ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: 9 ಮಂದಿ ರಕ್ಷಣೆ

Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ನವಲಗುಂದ (ಧಾರವಾಡ ಜಿಲ್ಲೆ): ಭಾರಿ ಮಳೆಯಿಂದಾಗಿ ತಾಲ್ಲೂಕಿನ ಕಾಲವಾಡ ಬಳಿ ಉಕ್ಕಿ ಹರಿಯುತ್ತಿದ್ದ ಬೆಣ್ಣಿ ಹಳ್ಳದ ಪ್ರವಾಹದಲ್ಲಿ ಸಿಲುಕಿದ್ದ ಮೂರು ವರ್ಷದ ಮಗು ಸೇರಿದಂತೆ ಮಹಾರಾಷ್ಟ್ರ ಮೂಲದ ಒಂಬತ್ತು ಜನರನ್ನು ರಕ್ಷಿಸಿದ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಕಾಲವಾಡ ಗ್ರಾಮದಲ್ಲಿ ಇದ್ದಿಲು ತಯಾರಿಕೆ ಕೆಲಸಕ್ಕೆಂದು ಬಂದಿದ್ದ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪೆಡ್ಲಗೊಂಡ ಗ್ರಾಮದ ಮಹೇಂದ್ರ ಪವಾರ (45), ಇವರ ಪತ್ನಿ ನೀಲಂ (42), ಮಕ್ಕಳಾದ ನಿಖಿಲ್‌ (3), ಉಜ್ವಲಾ (9), ನಂದಿನಿ (14), ಭಾರತಿ (18), ಚಿಕ್ಕಪ್ಪ ಕಾಶೀನಾಥ ಮಾಂಡವ (60) ಅವರ ಪತ್ನಿ ಲಕ್ಷ್ಮಿ (50), ಮಗಳು ಅಶ್ವಿನಿ (30) ಅವರನ್ನು ಸತತ ಮೂರು ತಾಸು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.

ಬೆಣ್ಣಿ ಹಳ್ಳದ ಪಕ್ಕದ ಇದ್ದಿಲು ಬಟ್ಟಿಯಲ್ಲಿ ಕೆಲಸ ಮಾಡಿ, ರಾತ್ರಿ ಅಲ್ಲಿಯೇ ಇವರೆಲ್ಲಾ ವಾಸ್ತವ್ಯ ಹೂಡಿದ್ದರು. ಮುಂಜಾನೆ ವೇಳೆಗೆ ನೀರಿನ ಹರಿವು ಹೆಚ್ಚಳವಾಗಿ ಸುತ್ತಲೂ ಆವರಿಸುತ್ತಿದ್ದಂತೆಯೇ ಎಲ್ಲರೂ ಮರವೇರಿ ಕುಳಿತು ರಕ್ಷಣೆಗಾಗಿ ಮೊರೆ ಇಟ್ಟಿದ್ದಾರೆ. ಗ್ರಾಮಸ್ಥರಿಂದ ವಿಷಯ ತಿಳಿದು ತಾಲ್ಲೂಕು ಆಡಳಿತ ರಕ್ಷಣಾ ಕಾರ್ಯಾಚರಣೆಗೆ ಮುಂದಾಯಿತು. ಪೊಲೀಸ್‌ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೊದಲು ಹಗ್ಗದ ಸಹಾಯದಿಂದ ನೀರಿನಲ್ಲಿ ಸಿಲುಕಿದವರನ್ನು ರಕ್ಷಿಸಲು ಮುಂದಾದರು. ಆದರೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಹುಬ್ಬಳ್ಳಿಯ ಉಣಕಲ್‌ನಿಂದ ಬೋಟ್‌ ತರಿಸಿ ಎಲ್ಲರನ್ನೂ ರಕ್ಷಿಸಲಾಯಿತು.

ಸಾಹಸ ಮೆರೆದರು: ರಕ್ಷಣಾ ತಂಡ ಬರುವ ಮುನ್ನ ಹಳ್ಳದ ಪ್ರವಾಹದಲ್ಲಿ ಈಜುತ್ತಾ ಹೋಗಿ ಮರವೇರಿ ಕುಳಿತಿದ್ದ ಎಲ್ಲರನ್ನೂ ಕಾಲವಾಡ ಗ್ರಾಮದ ಯುವಕ ಬಸವರಡ್ಡಿ ಲಿಂಗರಡ್ಡಿ ಅವರು ಪಕ್ಕದಲ್ಲಿದ್ದ ಎತ್ತರ ಪ್ರದೇಶಕ್ಕೆ ಸ್ಥಳಾಂತರಿಸಿ, ಸಾಹಸ ಮೆರೆದರು. ಅಣ್ಣಿಗೇರಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ಗಳಾದ ವಿಶ್ವನಾಥ ಚೌಗಲೆ ಹಾಗೂ ರವಿಕುಮಾರ ಕಪ್ಪತ್ತನವರ ಸಮವಸ್ತ್ರ ಕಳಚಿ ಈಜುತ್ತಾ ತೆರಳಿ ಅವರಿಗೆ ಸಹಾಯ ಮಾಡಿದ್ದು, ಸ್ಥಳೀಯರ ಮೆಚ್ಚುಗೆಗೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT