ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನ ಕಾರ್ಯದರ್ಶಿ ಬಂಧನ

ಆರ್ಕಿಡ್ ಶಾಲೆ ನಿಯಮ ಉಲ್ಲಂಘನೆ: ನಾಲ್ವರ ವಿರುದ್ಧ ದೂರು
Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣ ಕಾಯ್ದೆ ಉಲ್ಲಂಘಿ­ಸಿದ ಆರೋಪದ ಮೇಲೆ ಜಾಲಹಳ್ಳಿಯ ಆರ್ಕಿಡ್ ದಿ ಇಂಟರ್‌ನ್ಯಾಷನಲ್ ಶಾಲೆ ವಿರುದ್ಧ ಸಾರ್ವಜನಿಕ ಶಿಕ್ಷಣ ಇಲಾಖೆಯು ಶುಕ್ರವಾರ ಜಾಲಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಸಂಬಂಧ ಪೊಲೀಸರು ಶಾಲೆಯ ಪ್ರಧಾನ ಕಾರ್ಯದರ್ಶಿ ಕೆ.ಆರ್‌.ಕೆ ರೆಡ್ಡಿ ಅವರನ್ನು ಬಂಧಿಸಿದ್ದಾರೆ.

‘ಶಾಲಾ ಆಡಳಿತ ಮಂಡಳಿಯು ಒಂದರಿಂದ ಐದನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಬೋಧನೆ ಮಾಡುವು­ದಾಗಿ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದುಕೊಂಡಿತ್ತು. ಆದರೆ, ಇಲ್ಲಿ ಪ್ರಿ ನರ್ಸರಿಯಿಂದ ಏಳನೇ ತರಗತಿವರೆಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡ­­­ಲಾಗುತ್ತಿದೆ. ಅಲ್ಲದೇ, ಅನುಮತಿ ಇಲ್ಲದೆ ಸಿಬಿಎಸ್‌ಸಿ ಪಠ್ಯಕ್ರಮ ಬೋಧಿ­ಸ­ಲಾ­ಗುತ್ತಿದೆ. ಈ ರೀತಿ ನಿಯಮ ಉಲ್ಲಂ­ಘನೆ ಮಾಡಿರುವ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇ­ಶಕ (ಡಿಡಿಪಿಐ) ಎಚ್‌.ಬಿ.­ಮಂಜುನಾಥ್ ದೂರು ಕೊಟ್ಟಿದ್ದಾರೆ.

‘ಶಾಲೆಯ ಮುಖ್ಯಸ್ಥರಾದ ಕೆ.­ದುರ್ಗಾ, ಉಪಾಧ್ಯಕ್ಷರಾದ ವೈ.ಶಿಲ್ಪಾ, ಕಾರ್ಯ­ದರ್ಶಿ ಕೆ.ಆರ್‌.ಕೆ ರೆಡ್ಡಿ ಹಾಗೂ ಜಂಟಿ ಕಾರ್ಯದರ್ಶಿ ಯು.ಸುರೇಂದ್ರ ಬಾಬು ಅವರ ವಿರುದ್ಧ ಪ್ರಕರಣ ದಾಖ­ಲಾ­ಗಿದೆ. ಈಗಾಗಲೇ ರೆಡ್ಡಿ ಅವರನ್ನು ಬಂಧಿಸ­ಲಾಗಿದ್ದು, ಶೀಘ್ರವೇ ಠಾಣೆಗೆ ಹಾಜರಾಗುವಂತೆ ಉಳಿದ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್ ತಿಳಿಸಿದರು.

‘ಕಾನೂನು ಬಾಹಿರವಾಗಿ ಶಾಲೆ ನಡೆ­ಸುವ ಮೂಲಕ ಆಡಳಿತ ಮಂಡಳಿ­ಯಿಂದ 952 ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ವಂಚನೆಯಾಗಿದೆ’ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯ­ಪಟ್ಟಿದೆ. ಹೀಗಾಗಿ ಆಡಳಿತ ಮಂಡಳಿ ವಿರುದ್ಧ ವಂಚನೆ (ಐಪಿಸಿ 420), ನಕಲಿ ದಾಖಲೆ ಸೃಷ್ಟಿ (ಐಪಿಸಿ 418) ಹಾಗೂ 2009ರ ಉಚಿತ  ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಪ್ರಕರಣ ದಾಖಲಿಸಿ­ಕೊಳ್ಳ­ಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ (ಬಿಇಒ) ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಈ ಶಾಲೆಯು ಅಂಥ ಯಾವುದೇ ನಿಯಮಗಳನ್ನು ಪಾಲಿಸದೆ  ಪ್ರಿ ನರ್ಸರಿ ಆರಂಭಿಸಿದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಆರೋಪ ಮಾಡಿದ್ದರು.ಹೀಗಾಗಿ ಕೆ.ಆರ್‌.ಕೆ ರೆಡ್ಡಿ ಅವರಿಂದ ದಾಖಲೆಗಳನ್ನು ತರಿಸಿಕೊಂಡು ಪರಿಶೀಲಿ­ಸ­ಲಾಯಿತು. ಆಗ ಶಾಲೆಯಿಂದ ಶಿಕ್ಷಣ ಕಾಯ್ದೆ ಉಲ್ಲಂಘನೆಯಾಗಿರುವುದು ಗೊತ್ತಾ­ಯಿತು. ವಿದ್ಯಾರ್ಥಿಗಳ ಪ್ರವೇಶ ಶುಲ್ಕದ ದಾಖಲೆಗಳನ್ನು ಸಹ ಆಡಳಿತ ಮಂಡಳಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಮಧ್ಯಾಹ್ನ ಮೂರು ಗಂಟೆಗೆ ರೆಡ್ಡಿ ಅವರನ್ನು ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಈ ಶಾಲೆಯಲ್ಲಿ ಓದುತ್ತಿರುವ ಮೂರು ವರ್ಷದ ವಿದ್ಯಾರ್ಥಿನಿ ಮೇಲೆ ಅ.21ರಂದು ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಮಗುವಿನ ಪೋಷ­ಕರು ಜಾಲಹಳ್ಳಿ ಠಾಣೆಗೆ ದೂರು ಕೊಟ್ಟಿ­ದ್ದರು. ಹೀಗಾಗಿ ಗುರುವಾರ ಶಾಲೆಗೆ ಭೇಟಿ ನೀಡಿದ್ದ ಶಿಕ್ಷಣ ಇಲಾಖೆ ಆಯುಕ್ತ ಮೊಹ­ಮದ್ ಮೋಹ್ಸಿನ್, ಶಾಲೆಯು ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿ­ಸುತ್ತಿದ್ದು, ಆಡಳಿತ ಮಂಡಳಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಡಿಡಿಪಿಐ ಅವರಿಗೆ ಸೂಚಿಸಿದ್ದರು.
ತನಿಖೆ ಚುರುಕು: ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್‌ ಅಲೋಕ್‌­ಕುಮಾರ್ ಅವರು ಶುಕ್ರವಾರ ಸುಮಾರು ಮೂರು ತಾಸುಗಳ ಕಾಲ ಶಾಲಾ ವಾಹನ ಚಾಲಕರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು.ನಂತರ ಸುದ್ದಿಗಾರರ ಜತೆ ಮಾತ­ನಾ­ಡಿದ ಅಲೋಕ್‌ಕುಮಾರ್, ‘ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದು, ಎಲ್ಲಾ ಆಯಾ­ಮಗಳಿಂದಲೂ ತನಿಖೆ ಮಾಡ­ಬೇ­ಕಾ­ಗುತ್ತದೆ. ಮತ್ತೆ ಮತ್ತೆ ಸಿಬ್ಬಂದಿಯನ್ನು ವಿಚಾ­ರಣೆಗೆ ಒಳಪಡಿಸಿ ಸುಳಿವು ಹುಡು­ಕಲು ಪ್ರಯತ್ನಿಸಲಾಗುತ್ತಿದೆ. ಆದರೆ, ಪ್ರಕ­ರಣ ಸಂಬಂಧ ಈವರೆಗೂ ಯಾರನ್ನೂ ಬಂಧಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಎಸಿಪಿಗಳಾದ ಸಾ.ರಾ.ಫಾತಿಮಾ ಮತ್ತು ಶೋಭಾ ರಾಣಿ ಅವರು ಶೋಷಿತ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕ­ರ ಜತೆ ನಿರಂತರ ಸಂಪರ್ಕ­ದ­ಲ್ಲಿ­ದ್ದಾರೆ. ಮಗು ಸಂಪೂರ್ಣವಾಗಿ ಚೇತ­ರಿ­­ಸಿ­­ಕೊಂಡ ಬಳಿಕ ಹೇಳಿಕೆ ದಾಖಲಿ­ಸಿ­ಕೊಳ್ಳಲು ನಿರ್ಧರಿಸಲಾಗಿದೆ. ಮಕ್ಕಳ ಸಹಾಯವಾಣಿ ಸಿಬ್ಬಂದಿ ಅಥವಾ ಮನೋವೈದ್ಯರ ಮೂಲಕ ಮಗುವಿಗೆ ಆಪ್ತ ಸಮಾಲೋಚನೆ ಮಾಡಿಸಲಾಗು­ವು­ದು’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.ಇಂದು ಸಭೆ: ನಗರ ಪೊಲೀಸ್ ಕಮಿ­ಷ­ನರ್‌ ಎಂ.ಎನ್.ರೆಡ್ಡಿ ಅವರು ಶನಿವಾರ ಆಡ­ಳಿತ ಮಂಡಳಿ ಹಾಗೂ ಪೋಷಕರ ಸಭೆ ಕರೆದಿದ್ದಾರೆ. ತರಗತಿಗಳನ್ನು ಪುನ­ರಾ­ರಂಭಿಸುವ ಬಗ್ಗೆ ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT