೆ– ನಾನು ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗಬಲ್ಲೆ ಎನ್ನುವ– ನಂಬಿಕೆ ಬರಬೇಕು’ ಎಂದಾಗ, ಅದು ಅವಳ ಮೇಲಿನ ನಂಬಿಕೆಯ ವಿಚಾರವೋ ಅಥವ ನನ್ನ ಮೇಲಿನ ನಮ್ಮ ಕುಟುಂಬದ ಮೇಲಿನ ಅಪನಂಬಿಕೆಯೋ ಅನ್ನುವ ಅನುಮಾನವೂ ಬರುತ್ತಿತ್ತು.

ಒಂದು ವೇಳೆ ಹೊಂದಾಣಿಕೆ ಆಗದಿದ್ದರೆ ಮದುವೆಯ ನಂಟಿನಿಂದ ವಿಚ್ಛೇದನ ಪಡೆಯಲು ಮಗು ಅಡ್ಡಿಯಾಗಬಾರದು. ಮಗುವಾಗದಿದ್ದರೆ ಹೊರನಡೆಯುವುದು ಸುಲಭ ಎನ್ನುವ ಯೋಚನೆ ಇರಬಹುದು. ಇದು ಅವಳ ಬದುಕಿನ ಭದ್ರತೆಯ ಪ್ರಶ್ನೆಯೂ ಇರಬಹುದು. ಅಷ್ಟಕ್ಕೂ ಅವಳು ತೋರುವ ಪ್ರೀತಿಯಲ್ಲಿ ಯಾವುದೇ ಕಪಟವಿರಲಿಲ್ಲ. ಹಡೆಯುವವಳು ಅವಳು ತಾನೇ. ಆ ನಿರ್ಧಾರವನ್ನು ಅವಳಿಗೇ ಬಿಡುವುದು ಒಳಿತು ಎಂದುಕೊಂಡ. ಮದುವೆಯಾದ ಮೊದಲ ಮೂರು ವರ್ಷ ಸುತ್ತಾಟದಲ್ಲೇ ಕಳೆಯಿತು. ನಡುವೆ ಒಮ್ಮೆ ಮಾಧುರಿಯ ಮುಟ್ಟು ನಿಂತಾಗ ಅವಳಿಗೆ ಇನ್ನಿಲ್ಲದ ಕಳವಳವಾಯಿತು. ನನಗೆ ಈಗಲೇ ಮಗು ಬೇಡವೆಂದು ಅತ್ತಳು.

ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಹೇಳಿದ ಡಾಕ್ಟರು, ‘ನೆಗೆಟಿವ್ ಬಂದಿದೆಯಲ್ಲ. ಸ್ಟ್ರೆಸ್‌ನಿಂದಾಗಿ ಪೀರಿಯಡ್ಸ್ ಮುಂದೆ ಹೋಗುತ್ತಿರಬಹುದು’ ಎಂದಾಗ ಸಮಾಧಾನವಾಯಿತು.

ಮೂರು ವರ್ಷ ಕಳೆದ ಮೇಲೂ ಎಲ್ಲವೂ ಅದೇ ರೂಢಿಯಂತೆ ನಡೆಯುತ್ತಿತ್ತು. ಆರು ಗಂಟೆಗೆ ಎದ್ದು ಚಕಚಕನೆ ರೆಡಿಯಾಗಿ, ಗಡಿಬಿಡಿಯಲ್ಲಿ ತಿಂಡಿ ಮುಗಿಸಿ, ಆಫೀಸಿನ ಬಸ್ಸು ಹಿಡಿದು, ಅಫೀಸಿನ ರಗಳೆಗಳೆಲ್ಲ ಮುಗಿಸಿ ಸಂಜೆ ಟ್ರಾಫಿಕ್ಕಿಗೆ ಶಾಪ ಹಾಕುತ್ತ ಮನೆ ತಲುಪಿ, ಮತ್ತೆ ಗಡಿಬಿಡಿಯಲ್ಲಿ ಅಡುಗೆ ಊಟ ಮುಗಿಸಿ, ಕೆಲ ಹೊತ್ತು ಟಿ.ವಿ ನೋಡಿ, ಮಲಗುವಾಗ ಏನಾದರು ಗಾಸಿಪ್ಪುಗಳು, ಆಫೀಸಿನ ತೊಂದರೆಗಳನ್ನು ಮಾತಾಡಿಕೊಳ್ಳುತ್ತ ಮಲಗುತ್ತಿದ್ದರು.

ವಾರದ ಐದು ದಿನ ಹೀಗೇ ಕಳೆದುಹೋದರೆ, ವಾರಾಂತ್ಯವು ಬಿಗ್ ಬಝಾರು, ಮಾಲ್‌ಗಳ ಅಲೆದಾಟ, ಮನೆಗೆಲಸಗಳ ಒದ್ದಾಟದಲ್ಲೇ ಕಳೆದುಹೋಗುತ್ತಿತ್ತು. ಪ್ರತೀವಾರವೂ ಒಂದೇ ಅಚ್ಚಿನಿಂದ ಉತ್ಪಾದನೆಯಾದ ಸೋಪಿನ ಬಿಲ್ಲೆಗಳಂತೆ ಕರಗುತ್ತಿರುವ ಬದುಕಿನಲ್ಲಿ ಯಾವ ಸಮಸ್ಯೆಯೂ ಇರುವ ಹಾಗೆ ಕಾಣಲಿಲ್ಲ. ಮಾಧುರಿ ಮುಂದಿನ ವರ್ಷದೊಳಗೆ ಮಗುವಾದರೆ ಎಲ್ಲವೂ ಸರಿಹೋಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದಳು. ಆಗಲಿಲ್ಲ. ಆಗುವುದೋ ಇಲ್ಲವೋ ಎನ್ನುವ ಭಯ ಶುರುವಾಯಿತು. ಆಗೊಮ್ಮೆ ಮುಟ್ಟು ನಿಂತಾಗ ಅತ್ತವಳು, ಈಗ ಪ್ರತೀ ಬಾರಿ ಮುಟ್ಟಾದಾಗಲೂ ಅತ್ತಳು. ಕಳವಳಗೊಂಡಳು. ಚಿನ್ಮಯನಿಗೆ– ಮಕ್ಕಳೇ ಆಗದಿದ್ದರೆ– ಎನ್ನುವ ಹೆದರಿಕೆ.

‘ಹಾಗೆಲ್ಲ ನಾವು ಬೇಕೆಂದಾಗ ಆಗುವುದಕ್ಕೆ ಅದನ್ನೇನು ಅಂತ ಮಾಡಿದ್ದೀಯ. ನಾವು ಬೇಕು ಅಂದಾಗ ಮೋಶನ್ನೇ ಆಗುವುದಿಲ್ಲ, ಇನ್ನು ಮಕ್ಕಳಾಗ್ತವಾ? ನಿನಗಿನ್ನೂ ಮೂವತ್ತು. ಆಗುತ್ತೆ. ಹೆದರಬೇಡ. ಈ ಕಾಲದಲ್ಲಿ ಹುಡುಗಿಯರಿಗೆ ಮೂವತ್ತಾದರೂ ಮದುವೆಯೇ ಆಗಿರೊಲ್ಲ. ಅಂಥದ್ದರಲ್ಲಿ ನೀನ್ಯಾಕೆ ಅಷ್ಟು ಯೋಚ್ನೆ ಮಾಡ್ತೀಯ. ಡೋಂಟ್ ವರಿ. ಇಬ್ಬರಲ್ಲೂ ಯಾವ ತೊಂದರೆಯೂ ಇಲ್ಲ. ಈ ಮಾತ್ರೆಗಳನ್ನು ತೆಗೆದುಕೋ ಸಾಕು... ಅಲ್ಲಿ ಚಿಂತೆ ಇರಬಾರದು. ಡೋಂಟ್ ಬಿ ಟೆನ್ಸ್ಡ್. ಒಂದು ವಾರ ಆಫೀಸಿಗೆ ರಜೆ ಹಾಕಿ ಎಲ್ಲಾದ್ರು ಹೊರಗೆ ತಿರುಗಾಡಲು ಹೋಗಿ. ಎಂಜಾಯ್ ಯುವರ್ ಸೆಕ್ಸ್. ಮಕ್ಳಾಗ್ತಿಲ್ಲ ಅನ್ನೋ ಚಿಂತೆಯಲ್ಲಿ ಕೂಡಿದರೆ ಮಕ್ಕಳಾಗೋದಿಲ್ಲ. ಬಿ ರಿಲ್ಯಾಕ್ಸಡ್’ ಅಂತ ಡಾಕ್ಟರು ಮಾಧುರಿಗೆ ಧೈರ್ಯ ತುಂಬಿದರು.

ಡಾಕ್ಟರ್ ಸಲಹೆಯಂತೆ ಎರಡನೆಯ ಹನಿಮೂನಿಗೆಂದು ಕೇರಳಕ್ಕೆ ಹೋದರು. ಅಲಪಿಯ ಬೋಟ್ ಹೌಸಿನಲ್ಲಿ ಮಾಧುರಿ ಬೆಳಕಿನಲ್ಲೂ ಸಂಕೋಚ ಕಳಚಿ ತನ್ಮಯಳಾದಳು. ಮಿಲನಪೂರ್ವದ ಸರಸ ಸಂಭಾಷಣೆಗಳ ನಡುವೆ, ‘ಮಕ್ಕಳಾಗದಿದ್ದರೆ ನನ್ನನ್ನು ಬಿಟ್ಟುಬಿಡುತ್ತೀಯ ಚಿನ್ನು?!’ ಎಂದು ಅವಳು ಆರ್ತಳಾಗಿ ಕೇಳಿದ್ದು ಚಿನ್ಮಯನನ್ನು ಕಲಕಿತು. ಕರಗಿದ. ಅನುರಕ್ತಿಯ ರಸ ಹೊಮ್ಮಿ ದೇಹವು ಭಾರವಾಗುತ್ತ, ಮುಟ್ಟಿದ್ದಲ್ಲೆಲ್ಲ ಹರಳುಗಟ್ಟುತ್ತ, ಉರಿದುರಿದು ಹಗುರಾಗಿ ದೇಹವೇ ಇಲ್ಲವೆನ್ನುವ ಹಾಗನ್ನಿಸಿತು. ಅವಳ ಯೋನಿವ್ಯೂಹದಲ್ಲಿ ಎಲ್ಲವೂ ಅಯೋಮಯವಾಯಿತು. ಅವಳೊಳಗೆ ಸೇರಿ ಓಲಾಡುವಾಗ ಉನ್ಮಾದ ಹೆಚ್ಚುತ್ತಾ ಹೋಯಿತು. ಅವಳು ದೀಪವಾರಿಸಿದಳು. ಕತ್ತಲೆಯಲ್ಲಿ ಅವನ ಕಲ್ಪನೆಯ ಗರಿಗೆದರಿ ಅವಳ ದೇಹದ ತಿರುವುಗಳ ಸೊಬಗಿಗೆ, ಆ ಸೂಕ್ಷ್ಮ ಬಿಂದುಗಳ ಸ್ಪರ್ಶಕ್ಕೆ ಕಂಪಿಸಿದ. ಬೆಳಕಿಗಿಂತ ಕತ್ತಲೆಯಲ್ಲಿ ಇದು ಹೆಚ್ಚು ಕ್ರೀಯಾಶೀಲ. ಅವಳ ನಗ್ನ ದೇಹ, ಅದರ ಬಾಗು, ಬಳುಕು, ಚಲನೆ, ಉನ್ಮಾದ ನಾದ ಅವನನ್ನು ಕೆರಳಿಸಿತು.

ವ್ಯಗ್ರನಾದ. ತಾನೇನು ಮನುಷ್ಯನೋ ಮೃಗವೋ.... ತಾನು ಏನೆಂಬುದೇ ಮರೆತುಹೋದಂತಾಯಿತು. ಆ ಮಂದ ಬೆಳಕಿನಲ್ಲೂ ಅವಳನ್ನೇ ತದೇಕ ನೋಡುತ್ತ ಮುತ್ತಿಟ್ಟ. ಇವಳು ತಾನಂದುಕೊಂಡವಳಲ್ಲ. ನನ್ನ ಅಳವಿಗೆ ಸಂಪೂರ್ಣ ನಿಲುಕದ ಇನ್ನೇನೋ ಇವಳಲ್ಲಿದೆ. ಇವಳದನ್ನು ಪ್ರಕಟಿಸುತ್ತಿದ್ದಾಳೆ. ನನ್ನಿಂದ ಗ್ರಹಿಸಲಾಗುತ್ತಿಲ್ಲ. ಬೆಳಕು ಬಿದ್ದರೆ ಎಲ್ಲವೂ ನಂದಿಹೋಗುವುದು. ಕತ್ತಲೆಯಲ್ಲಿಯೇ ಇದು ಉಜ್ವಲ. ಇದನ್ನು ಗ್ರಹಿಸಲು ತೊಡಗಬಾರದು.... ಅದೇ ಇದಕ್ಕೆ ತೊಡಕು.... ಸುಮ್ಮನೆ ತೋಯಬೇಕು. ಮೀಯಬೇಕು.

ಮುಳುಗಬೇಕು.... ಕಣ್ಮುಚ್ಚಿದ. ಅವಳು ಅವನ ಭುಜವನ್ನು ಗಟ್ಟಿಯಾಗಿ ಕಚ್ಚಿ ಸಡಿಲಾದಳು, ಎಲ್ಲವನ್ನೂ ಅವನಿಗೆ ಒಪ್ಪಿಸಿದಂತೆ. ಅವನುಸಿರು ಮೇಲೆ ಮೇಲೇರುತ್ತ ಸಾಗಿತು. ಕತ್ತಲು ಸಾಂದ್ರಗೊಂಡಿತು. ಅವಳು ಯಾರೆಂಬುದೂ ಮರೆತುಹೋಯಿತು. ಎಲ್ಲವೂ ತನ್ನಿಂದ ತೊರೆದು ಹೋಗುತ್ತಿದೆ. ಪ್ರೀತಿ, ಭಾವ, ಅಹಂ, ಈ ದೇಹ, ಈ ಪ್ರಜ್ಞೆ, ಈ ಉಸಿರು.... ಈ ಉಸಿರೂ ತನ್ನಿಂದ ತೊರೆದುಬಿಡಬಹುದು ಈಗಲೇ. ಇದೆಂಥ ಉನ್ಮಾದ! ಇದೆಂಥ ಪ್ರಾಣಾಂತಿಕ ಚಲನೆ! ಉತ್ಕಂಠ ಸ್ಥಿತಿಯಲ್ಲಿ ಜೀವರಸವೆಲ್ಲ ಸಾಂದ್ರಗೊಂಡು ಮಿಂಚಿನಂತೆ ಹರಿದು ಹೋಗುವಂಥ ಮರಣಮಿಲನ! ಎಲ್ಲ ಬಗೆಯ ಹಂಗು ತೊರೆದ ಮಹಾ ವಿಸರ್ಜನೆ! ಮಿಲನೋತ್ತರದ ನಿರುದ್ವೇಗದಲ್ಲಿ ಮಾಧುರಿಯನ್ನು ಮೃದುವಾಗಿ ರಮಿಸಿ, ತಾನು ತನ್ನೊಳಗೆ ಇದ್ದೇನೋ ಇಲ್ಲವೋ ಎನ್ನುವ ಹಾಗೆ ಹರಿದುಹೋಗಿ– ಚಿನ್ಮಯ ಹೆಣದಂತೆ ಮಲಗಿದ.
***
ಈ ಮಗು ಅಪ್ಪನ ಹಾಗೆಯೇ ಇದೆ ಅಂತ ಕೆಲವರು ಹೇಳಿದರೆ, ಕೆಲವರು ಅಮ್ಮನ ಹಾಗೆಯೇ ಇದೆ ಎಂದರು. ಅದೆಲ್ಲ ಏನೂ ಈಗಲೇ ಹೇಳುವುದಕ್ಕೆ ಬರುವುದಿಲ್ಲ. ಮಕ್ಕಳು ದಿನದಿನಕ್ಕೂ ಬದಲಾಗುತ್ತವೆ ಅಂತ ಮತ್ತೆ ಕೆಲವರು. ಮಾಧುರಿಗೆ ಈ ಸಂಭ್ರಮವೆಲ್ಲ ಎರಡೇ ದಿವಸ. ಗರ್ಭಿಣಿಯಾಗಿರುವಾಗ ತನ್ನ ಪ್ರಾಣಕ್ಕೇನಾದರೂ ಸಂಚಕಾರವಾದರೆ, ಅಥವ ಮಗುವಿನ ಪ್ರಾಣಕ್ಕೇ ಏನಾದರೂ ಆದರೆ ಎನ್ನುವ ಭೀತಿ ಒಳಗೊಳಗೇ ಕುಟುಕುತ್ತಿತ್ತು. ಇಂಟರ್‌ನೆಟ್‌ನಲ್ಲಿ ಸಿಗುತ್ತಿದ್ದ ಮಾಹಿತಿಗಳನ್ನೆಲ್ಲ ಓದಿ ಅತೀ ನಾಜೂಕಾದಳು. ಸಣ್ಣಪುಟ್ಟ ತೊಂದರೆಗೂ ಕಳವಳಗೊಂಡು ಡಾಕ್ಟರಿನ ಬಳಿ ಓಡುತ್ತಿದ್ದಳು. ‘ಇದೆಲ್ಲ ಕಾಮನ್. ಎಂಜಾಯ್ ಯುವರ್ ಪ್ರೆಗ್ನೆನ್ಸಿ. ಯುವರ್ ಪ್ರೆಗ್ನೆಂಟ್– ನಾಟ್ ಪೇಶೆಂಟ್. ಇದರಲ್ಲಿ ಏನೂ ಹೊಸತಿಲ್ಲ. ಅನಾದಿ ಕಾಲದಿಂದ ಪ್ರಕೃತಿ ಸಹಜವಾಗಿ ನಡೆದುಕೊಂಡು ಬರುತ್ತಿರುವ ಕ್ರಿಯೆ. ಬಿ ಹ್ಯಾಪಿ’ ಎನ್ನುತ್ತಿದ್ದರು.

ಎಂಟೂವರೆ ತಿಂಗಳು ತುಂಬುತ್ತ ಬರಲು ಗರ್ಭಾಶಯದ ಸುತ್ತಲಿನ ನೀರೊಡೆದು ಹೋಗಲು ಶುರುವಾಗಿ ಆಸ್ಪತ್ರೆಗೆ ಸೇರಿದಳು. ‘ಸಂಜೆಯವರೆಗೂ ಕಾಯೋಣ’ ಎಂದು ಹೆರಿಗೆ ನೋವು ಬರಿಸುವ ಸಲುವಾಗಿ ಡ್ರಿಪ್ಸ್ ಹಾಕಿದರು. ಮಗು ಹೊಟ್ಟೆಯೊಳಗೆ ಮೋಶನ್ ಮಾಡಿಕೊಂಡಿದೆ ಎಂದಾಗ ಅವಳಿಗೆ ಇನ್ನಷ್ಟು ಭಯವಾಯಿತು. ನೋವು ಹೆಚ್ಚುತ್ತಾ ಹೋಗಿ ತಡೆಯಲಾರದಷ್ಟು ನೋವಾಗತೊಡಗಿತು.

ಇಂಟರ್ನೆಟ್, ಪುಸ್ತಕಗಳಲ್ಲಿ ಓದಿದ ವಿವರಗಳ ಜೊತೆಗೆ, ‘ಹೇಗೋ... ಒಂದು ಮೈ ಎರಡಾದರೆ ಸಾಕು...’ ಎಂದ ತನ್ನ ದೊಡ್ಡಮ್ಮನ ಆಶೀರ್ವಾದದ ಮಾತು ನೆನಪಾಯಿತು. ನೋವು ಹೆಚ್ಚುತ್ತ ಹೋಯಿತು. ಯಾವುದೂ ಅರಿವಿಗೆ ಬಾರದ ಮತ್ತಿನ ಸ್ಥಿತಿ ತಲುಪಿದಳು. ‘ಪುಶ್.... ಪುಶ್....’ ಎಂದು ಯಾರೋ ಅರಚುತ್ತಿರುವುದು ಮಾತ್ರ ಕೇಳಿಸುತ್ತಿತ್ತು. ಇನ್ನೇನು ತಾನು ಸತ್ತೇ ಹೋಗುವೆನೋ ಅಥವ ಈಗಾಗಲೇ ಸತ್ತಾಗಿದೆಯೋ ಎನ್ನುವಂತೆ ಲೇಬರ್ ವಾರ್ಡಿನಲ್ಲಿ ಮಲಗಿದ್ದಳು. ಡಾಕ್ಟರ್ ಫೋರ್ಸಿಪ್ಸ್ ಹಾಕಿ ಮಗುವಿನ ತಲೆಯನ್ನು ಹೊರಗೆಳೆದಿದ್ದರು. ಮಾಧುರಿಗೆ ಹೋದ ಜೀವ ಬಂದ ಹಾಗಾಗಿತ್ತು. ‘ನೋಡಿ... ಇಲ್ಲಿ ನೋಡಿ...’ ಅಂತ ನರ್ಸು ಮಗುವನ್ನು ತೋರಿಸಿದಾಗ ನಕ್ಕಿದ್ದಷ್ಟೇ. ಎಷ್ಟೋ ಹೊತ್ತಿನ ನಂತರ, ‘ಯಾವ ಮಗು?’ ಅಂತ ಕೇಳಿದ್ದಳು.

ಹುಟ್ಟಿಸಿದ ನೋವಿನದ್ದು ಒಂದು ಪಾಲಾದರೆ ಅದನ್ನು ಹತ್ತು ದಿನ ಸಂಭಾಳಿಸಿ ಸಾಕುವುದು ನೂರು ಪಾಲಿನದು. ಅಕ್ಕ, ದೊಡ್ಡಮ್ಮ ಏನಿದ್ದರೂ ಬಂದು ಹೋಗುವವರು. ತಾಯಿಗೆ ಅನಾರೋಗ್ಯ. ಮಗುವನ್ನು ಆದಷ್ಟು ತಾನೇ ಸಂಭಾಳಿಸಲು ಪ್ರಯತ್ನಿಸಿದಳು. ಮಗುವಿಗೆ ಹಗಲಿನಲ್ಲಿ ಸ್ನಾನ ಮಾಡಿಸಿ ಬಟ್ಟೆ ಸುತ್ತಿ ಮಲಗಿಸಿದ ಎರಡು ಗಂಟೆಯಷ್ಟೇ ನಿದ್ದೆ. ತನಗೂ ದಿನಕ್ಕೆ ಅಷ್ಟೇ ನಿದ್ದೆ. ಮಗುವಿಗೆ ಹಾಲು ಕುಡಿಸಿ ಮಲಗಿಸಿದರೆ ಹದಿನೈದು ಇಪ್ಪತ್ತು ನಿಮಿಷಕ್ಕೆ ಮತ್ತೆ ಅಳು; ಎಚ್ಚರ. ಮತ್ತೆ ಹಾಲುಣಿಸುವುದು. ಅರ್ಧ ಗಂಟೆ, ಮುಕ್ಕಾಲು, ಒಂದು ಗಂಟೆಯವರೆಗೂ ಕುಳಿತು ಹಾಲು ಕುಡಿಸುತ್ತಿದ್ದಳು. ಬೆನ್ನು ಮೂಳೆ ಮುರಿದು ಹೋಗುವಂಥ ನೋವು.

ಹಾಲು ಕುಡಿದ ಮಗು ಇನ್ನೇನು ಮಲಗಿತು ಎಂದುಕೊಳ್ಳುವಾಗ ಮತ್ತೆ ಅಳು. ರಾತ್ರಿಯ ಹೊತ್ತು ಅವಳ ಎರಡೂ ಕೈಗಳಲ್ಲಿ ಜೋಲಿಯಂತೆ ಮೇಲೆ ಕೆಳಗೆ ತೂಗುತ್ತಿರುವ ಮಗು ತನ್ನ ಅಳುವನ್ನು ಮತ್ತೊಂದೇ ಲೋಕಕ್ಕೆ ರವಾನಿಸುತ್ತಿರುವಂತೆ, ಯಾರದೋ ನಿರೀಕ್ಷೆಯಲ್ಲಿ ನಿರಂತರವಾಗಿ ಅಳುತ್ತಿರುವಂತೆ ಕಾಣುತ್ತಿತ್ತು. ಅಳುವಿನ ಕೂಗು ಹೆಚ್ಚುತ್ತ ಹೆಚ್ಚುತ್ತ ಇನ್ನೇನು ಉಸಿರು ಮೇಲಕ್ಕೇರಿ ಏನಾಗುವುದೋ ಎಂದು ಮನೆ ಮಂದಿಯೆಲ್ಲ ಕಂಗಾಲಾಗುತ್ತಿದ್ದರು. ಹಿರಿಯರ ಸಲಹೆಯಂತೆ ಹಾಲು ಹೆಚ್ಚಿಸಿಕೊಳ್ಳಲು ರವೆ ಬೆಲ್ಲದ ಗಂಜಿ, ಸಬ್ಬಸ್ಸಿಗೆ ಸೊಪ್ಪಿನ ಸಾರು, ಅಂಜೂರ, ಮುಂತಾದ ಆಹಾರ ವಿಧಾನಗಳನ್ನೂ ಪ್ರಯತ್ನಿಸಿದರು. ಎಷ್ಟು ಹೊತ್ತು ಹಾಲುಣಿಸಿದರೂ, ಹೇಗೆಲ್ಲ ಎತ್ತಿ ಆಡಿಸಿದರೂ ಮಗು ಸಮಾಧಾನಗೊಳ್ಳುತ್ತಿರಲಿಲ್ಲ. ಡಾಕ್ಟರನ್ನು ಕೇಳಿದರೆ, ‘ಇದೆಲ್ಲ ಕಾಮನ್. ಇವೆಲ್ಲ ಇರುತ್ತೆ. ಈಗ ನಿನಗಿರುವುದು ಒಂದೇ ಕೆಲಸ. ಮಗುವಿಗೆ ಶ್ರದ್ಧೆಯಿಂದ ಹಾಲು ಕುಡಿಸು. ಯಾವ ಕಾರಣಕ್ಕೂ ಬಾಟಲಿ ಹಾಲು ಕೊಡಬೇಡ’ ಎಂದು ಎಚ್ಚರಿಸಿದರು.

ಈ ಎಲ್ಲ ನೋವು ಹೆದರಿಕೆಗಳ ಮಧ್ಯೆ ಮಾಧುರಿಗೆ ಮಗುವಿನ ಸುಖ ಅನುಭವಿಸಲು ಸಮಯವೇ ಸಿಗಲಿಲ್ಲ. ಅದರ ಅಳುವಿಗೆ ರೋಸಿಹೋಗುತ್ತ– ಇದು ಯಾರಿಗೆ ಬೇಕಿತ್ತು? ತನಗೇನಾಗುತ್ತಿದೆ? ಮಗುವಿಗೇನಾಗುತ್ತಿದೆ? ಬೆನ್ನು–ಭುಜ ನೋವು, ನಿದ್ದೆ ಕಾಣದ ಕಣ್ಣುಗಳು.... ಈ ತಾಯ್ತನದ ನೋವಿನಲ್ಲಿ ಮಗುವಿನ ಬಗ್ಗೆಯೇ ಜಿಗುಪ್ಸೆ ಅಥವ ಒಳಗೊಳಗೇ ಎಲ್ಲೋ ಒಂದು ತೆರನಾದ ದ್ವೇಷ ಬೆಳೆದುಬಿಡುವ ಹಾಗಿದೆಯಲ್ಲ! ಎಂದು ಕನಲಿಹೋದಳು. ಇದು ತನ್ನಿಂದಾಗುತ್ತಿಲ್ಲವೆಂದು ಚಿನ್ಮಯನಿಗೆ ಫೋನ್ ಮಾಡಿದಾಗೆಲ್ಲ ಅತ್ತಳು. ತಾಳ್ಮೆಯಿಂದ ಅವಳನ್ನು ಸಮಾಧಾನಪಡಿಸಿದ. ಕೆಲವೊಮ್ಮೆ ಕೆಲಸದ ಒತ್ತಡದ ಮಧ್ಯೆ ಇರುವಾಗ, ‘ನಿನಗೆ ನಿನ್ನಮ್ಮನಿಗೆ ಮಗುವನ್ನು ಸರಿಯಾಗಿ ನೋಡಿಕೊಳ್ಳಲು ಬರುವುದಿಲ್ಲ’ ಎಂದು ಅವಳ ಮೇಲೆಯೇ ರೇಗಾಡಿದ. ‘ನಾನು ಇದೆಲ್ಲವನ್ನೂ ಬಿಟ್ಟು ಎಲ್ಲಿಯಾದರು ಹೋಗಿಬಿಡುತ್ತೇನೆ. ನನ್ನಿಂದಾಗುತ್ತಿಲ್ಲ’ ಎಂದು ಅವಳೂ ಒಮ್ಮೊಮ್ಮೆ ರೇಗಾಡುತ್ತಿದ್ದಳು. 

ಆ ನೋವಿನ ನಡುವೆಯೇ ಮಗು ಹುಟ್ಟಿ ಹನ್ನೊಂದನೆಯ ದಿವಸ ಮಗುವನ್ನು ತೊಟ್ಟಿಲಿಗೆ ಹಾಕುವ ಸಂಭ್ರಮ. ತೊಟ್ಟಿಲಿಗೆ ರೇಶಿಮೆಯ ಬಟ್ಟೆ ಹೊದಿಸಿ ಹೂವುಗಳನ್ನು ಸುತ್ತಿ ಅಲಂಕರಿಸಿದ್ದರು. ಮಗುವನ್ನು ತೊಟ್ಟಿಲಿಗೆ ಹಾಕುವ ಮುನ್ನ ಕಲ್ಲನ್ನು ಬಟ್ಟೆಯಲ್ಲಿ ಸುತ್ತಿದ ಗುಂಡಪ್ಪನನ್ನು ಹಾಕಿ ತೂಗಿ ನಂತರ ಮಗುವನ್ನು ತೊಟ್ಟಿಲಿಗೆ ಹಾಕಿ ತೂಗಿದರು. ಹೆಂಗಸರು ಒಂದರ ಮೇಲೊಂದು ಲಾಲಿ ಪದಗಳನ್ನು ಹಾಡುತ್ತಿದ್ದರು. ಮಗು ಸುಮ್ಮನೆ ಮಲಗಿತ್ತು.

ತೊಟ್ಟಿಲಿಗೆ ಹಾಕಿ ತೂಗಲು ಶುರು ಮಾಡಿದ ಮೇಲಾದರೂ ಮಗು ಸುಮ್ಮನೆ ಮಲಗಬಹುದೇನೋ ಎಂದುಕೊಂಡಳು ಮಾಧುರಿ. ಕೆಲ ಹೊತ್ತಿನ ನಂತರ ಮಗು ಅಳುವುದಕ್ಕೆ ಶುರುಮಾಡಿತು. ಮಾಧುರಿ ಮಗುವಿಗೆ ಹಾಲು ಕುಡಿಸಲು ಕೋಣೆಗೆ ಕರೆದೊಯ್ದಳು.

ಮನೆಯವರೆಲ್ಲ ಬಂದವರಿಗೆ ತಿಂಡಿ–ಕಾಫಿ ಕೊಟ್ಟು ಉಪಚರಿಸುತ್ತಿದ್ದರು. ಮಾಧುರಿ ರೂಮಿನಿಂದಲೇ ಚಿನ್ಮಯನನ್ನು ಕರೆದಳು. ಚಿನ್ಮಯ್ ರೂಮಿನ ಬಾಗಿಲನ್ನು ಸ್ವಲ್ಪವೇ ತೆರೆದು ಒಳಹೋಗಿ, ಬಾಗಿಲು ಹಾಕಿಕೊಂಡು ಮಾಧುರಿಯತ್ತ ತಿರುಗಿದ. ಅವಳು ಮಗುವಿಗೆ ಹಾಲು ಕುಡಿಸುತ್ತಿದ್ದಳು. ಕಿಟಕಿಯ ಕೆಂಪು ಪರದೆಗಳಲ್ಲಿ ಸೋಸಿ ಒಳಚೆಲ್ಲುತ್ತಿದ್ದ ಸೂರ್ಯನ ಕಿರಣಗಳು ಕೋಣೆಯೊಳಗೆ ಮಂದ ಬೆಳಕನ್ನು ಹರಡಿತ್ತು. ‘ಆ ದಿಂಬು ಕೊಡು ಇಲ್ಲಿ ಬೆನ್ನಿಗೆ’ ಎಂದಳು. ಹಾಲು ಕುಡಿಸುತ್ತಿರುವಂತೆ ಅವಳ ಬೆನ್ನ ಹಿಂದೆ ದಿಂಬು ಇರಿಸಿದ.

ನೈಟಿಯ ತೆರೆದ ಜ಼ಿಪ್ಪಿನ ನಡುವೆ ಅವಳ ವಕ್ಷಸ್ಥಳ ಹಿಂದಿಗಿಂತಲೂ ವಿಶಾಲವಾದಂತೆ ಮೃದುವಾದಂತೆ ಹೊಳಪಾಗಿರುವಂತೆ ತೋರಿತು. ಮಗುವು ಶಾಂತವಾಗಿ, ನಿರಾಯಾಸವಾಗಿ, ನಿಶ್ಶಬ್ದವಾಗಿ, ಕಣ್ಮುಚ್ಚಿಕೊಂಡು ಹಾಲು ಕುಡಿಯುತ್ತಿತ್ತು. ಮಾಧುರಿ ದಿಂಬನ್ನು ಸರಿಪಡಿಸಿಕೊಳ್ಳಲು ಒಂಚೂರು ಅಲುಗಿದಾಗ, ಮಗುವಿನ ಬಾಯಿಂದ ಅವಳ ಎಡಮೊಲೆಯ ತೊಟ್ಟು ಹೊರಬಂದಿತು. ಮಗು ಕೊಸರಾಡಿತು. ಕೂಡಲೇ ಮೊಲೆ ಹಿಡಿದು ಮಗುವಿನ ಬಾಯಿಗೆ ತೊಟ್ಟು ತುಂಬಿದಳು. ಕ್ಷಣಾರ್ಧದಲ್ಲಿ ಶಾಂತನಾಗಿ ಪುನಃ ಹಾಲು ಕುಡಿಯಲು ಶುರುಮಾಡಿತು.

ಚಿನ್ಮಯನಿಗೆ ಆ ಮಗುವನ್ನು ಅವಳ ಎದೆಯನ್ನು ನೋಡುತ್ತಿರುವಾಗ, ‘ಇದರ ನಿಜವಾದ ಹಕ್ಕುದಾರ ಇವನೇ’ ಅನ್ನಿಸಿ, ಅವಳೆಡೆಗಿನ ದೈಹಿಕ ಆಕರ್ಷಣೆಯೇ ಕಣ್ಮರೆಯಾಗಿರುವುದು ಅರಿವಿಗೆ ಬಂತು. ತಾನು ಕಾಮಿಸಿದ ದೇಹವೇ ಇದು? ತಾನು ಇದೇ ರೀತಿ ಮಲಗಿ ಚೀಪಿದ ಮೊಲೆಗಳೇ ಇವು? ತನ್ನ ಆಸೆಗಳನ್ನು ಕೆರಳಿಸಿದ, ತನಗೆ ದೈಹಿಕ ಸುಖವಿತ್ತ ದೇಹವೇ ತನ್ನೊಳಗಿನ ಎಲ್ಲ ಸುಖದ ಅಭಿಲಾಷೆಗಳನ್ನು ಖಾಲಿಗೊಳಿಸುತ್ತಿದೆ! ರತಿಯ ಉತ್ಕಂಠ ಉಪಶಮನದಲ್ಲೂ ಸಿಗದಿದ್ದ ಶಾಂತತೆಯೊಂದು ಸಿಕ್ಕಂತಾಯಿತು. ತಾನು ಮತ್ತೆ ಆ ಮೊಲೆಗಳನ್ನು ಚೀಪಲಾರೆನೇನೋ. ಮತ್ತೆ ಅವಳನ್ನು ಕೂಡಲಾರೆನೇನೋ. ತನ್ನ ಸ್ಥಾನದಲ್ಲೀಗ ತನ್ನ ಮಗುವಿದೆ. ತನ್ನ ಮಗುವಿಗೆ ತಾಯಿಯಾದವಳು ತನಗೂ ತಾಯಿಯಾದಂತೆ ಕಾಣಿಸಿದಳು.
***
ಅದಾದ ಮೇಲಿನ ಕೆಲದಿನಗಳು ಯಾವುದೇ ಹೆಣ್ಣನ್ನು ಕಂಡರೂ– ಇವಳೂ ಒಂದು ಮಗುವಿಗೆ ಹಾಲು ಕುಡಿಸಿರುವಳು– ಎಂದೂ, ಮದುವೆಯಾಗದ ಹೆಣ್ಣನ್ನು ಕಂಡರೆ– ಇವಳೂ ಮುಂದೊಂದು ದಿವಸ ಮಗುವಿಗೆ ಹಾಲು ಕುಡಿಸುವಳು ಎಂದೂ, ಎಲ್ಲ ಹೆಣ್ಣುಗಳೂ ಮಗುವಿಗೆ ಹಾಲು ಕುಡಿಸುತ್ತಿರುವ ಚಿತ್ರವೇ ಕಣ್ಣಿಗೆ ಬರುತ್ತಿತ್ತು. ಈಗ ಆಸ್ಪತ್ರೆಯ ಈ ಎಮೆರ್ಜೆನ್ಸಿ ವಾರ್ಡಿನಲ್ಲಿ ತನ್ನ ಸಮಕ್ಷಮದಲ್ಲೇ ನಾಲ್ಕು ಜನರೆದುರು ಮಾಧುರಿಯ ಮೊಲೆಗಳು ತೆರೆದುಕೊಂಡಾಗ, ಇದು ಕೇವಲ ತನಗೆ ಸಂಬಂಧಿಸಿದ್ದಲ್ಲ ಅನ್ನಿಸಿತು. ತನ್ನದೇ ಎಂದುಕೊಂಡಿದ್ದ ನೋಟವು ಕೇವಲ ತನ್ನದಲ್ಲ! ಅದನ್ನು ತೋರಿಸಿಕೊಟ್ಟ ಮಗುವು ಈಗ ಹಾಲನ್ನೇ ಕುಡಿಯುತ್ತಿಲ್ಲ! 

ಆಂತರ್ಯದ ಭಾವಗಳೆಲ್ಲ ಏನೇ ಇರಬಹುದು, ವಾಸ್ತವದಲ್ಲಿ ಈ ಮಗು ಹಾಲು ಕುಡಿಯುತ್ತಿಲ್ಲ ಅನ್ನುವುದೇ ಸತ್ಯ. ಆಂತರ್ಯದಲ್ಲಿ ಅದು ಮೂಡಿಸಿದ ಸತ್ಯದ ಮುಂದೆ ಈ ವಾಸ್ತವದ ಸತ್ಯವನ್ನು ಕ್ಷುಲ್ಲಕವೆನ್ನಲು ಸಾಧ್ಯವಾಗುತ್ತಿಲ್ಲ. ತನ್ನೊಳಗೆ ಈ ಎಲ್ಲ ಭಾವಗಳನ್ನು ಮೂಡಿಸುವುದಕ್ಕಾಗಿಯೇ ಈ ಮಗುವು ಈಗ ಹಾಲು ಕುಡಿಯುತ್ತಿಲ್ಲವೇನೋ. ಯಾವ ಸತ್ಯವೂ ತಾನು ಮಾತ್ರವೇ ಇರುವುದಿಲ್ಲವೇನೋ. ಎಲ್ಲ ಭಾವಗಳೂ ನೂರಾರು ಭಾವಗಳನ್ನು, ಎಲ್ಲ ಸತ್ಯವೂ ನೂರಾರು ಸತ್ಯಗಳನ್ನು, ಎಲ್ಲ ಕತೆಯೂ ನೂರಾರು ಕತೆಗಳನ್ನು ತನ್ನೊಳಗಿರಿಸಿಕೊಂಡೇ ಇರುತ್ತದೆ. ಇದೆಲ್ಲವೂ ಸೇರಿಯೇ ಇರುವಂಥದ್ದು. ಈ ಮಗುವು ಹಾಲು ಕುಡಿಯುತ್ತಿಲ್ಲವೆನ್ನುವ ಕಳವಳದ ಕ್ಷಣವೇ ತನ್ನೊಳಗೊಂದು ಬಿಡುಗಡೆಯನ್ನೂ ತಂದಿದೆ. ಆ ಬಿಡುಗಡೆಯಲ್ಲೇ ಈ ಕಳವಳವೂ ಸೇರಿಕೊಂಡಿದೆ.

ಇದೆಲ್ಲವನ್ನೂ ಸರಿಪಡಿಸಬೇಕಾದ ಡಾಕ್ಟರ್ ಇನ್ನೂ ಬಂದಿರಲಿಲ್ಲ. ಹೆರಿಗೆ ಬಾಣಂತನದಲ್ಲಿ ನುರಿತ ಆ ಹಿರಿಯ ನರ್ಸು, ‘ನೋಡಮ್ಮ, ಮಗುವನ್ನು ಹೀಗೆ ಹಿಡಿದುಕೋ... ಹಾಲು ಕುಡಿಸುವ ಮುನ್ನ ಮೊಲೆಗಳನ್ನೊಮ್ಮೆ ಹಿಂಡಿಕೋ... ಸಿಸ್ಟರ್, ಆ ಸಿರಿಂಜ್ ಟ್ಯೂಬ್ ಕೊಡಿ... ಇದರಿಂದ ಮೊಲೆಯ ತೊಟ್ಟುಗಳನ್ನು ಹೊರಗೆಳೆದು ಅವು ಸರಿಯಾಗಿ ಮಗುವಿನ ಬಾಯಿಗೆ ಸಿಗುವಂತೆ ಮಾಡು. ಹಾಂ... ಈಗ ನೋಡು... ಹೇಗೆ ಕುಡೀತಿದೆ... ಕುಡ್ಸು ಕುಡ್ಸು... ಏನೂ ಆಗಿಲ್ಲ. ಏನು ಹೆದರಿಕೋಬೇಡ’ ಎಂದು ಸಮಾಧಾನ ಮಾಡಿ ಹೊರನಡೆದಳು. ಕೊಂಚ ಸಮಾಧಾನವಾದಂತಾಗಿ ಚಿನ್ಮಯನೂ ಅವಳ ಹಿಂದೆ ಹೊರಬಂದ. ‘ಸಿಸ್ಟರ್....’ ಎಂದು ಕರೆದ. ಅವನ ಚಿಂತೆಯನ್ನು ಅರಿತವಳಂತೆ, ‘ಹಾಲು ಸಾಕಾಗ್ತಿಲ್ಲ. ಈಗ ಎಲ್ರದ್ದೂ ಅದೇ ಕತೆ. ಯಾವ ತಾಯಿಯ ಎದೆಯಲ್ಲೂ ಮಗುವಿಗೆ ಬೇಕಾದಷ್ಟು ಹಾಲಿರೋದಿಲ್ಲ’ ಎಂದಳು. ಆ ಮಾತಿನಲ್ಲಿರುವುದು ಸಮಾಧಾನವೋ ಅಥವಾ ವಿಷಾದವೋ ಎನ್ನುವುದು ತಿಳಿಯಲಿಲ್ಲ. ‘ಹಾಲು ತೆಗೆಯುವ ಪಂಪು ಸಿಗುತ್ತದೆ. ತೆಗೆದುಕೊಂಡು ಹೋಗಿ. ಹಾಲು ಹೆಚ್ಚಿಸಿಕೊಳ್ಳಲು ಪುಡಿಯೊಂದನ್ನು ಡಾಕ್ಟರ್ ಬರೆದುಕೊಡುತ್ತಾರೆ. ತುಂಬ ಹಟ ಮಾಡಿದರೆ, ಅನಿವಾರ್ಯ ಎಂದಾಗ ಮಾತ್ರ ಚೂರೇ ಚೂರು ಬಾಟಲಿಯ ಹಾಲು ಕೊಡಿ’ ಎಂದು, ಮತ್ತೊಂದು ಕೇಸನ್ನು ಅಟೆಂಡ್ ಮಾಡಲು ಲೇಬರ್ ವಾರ್ಡಿಗೆ ದೌಡಾಯಿಸಿದಳು.
***
ಮೂರು ತಿಂಗಳಾಗುವ ಹೊತ್ತಿಗೆ ಎಲ್ಲರೂ ಎಲ್ಲವನ್ನೂ ಮರೆತಿರುವಂತೆ, ನಗುತ್ತಿರುವ ಮಗುವಿನ ಮೋಹದಲ್ಲಿ ಮುಳುಗಿರುವಾಗ, ಮಾಧುರಿಯ ಚಿಕ್ಕಮ್ಮನ ಮಗಳು ತನ್ನ ಒಂದೂವರೆ ತಿಂಗಳಿನ ಮಗುವಿನ ಅಳುವನ್ನು ನಿಭಾಯಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಬಂದಿತು. ಆತ್ಮಹತ್ಯೆಯ ಕಾರಣದ ಬಗ್ಗೆ ಎಲ್ಲರೂ ಅನುಮಾನಿಸಿದರೂ, ಮಾಧುರಿಗೆ ಆ ಕಾರಣವನ್ನು ನಂಬದೆ ಇರಲಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT