ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಗೆ ಮುಜುಗರ ತಂದಿದ್ದ ಜೈರಾಂ

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್ಎಸ್‌/ಪಿಟಿಐ): ಯುಪಿಎ ಸಂಪುಟದ ಅನೇಕ ಸಚಿವರಂತೆ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಂ ರಮೇಶ್‌ ಕೂಡ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವ­ರಿಗೇ ಹೆಚ್ಚು ವಿಧೇಯ­ರಾಗಿದ್ದರು. ಪ್ರಧಾನಿ ಮನ­ಮೋಹನ್‌ ಸಿಂಗ್‌ಗೆ ಮುಜುಗರ ತರಲು ಅನೇಕ ಪತ್ರಗಳನ್ನು ಉದ್ದೇಶ­ಪೂರ್ವಕವಾಗಿ ಮಾಧ್ಯಮಗಳಿಗೆ ಸೋರಿಕೆ ಮಾಡಿ­ದ್ದರು    ಎಂಬುದು ಮನಮೋಹನ್‌ ಅವರ ಮಾಜಿ ಮಾಧ್ಯಮ ಸಲಹೆ­ಗಾರ ಸಂಜಯ ಬಾರು ಅವರ ಪುಸ್ತಕದಲ್ಲಿ ಉಲ್ಲೇಖವಾಗಿದೆ.

ಪ್ರಧಾನಿ ಹೆಸರಿಗಷ್ಟೇ ಇದ್ದರು, ಅಧಿಕಾರವೆಲ್ಲ ಸೋನಿಯಾ ಕೈಯಲ್ಲೇ ಇತ್ತು ಎಂಬುದನ್ನು ಬಹಿರಂಗಪಡಿಸುವ  ಈ ಪುಸ್ತಕ ವಿವಾದ ಅಲೆ ಎಬ್ಬಿ­ಸಿದೆ.

‘ಆಸಿಯಾನ್‌’ ರಾಷ್ಟ್ರಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ)  ಮೂಲಕ ಏಷ್ಯಾದ ಪ್ರಗತಿದಾಯಕ ಅರ್ಥವ್ಯವಸ್ಥೆಯೊಂದಿಗೆ ಭಾರತೀಯ  ಆರ್ಥಿಕತೆಯನ್ನು ಜೋಡಿಸುವುದು ಪ್ರಧಾನಿ ಸಿಂಗ್‌ ಅವರ ಆಶಯ­ವಾಗಿತ್ತು. ಆದರೆ, ಈ ಕುರಿತು  ಪ್ರಧಾನಿ ಅವರಿಗೆ ಪತ್ರ ಬರೆದ ಸೋನಿಯಾ,  ಎಫ್‌ಟಿಎ ಬಗ್ಗೆ ಎಚ್ಚರ ವಹಿಸುವಂತೆ ತಿಳಿಸಿದ್ದರು.

ಈ ಪತ್ರವನ್ನು ರಮೇಶ್‌ ಅವರು ಮಾಧ್ಯಮಕ್ಕೆ ಸೋರಿಕೆ ಮಾಡಿ ಪ್ರಧಾನಿಗೆ ಮುಜುಗರ ಉಂಟು ಮಾಡಿದ್ದರು. ಆ ಸಮಯದಲ್ಲಿ ರಮೇಶ್‌ ಸಚಿವರಾಗಿ ಕೆಲವು ವಾರಗಳಾ­ಗಿತ್ತಷ್ಟೆ ಎಂಬ ಅಂಶ ‘ದ ಆಕ್ಸಿ­ಡೆಂಟಲ್‌ ಪ್ರೈಮ್‌ ಮಿನಿಸ್ಟರ್‌– ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್‌ ಮನ­ಮೋಹನ್‌ ಸಿಂಗ್‌’ ಎಂಬ ಈ ಪುಸ್ತಕ­ದಲ್ಲಿ ಇದೆ.

ಎಫ್‌ಟಿಎ ಒಪ್ಪಂದದಿಂದ ಕೇರಳದ ಎಸ್ಟೇಟ್‌ ನೌಕರರ ಹಿತಾಸಕ್ತಿಗೆ ಧಕ್ಕೆ­ಯಾಗುತ್ತದೆ ಎಂದು ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ ಕಳವಳ ವ್ಯಕ್ತಪಡಿಸಿದ್ದ­ರಿಂದ ಕಾಂಗ್ರೆಸ್‌ ಅಧ್ಯಕ್ಷರು ಈ ಪತ್ರವನ್ನು ಪ್ರಧಾನಿಗೆ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಗ್‌ ಎಫ್‌ಟಿಎ ಸಮ­ರ್ಥಿಸಿಕೊಂಡಿದ್ದರು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.

‘ಈ ಪತ್ರಗಳನ್ನು ಆಧರಿಸಿ ‘ಬಿಸಿನೆಸ್‌ ಸ್ಟ್ಯಾಂಡರ್ಡ್‌’ ತನ್ನ ಮುಖಪುಟದಲ್ಲಿ ವರದಿ ಪ್ರಕಟಿಸಿತು. ಮುಜುಗರಕ್ಕೆ ಒಳ­ಗಾಗಿದ್ದ ಸಿಂಗ್‌, ಈ ವಿಷಯಕ್ಕೆ  ಅಂತ್ಯ ಹಾಡುವಂತೆ ನನಗೆ ತಿಳಿಸಿದರು. ಈ ಕುರಿತು ನಾನು ಪತ್ರಿಕೆಯ ಸಂಪಾ­ದಕರೊಂದಿಗೆ ಮಾತನಾಡಿದೆ.

ಆದರೆ, ಅವರು ಸುದ್ದಿ ಮೂಲವನ್ನು ಬಿಟ್ಟು­ಕೊಡ­ಲಿಲ್ಲ. ನಂತರ ನಾನು ಪರಿಚಿತ ಪತ್ರಕರ್ತರ ಮೂಲಕ ಈ ಬಗ್ಗೆ ಮಾಹಿತಿ ಕಲೆಹಾಕಿದಾಗ ಪತ್ರಗಳು ಸೋರಿಕೆ­ಯಾಗಲು ಜೈರಾಂ ರಮೇಶ್‌ ಕಾರಣ ಎನ್ನುವುದು ಗೊತ್ತಾಯಿತು. ಇದನ್ನು ನಾನು ಸಿಂಗ್‌ ಅವರಿಗೆ ತಿಳಿಸಿದೆ. ನಂತರ ಅವರು ರಮೇಶ್‌ ಅವರಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು’ ಎಂದು ಬಾರು ಬರೆದಿದ್ದಾರೆ.

‘ಸಾಮಾನ್ಯವಾಗಿ ಸೋನಿಯಾ ಅವರು ಗಂಭೀರ ವಿಷಯಗಳ ಬಗ್ಗೆ ಪ್ರಧಾನಿ ಅವರಿಗೆ ಅಧಿಕೃತವಾಗಿ ಪತ್ರ ಬರೆಯುತ್ತಿರಲಿಲ್ಲ. ಅಂತಹ ವಿಷಯ­ಗಳನ್ನು ನೇರವಾಗಿ ಇಲ್ಲವೆ ತಮ್ಮ ಆಪ್ತ­ರಾದ ಅಹ್ಮದ್‌ ಪಟೇಲ್‌ ಇಲ್ಲವೆ ಪ್ರಧಾನಿ ಕಾರ್ಯದರ್ಶಿ ಪುಲೋಕ್‌ ಚಟರ್ಜಿ ಅವರ ಮೂಲಕ ತಿಳಿಸುತ್ತಿದ್ದರು’ ಎಂದು ಲೇಖಕರು ವಿವರಿಸಿದ್ದಾರೆ.

‘ಸಚಿವರ ಖಾತೆ ಹಂಚಿಕೆಯಲ್ಲಿ ಪಕ್ಷದ ಅಧ್ಯಕ್ಷರು ಮಾಡುತ್ತಿದ್ದ ಶಿಫಾ­ರಸುಗಳನ್ನು ಪ್ರಧಾನಿ ಅವರು ಎಂದೂ ಪ್ರಶ್ನಿಸಿರಲಿಲ್ಲ. ಕಾಂಗ್ರೆಸ್‌ ಸಂಸದರು ಕೂಡ ಸೋನಿಯಾ ಅವರನ್ನು ಓಲೈಸುವುದಕ್ಕೆ ಹೆಚ್ಚು ಇಷ್ಟಪಡುತ್ತಿದ್ದರು.  ಪ್ರಧಾನಿ ಸಿಂಗ್‌ ಬಗ್ಗೆ ಅವರಲ್ಲಿ ವಿನಯ– ವಿಧೇಯತೆ­ ಇರಲಿಲ್ಲ’ ಎಂದು ಅವರು ಬರೆದಿದ್ದಾರೆ.

ಶರದ್‌ ಪವಾರ್ ಆಪ್ತಮಿತ್ರ:  ‘ಯಪಿಎ ಅಂಗಪಕ್ಷಗಳಿಂದ ಎದುರಾಗು­ತ್ತಿದ್ದ ಸವಾಲುಗಳಿಗಿಂತ  ತಮ್ಮ ಪಕ್ಷ­ದ­ವ­ರಿಂದ ಎದುರಾಗುತ್ತಿದ್ದ ಸವಾಲುಗಳನ್ನು ನಿಭಾಯಿಸುವುದು ಪ್ರಧಾನಿ ಅವರಿಗೆ ಕಷ್ಟವಾಗಿತ್ತು. ಯುಪಿಎ ಮೊದಲ ಅವಧಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಅರ್ಜುನ್‌ ಸಿಂಗ್ ಮತ್ತು ರಕ್ಷಣಾ ಸಚಿವರಾಗಿದ್ದ ಎ.ಕೆ. ಆಂಟನಿ ಅವರನ್ನು ನಿಯಂತ್ರಿಸಲು ಪ್ರಧಾನಿ ಸಿಂಗ್‌ಗೆ ಬಹಳ ಕಷ್ಟವಾಗುತ್ತಿತ್ತು’ ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರಧಾನಿ ಅವರು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ರಾಷ್ಟ್ರೀಯ ಜನತಾ ದಳದ ಅಧ್ಯಕ್ಷ ಲಾಲು ಪ್ರಸಾದ್‌ ಅವರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು. ಈ ಮುಖಂಡರ ಕೆಲವು ಮನವಿಯನ್ನು ಸಿಂಗ್‌ ಮನ್ನಿಸದಿದ್ದರೂ ಅವರ ಸ್ನೇಹಕ್ಕೆ ಧಕ್ಕೆಯಾಗಿರಲಿಲ್ಲ. ಪ್ರಧಾನಿ ನೀತಿ– ನಿಲುವು­ಗಳಿಗೆ ಕಾಂಗ್ರೆಸ್‌ ಪಕ್ಷದಿಂದಲೇ ವಿರೋಧ ವ್ಯಕ್ತವಾದಾಗ ಶರದ್‌  ಅವರು ಸಿಂಗ್‌ ಅವರ ರಕ್ಷಣೆಗೆ ಧಾವಿಸಿ, ಅವರ ನೀತಿ ನಿಲುವುಗಳನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದರು. ಆದ್ದರಿಂದ ಸಿಂಗ್‌ ಅವರು ಪವಾರ್ ಅವರನ್ನು ‘ಸಂಕಷ್ಟದಿಂದ ಪಾರು ಮಾಡುವ ಸಂಪುಟದ ಆಪ್ತಮಿತ್ರ’ ಎಂದು ಭಾವಿಸಿದ್ದರು’ ಎಂದೂ ಬಾರು ಪುಸ್ತಕದಲ್ಲಿ ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT