ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವೃತ್ತಿಯೇ ವೃತ್ತಿಯಾದಾಗ...

Last Updated 26 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಅಂಜು ರಾಯ್ಕನ್‌

ಅಂಜು ರಾಯ್ಕನ್‌ಗೆ ಜ್ಯೂಸ್‌ ಎಂದರೆ   ಪಂಚಪ್ರಾಣ. ಈ ಅಭ್ಯಾಸವೇ ಅವರನ್ನು ಮುಂದೆ ಜ್ಯೂಸ್‌ ಕಂಪೆನಿಯ

ಮಾಲೀಕನನ್ನಾಗಿ ರೂಪಿಸಿತು.   ಅಂಜು ಹುಟ್ಟಿದ್ದು ಮುಂಬೈನಲ್ಲಿ. ಡ್ಯುಕ್‌ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ಬಳಿಕ ಇಲ್ಲಿನ ಸ್ಥಳೀಯ ಆಭರಣ ತಯಾರಿಕಾ ಕಂಪೆನಿಯಲ್ಲಿ ಮಾರುಕಟ್ಟೆ ವ್ಯವಸ್ಥಾಪಕರಾಗಿ ವೃತ್ತಿ ಜೀವನ ಆರಂಭಿಸಿದರು.  ಬಿಡುವಿನ ಸಮಯದಲ್ಲಿ ಕಂಪೆನಿಯ ಪಕ್ಕದಲ್ಲಿದ್ದ ಜ್ಯೂಸ್‌ ಅಂಗಡಿಯಲ್ಲಿ ಕಬ್ಬಿನ ಹಾಲು ಅಥವಾ ಮೂಸಂಬಿ  ಜ್ಯೂಸ್‌ ಕುಡಿಯುತ್ತಿದ್ದರು. ಆದರೆ ಕೆಲ ಸಹೋದ್ಯೋಗಿಗಳು ಇಲ್ಲಿ ತಯಾರಿಸುವ ಜ್ಯೂಸ್‌ ಶುದ್ಧವಾಗಿರುವುದಿಲ್ಲ ಎಂದು ಟೆಟ್ರಾ ಪ್ಯಾಕ್‌ನಲ್ಲಿರುವ ಜ್ಯೂಸ್‌ ಕುಡಿಯುತ್ತಿದ್ದರು.
ಇದನ್ನು ಗಮನಿಸಿದ್ದ ಅಂಜು, ಮೂಸಂಬಿ ಹಾಗೂ ಕಬ್ಬಿನ ಹಾಲು ಟೆಟ್ರಾ ಪ್ಯಾಕ್‌ ಅಥವಾ ಬಾಟಲಿಯಲ್ಲಿ ಯಾಕೆ ಸಿಗುತ್ತಿಲ್ಲ ಎಂದು ಯೋಚಿಸಿದರು. ಹಲವು ಜ್ಯೂಸ್‌ ತಯಾರಿಕಾ ಕಂಪೆನಿಗಳನ್ನು ಸಂಪರ್ಕಿಸಿದರು. ಆ ಕಂಪೆನಿಗಳಿಂದ ಸರ್ಮಪಕ ಉತ್ತರ ಸಿಗಲಿಲ್ಲ.
ಕೆಲಸಕ್ಕೆ ರಾಜೀನಾಮೆ ನೀಡಿದ ಅಂಜು ಬ್ಯಾಂಕ್‌ ಹಾಗೂ ಗೆಳೆಯರ ಬಳಿ ಸಾಲ ಮಾಡಿ ಚಿಕ್ಕದೊಂದು ‘ರಾಪ್ರೆಸ್ಸೆರಿ’ (RawPressery) ಜ್ಯೂಸ್‌    ಕಾರ್ಖಾನೆಯನ್ನು 2014ರ ಜನವರಿಯಲ್ಲಿ ಆರಂಭಿಸಿದರು. ಇಲ್ಲಿಯವರೆಗೂ 85,000 ವಿವಿಧ ಜ್ಯೂಸ್‌ ಬಾಟಲಿಗಳು ಮಾರಾಟವಾಗಿವೆ. ನಿತ್ಯ 2500ಕ್ಕೂ ಹೆಚ್ಚು ಜನರು ಜ್ಯೂಸ್‌ ಕುಡಿಯುತ್ತಿದ್ದಾರೆ. ಗ್ರಾಹಕರ ಮನೆ ಬಾಗಿಲಿಗೆ ಜ್ಯೂಸ್‌ ತಲುಪಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮಾಲ್‌ಗಳು, ಶಾಪಿಂಗ್‌ ಕಾಂಪ್ಲೆಕ್ಸ್‌, ಹೋಟೆಲ್‌ಗಳು, ಜಿಮ್‌ ಮತ್ತು ಯೋಗಾ ಕೇಂದ್ರಗಳಲ್ಲೂ ಜ್ಯೂಸ್‌ ದೊರೆಯುತ್ತದೆ.  ಪ್ರಸ್ತುತ ನಿಂಬೆ, ಕ್ಯಾರೆಟ್‌, ಮೂಸಂಬಿ ಮತ್ತು ಕಬ್ಬಿನ ಜ್ಯೂಸ್‌  ತಯಾರಿಸಲಾಗುತ್ತಿದೆ. ದೆಹಲಿ, ಮುಂಬೈ, ಪುಣೆ ಮಹಾನಗರಗಳಲ್ಲಿ ಈ ವ್ಯಾಪಾರ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ನಗರಗಳಲ್ಲೂ ನಮ್ಮ ಜ್ಯೂಸ್‌ ಲಭ್ಯವಾಗುವ ಯೋಜನೆ ರೂಪಿಸುತ್ತಿದ್ದೇವೆ ಎನ್ನುತ್ತಾರೆ ಅಂಜು.

ಆಸ್ತಾ ಚತುರ್ವೇದಿ

ಇತ್ತೀಚಿನ ದಿನಗಳಲ್ಲಿ ಬೆಟ್ಟ–ಗುಡ್ಡ ಹತ್ತುವುದು ವಾಣಿಜ್ಯಿಕ ಆಯಾಮ ಪಡೆದುಕೊಂಡಿದೆ. ಇದು ವಿಶ್ವದಾದ್ಯಂತ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಭಾರತದಲ್ಲೇ ವಾರ್ಷಿಕ ನೂರಾರು ಕೋಟಿ ವಹಿವಾಟು ನಡೆಯುತ್ತಿದೆ.

ಬೆಂಗಳೂರಿನ ಆಸ್ತಾ ಚತುರ್ವೇದಿ ಇಂತಹ ಉದ್ಯಮ ಹುಟ್ಟು ಹಾಕುವ ಮೂಲಕ ಯಶಸ್ವಿ ಸಾಧಕಿಯಾಗಿದ್ದಾರೆ.
ಮಹಾನಗರಗಳಲ್ಲಿ ಬಹುತೇಕ ಯುವಕ ಯುವತಿಯರಿಗೆ ಟ್ರೆಕ್ಕಿಂಗ್‌ ಒಂದು ರೀತಿಯ ಪ್ಯಾಶನ್‌. ವಾರಾಂತ್ಯದಲ್ಲಿ ಬೆಂಗಳೂರು ಸಮೀಪದ ಚಾರಣ ತಾಣಗಳಲ್ಲಿ ಯುವಕರ ದಂಡೇ ನೆರೆದಿರುತ್ತದೆ. ಈ ಚಾರಣ ಪ್ರಿಯರಿಗಾಗಿಯೇ ಆಸ್ತಾ ‘ಅರ್ಬನ್‌ ಕ್ಲೈಂಬರ್‌’ ತರಬೇತಿ ಸಂಸ್ಥೆಯನ್ನು 2013ರಲ್ಲಿ ಆರಂಭಿಸಿದ್ದಾರೆ.

ಇದರಲ್ಲಿ ಆಸಕ್ತರಿಗೆ ‘ದಿ ವಾಲ್‌ ಆಫ್‌ ಲೈಫ್‌’ ಎಂಬ ಕಾರ್ಯಕ್ರಮದ ಮೂಲಕ ಗೋಡೆ ಹತ್ತುವ ತರಬೇತಿ ನೀಡಲಾಗುತ್ತಿದೆ. ಶಾಲೆಗಳು, ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳು, ಕ್ಲಬ್‌ಗಳು, ರೆಸಾರ್ಟ್‌ಗಳು, ಕಾರ್ಪೊರೇಟ್‌ ಸಂಸ್ಥೆಗಳಲ್ಲೂ ‘ಅರ್ಬನ್‌ ಕ್ಲೈಂಬರ್‌’ ಒಂದು ಭಾಗವಾಗಿ ಕೆಲಸ ಮಾಡುತ್ತಿದೆ. ಅಂದರೆ ಇಲ್ಲಿನ ನಿವಾಸಿಗಳು ಮತ್ತು ನೌಕರರಿಗೆ ತರಬೇತಿ ಕೊಡಲಾಗುತ್ತಿದೆ.

ಈ ಸಂಸ್ಥೆ ಕಟ್ಟಲು ಆಸ್ತಾ ಸಾಕಷ್ಟು ಕಷ್ಟಪಟ್ಟಿದ್ದಾರೆ. ಸಾಹಸ ಮತ್ತು ಕಠಿಣ ಪರಿಶ್ರಮ ಬಯಸುವ ಈ ಉದ್ಯಮ ನಡೆಸಿಕೊಂಡು ಹೋಗುವುದು ಆಸ್ತಾ ಅವರಿಂದ ಸಾಧ್ಯವಿಲ್ಲ ಎಂದು ಕೆಲವರು ಮೂದಲಿಸಿದ್ದರು. ಎಲ್ಲಾ ಸಂಕಷ್ಟಗಳನ್ನು ಮೆಟ್ಟಿನಿಂತು ಆಸ್ತಾ ಯಶಸ್ವಿಯಾಗಿ ಸಂಸ್ಥೆ ನಡೆಸಿಕೊಂಡು ಹೋಗುತ್ತಿದ್ದಾರೆ.

ಆಸ್ತಾ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಕ್ಲೈಂಬಿಂಗ್‌, ಚಾರಣ ಎಂದರೆ ಅಚ್ಚುಮೆಚ್ಚು. ಈ ಪ್ರವೃತ್ತಿಯನ್ನೇ ವೃತ್ತಿಯಾಗಿಸಿಕೊಂಡಿರುವುದು ವಿಶೇಷ. ಹಲವು ಸಲ ತೊಂದರೆ ಅನುಭವಿಸಿದ್ದೂ ಉಂಟು ಎನ್ನುತ್ತಾರೆ ಆಸ್ತಾ. ಒಮ್ಮೆ ಮೊಣಕಾಲಿಗೆ ಗಾಯ ಮಾಡಿಕೊಂಡು ದೀರ್ಘ ಕಾಲ ವಿರಾಮ ಪಡೆದಿದ್ದಾರೆ. ಆದರೂ ಇದೇ ಉದ್ಯಮದಲ್ಲಿ ಸಾಧಿಸಬೇಕು ಎಂಬ ಹಂಬಲ ಅವರದ್ದು.

ಪ್ರೀತಿ ಮತ್ತು ವಿಶಾಲ್‌
ಇಂದು ಬಹುತೇಕ ವ್ಯಾಪಾರ (ಕೊಡು–ಕೊಳ್ಳುವುದು) ಆನ್‌ಲೈನ್‌ ಮೂಲಕವೇ ನಡೆಯುತ್ತಿದೆ. ಇದಕ್ಕೆ ಅತಿ ದುಬಾರಿಯ

ಕಲಾ ಉದ್ಯಮವೂ ಹೊರತಾಗಿಲ್ಲ.

ಕಲಾವಿದರಿಗೆ ಮತ್ತು ಕಲಾಕೃತಿಗಳನ್ನು  ಕೊಳ್ಳುವವರಿಗೆ ಅನುಕೂಲವಾಗಲೆಂದು ಪ್ರೀತಿ ಮತ್ತು ವಿಶಾಲ್‌ ದಂಪತಿ ‘ಆರ್ಟ್‌ಜೋಲೊ’ ಇ–ಕಾಮರ್ಸ್‌ ಕಂಪೆನಿ ಆರಂಭಿಸಿದ್ದಾರೆ.

ವಿಶಾಲ್‌ ಮೂಲತಃ ಹರಿಯಾಣದವರು. ಅವರದ್ದು ವ್ಯಾಪಾರಸ್ಥ ಕುಟುಂಬವಾದ್ದರಿಂದ   ಹಲವು ವರ್ಷಗಳ ಹಿಂದೆಯೇ ಕೇರಳಕ್ಕೆ ಬಂದು ನೆಲೆಸಿದ್ದರು. ಇಲ್ಲಿನ ಕಲಾ ವಾತಾವರಣ ಅವರಲ್ಲಿ ಕಲಾಸಕ್ತಿ ಮೂಡಿಸಿತು. ಮುಂದೆ ‘ಆರ್ಟ್‌ಜೋಲೊ’ ಸ್ಥಾಪನೆಗೂ ಕಾರಣವಾಯಿತು. ಕೆನಡಾದಲ್ಲಿ ಎಂಬಿಎ ಪದವಿ ಪೂರೈಸಿದ ವಿಶಾಲ್‌, ಇನ್ಫೋಸಿಸ್‌ನಲ್ಲಿ ನಾಲ್ಕು ವರ್ಷ ಕೆಲಸ ಮಾಡಿದರು. ಅದ್ಯಾಕೋ ಮ್ಯಾನೇಜ್‌ಮೆಂಟ್‌ ಉದ್ಯೋಗ ವಿಶಾಲ್‌ಗೆ ಸರಿ ಹೊಂದಲಿಲ್ಲ. ಹಾಗಾಗಿ ಕೆಲಸಕ್ಕೆ ಗುಡ್‌ಬೈ ಹೇಳಿ ಪತ್ನಿ ಪ್ರೀತಿ ಜೊತೆ ಸೇರಿ ‘ಆರ್ಟ್‌ಜೋಲೊ’ ಆರಂಭಿಸಿದರು.

ಆರ್ಟ್‌ಜೋಲೊ ಕಲಾವಿದರಿಗೆ ಮತ್ತು ಕಲಾಕೃತಿಗಳನ್ನು ಕೊಳ್ಳುವವರಿಗೆ ಅನುಕೂಲವಾದ ಜಾಲತಾಣ. ಇಲ್ಲಿ ಕಲಾವಿದರು ಮತ್ತು ಗ್ರಾಹಕರು ನೋಂದಣಿ ಮಾಡಿಕೊಳ್ಳಬೇಕು. ನಂತರ ಕಲಾವಿದರು ತಾವು ರಚಿಸಿದ ಕಲಾಕೃತಿಗಳ ಚಿತ್ರಗಳನ್ನು ಅಪ್‌ಲೋಡ್‌ ಮಾಡಬೇಕು. ಹೀಗೆ ಅಪ್‌ಲೋಡ್‌ ಮಾಡಿದ ಚಿತ್ರಗಳನ್ನು ನೋಡಿದ ಗ್ರಾಹಕರು ಆರ್ಡರ್‌ ಮಾಡುತ್ತಾರೆ. ಒಮ್ಮೊಮ್ಮೆ ಒಂದೇ ಕಲಾಕೃತಿಗೆ ಹಲವರು ಆರ್ಡರ್‌ ಮಾಡಿದಾಗ ಅದನ್ನು ಹರಾಜು ಹಾಕಲಾಗುತ್ತದೆ. ಹೆಚ್ಚಿನ ಬೆಲೆಗೆ ಯಾರು ಕೂಗುತ್ತಾರೋ ಅವರಿಗೆ ಆ ಕಲಾಕೃತಿ ಸೇರುತ್ತದೆ. ಕಂಪೆನಿ ಶೇ 15 ರಿಂದ 30ರಷ್ಟು ಕಮಿಷನ್‌ ಪಡೆಯುತ್ತದೆ. ಕೊಳ್ಳುವ ಮತ್ತು ಮಾರುವ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತದೆ ಎನ್ನುತ್ತಾರೆ ವಿಶಾಲ್‌
http://www.artzolo.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT