ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಉಳಿಸಿಕೊಂಡ ಜೊಕೊವಿಚ್

ವಿಂಬಲ್ಡನ್ ಟೆನಿಸ್‌: ರೋಜರ್‌ ಫೆಡರರ್‌ಗೆ ಮತ್ತೆ ಮುಖಭಂಗ
Last Updated 12 ಜುಲೈ 2015, 19:35 IST
ಅಕ್ಷರ ಗಾತ್ರ

ಲಂಡನ್ (ರಾಯಿಟರ್ಸ್): ಸರ್ಬಿಯಾದ ನೊವಾಕ್ ಜೊಕೊವಿಚ್ ಭಾನುವಾರ ರಾತ್ರಿ ಆಲ್‌ ಇಂಗ್ಲೆಂಡ್ ಕ್ಲಬ್‌ನಲ್ಲಿ ಸತತ ಎರಡನೇ ವರ್ಷ  ಮಿರಿಮಿರಿ ಮಿಂಚುವ ವಿಂಬಲ್ಡನ್ ಟ್ರೋಫಿಗೆ ಮುತ್ತಿಟ್ಟರು. 

ತೀವ್ರ ಕುತೂಹಲ ಮೂಡಿಸಿದ್ದ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ವಿಶ್ವದ ಅಗ್ರ ಶ್ರೇಯಾಂಕದ ಆಟಗಾರ ನೊವಾಕ್  7-6, 6-7, 6-4, 6-3ರಿಂದ ಸ್ವಿಟ್ಜರ್‌ಲೆಂಡ್‌ನ ಅಭಿಮಾನಿಗಳ ನೆಚ್ಚಿನ ಆಟಗಾರ ರೋಜರ್ ಫೆಡರರ್ ಅವರನ್ನು ಸೋಲಿಸಿದರು. ನೊವಾಕ್‌ ಇದೇ ಟೂರ್ನಿಯಲ್ಲಿ ಹೋದ ವರ್ಷವೂ ಫೆಡರರ್‌ ವಿರುದ್ಧವೇ ಜಯಿಸಿದ್ದರು.

2011 ಮತ್ತು 2014ರಲ್ಲಿ ಪ್ರಶಸ್ತಿ ಗೆದ್ದಿದ್ದ ನೊವಾಕ್, ಮೂರನೇ ಬಾರಿ ಈ ಸಾಧನೆ ಮಾಡಿದರು. ಇದು ಅವರು ಗೆದ್ದ ಒಂಬತ್ತನೇ ಗ್ರ್ಯಾಂಡ್‌ಸ್ಲಾಮ್ ಪ್ರಶಸ್ತಿ. ಇದೇ ವರ್ಷ ಅಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ್ದ ಅವರು, ಫ್ರೆಂಚ್‌ ಓಪನ್ ಟೂರ್ನಿಯಲ್ಲಿ ರನ್ನರ್ಸ್ ಅಪ್ ಆಗಿದ್ದರು.

ನೊವಾಕ್ ಅವರಿಗೆ ಕೋಚ್ ಆಗಿರುವ ಮಾಜಿ ಆಟಗಾರ ಬೋರಿಸ್ ಬೇಕರ್‌ ಕೂಡ ಮೂರು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದರು. ತಮ್ಮ ಗುರುವಿನ ದಾಖಲೆಯನ್ನು ಅವರು ಸರಿಗಟ್ಟಿದ್ದಾರೆ.  ಅಲ್ಲದೇ ₨ 16.2 ಕೋಟಿ ಬಹುಮಾನ ಪಡೆದರು.  ಆದರೆ,  ಎಂಟನೇ ಬಾರಿ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ರೋಜರ್‌ ಫೆಡರರ್ ಕನಸು ಭಗ್ನವಾಯಿತು.

ಎರಡು ತಾಸು 56 ನಿಮಿಷ ನಡೆದ ಪಂದ್ಯವು ಹಲವು ರೋಚಕ ತಿರುವುಗಳನ್ನು ಕಂಡಿತು. ಅಗ್ರ ಶ್ರೇಯಾಂಕದ ನೊವಾಕ್‌ಗೆ ಎರಡನೇ ಶ್ರೇಯಾಂಕದ ಫೆಡರರ್ ಸುಲಭವಾಗಿ ಶರಣಾಗಲಿಲ್ಲ.

ಫೋರ್‌ಹ್ಯಾಂಡ್ ಹೊಡೆತಗಳ ಭರ್ಜರಿ ಆಟದ ಮೂಲಕ ಗಮನ ಸೆಳೆದ ನೊವಾಕ್, ಮೊದಲ ಸೆಟ್‌ ಅನ್ನು ಪ್ರಯಾಸದಿಂದಲೇ ಗೆದ್ದರು. ಫೆಡರರ್ ಮೊದಲ ಐದು ಪಾಯಿಂಟ್ ಗೆದ್ದಾಗ ಅವರ ಅಭಿಮಾನಿಗಳು ಹರ್ಷದ ಹೊನಲಿನಲ್ಲಿ ತೇಲಾಡಿದರು. 13 ಏಸ್‌ಗ ಳನ್ನು ಸಿಡಿಸಿದ ಅವರು ಜೊಕೊವಿಚ್‌ಗೆ ಕಠಿಣ ಸವಾಲು ಒಡ್ಡಿದರು.  ಆದರೆ, ನೊವಾಕ್ ಎದೆಗುಂದದೆ ತಿರುಗಿಬಿದ್ದರು.

ತಮ್ಮ ಶಕ್ತಿಯುತ ಸರ್ವ್‌ಗಳ ಮೂಲಕ ಪಾಯಿಂಟ್ ಕಲೆಹಾಕುತ್ತ ಸಮಬಲ ಸಾಧಿಸಿದರು. ಇದರಿಂದಾಗಿ ಮೊದಲ ಸೆಟ್‌ ಟೈಬ್ರೇಕರ್‌ಗೆ ಹೋಯಿತು. ಕೊನೆಗೂ ನೊವಾಕ್ 7–6 (7–1) ಛಲದಾಟಕ್ಕೇ ಜಯ ಸಿಕ್ಕಿತು.

ಎರಡನೇ ಸೆಟ್‌ ಕೂಡ ಟೈಬ್ರೇಕರ್‌ಗೆ ಹೋಯಿತು. ಆದರೆ,  ಇಲ್ಲಿ ಗೆದ್ದಿದ್ದು ರೋಜರ್ ಫೆಡರರ್ 7–6 (12–10)ರಿಂದ ಸೆಟ್‌ ಕೈವಶ ಮಾಡಿ ಕೊಂಡರು. ಆದರೆ, ಕೊನೆಯ ಎರಡು ಸೆಟ್‌ಗಳಲ್ಲಿ ನೊವಾಕ್ ಫೆಡರರ್‌ ಸವಾಲು ಗಳನ್ನು ಸಮರ್ಥವಾಗಿ ಎದುರಿಸಿದರು.   ಸ್ವಲ್ಪ ಹೊತ್ತು ಮಳೆಯೂ ಅಡ್ಡಿಪಡಿಸಿತು. ಆದರೆ, ನೊವಾಕ್ ಏಕಾಗ್ರತೆಗೆ ಭಂಗ ಬರಲಿಲ್ಲ.

ನೊವಾಕ್ ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ರಿಚ್ಮಂಡ್ ಗ್ಯಾಸ್ಕೆಟ್, ಕ್ವಾರ್ಟರ್‌ಫೈನಲ್‌ನಲ್ಲಿ ಮರಿನ್ ಸಿಲಿಕ್ ವಿರುದ್ಧ ಗೆದ್ದಿದ್ದರು. ಫೆಡರರ್ ನಾಲ್ಕರ ಘಟ್ಟದಲ್ಲಿ ಆ್ಯಂಡಿ ಮರ್ರೆ ಮತ್ತು ಎಂಟರ ಘಟ್ಟದಲ್ಲಿ ಗಿಲ್ಲೆಸ್ ಸಿಮೋನ್ ಅವರನ್ನು ಮಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT