ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆಪತ್ರಿಕೆ ಸೋರಿದ್ದು ಹಾನಗಲ್ ಖಜಾನೆಯಿಂದ!

ಸಿಐಡಿ ವಶದಲ್ಲಿ ದ್ವಿತೀಯ ದರ್ಜೆ ಸಹಾಯಕ
Last Updated 11 ಮೇ 2016, 19:37 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನ ವಿಜ್ಞಾನ ಪರೀಕ್ಷೆ ಹಾಗೂ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದು ಹಾವೇರಿ ಜಿಲ್ಲೆಯ ಹಾನಗಲ್‌ ಉಪ ಖಜಾನೆಯಿಂದ.

ತುಮಕೂರಿನ ತೋಟದ ಮನೆಯೊಂದರಲ್ಲಿ ಮಂಗಳವಾರ ಸಿಐಡಿ ಪೊಲೀಸರಿಗೆ ಸಿಕ್ಕಿಬಿದ್ದ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿ ಕಿರಣ್‌ ಅಲಿಯಾಸ್ ಕುಮಾರಸ್ವಾಮಿ, ವಿಚಾರಣೆ ವೇಳೆ ಈ ವಿಷಯ ಬಾಯ್ಬಿಟ್ಟಿದ್ದಾನೆ. ಪ್ರಶ್ನೆಪತ್ರಿಕೆ ಕದಿಯಲು ಕಿರಣ್‌ಗೆ ನೆರವಾಗಿದ್ದ ಹಾನಗಲ್‌ ಉಪ ಖಜಾನೆಯ ದ್ವಿತೀಯ ದರ್ಜೆ ಸಹಾಯಕ ಸಂತೋಷ್ ಪರಶುರಾಮ್ ಅಗಸಿಮನಿ (35) ಎಂಬಾತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಮೂಲತಃ ಉತ್ತರ ಕನ್ನಡ ಜಿಲ್ಲೆ ತೇರಗಾಂವ್ ಗ್ರಾಮದ ಸಂತೋಷ್, ಸದ್ಯ ಹಾವೇರಿ ಜಿಲ್ಲೆ ಆಡೂರಿನಲ್ಲಿ ನೆಲೆಸಿದ್ದ. ಮಾರ್ಚ್‌ 19ರಂದು ಆತನನ್ನು ಸಂಪರ್ಕಿಸಿದ್ದ ಕಿರಣ್, ಪ್ರಶ್ನೆಪತ್ರಿಕೆ ಕದಿಯಲು ನೆರವಾದರೆ ₹ 1 ಲಕ್ಷ ಕೊಡುವುದಾಗಿ ಆಮಿಷ ಒಡ್ಡಿದ್ದ. ಅದಕ್ಕೆ ಒಪ್ಪಿಕೊಂಡ ಸಂತೋಷ್, ಅದೇ ದಿನ ರಾತ್ರಿ ಖಜಾನೆಯ ಕೀ ತೆರೆದು ಕಿರಣ್‌ನನ್ನು ಒಳಗೆ ಬಿಟ್ಟಿದ್ದ’ ಎಂದು ತನಿಖಾಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊಬೈಲ್‌ನಲ್ಲಿ ಪ್ರಶ್ನೆಪತ್ರಿಕೆಯ ಫೋಟೊ ತೆಗೆದುಕೊಂಡು ಹೊರ ಬಂದ ಕಿರಣ್, ನಂತರ ಸಂತೋಷ್‌ಗೆ ಹಣ ಕೊಟ್ಟು ಗುಬ್ಬಿ ತಾಲ್ಲೂಕಿನ ಚೋಳೂರು ಗ್ರಾಮಕ್ಕೆ ಮರಳಿದ್ದ. ಫೋಟೊ ಸ್ಪಷ್ಟವಾಗಿರದ ಕಾರಣ ಪ್ರಶ್ನೆಗಳನ್ನು ಹಾಳೆಯಲ್ಲಿ ಬರೆದುಕೊಂಡ ಆತ, ಅದರ ಫೋಟೊ ತೆಗೆದು ವಾಟ್ಸ್‌ಆ್ಯಪ್ ಮೂಲಕ ವಿಜಯನಗರದ ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್, ವೈದ್ಯಕೀಯ ಶಿಕ್ಷಣ ಸಚಿವರ ವಿಶೇಷ ಅಧಿಕಾರಿಯಾಗಿದ್ದ ಓಬಳ್‌ರಾಜ್, ರುದ್ರಪ್ಪ ಸೇರಿದಂತೆ ಹಲವರಿಗೆ ಕಳುಹಿಸಿದ್ದ.

ನಂತರ ಒಬ್ಬರಿಂದ ಒಬ್ಬರಿಗೆ ರವಾನೆಯಾದ ಆ ಪ್ರಶ್ನೆಗಳು ಸುಮಾರು ಮೂರು ಸಾವಿರ ವಿದ್ಯಾರ್ಥಿಗಳನ್ನು ತಲುಪಿದ್ದವು.’ ‘ಮರುದಿನ (ಮಾರ್ಚ್ 21) ಬೆಳಿಗ್ಗೆ ಪರೀಕ್ಷೆ ಮುಗಿದ ನಂತರ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವ ವಿಷಯ ಬಹಿರಂಗವಾಗಿತ್ತು. ಹೀಗಾಗಿ ಮಾರ್ಚ್ 31ಕ್ಕೆ ಮರುಪರೀಕ್ಷೆ ನಿಗದಿಪಡಿಸಿ ಪಿಯು ಮಂಡಳಿ ಆದೇಶ ಹೊರಡಿಸಿತು. ಹಿಂದೆ ಒಪ್ಪಂದ ಮಾಡಿಕೊಂಡವರು ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನೂ ಕೊಡುವಂತೆ ಕಿರಣ್‌ನ ಹಿಂದೆ ಬಿದ್ದರು. ಹೀಗಾಗಿ ಮತ್ತೆ ಸಂತೋಷ್‌ನನ್ನು ಭೇಟಿಯಾದ ಕಿರಣ್, ಅದೇ ತಂತ್ರ ಬಳಸಿ ಮಾರ್ಚ್ 29ರ ರಾತ್ರಿಯೂ ಪ್ರಶ್ನೆಪತ್ರಿಕೆ ಕದ್ದಿದ್ದ.’

ಪೊಲೀಸರ ವಶದಲ್ಲಿತ್ತು ಮೊಬೈಲ್!
‘ಈ ವೇಳೆಗಾಗಲೇ ಮಂಜುನಾಥ್, ಓಬಳ್‌ರಾಜ್, ರುದ್ರಪ್ಪ ಸೇರಿದಂತೆ ಐದು ಮಂದಿಯನ್ನು ವಶಕ್ಕೆ ಪಡೆಯಲಾಗಿತ್ತು. ಅವರೆಲ್ಲ ಪೊಲೀಸರ ವಶದಲ್ಲಿರುವ ವಿಷಯ ತಿಳಿಯದ ಕಿರಣ್, ವಾಟ್ಸ್‌ಆ್ಯಪ್ ಮೂಲಕ ಮಂಜುನಾಥ್‌ಗೆ ಪ್ರಶ್ನೆಪತ್ರಿಕೆ ಕಳುಹಿಸಿದ್ದ. ಆತನ ಮೊಬೈಲ್ ನಮ್ಮ ಬಳಿಯೇ ಇದ್ದುದರಿಂದ ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆಯಾಗಿರುವುದು ಗೊತ್ತಾಗಿತ್ತು.’

‘ವಿದ್ಯಾರ್ಥಿಗಳು  ಸಹ ಪ್ರಶ್ನೆಪತ್ರಿಕೆ ಬಹಿರಂಗವಾದ ಬಗ್ಗೆ ಮಾರ್ಚ್ 30ರ ರಾತ್ರಿಯೇ ಸಿಐಡಿ ಸಹಾಯವಾಣಿ ಸಂಖ್ಯೆಗೆ ಸಂದೇಶ ಕಳುಹಿಸಿದ್ದರು. ಹೀಗೆ ಮರುಪರೀಕ್ಷೆ ಕೂಡ ರದ್ದಾಗಿತ್ತು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.

ವೇಷ ಬದಲಿಸಿದ್ದ:  ‘ಮಂಜುನಾಥ್‌ನ ಬಂಧನವನ್ನು ಸಿಐಡಿ ಏಪ್ರಿಲ್ 1ರಂದು ಅಧಿಕೃತಗೊಳಿಸಿತ್ತು. ಮಾಧ್ಯಮಗಳ ಮೂಲಕ ಈ ವಿಷಯ ತಿಳಿದುಕೊಂಡ ಕಿರಣ್, ಮಡಿಕೇರಿ, ವಿರಾಜಪೇಟೆ, ಕೊಡಗು ಭಾಗಗಳಲ್ಲಿ ತಲೆಮರೆಸಿಕೊಂಡು  ಓಡಾಡುತ್ತಿದ್ದ.’ ‘ಗುರುತು ಸಿಗಬಾರದೆಂದು ತಲೆ  ಕೂದಲು ಹಾಗೂ ಮೀಸೆ ಬೋಳಿಸಿಕೊಂಡಿದ್ದ ಕಿರಣ್, ಇತ್ತೀಚೆಗೆ ಖಾಸಗಿ ಕಾಲೇಜುವೊಂದಕ್ಕೆ ತೆರಳಿ ಸಾಕ್ಷಿ ಹೇಳದಂತೆ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಗೆ ಧಮಕಿ ಹಾಕಿದ್ದ.’

‘ಕಿರಣ್‌ನ ಸ್ನೇಹಿತರ ಮೊಬೈಲ್ ಕರೆಗಳ (ಸಿಡಿಆರ್‌) ಮೇಲೆ ನಿರಂತರ ನಿಗಾ ಇಡಲಾಗಿತ್ತು. ಅದೇ ಸುಳಿವಿನಿಂದ ಮಂಗಳವಾರ ಬೆಳಿಗ್ಗೆ ತುಮಕೂರಿನಲ್ಲಿ ಆತನನ್ನು ಬಂಧಿಸಿದಾಗ, ‘ನಾನು ಕಿರಣ್ ಅಲ್ಲ. ಆತನಿಗೆ ನನಗೂ ಸಂಬಂಧವಿಲ್ಲ’ ಎಂದು ಜಗಳ ಮಾಡಿದ. ಗುರುತಿಸಲು ಆತನ ಆಪ್ತ ಸ್ನೇಹಿತನನ್ನು ಸ್ಥಳಕ್ಕೆ ಕರೆಸಲಾಯಿತು. ಅವರು ಖಚಿತಪಡಿಸಿದ ಬಳಿಕ ಬಂಧಿಸಿ ನಗರಕ್ಕೆ ಕರೆತರಲಾಯಿತು’ ಎಂದು ಮಾಹಿತಿ ನೀಡಿದರು.

ಕಿರಣ್‌ನನ್ನು 10 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶಿಸಿತು. 

ಪಿಡಿಎಂಎಸ್‌ನಲ್ಲಿ ವಿಚಾರಣೆ: ಯಲಹಂಕದ ಪೊಲೀಸ್ ಚಾಲನೆ ಮತ್ತು ನಿರ್ವಹಣೆ ಶಾಲೆ (ಪಿಡಿಎಂಎಸ್‌) ಆವರಣದಲ್ಲಿರುವ ಅಧಿಕಾರಿಗಳ ವಸತಿ ಸಮುಚ್ಚಯದಲ್ಲಿ ಶಿವಕುಮಾರಯ್ಯನ ವಿಚಾರಣೆ ನಡೆಯುತ್ತಿದೆ.

ಈ ಬಾರಿಯ ಅಕ್ರಮದಲ್ಲಿ ತನ್ನ ಪಾತ್ರವಿಲ್ಲ ಎಂದೇ ಆತ ಪುನರುಚ್ಚರಿಸುತ್ತಿದ್ದಾನೆ. ಕಿರಣ್‌ನನ್ನು ವಿಚಾರಣೆಗೆ ಒಳಪಡಿಸಿ ಶಿವಕುಮಾರಯ್ಯನ ಪಾತ್ರದ ಬಗ್ಗೆ ತಿಳಿದುಕೊಳ್ಳಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಸಂತೋಷ್: ‘ಕಿರಣ್‌ಗೆ ನೆರವು ನೀಡಿದ ಸಂತೋಷ್, ಸಂಬಂಧಿಕರ ಜತೆ ನಡೆದ ಜಗಳದಲ್ಲಿ ಕೈಮುರಿದುಕೊಂಡು ಹಾವೇರಿಯ ಆಸ್ಪತ್ರೆಗೆ ದಾಖಲಾಗಿದ್ದಾನೆ. ಚೇತರಿಸಿಕೊಂಡ ಬಳಿಕ ಆತನನ್ನು ಬಂಧಿಸಲಾಗುವುದು. ಎಸ್ಪಿ ಸಿರಿಗೌರಿ, ಲೋಬೊ ಮಾರ್ಟಿನ್ ಅವರ ತಂಡ, ಹಾನಗಲ್ ಖಜಾನೆಗೆ ತೆರಳಿ ಪಂಚನಾಮೆ ಮಾಡಿದ್ದಾರೆ’ ಎಂದು ಸಿಐಡಿ ಡಿಜಿಪಿ ಕಿಶೋರ್‌ಚಂದ್ರ ತಿಳಿಸಿದರು.

‘ಕಾರಿನಲ್ಲಿ ಬಿಟ್ಟು ಬನ್ನಿ ಎಂದ’
‘ಎಂಟು ದಿನಗಳಿಂದ ಎಲ್ಲ ಆಯಾಮ ಬಳಸಿ ವಿಚಾರಣೆ ನಡೆಸಿದರೂ ಶಿವಕುಮಾರಯ್ಯ ಯಾವುದೇ ಮಾಹಿತಿ ಬಾಯ್ಬಿಟ್ಟಿಲ್ಲ. ಶನಿವಾರ (ಮೇ 7) ನಂದಿನಿಲೇಔಟ್‌ನಲ್ಲಿರುವ ಆತನ ಇಬ್ಬರು ಪ್ರೇಯಸಿಯರನ್ನು ವಿಚಾರಣಾ ಸ್ಥಳಕ್ಕೆ ಕರೆಸಲಾಗಿತ್ತು. ಅವರ ಬಳಿಯೂ ಏನನ್ನೂ ಹೇಳದ ಆತ, ‘ಇವರನ್ನು ಆಟೊದಲ್ಲಿ ಕಳುಹಿಸಬೇಡಿ. ಪೊಲೀಸ್ ಕಾರಿನಲ್ಲೆ ಕರೆದುಕೊಂಡು ಮನೆಗೆ ಬಿಟ್ಟು ಬನ್ನಿ’ ಎಂದು ನಮಗೇ ಆದೇಶ ಮಾಡಿದ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ಕಿರಣ್ ಯಾರು?
‘ಮೊದಲು ಎಲ್‌ಐಸಿ ಏಜೆಂಟ್ ಆಗಿದ್ದ ಕಿರಣ್, ಚಿಕ್ಕಪ್ಪ ಶಿವಕುಮಾರಯ್ಯನ ಜತೆ ಸೇರಿಕೊಂಡು ಈ ದಂಧೆ ಪ್ರಾರಂಭಿಸಿದ. ಜೀವ ವಿಜ್ಞಾನ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ 2011ರಲ್ಲಿ ಈತನ ವಿರುದ್ಧ ಗುಬ್ಬಿ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಯಿತು. 2013ರಲ್ಲಿ ಭೌತ ವಿಜ್ಞಾನ ಪ್ರಶ್ನೆಪತ್ರಿಕೆ ಬಹಿರಂಗ ಮಾಡಿ ತುಮಕೂರು ಹೊಸ ಬಡಾವಣೆ ಪೊಲೀಸರಿಗೆ ಸಿಕ್ಕಿಬಿದ್ದ. 2013ರ ನಂತರ ಶಿವಕುಮಾರಯ್ಯನಿಂದ ಪ್ರತ್ಯೇಕವಾದ ಕಿರಣ್, ತನ್ನದೇ ಜಾಲ ಸೃಷ್ಟಿಸಿಕೊಂಡು ಅಕ್ರಮಗಳನ್ನು ಮುಂದುವರಿಸಿಕೊಂಡು ಬಂದಿದ್ದ.

ಕರ್ತವ್ಯ ಲೋಪ: ತನಿಖೆ
‘ಒಂದೇ ಖಜಾನೆಯಿಂದ ಎರಡು ಸಲ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ಅಲ್ಲಿನ ಭದ್ರತಾ ಲೋಪವನ್ನು ಎತ್ತಿ ತೋರುತ್ತದೆ. ಸಂತೋಷ್ ಮಾತ್ರವಲ್ಲದೆ, ಇತರೆ ಸಿಬ್ಬಂದಿಯ ಪಾತ್ರವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ತನಿಖಾಧಿಕಾರಿಗಳು ತಿಳಿಸಿದರು. ‘ಸಾಮಾನ್ಯವಾಗಿ ಖಜಾನೆ ಹಾಗೂ ಸ್ಟ್ರಾಂಗ್‌ ರೂಂನ ಕೀಗಳು ಉಪ ಖಜಾನಾಧಿಕಾರಿಯ (ಎಟಿಒ) ಬಳಿ ಇರುತ್ತವೆ. ಆದರೆ, ಸಂತೋಷ್‌ಗೆ ಕೀ ಸಿಕ್ಕಿದ್ದು ಹೇಗೆ? ನಕಲಿ ಕೀ ಬಳಸಿ ಬಾಗಿಲು ತೆರೆದಿದ್ದನೇ? ಬೇರೆ ಅಧಿಕಾರಿಯ ಪಾತ್ರವಿದೆಯೇ? ಎಂಬುದು ಆತನ ವಿಚಾರಣೆಯಿಂದಲೇ ತಿಳಿಯಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT