ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ ಸಂತ್ರಸ್ತರಿಗೆ ದೇಣಿಗೆ ನೀಡಿ: ಮೋದಿ

ಪ್ರಧಾನಿ ಮನವಿ
Last Updated 12 ಸೆಪ್ಟೆಂಬರ್ 2014, 19:34 IST
ಅಕ್ಷರ ಗಾತ್ರ

ನವದೆಹಲಿ/ಜಮ್ಮು (ಪಿಟಿಐ): ಜಮ್ಮು–ಕಾಶ್ಮೀರದಲ್ಲಿ ಪ್ರವಾಹ ಸಂತ್ರ­ಸ್ತ­ರಿಗೆ ನೆರವಾಗಲು ಪ್ರಧಾನ­ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ (ಪಿಎಂಎನ್‌­ಆರ್‌ಎಫ್‌) ಉದಾರ ದೇಣಿಗೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಲ್ಲಿ ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ.

‘ದೇಶದ ಪ್ರಜೆಗಳೇ, ಜಮ್ಮು–ಕಾಶ್ಮೀ­ರವು ಭೀಕರ ಪ್ರವಾಹಕ್ಕೆ ನಲುಗಿರು­ವುದು ನಿಮಗೆಲ್ಲ ಗೊತ್ತೇ ಇದೆ. ಅನೇ­ಕರು ಜಲಸಮಾಧಿಯಾಗಿದ್ದಾರೆ. ಎಷ್ಟೋ ಮಂದಿ ನೆಲೆ ಕಳೆದು­ಕೊಂಡಿ­ದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ, ಮೂಲಸೌಕರ್ಯಕ್ಕೆ ಹಾನಿ­ಯಾಗಿದೆ. ಇಂಥ ದುರ್ಬರ ಸನ್ನಿವೇಶ­ದಲ್ಲಿ ಕಾಶ್ಮೀರದ ಜನರಿಗೆ ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳುವುದಕ್ಕೆ ನಮ್ಮೆಲ್ಲರ ಸಹಾಯ ಹಸ್ತ ಬೇಕಾಗಿದೆ’ ಎಂದು ಮೋದಿ ತಮ್ಮ ಮನವಿಯಲ್ಲಿ ಹೇಳಿದ್ದಾರೆ.

ಪಿಎಂಎನ್‌ಆರ್‌ಎಫ್‌ಗೆ ಆನ್‌ಲೈನ್‌ ಹಾಗೂ ಪಿಎಂಒ ವೈಬ್‌ಸೈಟ್‌ ಮೂಲಕ ಹಣ ಕಳಿಸಬಹುದು. ‘ಪ್ರಧಾನ­ಮಂತ್ರಿ­ಗಳ ರಾಷ್ಟ್ರೀಯ ಪರಿಹಾರ ನಿಧಿ’ ಹೆಸರಿನಲ್ಲಿ ಚೆಕ್‌/ ಡ್ರಾಫ್ಟ್‌/ ನಗದು ಕಳಿಸಬಹುದು. ಈ ಕುರಿತು ರಾಷ್ಟ್ರೀಕೃತ ಬ್ಯಾಂಕುಗಳಿಗೆ ನಿರ್ದೇಶನ ನೀಡಿರುವು­ದರಿಂದ ದೇಣಿಗೆ ಕಳಿಸುವುದಕ್ಕೆ  ಬ್ಯಾಂಕುಗಳು ಯಾವುದೇ ಶುಲ್ಕ ವಿಧಿಸು ವುದಿಲ್ಲ ಎಂದು ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪರಿಹಾರ ಪ್ಯಾಕೇಜ್‌ ಘೋಷಣೆ: ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಪ್ರವಾಹ ಸಂತ್ರಸ್ತರಿಗೆ ಪರಿಹಾರ ಪ್ಯಾಕೇಜ್‌ ಘೋಷಿಸಿದ್ದಾರೆ. ಜಮ್ಮು ವಲಯಕ್ಕೆ ರೂ.೨೦೦ ಕೋಟಿ ಹಾಗೂ ಕಾಶ್ಮೀರ ಕಣಿವೆಯಲ್ಲಿ ಸಂತ್ರಸ್ತರ ಕುಟುಂಬಕ್ಕೆ ತಲಾ ರೂ.೩.೫ ಲಕ್ಷ ಘೋಷಿಸಲಾಗಿದೆ.

ಚಳಿಗಾಲದ ಭಯ: ಪ್ರವಾಹ ತಗ್ಗುತ್ತಿದ್ದಂತೆಯೇ ಕಣಿವೆ ರಾಜ್ಯದ ಜನರಿಗೆ ಚಳಿಗಾಲದ ಭಯ ಕಾಡುತ್ತಿದೆ. ‘ತಿನ್ನಲು ಏನೂ ಇಲ್ಲ. ನಮ್ಮ ಮನೆಗಳು ಜಲಸಮಾಧಿ­ಯಾಗಿವೆ. ಎಲ್ಲಿಗೆ ಹೋಗಬೇಕೋ ತಿಳಿಯುತ್ತಿಲ್ಲ. ಬದುಕುಳಿ­ದಿ­­ರುವುದು ನಮ್ಮ ಅದೃಷ್ಟ. ಆದರೆ ಮುಂದೆ ಎಲ್ಲಿ ನೆಲೆಸ­ಬೇಕು ಎಂಬ ಚಿಂತೆ ಕಾಡುತ್ತಿದೆ’ ಎಂದು ಶ್ರೀನಗರದ ನಿವಾಸಿ ಗುಲಾಂ ಕಾದಿರ್‌್ ಹೇಳುತ್ತಾರೆ.

‘109 ವರ್ಷಗಳಲ್ಲೇ ಭೀಕರ ಪ್ರವಾಹ’: ಜಮ್ಮು–ಕಾಶ್ಮೀರ­ದಲ್ಲಿ ೧೦೯ವರ್ಷಗಳಲ್ಲೇ ಭೀಕರ ಪ್ರವಾಹ ಇದಾಗಿದೆ. ಪರಿಹಾರ ಕಾರ್ಯಕ್ಕೆ ಕೆಲವು ಪ್ರತ್ಯೇಕತಾವಾದಿ­ಗಳು ಅಡ್ಡಿ ಮಾಡುತ್ತಿ­ದ್ದಾರೆ. ಆದರೂ ಅದಕ್ಕೆ ಸೊಪ್ಪು ಹಾಕದೇ ಕಾಶ್ಮೀರದ ಜನರಿಗೆ ಕೇಂದ್ರ ಸರ್ಕಾರ ನೆರವು ನೀಡುತ್ತಿದೆ’ ಎಂದು ಗೃಹ ಸಚಿವರು ಹೇಳಿದ್ದಾರೆ.

‘ಕಾಶ್ಮೀರಿ ವಲಸಿಗರಿಗೆ ಪುನರ್ವಸತಿ ಕಲ್ಪಿಸುವುದಕ್ಕೆ ಸರ್ಕಾರ ರೂ.೫೦೦ ಕೋಟಿ ತೆಗೆದಿಟ್ಟಿದೆ.  ಕಾಶ್ಮೀರ ಕಣಿವೆಗೆ ಮರಳು­ವಂತೆ ವಲಸಿಗರಲ್ಲಿ ವಿಶ್ವಾಸ ಮೂಡಿಸು­ವುದಕ್ಕಾಗಿ  ಸಮಾಲೋಚನೆ ನಡೆಯುತ್ತಿದೆ’ ಎಂದೂ ತಿಳಿಸಿದ್ದಾರೆ.

ಪರಿಹಾರ ಕಾರ್ಯಕ್ಕೆ ಏಕೀಕೃತ ಸಂಸ್ಥೆ: ಸುಪ್ರೀಂ ಸೂಚನೆ
ನವದೆಹಲಿ (ಐಎಎನ್‌ಎಸ್‌): ಪ್ರವಾಹ ಪೀಡಿತ ಜಮ್ಮು–ಕಾಶ್ಮೀರದಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕೆ ಸಹಕಾರ ನೀಡಲು ಏಕೀಕೃತ ಸಂಸ್ಥೆ ಯೊಂದನ್ನು ರಚಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸು­ವಂತೆ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದೆ.

ಸಂತ್ರಸ್ತರ ಪುನರ್ವಸತಿ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಬೇಕೆಂದು ಕೋರಿ ವಸುಂಧರಾ ಪಾಠಕ್‌ ಮಸೂದಿ ಹಾಗೂ ಜಮ್ಮು–ಕಾಶ್ಮೀರ ನ್ಯಾಷನಲ್‌ ಪ್ಯಾಂಥರ್ಸ್‌ ಪಾರ್ಟಿ ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಕೋರ್ಟ್‌ ಈ ಸೂಚನೆ ನೀಡಿದೆ.  ಸರ್ಕಾರ ಕೈಗೊಂಡ ಪರಿಹಾರ ಕಾರ್ಯಾಚರಣೆಯ ವಿವರವನ್ನು ಸೋಮವಾರ ಸಲ್ಲಿಸುವಂತೆಯೂ ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT