ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಮುಖಿ ‘ವ್ಯಾಸ್ಪ್‌’

ಅಂಕದ ಪರದೆ
Last Updated 26 ಆಗಸ್ಟ್ 2015, 19:44 IST
ಅಕ್ಷರ ಗಾತ್ರ

ರಂಗಭೂಮಿಯನ್ನೇ ನಂಬಿ ಬರುವ ಹಲವು ಯುವ ಕಲಾವಿದರಿಗೆ ಒಂದು ವೇದಿಕೆ ನೀಡಬೇಕು. ಹೊಸತನವನ್ನು ಕಲಿಯಲು ಬಯಸುವ ಯುವ ಮನಗಳ ಉತ್ಸಾಹವನ್ನು ಪ್ರೋತ್ಸಾಹಿಸಬೇಕು. ರಂಗಾಸಕ್ತಿ ಇರುವ ಕಲಾವಿದರಿಗೆ ನಾವು ಸ್ಫೂರ್ತಿಯಾಗಬೇಕು ಎಂಬ ಹಂಬಲದೊಂದಿಗೆ ನವ ತರುಣರ ಪಡೆ ಕಟ್ಟಿದ ಸಂಸ್ಥೆ ‘ವ್ಯಾಸ್ಪ್’.

‘we-aspire’ ನಾವು ಬಯಸುವ ಅಥವಾ ರಂಗಕಲೆ ಬಯಸುವ   ಎಂಬ ಅರ್ಥ ಕೊಡುವಂತೆ ತಂಡಕ್ಕೆ ಹೆಸರಿಟ್ಟು,  2009ರಲ್ಲಿ ಇದನ್ನು ಸ್ಥಾಪಿಸಿದವರು ವಿನಯ್ ಶಾಸ್ತ್ರಿ,  ಅರುಣ್ ಕುಮಾರ್‌ ಹಾಗೂ ಮತ್ತವರ ಗೆಳೆಯರ ಬಳಗ.

ಕಲಾಭಿಮಾನಿಗಳಿಗೆ ಮನೋರಂಜನೆ ನೀಡಬೇಕು, ಯುವ ಮನಸ್ಸುಗಳನ್ನು ರಂಗಭೂಮಿಯತ್ತ ಸೆಳೆಯಬೇಕು,  ಅದಕ್ಕೆ ನಾಟಕ ಒಂದು ವೇದಿಕೆಯಾಗಬೇಕು ಎಂಬ ಹಂಬಲದೊಂದಿಗೆ  ‘ವ್ಯಾಸ್ಪ್’ (vasp) ಎಂಬ ರಂಗತಂಡವನ್ನು ಕಟ್ಟಿದರು. ಮನೋರಂಜನೆಯನ್ನೇ  ಮುಖ್ಯ ಗುರಿಯಾಗಿಸಿಕೊಂಡಿದ್ದ ಈ ತಂಡದವರ ಮೊದಲ ಪ್ರಯೋಗ ‘ಮರಿಯಮ್ಮಳ ಮೂರನೇ ಮದುವೆ’ ಹಾಸ್ಯ ನಾಟಕ.  ರಾಜೇಂದ್ರ ಕಾರಂತ್ ಈ ನಾಟಕವನ್ನು ರಚಿಸಿ, ನಿರ್ದೇಶಿಸಿದ್ದರು.  ವ್ಯಾಸ್ಪ್ ತಂಡದವರಿಂದ ಮೊದಲ ಪ್ರಯೋಗವಾಗಿ ಇದು ಬೆಂಗಳೂರಿನಾದ್ಯಂತ ಯಶಸ್ವಿ ಪ್ರದರ್ಶನ ಕಂಡಿತು. ತಂಡವು 6 ವರ್ಷಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಹೊಸ ನಾಟಕಗಳನ್ನು ಜನರ ಮುಂದೆ ಪ್ರದರ್ಶಿಸಿದೆ.

ಪ್ರಮುಖ ನಾಟಕಗಳು
‘ಆ ಘಳಿಗೆ’, ‘ಸಂಜೆ ಹಾಡು’, ‘ಗಡಿ ಬಿಡಿ’, ‘ಅವನು ಘಜಲ್– ಅವಳು ಶಾಯರಿ’, ‘ಆಕಾಶಭೇರಿ’, ‘ಕತ್ತಲೆ ಬೆಳಕು’, ‘ನಮ್ ತಿಮ್ ಥನಾ’ ಮುಂತಾದ ಹಲವು ನಾಟಕಗಳನ್ನು ರಂಗದ ಮೇಲೆ ಪ್ರದರ್ಶನ ಮಾಡಿದ್ದಾರೆ ಈ ತಂಡದ ಸದಸ್ಯರು. ಸ್ನೇಹಿತರ ನೆರಳಿನಲ್ಲೇ ಮುನ್ನೆಡೆಯುತ್ತಿರುವ ಈ ತಂಡವು ರಂಗಭೂಮಿ ನೆಚ್ಚಿ ಬರುವ ಕಲಾವಿದರಿಗೆ ಬದುಕು ನೀಡಿದೆ.   ತಂಡದಲ್ಲಿ 200ಕ್ಕೂ ಹೆಚ್ಚು ಮಂದಿ ಕಲಾವಿದರು ಬಂದು ನಟಿಸಿ ಹೋಗಿದ್ದಾರೆ.

‘ನಮ್ಮ ತಂಡ ಬಯಸುವುದು ರಂಗಭೂಮಿಯೇ ಬದುಕು ಎಂದುಕೊಳ್ಳುವವರನ್ನೇ ಹೊರತು, ತಮಗೊಂದು ವೇದಿಕೆ ಸಿಗಬೇಕು. ಅದಕ್ಕಾಗಿ ಒಂದು ರಂಗತಂಡದಲ್ಲಿ ನಟಿಸಿ ತರಬೇತಿ ಪಡೆಯಬೇಕು ಎಂಬ ಮನಸ್ಸುಳ್ಳವರನ್ನು ಅಲ್ಲ’ ಎನ್ನುವುದು ವಿನಯ್‌ ಅವರ ಮನದ ಮಾತು.

ಯುವ ರಂಗಾಭಿಮಾನಿಗಳನ್ನೇ ಕೇಂದ್ರೀಕರಿಸಿ ಈ  ತಂಡದವರು ರೂಪಿಸಿದ್ದ ‘ಅವನು ಘಜಲ್ ಅವಳು ಶಾಯರಿ’ ನಾಟಕ ರಾಜ್ಯದಾದ್ಯಂತ 24ಕ್ಕೂ ಅಧಿಕ ಪ್ರದರ್ಶನ ನಡೆಸಿತು.  ತಂಡದ ಅತಿ ಹೆಚ್ಚು ಪ್ರದರ್ಶನ ಕಂಡ ನಾಟಕ ಇದು. ಸಾಕಷ್ಟು ಜನಮನ್ನಣೆಗೂ ಇದು ಪಾತ್ರವಾಯಿತು.

ಪ್ರತಿಯೊಂದು ನಾಟಕದಲ್ಲೂ ಹೊಸತೇನನ್ನೋ ಜನರಿಗೆ ನೀಡಿ, ಯುವ ಬಳಗವೇ ಹೆಚ್ಚಾಗಿ ಮೆಚ್ಚುವ ನಾಟಕಗಳನ್ನೇ ಪ್ರದರ್ಶಿಸಿದ್ದು ಈ ತಂಡದ ವಿಶೇಷ. ಬೇಗ ಹಣ ಗಳಿಸಬೇಕು ಎಂಬ ಉದ್ದೇಶದಿಂದ ಇಂದಿನ ಯುವಜನತೆ ಅಪರಾಧ ಲೋಕದಲ್ಲಿ ಹೇಗೆ ಸಿಲುಕಿಕೊಳ್ಳುತ್ತಾರೆ ಎನ್ನುವುದನ್ನು ತೋರಿಸುವ ‘ಈ ಘಳಿಗೆ’ ನಾಟಕದಲ್ಲಿ ವಿವಿಧ ವಿನ್ಯಾಸದ ಅನಿಮೇಶನ್‌  ಅನ್ನು ವೇದಿಕೆ ನಿರ್ಮಾಣದಲ್ಲಿ ಬಳಸಿಕೊಂಡಿದ್ದಾರೆ.

ತಂಡದಿಂದ ಪ್ರದರ್ಶನಗೊಂಡ, ರಾಜೇಂದ್ರ ಕಾರಂತ್‌ ರಚಿಸಿ ನಿರ್ದೇಶಿಸಿದ ‘ಸಂಜೆ ಹಾಡು’ ನಾಟಕ ರಾಜ್ಯದ ‘ರಂಗಶ್ರೀ ಥಿಯೇಟರ್ ಫೆಸ್ಟಿವಲ್‌’ನಲ್ಲಿ ಉತ್ತಮ ನಾಟಕ, ಉತ್ತಮ ನಟ, ಉತ್ತಮ ಖಳನಟ ಹಾಗೂ ಉತ್ತಮ ಬೆಳಕಿನ ವಿನ್ಯಾಸ ಮುಂತಾದ ಹಲವು ಪ್ರಶಸ್ತಿಗಳನ್ನು ತಂದಿತ್ತಿತು. ‘ಅವನು ಘಜಲ್‌ ಅವಳು ಶಾಯರಿ’ ರಂಗಶ್ರೀ ಥಿಯೇಟರ್ ಫೆಸ್ಟಿವಲ್‌ನಲ್ಲಿ 2ನೇ ಉತ್ತಮ ನಾಟಕ, ಉತ್ತಮ ನಟಿ, ಉತ್ತಮ ನಿರ್ದೇಶನ ಹಾಗೂ ಉತ್ತಮ ಬೆಳಕಿನ ವಿನ್ಯಾಸ ಪ್ರಶಸ್ತಿಗಳನ್ನು ಪಡೆದುಕೊಂಡಿತ್ತು. 

ಜಾಗತಿಕ ವಲಯದಲ್ಲಿ ತಮ್ಮ ನಾಟಕ ತಂಡದ ಹೆಸರು ಗುರುತಿಸುವಂತಾಗಬೇಕು ಎಂಬ ಉದ್ದೇಶದೊಂದಿಗೆ ಆಂಗ್ಲ ಭಾಷೆಯ ಹೆಸರನ್ನು ತಮ್ಮ ತಂಡಕ್ಕೆ ಇಡಲು ವಿನಯ್, ಅರುಣ್, ಸಂತೋಷ್, ಪಾರ್ಥ, ದೀಪಿಕಾ ಮುಂತಾದ ಗೆಳೆಯರು ತೀರ್ಮಾನಿಸಿದರು. ಅದರ ಫಲವೇ ವ್ಯಾಸ್ಪ್‌ (‘we-aspire’). ಅದನ್ನೇ ಮುಂದೆ ‘vasp’  ಎಂದು ಮರುನಾಮಕರಣ ಮಾಡಿದರು.

ಚಿತ್ರರಂಗದೆಡೆಗೆ ಪಯಣ
ತಂಡದಲ್ಲಿ ಬಣ್ಣ ಹಚ್ಚಿದ ಅನೇಕ ಮಂದಿ ಚಿತ್ರರಂಗದಲ್ಲೂ ಮಿಂಚಿದರು. ವಿನಯ್, ಭಜರಂಗಿ ಲೋಕಿ, ರಾಜೇಂದ್ರ ಕಾರಂತ್್ ಹಾಗೂ ಸಂಚಾರಿ ವಿಜಯ್‌ ಕೂಡ ಈ ತಂಡದ ‘ನಮ್‌ ತಿಮ್ ಥನಾ’  ನಾಟಕದಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೇ ಈ ತಂಡದ ಅನೇಕರು ತಾಂತ್ರಿಕ ವರ್ಗ, ಬೆಳಕು ವಿನ್ಯಾಸ ಮೊದಲಾದವುಗಳಲ್ಲಿ ಚಿತ್ರರಂಗದ ತೆರೆಮರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

‘ನಮ್ಮ ತಂಡ ಹಾಗೂ ರಂಗಭೂಮಿಯ ಉಳಿವಿನಲ್ಲಿ ರಂಗಶಂಕರ ಹಾಗೂ ಕೆ.ಎಚ್‌. ಕಲಾಸೌಧ ಈ 2 ಎರಡು ವೇದಿಕೆಯ ಪಾತ್ರ ಅಮೋಘ, ನಾನು ಈ ಎರಡು ಸಂಸ್ಥೆಗಳಿಗೆ ಆಭಾರಿಯಾಗಿದ್ದೇನೆ’ ಎಂದು ತುಂಬು ಮನಸ್ಸಿನಿಂದ ನುಡಿಯುತ್ತಾರೆ ತಂಡದ ರೂವಾರಿ ವಿನಯ್‌ ಶಾಸ್ತ್ರಿ.

ತಂಡದ ಆದಾಯ
ತಂಡ ಇಂದಿಗೂ ಸ್ನೇಹಿತರ ನೆರಳಿನಲ್ಲೇ ಮುಂದುವರಿಯುತ್ತಿದೆ. ಕೆಲವು ರಂಗಾಭಿಮಾನಿಗಳು ತಾವಾಗಿಯೇ ಬಂದು ದೇಣಿಗೆಗಳನ್ನು ನೀಡಿದ್ದಾರೆ. ‘ನಾಟಕಗಳನ್ನು ನೋಡಲು ಜನರು ಈಗ ಮುಂದೆ ಬರುತ್ತಿಲ್ಲ. ನಾವು ಹೊಸ ಹೊಸ ಪ್ರಯೋಗಗಳನ್ನು ಜನರಿಗೆಂದೇ ಮಾಡಿದಾಗ ಅದೆಷ್ಟೋ ಬಾರಿ ಜನರೇ ಪ್ರೇಕ್ಷಕರಿಲ್ಲದೆ ನಿರಾಸೆ ಉಂಟಾಗಿತ್ತು. ಜನರು ನಾಟಕಗಳನ್ನು ನೋಡಿ ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ತಂಡದ ಅರುಣ್‌ ಕುಮಾರ್ ಕೇಳಿಕೊಂಡರು. ಇಲ್ಲಿಯವರೆಗೂ ಸಾಮಾಜಿಕ ನಾಟಕಗಳನಷ್ಟೇ ವೇದಿಕೆ ಮೇಲೆ ಅಭಿನಯಿಸುತ್ತಿದ್ದ ಈ ತಂಡ ಮುಂದಿನ ದಿನಗಳಲ್ಲಿ ಪೌರಾಣಿಕ ನಾಟಕಗಳನ್ನು ತೆರೆಯ ಮೇಲೆ ತರುವ ಯೋಜನೆಗಳನ್ನು ಹಾಕಿಕೊಂಡಿದೆ. 

*
ತಂಡದ ಬೆನ್ನೆಲುಬು ಅರುಣ್‌
*ರಂಗಭೂಮಿ ಮೇಲೆ ಆಸಕ್ತಿ ಹುಟ್ಟಲು ಕಾರಣ?
ಕಾಲೇಜು ದಿನಗಳಲ್ಲಿ ‘ಸೇವಂತಿ ಪ್ರಸಂಗ’ ನಾಟಕದಲ್ಲಿ ಅಭಿನಯಿಸಿದ್ದೆ. ಅಂದಿನಿಂದ ರಂಗಭೂಮಿಯ ಮೇಲೆ ಆಸಕ್ತಿ ಹುಟ್ಟಿಕೊಂಡಿತ್ತು.

*ರಂಗಭೂಮಿಯಿಂದ ನೀವು ಕಲಿತದ್ದು?
ರಂಗಭೂಮಿ ಹಾಗೂ ನಟನೆಯಿಂದ  ಬಹಳಷ್ಟು ಕಲಿಯಬಹುದು. ನಟನೆ ಅಲ್ಲದೆ ರಂಗಕಲೆಯಿಂದ ಜೀವನದಲ್ಲಿ ಶಿಸ್ತು, ಸಂಯಮ ಕಲಿಯಬಹುದು.  ವೇದಿಕೆ ಮೇಲೆ ನಟಿಸುವುದರಿಂದ ಮುಖ್ಯವಾಗಿ ಸಭಾ ಕಂಪನ ದೂರವಾಗುತ್ತದೆ. ‌

*ಒಟ್ಟಾರೆಯಾಗಿ ನಿಮ್ಮ ತಂಡದ ಬಗ್ಗೆ ನಿಮ್ಮ ಮಾತು?
ನಮ್ಮ ತಂಡ ರಂಗಕಲೆ ಕಲಿಯಲು ಬಯಸುವ ಯುವ ಮನಗಳಿಗೆ ಒಂದು ವೇದಿಕೆ. ತಂಡದಲ್ಲಿನ ಪ್ರತಿಯೊಬ್ಬರಲ್ಲೂ ಕಲಿಯುವ ತುಡಿತವಿದೆ. ಹೊಸತೇನನ್ನೋ ಜನರಿಗೆ ಪರಿಚಯಿಸುವ ಹಂಬಲ ತಮ್ಮ ತಂಡದ್ದು. ತಂಡದಲ್ಲಿ ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಸಹಕಾರ ನೀಡಿದರೂ, ಬೆನ್ನೆಲುಬು ಅರುಣ್‌್ ಕುಮಾರ್‌ ಎನ್ನುವುದು ನನ್ನ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT