ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮೀಳಾ ಪುಟಗಳಲಿ...

Last Updated 2 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

`ನಿಮ್ಮೂರೇ ನಮ್ಮೂರು.. ನೀವೀಗ ನಮ್ಮೊರು..~ ಎಂದು ಹಾಡಿ ಕುಣಿದ ಜಾಣೆ ಪ್ರಮೀಳಾ ಜೋಷಾಯ್ ಕನ್ನಡದ ಪ್ರೇಕ್ಷಕರ ನೆನಪಿನ ಪುಟಗಳಲ್ಲಿ ಸ್ಥಾನ ಪಡೆದಿರುವ ನಟಿ.

`ಭಕ್ತ ಸಿರಿಯಾಳ~ ಚಿತ್ರದ ಉಡಾಫೆ ವ್ಯಕ್ತಿತ್ವದ ಹುಡುಗಿ, `ಪಟ್ಟಣಕ್ಕೆ ಬಂದ ಪತ್ನಿಯರು~ ಚಿತ್ರದ ದಿಟ್ಟ ನರ್ಸ್, `ಅವನೇ ನನ್ನ ಗಂಡ~ ಚಿತ್ರದ ನೊಂದ ನಾಯಕಿಗೆ ನೆರವಾಗುವ ಪಕ್ಕದ ಮನೆಯಾಕೆ- ಹೀಗೆ ಪ್ರಮೀಳಾ ಹಲವು ಪಾತ್ರಗಳ ಮೂಲಕ ನೆನಪಿಗೆ ಬರುತ್ತಾರೆ.

ಹಾಸ್ಯ, ಗಂಭೀರ, ಭಾವನಾತ್ಮಕ ಹೀಗೆ ಯಾವುದೇ ಪಾತ್ರವಾದರೂ ಅದಕ್ಕೆ ಜೀವ ತುಂಬುವ ಸಾಮರ್ಥ್ಯ ಇರುವ ನಟಿ ಅವರು.

`ಹರಕೆ~ ಅವರು ನಟಿಸಿದ ಮೊದಲ ಸಿನಿಮಾ. `ಚಿನ್ನ ನಿನ್ನಾ ಮುದ್ದಾಡುವೆ~ ಅವರು ನಟಿಸಿದ ಮೊದಲ ಕಮರ್ಷಿಯಲ್ ಸಿನಿಮಾ. ಅದರಲ್ಲಿ ವಿಷ್ಣುವರ್ಧನ್ ಪತ್ನಿಯಾಗಿ ನಟಿಸಿದ ನಂತರ ಸಾಕಷ್ಟು ಅವಕಾಶಗಳು ದೊರಕಿದವು.

`ತಾಳಿಯ ಭಾಗ್ಯ~, `ಮುತ್ತೈದೆ ಭಾಗ್ಯ~, `ತಾಯಿ ನುಡಿ~,~ತಾಯಿ ಆಸೆ~, `ಪ್ರಳಯ ರುದ್ರ~, `ಪ್ರೀತಿ ಮಾಡು ತಮಾಷೆ ನೋಡು~, `ನಿನಗಾಗಿ ನಾನು~, `ಕಣ್ಣು ತೆರೆಸಿದ ಹೆಣ್ಣು~ ಹೀಗೆ ಪ್ರಮೀಳಾ ನಟಿಸಿದ ಚಿತ್ರಗಳ ಸಂಖ್ಯೆ 300 ದಾಟುತ್ತದೆ.

ಚಂದ್ರಶೇಖರ ಕಂಬಾರರು ನಿರ್ದೇಶಿಸಿದ `ಸಂಗೀತ~ (1982) ಚಿತ್ರದ ನಟನೆಗೆ ಅತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದ ಪ್ರಮೀಳಾ ಜೋಷಾಯ್ ಇದೀಗ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಅದರ ಮೂಲಕ `ತಾಯಿ~ ಹೆಸರಿನ ಸಿನಿಮಾ ಮಾಡಿ ಹಣ ಕಳೆದುಕೊಂಡ ಅವರು ಇದೀಗ ಮತ್ತೊಂದು ಸಿನಿಮಾ ಮಾಡುವ ಸಿದ್ಧತೆಯಲ್ಲಿದ್ದಾರೆ.
 
`ಹೊಸ ಚಿತ್ರದ ಕತೆಯ ಚರ್ಚೆ ನಡೆಯುತ್ತಿದೆ. ನಿರ್ದೇಶಕರು ನಾಯಕಿ ಪಾತ್ರಕ್ಕೆ ನನ್ನ ಮಗಳು ಹೊಂದಿಕೆಯಾಗುತ್ತಾಳೆ ಎಂದರೆ ಅವಳೇ ನಾಯಕಿಯಾಗುತ್ತಾಳೆ. ನಿರ್ದೇಶಕರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಡುತ್ತೇವೆ. ಒಟ್ಟಾರೆ ಒಳ್ಳೆಯ ಚಿತ್ರ ಮಾಡಬೇಕು ಎಂಬುದು ನಮ್ಮಾಸೆ~ ಎನ್ನುತ್ತಾರೆ.

`37 ವರ್ಷ ನಟಿಯಾಗಿ ಕಳೆದಿರುವೆ. ನಟನೆ ಬಿಟ್ಟು ಬೇರೆ ಕೆಲಸ ಬರಲ್ಲ. ಈ ನಡುವೆ ಡ್ರಾಮಾ ಕಂಪೆನಿ ಮಾಡಿದ ಅನುಭವವೂ ಆಯಿತು. ಇದೀಗ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇವೆ. ಅದರ ಏಳು-ಬೀಳು ನೋಡುತ್ತಿದ್ದೇವೆ~ ಎಂದು ಅನುಭವ ತುಂಬಿದ ದನಿಯಲ್ಲಿ ಹೇಳುತ್ತಾರೆ ಪ್ರಮೀಳಾ.

ಮಗಳ ವೃತ್ತಿ ಬದುಕನ್ನು ನಿಭಾಯಿಸುವ ಹೊಣೆಯೊಂದಿಗೆ ಈಗಲೂ ಅವಕಾಶಗಳು ಒಪ್ಪಿತವಾದರೆ ನಟಿಸುವ ಪ್ರಮೀಳಾ, ಕಿರುತೆರೆಯಲ್ಲೂ ಸುತ್ತು ಹಾಕಿ ಬಂದವರು. `ತಿರುಗುಬಾಣ~, `ಭಾಗ್ಯಚಕ್ರ~, `ಆಸೆಗಳು~, `ಸ್ಪಂದನ~ ಅವರು ನಟಿಸಿದ ಪ್ರಮುಖ ಧಾರಾವಾಹಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT