ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಶೀಲ ಶಿಕ್ಷಕರ ಸಮಾಗಮ

‘ಬದಲಾವಣೆಯ ರೂವಾರಿಗಳಾಗಿ ಶಿಕ್ಷಕರು’ ಸಮಾವೇಶ
Last Updated 2 ಮೇ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳು ಕಲಿಕೆಯ ಬಗ್ಗೆ ಆಸಕ್ತಿ ತಳೆಯುವಂತೆ ಮಾಡುವುದು ಹೇಗೆ? ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ನ್ಯೂನತೆಯನ್ನು ಸರಿಪಡಿಸುವುದು ಹೇಗೆ? ಕ್ಲಿಷ್ಟಕರ ವಿಚಾರಗಳನ್ನು ಮಕ್ಕಳಿಗೆ ಅರ್ಥವಾಗುವಂತೆ ಕಲಿಸುವುದು ಹೇಗೆ?

ಮುಂತಾದ ಸವಾಲುಗಳಿಗೆ ಶಿಕ್ಷಕರ ಬಳಿಯೇ ಉತ್ತರ ಇದೆ. ಶಿಕ್ಷಣ ಕ್ಷೇತ್ರದ ಸವಾಲುಗಳನ್ನು ಬಗೆಹರಿಸಲು   ಪ್ರಯೋಗಶೀಲ ಶಿಕ್ಷಕರು ಕಂಡುಕೊಂಡ  ಮಾರ್ಗೋಪಾಯಗಳನ್ನು ಪರಸ್ಪರ ಹಂಚಿಕೊಂಡರು.  ಸ್ಕೂಲ್‌ ಟೀಚರ್ಸ್‌ ಇನ್ನೋವೇಟಿಂಗ್‌ ಫಾರ್‌ ರಿಸಲ್ಟ್‌ (ಎಸ್‌ಟಿಐಆರ್‌) ಸಂಸ್ಥೆಯು ಶೇಷಾದ್ರಿಪುರದ ಗಾಂಧಿಭವನದಲ್ಲಿ ಶನಿವಾರ ಏರ್ಪಡಿಸಿದ ‘ಬದಲಾವಣೆಯ ರೂವಾರಿಗಳಾಗಿ ಶಿಕ್ಷಕರು’ ಸಮಾವೇಶ ಇದಕ್ಕೆ ವೇದಿಕೆ ಕಲ್ಪಿಸಿತು.

ಮಕ್ಕಳಿಂದ ಪೋಷಕರಿಗೆ ಪತ್ರ: ಬ್ಯಾಡಗಿ ತಾಲ್ಲೂಕಿನ ಹಿರೇಹಳ್ಳಿ ಸರ್ಕಾರಿ ಪ್ರೌಢಶಾಲೆಯ ಹಿಂದಿ ಶಿಕ್ಷಕ ಶಿವಯೋಗಿ ಸಿ. ರೂಗಿ ಅವರಿಗೆ ಅಂಚೆ ಕಚೇರಿಯ ಮೇಲೆ ಅತೀವ ಪ್ರೀತಿ.  ಪತ್ರ ಬರೆಯುವ ವಿಚಾರವನ್ನೇ ಮುಂದಿಟ್ಟುಕೊಂಡು ಅವರು ಮಕ್ಕಳ ಕಲಿಕೆಯ ಬಗ್ಗೆ ಪೋಷಕರಲ್ಲಿ ಕಾಳಜಿ ಮೂಡಿಸಲು ಮಾರ್ಗೋಪಾಯವೊಂದನ್ನು ಕಂಡುಕೊಂಡಿದ್ದಾರೆ. ಅವರು ಮಾಡಿದ್ದಿಷ್ಟೇ. ಮಕ್ಕಳಿಗೆ ಹಿಂದಿಯಲ್ಲಿ ಪತ್ರ ಬರೆಯುವುದನ್ನು ಕಲಿಸಿದ್ದು.

‘ಶಾಲೆಯಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು ಹಿಂದಿ ಭಾಷೆಯಲ್ಲಿ ಪೋಷಕರಿಗೆ ಪತ್ರ ಬರೆದರು. ಹೆಚ್ಚಿನ ಪೋಷಕರಿಗೆ ಈ ಪತ್ರದಲ್ಲಿ ಏನಿದೆ ಎಂದೇ  ತಿಳಿಯಲಿಲ್ಲ.  ನಾವೇ ಈ  ಪತ್ರ ಬರೆದಿದ್ದೇವೆ. ಈ ಬಗ್ಗೆ ನೀವೇ ಶಾಲೆಗೆ ಹೋಗಿ ವಿಚಾರಿಸಬೇಕು ಎಂದು ಮಕ್ಕಳೇ ಪೋಷಕರಿಗೆ ವಿವರಿಸಿದರು.   ಪೋಷಕರೂ ಶಾಲೆಗೆ ಬಂದು ಮಕ್ಕಳ ಬಗ್ಗೆ ವಿಚಾರಿಸಿದರು. ಕೆಲವು ಪೋಷಕರು  ಹಿಂದಿ ಕಲಿಯುವ ಉತ್ಸಾಹ ತೋರಿದರು. ಪತ್ರದ ಮೂಲಕ ಪೋಷಕರ ಜತೆ ಉತ್ತಮ ಬಾಂಧವ್ಯ  ಬೆಳೆಸುವುದು ಸಾಧ್ಯವಾಯಿತು’ ಎಂದು ರೂಗಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಓದುವ ಹವ್ಯಾಸ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಹೇಗೆ ನೆರವಾಗುತ್ತದೆ ಎಂಬುದನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಡೆರ್‌ಗುಲ್‌ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಪಿ.ನಾಗರತ್ನಾ  ವಿವರಿಸಿದರು.

‘ಮಕ್ಕಳು ಸಿನಿಮಾ ನೋಡಿ ಪ್ರಭಾವಿತರಾಗುತ್ತಾರೆ. ಹಾಗಾದರೆ ಪುಸ್ತಕ ಓದಿನಿಂದ ಏಕೆ ಪ್ರಭಾವಿತ ಆಗಬಾರದು ಎಂದೆನಿಸಿತು.  ಈ ಯೋಚನೆ ಹೊಳೆದ ಬಳಿಕ ಮಕ್ಕಳಿಗೆ ಓದುವುದಕ್ಕೆ ತಿಂಗಳಿಗೆ ಎರಡು ಪುಸ್ತಕಗಳನ್ನು ನೀಡಿದೆ. ಪುಸ್ತಕದಿಂದ ಏನು ಪ್ರೇರಣೆ ಸಿಕ್ಕಿದೆ ಎಂಬ ಟಿಪ್ಪಣಿಯನ್ನು ಅವರು ಪ್ರತಿವಾರ ನೀಡಬೇಕು. ಆರಂಭದಲ್ಲಿ ವಿದ್ಯಾರ್ಥಿಗಳು ಅಷ್ಟು ಆಸಕ್ತಿ ತೋರಿಸಲಿಲ್ಲ.  ಕ್ರಮೇಣ ಹೆಚ್ಚಿನವರು ಶ್ರದ್ಧೆಯಿಂದ ಪುಸ್ತಕ ಓದಲು  ಆರಂಭಿಸಿದರು.  ಈ ಕಾರ್ಯಕ್ರಮದ ಬಳಿಕ  ಮಕ್ಕಳ ನಡವಳಿಕೆಯಲ್ಲೂ ಅನೇಕ ಸಕಾರಾತ್ಮಕ ಬದಲಾವಣೆಗಳಾಗಿವೆ’ ಎಂದು ಅವರು ವಿವರಿಸಿದರು.

ವಿದ್ಯಾರ್ಥಿಗಳ ಸ್ವಚ್ಛತೆ, ತರಗತಿ ಚಟುವಟಿಕೆ, ಗಣಿತ, ವಿಜ್ಞಾನದ ಕ್ಲಿಷ್ಟಕರ  ವಿಚಾರಗಳನ್ನು ಸುಲಭವಾಗಿ ಕಲಿಸುವ ವಿಧಾನಗಳು,  ಹಾಜರಾತಿ ಸುಧಾರಿಸುವ ಕ್ರಮಗಳ ಕುರಿತ ಪ್ರಯೋಗಗಳನ್ನೂ ಶಿಕ್ಷಕರು ಪರಸ್ಪರ ಹಂಚಿಕೊಂಡರು.

ದಕ್ಷಿಣ ಭಾರತದ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು. ತೆಲಂಗಾಣ ರಾಜ್ಯಗಳ 150ಕ್ಕೂ ಹೆಚ್ಚು ಶಿಕ್ಷಕರು ಸಮಾವೇಶದಲ್ಲಿ ಪಾಲ್ಗೊಂಡರು.

‘ಗುರುಗಳು ಬಂದರು ನಮ್ಮ ಮನೆಗೆ’: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಅಲವಟ್ಟ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಆರ್‌.ಜಿ.ಸುಬ್ರಮಣಿ ಅವರು ‘ಗುರುಗಳು ಬಂದರು ನಮ್ಮ ಮನೆಗೆ’ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ  ಉತ್ಸಾಹ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

‘ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು ಶಾಲೆಗಳತ್ತ ಮುಖ ಹಾಕುವುದಿಲ್ಲ. ಆದ್ದರಿಂದ  ವಾರಕ್ಕೊಬ್ಬ ವಿದ್ಯಾರ್ಥಿಯನ್ನು ಆರಿಸಿ, ಅವರ ಮನೆಗೆ ನಾವೇ ಹೋಗುತ್ತೇವೆ. 

ಶಿಕ್ಷಕರು ಮನೆಗೆ ಬರುವುದೆಂದರೆ ಪೋಷಕರಿಗೂ ಸಂಭ್ರಮ. ವಿದ್ಯಾರ್ಥಿಯ ಸಾಧನೆಯನ್ನು ಪೋಷಕರ ಜತೆ ಹಂಚಿಕೊಳ್ಳುತ್ತೇವೆ. ತಪ್ಪಿಯೂ ವಿದ್ಯಾರ್ಥಿಯ ನಕಾರಾತ್ಮಕ ಅಂಶಗಳನ್ನು ಚರ್ಚಿಸುವುದಿಲ್ಲ.

ಇದರಿಂದ ಪೋಷಕರಿಗೂ ಮಕ್ಕಳ ಮೇಲೆ ಹೆಮ್ಮೆ ಮೂಡುತ್ತದೆ.  ಈ ಕಾರ್ಯಕ್ರಮ ವಿದ್ಯಾರ್ಥಿಗಳೂ ಶಾಲಾ ಚಟುವಟಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಉತ್ತೇಜನ ನೀಡಿದೆ’ ಎಂದು ಸುಬ್ರಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.
*
10 ಲಕ್ಷ ಶಿಕ್ಷಕರನ್ನು ಬಳಸಿಕೊಂಡು 2020ರೊಳಗೆ ದೇಶದಾದ್ಯಂತ 4 ಕೋಟಿ ವಿದ್ಯಾರ್ಥಿಗಳನ್ನು ತಲುಪುವ ಗುರಿ ಇದೆ 

-ಶರತ್‌ ಜೀವನ್‌, ಎಸ್‌ಟಿಐಆರ್‌ ಸಂಸ್ಥೆಯ ಸ್ಥಾಪಕ, ಸಿಇಒ

ಅಂಕಿ ಅಂಶ
4 ರಾಜ್ಯಗಳ ಶಿಕ್ಷಕರು ಸಮಾವೇಶದಲ್ಲಿ ಪಾಲ್ಗೊಂಡರು, 10 ಸಾವಿರ ಶಿಕ್ಷಕರು ಎಸ್‌ಟಿಐಆರ್‌ ಸಂಸ್ಥೆಯ ಅಭಿಯಾನದಲ್ಲಿ ಕೈಜೋಡಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT