ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಗಾಲಯಕ್ಕೆ ಸಿಬ್ಬಂದಿ ಕೊರತೆ

ಬೆಂಗಳೂರಿನ ವಿಧಿವಿಜ್ಞಾನ ಪರೀಕ್ಷಾ ಕೇಂದ್ರ
Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅತ್ಯಾಚಾರ, ಲೈಂಗಿಕ ಕಿರು­ಕುಳ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ರಾಜ್ಯ­ದಾದ್ಯಂತ ಒಕ್ಕೊರಲ ಕೂಗು ಎದ್ದಿದೆ. ಆದರೆ, ಆರೋಪ ಸಾಬೀತುಪಡಿಸುವ ನಿಟ್ಟಿನಲ್ಲಿ ಪ್ರಮಖ ಸಾಕ್ಷ್ಯ ಒದಗಿಸುವ ‘ಡಿಎನ್‌ಎ ಪರೀಕ್ಷೆ’ ವರದಿ ನೀಡುವ ಕೇಂದ್ರವೇ ಸಿಬ್ಬಂದಿ ಕೊರತೆಯಿಂದ ನರಳುತ್ತಿದೆ!

ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯ­ದಲ್ಲಿ­ರುವ (ಎಫ್ಎಸ್‌ಎಲ್‌) ಈ ಘಟಕ ಆರಂಭ­ವಾದಾಗಿನಿಂದಲೂ (2007 ನವೆಂಬರ್‌) ಸರ್ಕಾರ ಇಲ್ಲಿಗೆ ‘ಹುದ್ದೆ’­ಯನ್ನೇ ಸೃಷ್ಟಿಸಿಲ್ಲ. ಎಫ್‌ಎಸ್‌ಎಲ್‌ನ ಇತರ ಘಟಕಗಳಿಂದ ನಿಯೋಜನೆ­ಗೊಂಡ, ಡಿಎನ್‌ಎ ಪರೀಕ್ಷೆಯ ತರ­ಬೇತಿ ಪಡೆದ ಇಬ್ಬರು ವೈಜ್ಞಾನಿಕ ಅಧಿ­ಕಾರಿ­ಗಳು ಆಗಿನಿಂದಲೂ ಇಲ್ಲಿ ಕೆಲಸ ಮಾಡು­­ತ್ತಿ­ದ್ದಾರೆ. ಎರಡು ತಿಂಗಳಿನಿಂದ ಹೆಚ್ಚು ಪ್ರಕರಣಗಳು ಈ ಕೇಂದ್ರಕ್ಕೆ ಬರು­ತ್ತಿ­ರುವುದರಿಂದ ಎಫ್‌ಎಸ್‌ಎಲ್‌ನ ಬಯಾ­ಲಾಜಿಕಲ್‌ ವಿಭಾಗದಿಂದ ಮೂರು ಮಂದಿಯನ್ನು ತಾತ್ಕಾಲಿಕ­ವಾಗಿ ನೇಮಿಸಿಕೊಳ್ಳಲಾಗಿದೆ.

ಪ್ರಮುಖ ಸಾಕ್ಷ್ಯ: ಅತ್ಯಾಚಾರ, ಲೈಂಗಿಕ ಕಿರುಕುಳ, ಪಿತೃತ್ವ ವಿವಾದ, ಅಪರಿಚಿತ, ಸುಟ್ಟು ಕರಲಾದ ಮೃತದೇಹಗಳ ಗುರುತು ಪತ್ತೆ ಮತ್ತಿತರ ಪ್ರಕರಣ­ಗಳಲ್ಲಿ ಡಿಎನ್‌ಎ ಪರೀಕ್ಷೆಯ ವರದಿ­ಯನ್ನು ಪ್ರಮುಖ ಸಾಕ್ಷ್ಯವನ್ನಾಗಿ ಪರಿಗ­ಣಿಸಲಾ­ಗು­ತ್ತದೆ. ಆದರೆ, ಸಿಬ್ಬಂದಿ ಇಲ್ಲದಿ­ರುವು­ದ­ರಿಂದ ಡಿಎನ್‌ಎ ಪರೀಕ್ಷೆಗೆ ಬಂದ ಇಂತಹ 490 ಪ್ರಕರಣ­ಗಳ ಸಾವಿರಾರು ಮಾದರಿಗಳು (ಸ್ಯಾಂಪಲ್‌) ಈ ಘಟ­ಕದ ಶೈತ್ಯಾಗಾರ­ದಲ್ಲಿ ತುಂಬಿ­ಕೊಂಡಿವೆ.

ಈ ಪೈಕಿ 65 ಪ್ರಕರಣಗಳು ಅತ್ಯಾಚಾರ ಮತ್ತು ಬಾಲ­ಕಿ­ಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ್ದು. ಡಿಎನ್‌ಎ ವರದಿ ಸಿಗದೇ ಇರುವುದ­ರಿಂದ ಈ ಪ್ರಕ­ರ­­­ಣಗಳ ದೋಷಾರೋಪ ಪಟ್ಟಿ ನ್ಯಾಯಾ­ಲ­ಯಗಳಿಗೆ ಇನ್ನೂ ಸಲ್ಲಿಕೆ­ಯಾಗಿಲ್ಲ. ರಾಜ್ಯದಲ್ಲಿ ಡಿಎನ್‌ಎ ಕೇಂದ್ರ ಆರಂಭಕ್ಕೆ ಮುನ್ನ ತನಿಖೆಗೆ ಬೇಕಾದ ಎಲ್ಲ ಸ್ಯಾಂಪಲ್‌ಗಳನ್ನು ಹೈದರಾ­ಬಾದಿಗೆ ಕಳುಹಿ­ಸ­ಲಾಗುತ್ತಿತ್ತು. ಇಲ್ಲಿ ಆರಂಭ­­ಗೊಂಡ ಬಳಿಕ ಡಿಎನ್‌ಎ ವರದಿ ತ್ವರಿತ­ವಾಗಿ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು.

2007ರಲ್ಲಿ ಈ ಕೇಂದ್ರದಲ್ಲಿ ಯಾವುದೇ ಪರೀಕ್ಷೆ ನಡೆಸಲಾಗಿಲ್ಲ. 2008ರ  ಮಾರ್ಚ್‌ನಿಂದ ಇಲ್ಲಿ ಡಿಎನ್‌ಎ ಪರೀಕ್ಷೆ ಆರಂಭವಾಯಿತು.   2011ರವರೆಗಿನ ಪ್ರಕರಣಗಳ ವಿಲೇ­ವಾರಿ ಆಗಿದೆ’ ಎಂದು ಎಫ್‌ಎಸ್‌ಎಲ್‌ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾ­ವಾಣಿ’ಗೆ ತಿಳಿಸಿದರು.
‘2012ರಿಂದ 2014ರ ಜೂನ್‌­ವರೆಗಿನ 717 ಪ್ರಕರಣಗಳಲ್ಲಿ ಆದ್ಯತೆ ಮೇಲೆ ಡಿಎನ್‌ಎ ಪರೀಕ್ಷೆ ವರದಿ ನೀಡಲಾಗಿದೆ.

ನ್ಯಾಯಾಲಯದ ಆದೇ­ಶದ ಮೇರೆಗೆ ತ್ವರಿತವಾಗಿ ನೀಡಬೇಕಾದ ಮತ್ತು ಬೆಂಗಳೂರು– ನಾಂದೇಡ್‌ ರೈಲು ದುರಂತದಲ್ಲಿ ಸಾವಿಗೀಡಾದ 26 ಮಂದಿ ಗುರುತು ಪತ್ತೆ, ವೋಲ್ವೊ ಬಸ್‌­ಗಳಲ್ಲಿ ಸುಟ್ಟು ಕರಕಲಾದ ದೇಹಗಳು ಮತ್ತಿತರ ಪ್ರಕರಣಗಳಲ್ಲಿ ಆದ್ಯತೆ ಮೇಲೆ ಡಿಎನ್‌ಎ ವರದಿ ನೀಡಲಾಗಿದೆ. ಹೀಗಾಗಿ ಸರದಿಯಂತೆ ವರದಿ ತಯಾರಿ­ಸಲು ಸಾಧ್ಯವಾ­ಗುತ್ತಿಲ್ಲ. ಆದರೂ ಇನ್ನೂ 490 ಪ್ರಕರಣಗಳ ಬಾಕಿ ಇವೆ’ ಎಂದು ಅವರು ತಿಳಿಸಿದರು.

‘ಡಿಎನ್ಎ ಪರೀಕ್ಷೆಗಾಗಿ ಬಂದ ಪ್ರಕರಣಗಳಿಗೆ 10ರಿಂದ 12 ತಿಂಗಳ ಅವಧಿಯಲ್ಲಿ ವರದಿ ನೀಡಲಾಗುವುದು ಎಂದು ತಿಳಿಸಲಾಗುತ್ತದೆ. ಸ್ಯಾಂಪಲ್‌­ಗಳ ಸಂಖ್ಯೆ ಮತ್ತು ಪ್ರಕರಣದ ಮಾದರಿಗೆ ಅನುಗು­ಣವಾಗಿ ವರದಿ ತಯಾ­ರಿಸಲು ಸಮಯಾ­ವಕಾಶ ಬೇಕಾ-­ಗುತ್ತದೆ. ಸಾಮೂ­ಹಿಕ ಅತ್ಯಾಚಾರ ಪ್ರಕರಣ­ಗಳಲ್ಲಿ ವಿಶ್ಲೇಷಣೆ ಮಾಡಲು ಇನ್ನೂ ಹೆಚ್ಚು ಸಮಯ ಬೇಕಾಗುತ್ತದೆ. ಒಬ್ಬ ವೈಜ್ಞಾನಿಕ ಅಧಿಕಾರಿ ತಿಂಗಳಿಗೆ ಗರಿಷ್ಠ 10 ಪ್ರಕರಣಗಳ ವರದಿ ತಯಾ­ರಿಸಲು ಸಾಧ್ಯ.

ಸದ್ಯ ಸರಾಸರಿ ತಿಂಗಳಿಗೆ 40 ಪ್ರಕರಣಗಳು ಬರುತ್ತಿವೆ. ತ್ವರಿತವಾಗಿ ವರದಿ ನೀಡು­ವಂತೆ ನ್ಯಾಯಾಲ­ಯದಿಂದ ಬರುವ ಆದೇಶಗಳನ್ನು

ಆದ್ಯತೆ ಮೇಲೆ ತೆಗೆದುಕೊಂಡು ವರದಿ ನೀಡಲಾ­ಗುತ್ತಿದೆ. ಈಗಿರುವ ಸಿಬ್ಬಂದಿಗೆ ಆ ಕೆಲಸ ಮಾಡಲಷ್ಟೇ ಸಾಧ್ಯ’ ಎಂದರು. ‘ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಸೌಲಭ್ಯ ಇದೆ. ಈಗ ಬರುವ ಪ್ರಕರಣಗಳ ಸಂಖ್ಯೆ ಗಮನಿಸಿ­ದರೆ  ನಾಲ್ವರು ಸಿಬ್ಬಂದಿ (ಸಹಾಯಕ ನಿರ್ದೇಶಕ, ಯುನಿಟ್ ಅಧಿಕಾರಿ, ಇಬ್ಬರು ವೈಜ್ಞಾನಿಕ ಅಧಿಕಾರಿ) ಇರುವ ಕನಿಷ್ಠ ಮೂರು ಯೂನಿಟ್‌ ತಕ್ಷಣ ಅಗತ್ಯವಿದೆ. ಈ ಬಗ್ಗೆ
ಸದ್ಯದಲ್ಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾ­ಗುವುದು’ ಎಂದರು.

‘ಅತ್ಯಾಚಾರ, ಲೈಂಗಿಕ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯ ಸ್ಥಾಪಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಆಗ ದೋಷಾರೋಪ ಪಟ್ಟಿ­ಯನ್ನು ತಿಂಗಳ ಒಳಗೆ ಸಲ್ಲಿಸಬೇಕಾಗಿ ಬರುವುದರಿಂದ ಡಿಎನ್‌ಎ ವರದಿಯೂ ತ್ವರಿತವಾಗಿ ಲಭ್ಯವಾಗಬೇಕು. ಈಗಿನ ವ್ಯವಸ್ಥೆಯಲ್ಲಿ ಅದು ಅಸಾಧ್ಯ. ಸಣ್ಣಪುಟ್ಟ ಪ್ರಕರಣಗಳೂ ಡಿಎನ್‌ಎ ವರದಿಗೆ ಬರುತ್ತಿವೆ. ಮುಂದೆ ಡಿಎನ್ಎ ವರದಿ ಕಡ್ಡಾಯಗೊಳಿಸುವ ಸಾಧ್ಯತೆ ಇರುವುದರಿಂದ ಗೃಹ ಇಲಾಖೆ ಈ ಬಗ್ಗೆ ತುರ್ತು ಗಮನಹರಿಸಬೇಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT