ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಾಂತ್ ಯುಗಳ

Last Updated 28 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

‘ಸಿನಿಮಾ ಮಾಡುತ್ತಿರುವವರು ವಾಣಿಜ್ಯ ಮಂಡಳಿಯಲ್ಲಿಲ್ಲ. ಅಲ್ಲಿ ಇರುವವರು ಸಿನಿಮಾ ಮಾಡುತ್ತಿಲ್ಲ. ಹೀಗಾಗಿ ಸಾಮಾನ್ಯ ನಿರ್ಮಾಪಕರ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲ’ ಎನ್ನುವ ಪ್ರಶಾಂತ್‌ ರಾಜ್‌ ತಮ್ಮ ಎರಡು ಚಿತ್ರಗಳನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ.

‘ಅಡುಗೆ ಮಾಡಲು ಸಿದ್ಧನಾಗಿರುವ ಬಾಣಸಿಗ ನಾನು. ಸಸ್ಯಾಹಾರವಾದರೂ ಸರಿ, ಮಾಂಸಾಹಾರವಾದರೂ ಸೈ. ಆದರೆ ನನ್ನ ಶೈಲಿಯಲ್ಲಿಯೇ ಮಾಡುತ್ತೇವೆ’

–ಪ್ರೇಮ ಕಥೆಗಳ ಜತೆಗೆ ವಿಭಿನ್ನ ಆಯಾಮದ ಚಿತ್ರಗಳನ್ನೂ ನಿರ್ದೇಶಿಸುವ ತುಡಿತ ಮತ್ತು ಸಾಧ್ಯತೆ ಇದೆ ಎನ್ನುವುದನ್ನು ಹೀಗೆ ವಿವರಿಸಿದ್ದು ನಿರ್ದೇಶಕ ಪ್ರಶಾಂತ್‌ ರಾಜ್‌. ‘ಲವ್‌ ಗುರು’, ‘ಗಾನ ಬಜಾನ’, ‘ವಿಷಲ್’ ಚಿತ್ರಗಳನ್ನು ನಿರ್ದೇಶಿಸಿದ್ದ ಅವರು ಒಂದಷ್ಟು ಅಂತರದ ಬಳಿಕ ಎರಡು ಸಿನಿಮಾಗಳನ್ನು ತೆರೆಗೆ ತರಲು ತುದಿಗಾಲಲ್ಲಿ ನಿಂತಿದ್ದಾರೆ. ಮೇ ತಿಂಗಳಲ್ಲಿ ಪ್ರೇಕ್ಷಕರ ಮೇಲೆ ‘ಜೂಮ್‌’ ಹಾಕಲು ಸಿದ್ಧರಾಗಿದ್ದಾರೆ. ಜುಲೈನಲ್ಲಿ ‘ದಳಪತಿ’ಯ ಆಕ್ರಮಣ ಶುರುವಾಗಲಿದೆ.

ಎಲ್ಲರೂ ಮೆಚ್ಚುವ ಜೋಡಿ
ಇಷ್ಟು ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಗಣೇಶ್ ಮತ್ತು ರಾಧಿಕಾ ಪಂಡಿತ್ ಒಟ್ಟಿಗ ನಟಿಸಿರಲಿಲ್ಲ. ಇಬ್ಬರೂ ಒಟ್ಟಿಗೆ ನಟಿಸಬೇಕೆಂದು ಬಯಸಿದ್ದ 10–15 ಸಿನಿಮಾಗಳು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಆದರೆ ಅದು ‘ಜೂಮ್‌’ನಲ್ಲಿ ಈಡೇರಿದೆ ಎನ್ನುವುದು ಪ್ರಶಾಂತ್‌ ರಾಜ್‌ ಖುಷಿ.

ಈಗಾಗಲೇ ಪೋಸ್ಟರ್‌ಗಳಲ್ಲಿ ಗಣೇಶ್‌–ರಾಧಿಕಾ ಜೋಡಿ ಕಂಡವರು ಮೆಚ್ಚಿಕೊಂಡಿದ್ದಾರೆ. ಚಿತ್ರ ಬಿಡುಗಡೆಯಾದ ಬಳಿಕ ಇಬ್ಬರನ್ನೂ ಒಟ್ಟಿಗೆ ತೆರೆಯ ಮೇಲೆ ನೋಡಲು ಬಯಸುವವರ ಸಂಖ್ಯೆ ಹೆಚ್ಚಲಿದೆ ಎನ್ನುವುದು ಅವರ ಅನಿಸಿಕೆ.

ಪ್ರಶಾಂತ್‌ ರಾಜ್‌ ಪ್ರಕಾರ ಇಬ್ಬರದೂ ಅತಿ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಮತ್ತು ಒಂದಾಗಿ ಕಾಣಿಸಿಕೊಳ್ಳಲೇಬೇಕಿದ್ದ ಜೋಡಿ. ಗಣೇಶ್‌ ಮತ್ತು ರಾಧಿಕಾ ಇಬ್ಬರದೂ ಗೆದ್ದ ಚಿತ್ರಗಳನ್ನು ನೋಡಿದಾಗ ಸಾಮ್ಯತೆ ಕಾಣಿಸುತ್ತದೆ.

ಇಬ್ಬರದೂ ಮನಮುಟ್ಟುವ ಪ್ರೇಮಕಥೆಯ ಚಿತ್ರಗಳು ಗೆದ್ದಿವೆ. ಅಂದರೆ ಇಬ್ಬರದೂ ಒಂದೇ ರೀತಿಯ ಪಯಣ. ಈ ಸಂಯೋಜನೆಯಲ್ಲಿ ಸಿನಿಮಾ ಬಂದರೆ ಅದು ಹೇಗಿರಬಹುದು? ಉತ್ತರ ‘ಜೂಮ್‌’ನಲ್ಲಿ ಸಿಗಲಿದೆ ಎನ್ನುತ್ತಾರೆ ಅವರು.

‘ಜೂಮ್‌’ ಹಾಕಿ ನೋಡಿ...
‘ನಮ್ಮ ಕಣ್ಣಿಗೆ ಕಾಣುವ ಪ್ರತಿ ವಿಷಯಕ್ಕೂ ‘ಜೂಮ್‌’ ಹಾಕಿ ನೋಡಿ. ಅರ್ಥಾತ್‌, ಅದರ ಒಳಹೊಕ್ಕು ನೋಡಿ. ಅದರ ಮತ್ತೊಂದು ಆಯಾಮದ ವಿಚಾರ ಕಾಣಿಸುತ್ತದೆ. ಚಿತ್ರದ ವಸ್ತುವೂ ಇದೇ’ ಎನ್ನುವುದು ಪ್ರಶಾಂತ್‌ ಮಾತು.

ಗಣೇಶ್‌ ಇದುವರೆಗೆ ಕಾಣಿಸಿಕೊಂಡಿರುವ ಚಿತ್ರಗಳಿಗಿಂತ ವಿಭಿನ್ನವಾಗಿ ಇಲ್ಲಿ ಸಿಗುತ್ತಾರೆ. ಅನಂತ್‌ನಾಗ್‌ ಮತ್ತು ರಮೇಶ್‌ ಅರವಿಂದ್‌ ಅವರ ಸ್ಥಾನವನ್ನು ತುಂಬುವ ಏಕೈಕ ನಟ ಅವರು ಎನ್ನುವುದು ಪ್ರಶಾಂತ್‌ ಅಭಿಪ್ರಾಯ.

ಚಿತ್ರಕ್ಕೆ ಸುಮಾರು 9 ಕೋಟಿಯಷ್ಟು ಖರ್ಚಾಗಿದೆ. ಇದು ಅವರ ವೃತ್ತಿ ಬದುಕಿನಲ್ಲಿ ಅತಿ ದೊಡ್ಡ ಬಜೆಟ್‌ ಚಿತ್ರ. ಇಟಲಿಯಲ್ಲಿ ಚಿತ್ರೀಕರಿಸಿದ ದೃಶ್ಯಗಳ ಭಾಗಗಳನ್ನು ಅಲ್ಲಿನ ನಿಯಮದಂತೆ ಸಿನಿಮಾ ಮಂಡಳಿಗೆ ಕಳುಹಿಸಬೇಕು. ಅದನ್ನು ವೀಕ್ಷಿಸಿದ ಸಮಿತಿ ಮಿಲನ್‌ ನಗರವನ್ನು ಅನ್ನು ತುಂಬಾ ಸುಂದರವಾಗಿ ಚಿತ್ರೀಕರಿಸಿದ್ದೀರಿ ಎಂದು ಮೆಚ್ಚುಗೆಯ ಮಾತು ಆಡಿದ್ದಾರಂತೆ.

ತಮನ್‌ ಅವರ ಸಂಗೀತ ದೊಡ್ಡ ಹಿಟ್‌ ಆಗುವುದರಲ್ಲಿ ಎರಡು ಮಾತಿನಲ್ಲ ಎಂಬ ವಿಶ್ವಾಸ ಅವರಲ್ಲಿದೆ. ಐಟಂ ಸಾಂಗ್‌ ಅನ್ನು ಮಕ್ಕಳು ಗುನುಗುವುದು ಕೇಳಿದಾಗ ಅವರಿಗೆ ಈ ಭರವಸೆ ದುಪ್ಪಟ್ಟಾಗಿದೆ. ಸ್ವತಃ ಆಡಿಯೊ ಕಂಪೆನಿ ಪ್ರಾರಂಭಿಸಿರುವ ಅವರಿಗೆ ಹಾಡುಗಳ ಡೌನ್‌ಲೋಡ್‌ನಿಂದಲೇ ಉತ್ತಮ ಗಳಿಕೆ ಸಿಕ್ಕಿದೆಯಂತೆ.

ದಳಪತಿಯೂ ಸಿದ್ಧ
‘ನೆನಪಿರಲಿ’ ಪ್ರೇಮ್ ಮತ್ತು ಕೃತಿ ಕರಬಂಧ ನಟಿಸಿರುವ ‘ದಳಪತಿ’ ಚಿತ್ರವನ್ನೂ ಸಿದ್ಧಪಡಿಸಿಕೊಂಡು ಕುಳಿತಿದ್ದಾರೆ ಪ್ರಶಾಂತ್‌ ರಾಜ್‌. ಹೆಸರಿನಲ್ಲಿಯೇ ಒಂದು ಆ್ಯಕ್ಷನ್‌ ಫೀಲ್‌ ಇದೆ. ಆದರೆ, ಇಲ್ಲಿ ಎಲ್ಲವೂ ಹಿತಮಿತವಾಗಿದೆ.

ಒಂದು ಸುಂದರ ಪ್ರೇಮಕಥೆ ಚಿತ್ರದಲ್ಲಿದೆ. ಹೊಡೆದಾಟವಿದ್ದರೂ ಸಮಾಜಕ್ಕೆ ವಿರೋಧಿ ಅಂಶಗಳೀಲ್ಲ. ನೇತ್ಯಾತ್ಮಕ ಸಂಗತಿಗಳನ್ನು ಪ್ರಚೋದಿಸುವುದಿಲ್ಲ. ಒಳ್ಳೆಯ ಸಂದೇಶ ನೀಡುವ ಸಂಗತಿಗಳು ಚಿತ್ರದಲ್ಲಿವೆ ಎನ್ನುತ್ತಾರೆ ಅವರು.

‘ಒಂದು ಶುದ್ಧ ಎಳೆಯನ್ನು ವಿಸ್ತರಿಸಿದ್ದೇನೆ. ಕಥೆಯಲ್ಲಿ ತೂಕವಿದೆ. ಅದಕ್ಕೆ ಮೌಲ್ಯವೂ ಇದೆ. ಪಾತ್ರಗಳ ಸೃಷ್ಟಿ ಮತ್ತು ನಿರೂಪಣೆಯೂ ಖಂಡಿತಾ ಇಷ್ಟವಾಗುವಂತಿದೆ.

ಟಿಪಿಕಲ್ ಹೊಡಿ ಬಡಿ ಸಿನಿಮಾಗಳಂತೆ ಇಲ್ಲ. ಪಕ್ಕಾ ಕಮರ್ಷಿಯಲ್‌ ಸಿನಿಮಾ ಆದರೂ ಕ್ಲಾಸ್‌ ಸಿನಿಮಾಗಳ ಸ್ವರೂಪದಲ್ಲಿ ಚಿತ್ರಿಸಿದ್ದೇನೆ. ಇಲ್ಲಿನ ಪ್ರೇಮ್‌– ಕೃತಿ ಜೋಡಿಯೂ ತಾಜಾ ಅನುಭವ ನೀಡುತ್ತದೆ. ಹೊಸ ಸಂಗೀತ ನಿರ್ದೇಶಕ ಚರಣ್‌ ಅವರನ್ನು ಪರಿಚಯಿಸಿದ್ದೇನೆ’ ಎಂದು ‘ದಳಪತಿ’ ಬಗ್ಗೆ ಹೇಳುತ್ತಾರೆ.

ತೆರೆ ಕಾಣಿಸುವ ಕಷ್ಟ!
ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆ ವಿಚಾರದಲ್ಲಿ ಶಿಸ್ತಿನ ಕೊರತೆ ಇದೆ. ಬಾಲಿವುಡ್‌ನಲ್ಲಿ ಯಾವ ಸಿನಿಮಾ ಯಾವಾಗ ಬರುತ್ತದೆ ಎಂಬುದು ಮೊದಲೇ ಪ್ರಕಟಿಸುತ್ತಾರೆ. ಆಗ ಉಳಿದ ಸಿನಿಮಾಗಳ ಬಿಡುಗಡೆ ದಿನಾಂಕ ಹೊಂದಾಣಿಕೆ ಮಾಡಿಕೊಳ್ಳಬಹುದು.

ಇಲ್ಲಿ ದೊಡ್ಡವರ ಸಿನಿಮಾಗಳು ಬಿಡುಗಡೆಯಾಗುವ ಭಯದಲ್ಲಿಯೇ ನಿರ್ಮಾಪಕರು ಬದುಕುವಂತಾಗಿದೆ. ಪುನೀತ್, ಸುದೀಪ್‌, ದರ್ಶನ್‌ ಅವರಂತಹ ನಟರ ಸಿನಿಮಾಗಳ ದಿನಾಂಕ ಮೊದಲೇ ಪ್ರಕಟಿಸಲು ಅವಕಾಶವಿರುತ್ತದೆ. ಆದರೆ ಅವರ ಚಿತ್ರಗಳು ಇದ್ದಕ್ಕಿದ್ದಂತೆ ಬರುತ್ತವೆ.

ಸಂಘಟನಾತ್ಮಕವಾಗಿ ಚಿಂತನೆ ನಡೆಸಿದರೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಅದನ್ನು ಮಾಡುವವರು ಯಾರು? ಸಿನಿಮಾ ಮಾಡುತ್ತಿರುವವರು ವಾಣಿಜ್ಯ ಮಂಡಳಿಯಲ್ಲಿಲ್ಲ. ಅಲ್ಲಿ ಇರುವವರು ಸಿನಿಮಾ ಮಾಡುತ್ತಿಲ್ಲ. ಹೀಗಾಗಿ ಸಾಮಾನ್ಯ ನಿರ್ಮಾಪಕರ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಬೇಸರದಿಂದ ಹೇಳುತ್ತಾರೆ ಪ್ರಶಾಂತ್‌.

ಎರಡು ಸಿನಿಮಾ ಸಂಘರ್ಷ
ಈ ಎರಡೂ ಚಿತ್ರಗಳು ಸಿದ್ಧವಾಗಿ 10 ತಿಂಗಳೇ ಕಳೆದಿವೆ. ಗಣೇಶ್‌ ಅವರ ‘ಬುಗುರಿ’ ಮತ್ತು ‘ಸ್ಟೈಲ್‌ ಕಿಂಗ್‌’ ತೆರೆಗೆ ಬರಲಿ ಎಂಬ ಕಾರಣಕ್ಕೆ ‘ಜೂಮ್‌’ ತಡಮಾಡಿದ್ದು. ನಿರ್ಮಾಪಕರು ಬೈಯಲು ಶುರುಮಾಡಿದರು, ಬೇರೆಯವರೂ ಕೇಳತೊಡಗಿದರು.

ಸರಿ. ಬಿಡುಗಡೆ ಮಾಡೋಣ ಎಂದು ದಿನಾಂಕ ನಿಗದಿಪಡಿಸುತ್ತಿದ್ದಂತೆಯೇ ‘ಸ್ಟೈಲ್‌ ಕಿಂಗ್‌’ ಕೂಡ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು. ಈಗ ಗಣೇಶ್ ಅವರ ಎರಡು ಸಿನಿಮಾಗಳು ಎರಡು ವಾರದ ಅಂತರದಲ್ಲಿ ಬಿಡುಗಡೆಯಾಗುವಂತಾಗಿದೆ.

‘ಮಳೆ’ ಬಿಡುಗಡೆಯಾಗಲಿ ಎಂದು ‘ದಳಪತಿ’ಯನ್ನು ಮುಂದಕ್ಕೆ ಹಾಕಿದ್ದ ಅವರು, ಕೊನೆಗೂ ಜುಲೈನಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಸದ್ಯದಲ್ಲೇ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT