ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣವಾಗಲಿದೆ ಸುವರ್ಣ ವಿಧಾನಸೌಧ

₹ 30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ * 70 ಎಕರೆ ಜಾಗಕ್ಕೆ ಹೊಸ ಸ್ಪರ್ಶ
Last Updated 2 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಸುತ್ತಲಿನ ಜಾಗವನ್ನು ₹ 30 ಕೋಟಿ ವೆಚ್ಚದಲ್ಲಿ ಆಕರ್ಷಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಲೋಕೋಪಯೋಗಿ ಇಲಾಖೆ ಪ್ರಾರಂಭಿಕ ಯೋಜನೆ ರೂಪಿಸಿದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಂದ ಸಂಗ್ರಹಿಸುವ ಶುಲ್ಕವನ್ನು ಸುವರ್ಣ ವಿಧಾನಸೌಧದ ನಿರ್ವಹಣೆಗೆ ಬಳಸುವ ಉದ್ದೇಶವನ್ನು ಅದು ಹೊಂದಿದೆ.

ವರ್ಷಕ್ಕೆ ಒಮ್ಮೆ ಮಾತ್ರ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲಾಗುತ್ತಿದೆ. ಈ ಬಾರಿ ಮುಂಗಾರು ಅಧಿವೇಶನ ಕೂಡ ಇಲ್ಲಿ ನಡೆದಿದ್ದು, ಚಳಿಗಾಲದ ಅಧಿವೇಶನ ನಡೆಸುವ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಇದರ ಜತೆಗೆ ಆಗೊಮ್ಮೆ- ಈಗೊಮ್ಮೆ ಸದನ ಸಮಿತಿಗಳ ಸಭೆಗಳನ್ನು ನಡೆಸುವುದು ಬಿಟ್ಟರೆ ಇಲ್ಲಿ ಬೇರೆ ಕಾರ್ಯಚಟುವಟಿಕೆಗಳು ಇರುವುದಿಲ್ಲ. ಹೀಗಾಗಿ ಕಟ್ಟಡದ ನಿರ್ವಹಣೆ ಕಷ್ಟ ಆಗಿದೆ ಎಂಬುದು ಇಲಾಖೆ ಅಭಿಪ್ರಾಯ.

ನಿರ್ವಹಣೆಗೆ ಎಷ್ಟು ಬೇಕು?: ‘ಸುಮಾರು ಆರು ಲಕ್ಷ ಚದರ ಅಡಿ ವಿಸ್ತೀರ್ಣದ ಈ ಕಟ್ಟಡದ ನಿರ್ವಹಣೆಗೆ ವರ್ಷಕ್ಕೆ ಕನಿಷ್ಠ ₹ 5 ಕೋಟಿ ಖರ್ಚಾಗುತ್ತಿದೆ. ಈ ಹಣವನ್ನು ಖಜಾನೆಯಿಂದ ಪಡೆದು ಖರ್ಚು ಮಾಡುವುದರ ಬದಲು, ವಿಧಾನಸೌಧದ ಸುತ್ತಲಿನ ಜಾಗವನ್ನು ವಿಶೇಷ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಅದರಿಂದ ಬರುವ ವರಮಾನವನ್ನು ನಿರ್ವಹಣೆಗೆ ಬಳಸುವುದು ಸೂಕ್ತ ಎನ್ನುವ ತೀರ್ಮಾನಕ್ಕೆ ಬರಲಾಗಿದೆ’ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುವರ್ಣ ವಿಧಾನಸೌಧ ಸುತ್ತ 70 ಎಕರೆ ಖಾಲಿ ಜಾಗ ಇದೆ. ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ. ಬಯಲು ರಂಗಮಂದಿರ, ಶಿಲಾ ಉದ್ಯಾನ, ಸಂಗೀತ ಕಾರಂಜಿ, ಅಲಂಕಾರಿಕ ಗಿಡ, ಕೃತಕ ಜಲಪಾತಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಕೆರೆ ನಿರ್ಮಿಸಿ, ಅಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ವಿಧಾನಸೌಧದ ಕಟ್ಟಡವನ್ನೇ ಪರದೆ ಮಾಡಿಕೊಂಡು ಲೇಸರ್ ಷೋಗೆ ಅನುಕೂಲ ಮಾಡುವ ಉದ್ದೇಶವೂ ಇದೆ’ ಎಂದರು.

‘ರಾಷ್ಟ್ರೀಯ ಹೆದ್ದಾರಿಗಿಂತ ಸುಮಾರು 100 ಅಡಿ ಎತ್ತರದ ಪ್ರದೇಶದಲ್ಲಿದೆ ಸುವರ್ಣ ವಿಧಾನಸೌಧ. ಈ ಕಾರಣದಿಂದಲೂ ಅದು ಈ ಭಾಗದ ಸುಂದರ ಪ್ರವಾಸಿ ತಾಣವಾಗಿ ಬದಲಾಗಿದೆ. ವಾರಾಂತ್ಯದಲ್ಲಿ ಇಲ್ಲಿಗೆ ಹೆಚ್ಚು ಹೆಚ್ಚು ಜನರು ಭೇಟಿ ನೀಡುತ್ತಿದ್ದಾರೆ. ಅವರು ಕೆಲಹೊತ್ತು ಇಲ್ಲೇ ಇದ್ದು, ವಿಹರಿಸುವಂತೆ ಮಾಡುವ ಉದ್ದೇಶ ಇದೆ. ಅಭಿವೃದ್ಧಿಪಡಿಸಿದ ನಂತರ ಪ್ರವೇಶ ಶುಲ್ಕ ಕೂಡ ಇರುತ್ತದೆ’ ಎಂದು ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಆರ್.ಕಾಂಬ್ಳೆ ಹೇಳುತ್ತಾರೆ.

ವರಮಾನ ಸಂಗ್ರಹಕ್ಕೆ ಇತರೆ ಮಾರ್ಗಗಳು: ‘ಸುವರ್ಣ ವಿಧಾನಸೌಧದಲ್ಲಿ 17 ವಿವಿಧ ರೀತಿಯ ಸಭಾಂಗಣಗಳು ಇವೆ. 550 ಆಸನ ಸಾಮರ್ಥ್ಯದ ಸೆಂಟ್ರಲ್ ಹಾಲ್, 450 ಆಸನ ಸಾಮರ್ಥ್ಯದ ಆಡಿಟೋರಿಯಂ, ಬಾಂಕ್ವೆಟ್ ಹಾಲ್, 70 ರಿಂದ 120 ಆಸನ ಸಾಮರ್ಥ್ಯದ 13 ಸಭಾಂಗಣಗಳು ಇವೆ. ಅವುಗಳನ್ನು ವಿವಿಧ ರೀತಿಯ ಕಾರ್ಯಾಗಾರ, ಸಮ್ಮೇಳನ ಇತ್ಯಾದಿ ತರಬೇತಿ ಕಾರ್ಯಕ್ರಮಗಳಿಗೆ ಬಾಡಿಗೆಗೆ ಕೊಡುವ ಉದ್ದೇಶ ಇದೆ. ಒಟ್ಟಾರೆ ವಿಶೇಷ ಯೋಜನೆ ಮೂಲಕ ಕನಿಷ್ಠ ವಿಧಾನಸೌಧದ ನಿರ್ವಹಣೆಗೆ ತಗಲುವ ವೆಚ್ಚವನ್ನು ವಿವಿಧ ಮೂಲಗಳಿಂದ ಸಂಗ್ರಹಿಸುವ ಉದ್ದೇಶ ಇದೆ’ ಎಂದು ಮಹದೇವಪ್ಪ ಹೇಳಿದರು.

‘ಸರಿಯಾದ ನಿರ್ವಹಣೆ ಇಲ್ಲದಿದ್ದರೆ ಕಟ್ಟಡ ಶಿಥಿಲವಾಗುತ್ತದೆ. ಹೀಗಾಗಿ ನಿರ್ವಹಣೆ ಅನಿವಾರ್ಯ. ಅದಕ್ಕಾಗಿ ವರಮಾನದ ಮೂಲಗಳನ್ನು ಹುಡುಕುತ್ತಿದ್ದೇವೆ. ಸಾರ್ವಜನಿಕರಿಂದಲೂ ಈ ಕುರಿತು ಸಲಹೆಗಳನ್ನು ಪಡೆಯಲಾಗುವುದು. ಮದುವೆ ಇತ್ಯಾದಿ ಕೌಟುಂಬಿಕ ಕಾರ್ಯಕ್ರಮಗಳಿಗೆ ಬಾಡಿಗೆ ಕೊಡುವುದಿಲ್ಲ. ಅದರ ಬದಲು ತರಬೇತಿ ಇತ್ಯಾದಿ ಶೈಕ್ಷಣಿಕ ಉದ್ದೇಶಗಳಿಗೆ ಇಲ್ಲಿನ ಸಭಾಂಗಣಗಳನ್ನು ಬಾಡಿಗೆಗೆ ಕೊಡುವ ಉದ್ದೇಶ ಇದೆ. ಈ ಭಾಗದ ಹೋಟೆಲ್ ಗಳಲ್ಲಿ ನಡೆಯುವ ವಿವಿಧ ಇಲಾಖೆಗಳ ಕಾರ್ಯಕ್ರಮ/ ಸಭೆಗಳನ್ನು ಕಡ್ಡಾಯವಾಗಿ ಸುವರ್ಣಸೌಧದಲ್ಲೇ ನಡೆಸುವಂತೆ ಸುತ್ತೋಲೆ ಹೊರಡಿಸಲಾಗುವುದು’ ಎಂದು ಅವರು ವಿವರಿಸಿದರು.

ಮುಖ್ಯಾಂಶಗಳು
* ಸುವರ್ಣ ವಿಧಾನಸೌಧ ನಿರ್ವಹಣೆಗೆ ಬೇಕು ವರ್ಷಕ್ಕೆ ₹ 5 ಕೋಟಿ

* ಪ್ರವಾಸಿಗರಿಂದ ಶುಲ್ಕ ಸಂಗ್ರಹಿಸಿ ನಿರ್ವಹಣೆಗೆ ಬಳಸುವ ಉದ್ದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT