ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಸಿಂಗ್‌ ಸೋನಿಯಾ ಕೈಗೊಂಬೆ

ವಿವಾದ ಎಬ್ಬಿಸಿದ ಸಂಜಯ ಬರು ಪುಸ್ತಕ
Last Updated 11 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೈಗೊಂಬೆಯಾಗಿದ್ದರು. ಪ್ರಧಾನಮಂತ್ರಿ ಕಾರ್ಯಾಲ­ಯವು ಯುಪಿಎ ಅಧ್ಯಕ್ಷರಿಗೆ ಮತ್ತು ಈ ಮೈತ್ರಿಕೂಟದ ಅಂಗ ಪಕ್ಷಗಳಿಗೆ ಅಡಿಯಾಳಾಗಿದ್ದಂತೆ ತೋರುತ್ತಿತ್ತು. ಹೀಗಾಗಿ ಸಿಂಗ್ ಪ್ರಧಾನಿಯಾಗಿದ್ದರೂ ‘ಹಲ್ಲು ಕಿತ್ತ’ ಹಾವಿನಂತಿದ್ದರು ಎಂದು ಪುಸ್ತಕವೊಂದು ಹೇಳಿದೆ. ಇದು ವಿವಾದ ಕಿಡಿ ಎಬ್ಬಿಸಿದೆ.

ಸಂಪುಟಕ್ಕೆ ಸೇರುವ ಪ್ರಮುಖರು ಯಾರ್‍ಯಾರು ಎನ್ನುವುದನ್ನು ಸೋನಿಯಾ ನಿರ್ಧರಿಸುತ್ತಿದ್ದರು. ಇದು ಪ್ರಧಾನಿ ಅವರಿಗೆ ತಮ್ಮ ಸರ್ಕಾರದ ಮೇಲೆ ಲವಲೇಶವೂ ಹಿಡಿತ ಇರಲಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಹಿರಿಯ ಪತ್ರಕರ್ತ ಸಂಜಯ ಬರು ಅವರ ‘ದ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌– ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್‌ ಮನಮೋಹನ್‌ ಸಿಂಗ್‌’ ಪುಸ್ತಕದಲ್ಲಿ ಉಲ್ಲೇಖವಾಗಿದೆ.
ಸಂಜಯ ಬರು ಅವರು 2004ರಿಂದ 2008ರ ವರೆಗೆ ಪ್ರಧಾನಿ ಸಿಂಗ್‌ ಅವರ ಮಾಧ್ಯಮ ಸಲಹೆಗಾ­ರರಾಗಿದ್ದರು. 301 ಪುಟಗಳ ಈ ಪುಸ್ತಕವನ್ನು ‘ಪೆಂಗ್ವಿನ್‌’ ಪ್ರಕಾಶನ ಇತ್ತೀಚೆಗೆ ಪ್ರಕಟಿಸಿದೆ.

ಪ್ರಧಾನಿ ಮತ್ತು ಕಾಂಗ್ರೆಸ್‌ ಅಧ್ಯಕ್ಷರ ನಡುವಣ ಸೂಕ್ಷ್ಮವಾಗಿದ್ದ ಸ್ನೇಹ– ಸಂಬಂಧ ಮತ್ತು ಸಂಪುಟದ ಸಹೋದ್ಯೋಗಿಗಳ ಜೊತೆಗೆ ಪ್ರಧಾನಿ ಅವರ ಸಂಬಂಧ ಯಾವ ರೀತಿ ಹಳಸಿಕೊಳ್ಳುತ್ತಿತ್ತು ಎಂಬ ಒಳನೋಟಗಳು ಪುಸ್ತಕದಲ್ಲಿ ಪ್ರಸ್ತಾಪವಾಗಿದೆ.
‘ಯಾವತ್ತೂ ಅಧಿಕಾರದ ಎರಡು ಕೇಂದ್ರಗಳು  ಇರಬಾರದೆಂದು ಸಿಂಗ್‌ ಅವರು ಯಾವಾಗಲೂ ಹೇಳುತ್ತಿದ್ದರು’ ಎಂದು ಸಂಜಯ ಅವರು ಪ್ರಧಾನಿ ಅವರ ಹೇಳಿಕೆಯನ್ನು ಉದಾಹರಿಸಿದ್ದಾರೆ.

‘ಇದು ಗೊಂದಲಕ್ಕೆ (ಎರಡು ಅಧಿಕಾರ ಕೇಂದ್ರಗಳು) ಕಾರಣವಾಯಿತು. ಪಕ್ಷದ ಅಧ್ಯಕ್ಷರೇ ಅಧಿಕಾರದ ಕೇಂದ್ರ ಎಂಬುದನ್ನು ನಾನು ಒಪ್ಪಿಕೊಳ್ಳಬೇಕಾಯಿತು. ಸರ್ಕಾರ ಪಕ್ಷಕ್ಕೆ ಉತ್ತರಾದಾಯಿ ಎಂದು ಸಿಂಗ್‌ ಅವರು ಹೇಳಿದ್ದರು’ ಎಂದು  ಬರೆಯಲಾಗಿದೆ. ‘2009ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅತ್ಯಧಿಕ ಸ್ಥಾನಗಳಿಸಿದಾಗ ‘ಈ ವಿಜಯಕ್ಕೆ ನಾನು ಕಾರಣ ಎಂದು ಬಿಂಬಿಸಿದ್ದು ಪ್ರಮುಖ ಪ್ರಮಾದ’ ಎಂದು ಸಿಂಗ್‌ ಅಭಿಪ್ರಾಯಪಟ್ಟಿದ್ದರು. ನಂತರ ತಮ್ಮ ಕಾರ್ಯಸಾಧನೆ ಮತ್ತು ವಿಧಿ ತಮ್ಮನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಿತೇ ಹೊರತು ಸೋನಿಯಾ ಅವರಲ್ಲ ಎಂಬ ಸಮಾಧಾನಕ್ಕೆ ಸಿಂಗ್‌ ಬಂದರು’ ಎಂದು ವಿವರಿಸಲಾಗಿದೆ.

‘ಯುಪಿಎ–2 ಸರ್ಕಾರ ರಚನೆಯಾದ ಕೆಲವೇ ವಾರಗಳಲ್ಲಿ ಸಿಂಗ್‌ ಅವರು ‘ಹಲ್ಲು ಕಿತ್ತ ಹಾವಿನಂತೆ’ ಆದರು. ತಮ್ಮ ಆಯ್ಕೆಯಂತೆಯೇ ಸಂಪುಟ ಇರುತ್ತದೆ ಎಂಬುದು ಅವರ ಅನಿಸಿಕೆ ಆಗಿತ್ತು. ಆದರೆ, ಸೋನಿಯಾ ಅವರು ಸಿಂಗ್ ಅವರ ಆಶಯಕ್ಕೆ ಆರಂಭದಲ್ಲೇ ತಣ್ಣೀರು ಎರಚಿಸಿದರು. ಪ್ರಧಾನಿ ಅವರ ಸಲಹೆ ಪಡೆಯದೆ ಪ್ರಣವ್‌ ಮುಖರ್ಜಿ ಅವರಿಗೆ ಹಣಕಾಸು ಖಾತೆ ನೀಡಿದರು’ ಎಂದು ಸಂಜಯ ಬರೆದಿದ್ದಾರೆ.

‘ಸೋನಿಯಾ ಅವರು ಸರ್ಕಾರದ ಮೇಲೆ ಹಿಡಿತ ಸಾಧಿಸಲು ರಾಷ್ಟ್ರೀಯ ಸಲಹಾ ಮಂಡಳಿ ರಚಿಸುವಂತೆ ಮಾಡಿ ರಾಜಕೀಯ ತಂತ್ರಗಾರಿಕೆಯಿಂದ ಅದರ ಅಧ್ಯಕ್ಷರಾದರು. ಸಿಂಗ್‌ ಅವರಿಗೆ ಬೇರೆ ದಾರಿ ಇಲ್ಲದೆ ತೆಪ್ಪಗಿದ್ದರು. ತಾವು ಇಲ್ಲಿ ಅಷ್ಟೇನು ತೃಪ್ತಿಯಿಂದ ಇಲ್ಲ ಎನ್ನುವ ಭಾವ ಅವರಿಗೆ ಆಗಲೇ ಬಂದಂತೆ ಕಾಣುತ್ತಿತ್ತು’ ಎಂದೂ ಅವರು ಬರೆದಿದ್ದಾರೆ.

ಅಧಿಕಾರ ತ್ಯಜಿಸುವ ಬೆದರಿಕೆ ಹಾಕಿದ್ದ ಸಿಂಗ್‌: ಭಾರತ– ಅಮೆರಿಕ ಪರಮಾಣು ಒಪ್ಪಂದ ಕುರಿತು ಎದಿದ್ದ ಬಿಕ್ಕಟ್ಟಿನ ಸಂದರ್ಭದಲ್ಲಿ (2008ರ ಬೇಸಿಗೆಯ ಸಮಯ) ಯುಪಿಎ ಏನಾದರೂ ಎಡಪಕ್ಷಗಳ ಒತ್ತಡಕ್ಕೆ ಮಣಿದರೆ ತಾವು ಪ್ರಧಾನಿ ಹುದ್ದೆ ತೊರೆಯುವುದಾಗಿ ಮನಮೋಹನ್‌ ಸಿಂಗ್‌ ಅವರು ಬೆದರಿಕೆ ಹಾಕಿದ್ದರು. ಬದಲಿ ವ್ಯವಸ್ಥೆ ಮಾಡುವಂತೆ ಪಕ್ಷದ ಅಧ್ಯಕ್ಷೆ ಸೋನಿಯಾ ಅವರಿಗೂ ಹೇಳಿದ್ದರು ಎಂಬ ಉಲ್ಲೇಖ ಸಂಜಯ ಬರು ಅವರ  ಪುಸ್ತಕದಲ್ಲಿದೆ.

ಅವಿವೇಕ, ಅತಿರಂಜನೀಯ: ಪಿಎಂಒ
ವಿವಾದ ಅಲೆ ಎಬ್ಬಿಸಿರುವ ಸಂಜಯ ಬರು ಅವರ ಪುಸ್ತಕವನ್ನು ‘ಅವಿವೇಕ’ ಎಂದಿರುವ ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಒ), ಅದು ‘ಅತಿ ರಂಜನೀಯ’ವಾಗಿದೆ ಎಂದಿದೆ.ಪುಲೋಕ್‌ ಚಟರ್ಜಿ ಅವರು ಪಿಎಂಒ ಪ್ರಧಾನ ಕಾರ್ಯದರ್ಶಿಯಾಗಿದ್ದು 2011ರಲ್ಲಿ. ಆದರೆ, ಸಂಜಯ ಅವರು 2008ರಲ್ಲೇ ಪ್ರಧಾನಿ ಅವರ ಮಾಧ್ಯಮ ಸಲಹೆಗಾರ ಹುದ್ದೆಯನ್ನು ತೊರೆದಿದ್ದರು ಎಂದು ಪಿಎಂಒ ಹೇಳಿಕೆ ಸ್ಪಷ್ಟಪಡಿಸಿದೆ. ಪುಲೋಕ್‌ ಅವರು ಪ್ರಮುಖ ಕಡತಗಳ ಬಗ್ಗೆ ಸೋನಿಯಾ ಅವರ ಸೂಚನೆಗಳನ್ನು ಕೇಳುತ್ತಿದ್ದರು ಎಂಬುದು ಸುಳ್ಳು ಮತ್ತು ನಿರಾಧಾರ ಎಂದು ಹೇಳಿಕೆ ತಿಳಿಸಿದೆ.

ಸೋನಿಯಾ ಗಾಂಧಿ ಅವರ ಆಣತಿಯಂತೆ ಪುಲೋಕ್‌ ಚಟರ್ಜಿ ಅವರನ್ನು ಪಿಎಂಒ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಯಿತು. ಪುಲೋಕ್‌ ಅವರು ಸಾಮಾನ್ಯವಾಗಿ ಪ್ರತಿದಿನ ಸೋನಿಯಾ ಅವರನ್ನು ಭೇಟಿ ಮಾಡುತ್ತಿದ್ದರು. ಪಿಎಂಒದಲ್ಲಿ ನಡೆಯುತ್ತಿದ್ದ ದಿನದ ಪ್ರಮುಖ ಬೆಳವಣಿಗೆಗಳನ್ನು ಅವರಿಗೆ ತಿಳಿಸುತ್ತಿದ್ದರು. ಪ್ರಮುಖ ಕಡತಗಳ ವಿಲೇವಾರಿಗೆ ಸೋನಿಯಾ ಅವರ ಸಲಹೆ– ಸೂಚನೆಗಳನ್ನು ಪಡೆದುಕೊಳ್ಳುತ್ತಿದ್ದರು ಎಂಬ ಅಂಶ ಪುಸ್ತಕದಲ್ಲಿದೆ.

ಪುಲೋಕ್‌ ಅವರು  ಸೋನಿಯಾ ಗಾಂಧಿ ವಿರೋಧ ಪಕ್ಷದ ನಾಯಕಿಯಾಗಿದ್ದಾಗ ಅವರ ಕಾರ್ಯದರ್ಶಿಯಾಗಿದ್ದರು. ರಾಜೀವ್‌ ಗಾಂಧಿ ಪ್ರತಿಷ್ಠಾನದಲ್ಲೂ ಪುಲೋಕ್ ಕಾರ್ಯನಿರ್ವಹಿಸಿದ್ದರು. ಇದಕ್ಕೆ ಸೋನಿಯಾ ಅವರೇ ಅಧ್ಯಕ್ಷರು ಎಂದು ಪುಸ್ತಕದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT