ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮಧ್ಯಸ್ಥಿಕೆಗೆ ಮತ್ತೆ ಸಿ.ಎಂ.ಪಟ್ಟು

ಮಹಾದಾಯಿ: ರಾಜ್ಯಗಳೊಂದಿಗೆ ಚರ್ಚೆ ಮುಗಿದ ಅಧ್ಯಾಯ
Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಾದಾಯಿ ನದಿ ತಿರುವು ಯೋಜನೆ ಬಿಕ್ಕಟ್ಟಿನ ಸಂಬಂಧ ಗೋವಾ ಮತ್ತು ಮಹಾರಾಷ್ಟ್ರಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ. ಪ್ರಧಾನಿಯವರೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎರಡೂ ರಾಜ್ಯಗಳೊಂದಿಗೆ ಮಾತಕತೆಗಳೆಲ್ಲ ನಡೆದ ಮೇಲೆಯೇ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದು. ಹಾಗಾಗಿ, ಮಾತುಕತೆ ಮುಗಿದ ಅಧ್ಯಾಯ. ಪ್ರಧಾನಿ ಮಧ್ಯಸ್ಥಿಕೆಯಿಂದ ಮಾತ್ರ ಈ ಸಮಸ್ಯೆ ಪರಿಹರಿಸಬಹುದು’ ಎಂದರು.

ಬಿಜೆಪಿ ವಿರುದ್ಧ ವಾಗ್ದಾಳಿ: ‌ಹಿಂಸಾಚಾರಕ್ಕೆ ಕಾಂಗ್ರೆಸ್‌ ಮುಖಂಡರು ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ನೀಡಿರುವ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ವಪಕ್ಷ ನಿಯೋಗವು ಪ್ರಧಾನಿ ಅವರನ್ನು ಭೇಟಿಯಾದಾಗ ಬಿಜೆಪಿ ಮುಖಂಡರು ಒಬ್ಬರೂ ಮಾತನಾಡಲಿಲ್ಲ. ಇಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಿ ಮೊಸರಲ್ಲಿ ಕಲ್ಲು ಹುಡುಕಲು ಯತ್ನಿಸುತ್ತಿದ್ದಾರೆ. ಸರ್ಕಾರವೇ ಗಲಾಟೆಗೆ ಉತ್ತೇಜನ ಕೊಟ್ಟು ಕಾನೂನು ಸುವ್ಯವಸ್ಥೆ ಹಾಳು ಮಾಡುತ್ತದಾ’ ಎಂದು ಪ್ರಶ್ನಿಸಿದರು.

ಮತ್ತೊಂದಡೆ, ಮುಖ್ಯಮಂತ್ರಿ ಅವರ ಮಾತಿಗೆ ದನಿಗೂಡಿಸಿರುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ, ಮಹಾದಾಯಿ, ಕಳಸಾ–ಬಂಡೂರಿ ಯೋಜನೆ ವಿವಾದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಾಯಕತ್ವ ಬದಲು! (ಹುಬ್ಬಳ್ಳಿ ವರದಿ): ಮಹಾದಾಯಿ ಯೋಜನೆಗಾಗಿ ಆಗ್ರಹಿಸಿ ನರಗುಂದದಲ್ಲಿ ಕಳೆದ 44 ದಿನಗಳಿಂದ ನಡೆಯುತ್ತಿದ್ದ ರೈತಸೇನಾ ಹೋರಾಟದ ನಾಯಕತ್ವ ಶುಕ್ರವಾರ ದಿಢೀರನೆ ಬದಲಾಗಿದೆ. 

‘ಚಿಕ್ಕನರಗುಂದದ ರೈತ ಮುಖಂಡ ವಿಜಯ ಕುಲಕರ್ಣಿ ಚಳವಳಿ ಮುನ್ನಡೆಸಲಿದ್ದಾರೆ. ಅವರಿಗೆ ಮಾರ್ಗದರ್ಶನ ನೀಡಲು 15 ಜನರ ಸಮಿತಿ ನೇಮಿಸಲಾಗುತ್ತಿದೆ’ ಎಂದು ನರಗುಂದ ಪಟ್ಟಣದ ರೈತ ಹುತಾತ್ಮರ ವೀರಗಲ್ಲಿನ ಬಳಿ ಇರುವ ಮುಖ್ಯ ವೇದಿಕೆಯಲ್ಲಿ ಘೋಷಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT