ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ರಾಜಕೀಯ

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ಪ್ರತಿಭೆ ಮತ್ತು ಜನಪ್ರಿಯತೆಯನ್ನು ಆಧರಿಸಿ ‘ಭಾರತರತ್ನ’ ನೀಡುವುದು ಪ್ರಶಸ್ತಿಯ ಘನತೆಗೆ ಕುಂದು ತರುತ್ತದೆ ಎಂಬ ಆಕಾರ್ ಪಟೇಲ್ ಅವರ ಅಭಿಪ್ರಾಯಕ್ಕೆ (ಪ್ರ.ವಾ.,  ಜುಲೈ 25) ನನ್ನ ಸಹಮತವಿದೆ.

ದೇಶದಲ್ಲಿ ಸಂಸತ್ ಚುನಾವಣೆ ಸಮೀಪಿಸಿದ್ದ ಸಂದರ್ಭ. ಸಚಿನ್‌ ತೆಂಡೂಲ್ಕರ್‌ ಕ್ರಿಕೆಟ್‌ ಆಟದಿಂದ ನಿವೃತ್ತರಾಗಲು ಚಿಂತಿಸಿದ್ದರು.  ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಭಾವುಕರಾಗಿದ್ದರು. ಈ ಪರಿಸ್ಥಿತಿಯ ಲಾಭ ಪಡೆಯಲು ಆಗಿನ ಸರ್ಕಾರ, ತೆಂಡೂಲ್ಕರ್‌ ಅವರಿಗೆ ‘ಭಾರತರತ್ನ’ ನೀಡಿ ಗೌರವಿಸಿತು.

ಆ ಮುಖಾಂತರ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮತ ಸೆಳೆಯುವ ಲೆಕ್ಕಾಚಾರ ಹಾಕಿತ್ತು. ಪ್ರಶಸ್ತಿ ಪ್ರದಾನ ಪ್ರಶ್ನಾರ್ಹವಾಗಬಾರದೆಂದು ಜೊತೆಯಲ್ಲಿ ವಿಜ್ಞಾನಿಯೊಬ್ಬರಿಗೂ ಪ್ರಶಸ್ತಿ ನೀಡಲಾಯಿತು. ಆ ಸಂದರ್ಭದಲ್ಲಿ ತೆಂಡೂಲ್ಕರ್‌ ಅವರಿಗೆ ‘ಭಾರತರತ್ನ’ ಪ್ರಶಸ್ತಿ ನೀಡಿದ ಬಗ್ಗೆ ಸಾಕಷ್ಟು ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಪ್ರಶಸ್ತಿ, ಗೌರವ ಯಾವತ್ತೂ ಪ್ರಶ್ನಾತೀತವಾಗಿರಬೇಕು. ‘ಭಾರತರತ್ನ’ ದೇಶದ ಅತ್ಯುನ್ನತ ಪ್ರಶಸ್ತಿ. ಕ್ರೀಡಾಪಟು, ಕಲಾವಿದ, ವಿಜ್ಞಾನಿ, ರಾಜಕಾರಣಿ ಯಾರೇ ಆಗಿರಲಿ, ತಮ್ಮ ಕಾರ್ಯಕ್ಷೇತ್ರದಲ್ಲಿ ದೇಶದ ಏಳ್ಗೆಗಾಗಿ, ದೇಶ ಸೇವೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರಿಗೆ ಆ ಪ್ರಶಸ್ತಿ ಸಲ್ಲಬೇಕು.

ತೆಂಡೂಲ್ಕರ್‌ ಕ್ರೀಡಾ ಜಗತ್ತಿನ ಅಸಾಮಾನ್ಯ ಪ್ರತಿಭೆ. ಅವರ ಬಗ್ಗೆ ಹೆಮ್ಮೆ, ಅಭಿಮಾನವಿರುವುದು ಸಹಜ. ಆದರೆ ತಮ್ಮ ಪ್ರತಿಭೆಗೆ ಪ್ರತಿಯಾಗಿ ಪಡೆಯಬೇಕಾದ ಎಲ್ಲಾ ರೀತಿಯ ಲಾಭವನ್ನೂ ಅವರು ಪಡೆದಿದ್ದಾರೆ. ಸಾಧನೆಗಾಗಿ ಅವರಿಗೆ ಸಲ್ಲಬೇಕಾದ ಎಲ್ಲಾ ಗೌರವಗಳೂ, ಪ್ರಶಸ್ತಿಗಳೂ ಸಂದಿವೆ.

ಇನ್ನು ಮುಂದೂ ಅವರ ಪ್ರತಿಭೆಗೆ ಸಲ್ಲಬೇಕಾದ ಪ್ರಶಸ್ತಿಗಳೇನಾದರೂ ಇದ್ದರೆ ಅವೂ ಅವರಿಗೆ ದಕ್ಕಲಿ. ಆದರೆ ಹೇರಳವಾಗಿ ಸಂಪತ್ತನ್ನು ಗಳಿಸಿ ಅದರ ಒಂದು ಸಣ್ಣ ಭಾಗವನ್ನು ಅನಾಥಾಲಯಗಳಿಗೋ, ವೃದ್ಧಾಶ್ರಮಗಳಿಗೋ, ಸೊರಗುತ್ತಿರುವ ಸರ್ಕಾರಿ ಸಂಸ್ಥೆಗಳಿಗೋ, ಸಂತ್ರಸ್ತರಿಗೋ ದೇಣಿಗೆ ನೀಡಿ ಪ್ರಚಾರ ಪಡೆದಾಕ್ಷಣ ಅದು ‘ಭಾರತರತ್ನ’ ಪ್ರಶಸ್ತಿಗೆ ಅರ್ಹತೆಯೂ ಅಲ್ಲ, ಮಾನದಂಡವೂ ಅಲ್ಲ. ಗೌರವ, ಪ್ರಶಸ್ತಿಗಳು ರಾಜಕೀಯ ಲಾಭಕ್ಕಾಗಿ ಬಳಕೆಯಾಗಬಾರದು.
-ಮ.ಸೊ.ಹಾಲಸ್ವಾಮಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT