ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಪರಿಸ್ಥಿತಿ ಎದುರಿಸಲು ತಾಲ್ಲೂಕು ಆಡಳಿತ ಸಜ್ಜು

Last Updated 25 ಜುಲೈ 2014, 8:43 IST
ಅಕ್ಷರ ಗಾತ್ರ

ಜಮಖಂಡಿ: ಕೃಷ್ಣಾ ನದಿಗೆ ಸುಮಾರು 1.53 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಹಾಗಾಗಿ ಪ್ರವಾಹ ಭೀತಿ ಉಂಟಾಗಬಹುದು. ಪ್ರವಾಹ ಪರಿಸ್ಥಿತಿ ಎದುರಿಸಲು ಹಾಗೂ ಪರಿಹಾರ ಕಾರ್ಯ ಕೈಗೊಳ್ಳಲು ನೇಮಕವಾಗಿ­ರುವ ನೋಡೆಲ್‌ ಅಧಿಕಾರಿಗಳು ದಿನದ 24 ಗಂಟೆಗಳ ಕಾಲ ಎಚ್ಚರದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಎಸಿ ಅಶೋಕ ದುಡಗುಂಟಿ ಹೇಳಿದರು.

ಕೃಷ್ಣಾ ನದಿಗೆ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿ ಕುರಿತು ಚರ್ಚಿಸಲು ಇಲ್ಲಿನ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಗುರುವಾರ ಕರೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನೋಡೆಲ್‌ ಅಧಿಕಾರಿಗಳು ತಮ್ಮ ಮೊಬೈಲ್‌ ಫೋನನ್ನು ಸ್ವಿಚ್‌ಆಫ್‌ ಮಾಡಬಾರದು. ಜಾಗೃತೆಯಿಂದ ಪ್ರವಾಹ ಪರಿಸ್ಥಿತಿ ಅವಲೋಕಿಸಿ ಸಮಯಕ್ಕೆ ತಕ್ಕಂತೆ ಪರಿಹಾರ ಕಾರ್ಯ ಕೈಗೊಳ್ಳಲು ಸೂಚಿಸಿದರು. ತಹಶೀಲ್ದಾರರ ಜೊತೆ ಸತತವಾಗಿ ಸಂಪರ್ಕದಲ್ಲಿರಬೇಕು ಎಂದರು.

ಇದೇ 25 ರಂದು ಪ್ರವಾಹ ಬಾಧಿತ ಗ್ರಾಮಗಳಲ್ಲಿ ಗ್ರಾಮಸಭೆ ನಡೆಸಬೇಕು. ಪ್ರವಾಹ ಬಾಧಿತ ಪ್ರದೇಶದ ಫೋಟೊ ಸಮೇತ ವರದಿ ನೀಡಬೇಕು. ಯಾರೊಬ್ಬರೂ ನೋಡೆಲ್‌ ಅಧಿಕಾರಿ ನಿರ್ಲಕ್ಷ್ಯ ತಾಳಬಾರದು. ನಿರ್ಲಕ್ಷ್ಯ ವಹಿಸುವ ನೋಡೆಲ್‌ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವ ಎಚ್ಚರಿಕೆಯನ್ನು ನೀಡಿದರು.

ಪ್ರವಾಹಕ್ಕೆ ನಡುಗಡ್ಡೆಗಳಾಗಲಿರುವ 11 ಗ್ರಾಮಗಳು ಇಂತಿವೆ. ಶಿರಗುಪ್ಪಿ, ಮೈಗೂರ, ಮುತ್ತೂರ, ಕಂಕಣವಾಡಿ, ಕಡಕೋಳ, ತುಬಚಿ, ಶೂರ್ಪಾಲಿ, ಜಂಬಗಿ ಬಿಕೆ, ಜಂಬಗಿ ಕೆಡಿ, ಟಕ್ಕೋಡ, ಟಕ್ಕಳಕಿ. ತಮದಡ್ಡಿ, ಹಳಿಂಗಳಿ, ಅಸ್ಕಿ, ಆಸಂಗಿ, ರಬಕವಿ, ಹೊಸೂರ, ಮದನಮಟ್ಟಿ, ನಾಗನೂರ, ಕವಟಗಿ, ಜನವಾಡ, ಹಿರೇಪಡಸಲಗಿ ಸೇರಿದಂತೆ ಒಟ್ಟು 16 ಗ್ರಾಮಗಳು ಭಾಗಶಃ ಬಾಧಿತವಾಗಲಿವೆ.
ಪ್ರವಾಹ ಬಾಧಿತ ಗ್ರಾಮಗಳಿಂದ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಲು ಒಟ್ಟು 17 ಬೋಟ್‌ಗಳನ್ನು ಬಳಸಲಾಗುವುದು. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಸಂಖ್ಯೆಯ ಬೋಟ್‌ಗಳನ್ನು ತರಿಸಲಾಗುವುದು. ಬೋಟ್‌ಗಳ ಕಂಡಿಶನ್‌ ಪರೀಕ್ಷಿಸಿ ಸರಿಯಾಗಿ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

ಕೆಲವೆಡೆ ವಿದ್ಯುತ್‌ ತಂತಿಗಳು ಕೈಗೆ ತಾಗುವಷ್ಟು ಕೆಳಗೆ ಜೋತು ಬಿದ್ದಿವೆ. ಅವುಗಳನ್ನು ಸರಿಪಡಿಸಬೇಕು. ನೀರಿನಲ್ಲಿ ಮುಳುಗಡೆ ಆಗುವ ವಿದ್ಯುತ್‌ ಟ್ರಾನ್ಸ್ಫಫಾರ್ಮರ್‌ಗಳ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಬೇಕು. ನಿರ್ಲಕ್ಷ್ಯದಿಂದ ಜೀವಹಾನಿ ಸಂಭವಿಸಿ­ದರೆ ಹೆಸ್ಕಾಂ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗು­ವುದು ಎಂದು ಎಚ್ಚರಿಸಿದರು.

ಪ್ರವಾಹದಿಂದಾಗಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಕಾರಣ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಹ ಬಾಧಿತ ಪ್ರದೇಶಗಳಿಂದ ಜನ ಮತ್ತು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಬೇಕು. ಸುರಕ್ಷಿತ ಸ್ಥಳಕ್ಕೆ ತೆರಳಲು ನಿರಾಕರಿ­ಸುವವರ ಮನವೊಲಿಸಬೇಕು. ಅಗತ್ಯ ಬಿದ್ದರೆ ಪೊಲೀಸ್‌ ಸಿಬ್ಬಂದಿಯ ಸಹಾಯ ಪಡೆಯಬೇಕು ಎಂದರು.

ಹಿಪ್ಪರಗಿ ಜಲಾಶಯದ ಅಧಿಕಾರಿಗಳು ಮಹಾರಾಷ್ಟ್ರ ರಾಜ್ಯದ ಜಲಾಶಯಗಳ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದುಕೊಂಡು ಪ್ರತಿ 2 ಗಂಟೆಗೊಮ್ಮೆ ಕೃಷ್ಣಾನದಿಯಲ್ಲಿ ಹರಿದು ಬರುವ ನೀರಿನ ಪ್ರಮಾಣ ಕುರಿತು ಮಾಹಿತಿ ಸಂಗ್ರಹಿಸಿ ತಾಲ್ಲೂಕು ಆಡಳಿ­ತಕ್ಕೆ ಮಾಹಿತಿ ನೀಡಬೇಕು ಎಂದರು.

ತಹಶೀಲ್ದಾರ್‌ ಎ.ಎಲ್‌. ಅದಾಡೆ, ಟಿಪಿಇಒ ಎಸ್‌.ಜಿ. ಭೋಸ್ಲೆ, ಸಿಪಿಐ ಸುನೀಲಕುಮಾರ ನಂದೇಶ್ವರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಶೋಕ ಸೂರ್ಯವಂಶಿ, ಜಿಎಲ್‌ಬಿಸಿ ಎಇಇ ಎಸ್‌.ಎಲ್‌. ವಾರಣಾಸಿ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT