ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ –ಉತ್ತರ

Last Updated 13 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮೇಘಾ, ಡಂಬಳ
*ನಾನು 10ನೇ ತರಗತಿ ಪರೀಕ್ಷೆ ಬರೆದಿದ್ದೇನೆ. ವಸತಿ ಶಾಲೆಯಲ್ಲಿ ಓದುತ್ತಿದ್ದು, ಮುಂದೆ ಪಿ.ಯು ವಿಜ್ಞಾನ ವಿಷಯದಲ್ಲಿ ಓದಬೇಕೆಂದಿದ್ದೇನೆ. ಅದರ ನಂತರ ಎಂಬಿಬಿಎಸ್ ಮಾಡಬೇಕೆಂದಿದ್ದೇನೆ. ಇದನ್ನು ಮಾಡಲು ಅರ್ಹತೆಗಳೇನು? ಇದಕ್ಕಾಗಿ ಯಾವ ರೀತಿ ತಯಾರಿ ಮಾಡಬೇಕು? 

–ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆಯುಲು ಎರಡನೇ ವರ್ಷದ ಪದವಿಪೂರ್ವ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಸರಾಸರಿ ಶೇ.50 ಅಂಕಗಳನ್ನು ಗಳಿಸಿರಬೇಕು. ಜೊತೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಬರೆಯಬೇಕು. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಪಡೆಯುವ ಅಂಕಗಳನ್ನು ಮಾತ್ರ ಪರಿಗಣಿಸಿ ಜ್ಯೇಷ್ಠತಾ ಪಟ್ಟಿಯನ್ನು (Rank list) ತಯಾರಿಸಿ ಅದರ ಆಧಾರದ ಮೇಲೆ ಪ್ರವೇಶವನ್ನು ನೀಡುತ್ತಾರೆ. ಇದರ ಜೊತೆಗೆ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆ (AIPMT) ಬರೆದು ಅದರಲ್ಲಿ ಬರುವ ಜ್ಯೇಷ್ಠತಾ ಪಟ್ಟಿಯ ಆಧಾರದ ಮೇಲೆ ಅಖಿಲ ಭಾರತ ಮಟ್ಟದಲ್ಲಿಯೂ ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆಯಬಹುದು

ಚೇತನ್ ಕುಮಾರ್, ರಾಮದುರ್ಗ
*ನಾನು ದ್ವಿತೀಯ ಪಿ.ಯು ಪರೀಕ್ಷೆ ಬರೆದಿದ್ದೇನೆ. ಮುಂದೆ ಬಿಎಸ್ಸಿಗೆ ಸೇರಿ ಪ್ರಾಣಿಶಾಸ್ತ್ರ ವಿಚಾರವನ್ನು ಐಚ್ಛಿಕವಾಗಿ ಓದಿ ತದ ನಂತರ ಐಎಎಸ್ ಮಾಡಬೇಕೆಂದಿದ್ದೇನೆ. ಆದರೆ ಮನೆಯಲ್ಲಿ ಪೋಷಕರು ಎಂಬಿಬಿಎಸ್ ಮಾಡು ಎನ್ನುತ್ತಿದ್ದಾರೆ. ನನ್ನ ಸಂಪೂರ್ಣ ಗಮನ ಇರುವುದು ಐಎಎಸ್ ಮೇಲೆಯೇ. ಎಂಬಿಬಿಎಸ್ ಮಾಡಲು ಮುಂದಾದರೆ 4 ವರ್ಷಗಳು ವ್ಯಯವಾಗುತ್ತವೆ ಎನ್ನಿಸುತ್ತಿದೆ. ನನಗೆ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಅತ್ಯಂತ ಆಸಕ್ತಿ ಇದೆ. ಆದರೆ ನನ್ನ ತಂದೆ-ತಾಯಿಯರನ್ನು ಹೇಗೆ ಒಪ್ಪಿಸುವುದು ಎಂದು ತಿಳಿಯುತ್ತಿಲ್ಲ. ಗೊಂದಲದಲ್ಲಿದ್ದೇನೆ.

–ಐಎಎಸ್ ಮಾತ್ರವೇ ಗುರಿಯಾಗಿದ್ದರೆ ನೀವು ಆಲೋಚನೆ ಮಾಡಿರುವ ದಾರಿ ಸರಿಯಾಗಿದೆ. ಬಿಎಸ್ಸಿ ಪದವಿಯ ನಂತರ ನಿಮಗೆ ಐಎಎಸ್ ಪರೀಕ್ಷೆಯನ್ನು (ಪ್ರಾಥಮಿಕ ಮತ್ತು ಮುಖ್ಯ) ಬರೆಯುವ ಅರ್ಹತೆ ಬರುತ್ತದೆ. ಆದ್ದರಿಂದ ಮೂರು ವರ್ಷಗಳಲ್ಲಿ ಪದವಿ ಮುಗಿಸಿ, ಅದರೊಂದಿಗೆ ಐಎಎಸ್ ಪರೀಕ್ಷೆಗಳಿಗೂ ಪೂರ್ವಸಿದ್ಧತೆ ಮಾಡಿಕೊಳ್ಳಬಹುದು. ನಿಮ್ಮ ಗುರಿ ಮತ್ತು ಬಿಎಸ್ಸಿ ಪದವಿ ಮಾಡುವುದರಿಂದ ಆಗುವ ಸಮಯದ ಉಳಿತಾಯ ಎಲ್ಲವನ್ನೂ ನಿಮ್ಮ ತಂದೆ-ತಾಯಿಯರಿಗೆ ಮನದಟ್ಟು ಮಾಡಿಕೊಟ್ಟರೆ ಅವರು ಒಪ್ಪುವುದರಲ್ಲಿ ಸಂದೇಹವಿಲ್ಲ. ಇದರ ಹೊರತಾಗಿ ಎಂಬಿಬಿಎಸ್ ಪದವಿಯ ನಂತರವೂ ಐಎಎಸ್ ಪರೀಕ್ಷೆಗೆ ನೀವು ಅರ್ಹರಾಗಿರುತ್ತೀರಿ. ಆದರೆ ಇದರಿಂದ ನಿಮ್ಮ ಸಮಯ, ಹಣ, ಶ್ರಮ ಇತ್ಯಾದಿ ವ್ಯಯವಾಗುತ್ತದೆ. 

ಲೋಕೇಶ್ ನಾಯಕ್
*ಎಐಪಿಎಂಟಿ, ಜೆಇಇ ಇನ್ನಿತರ ಪರೀಕ್ಷೆಗಳಿಗೆ ಉಪಯೋಗವಾಗುವ ಉತ್ತಮ ಪುಸ್ತಕಗಳು ಯಾವುವು? ಇದಕ್ಕಾಗಿ ತರಬೇತಿ ನೀಡುವ ಸಂಸ್ಥೆಗಳು ಯಾವುವು? ಅವು ಎಲ್ಲಿವೆ?

– ಹಲವಾರು ಪ್ರಕಾಶನ ಸಂಸ್ಥೆಗಳು ಈ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕಗಳನ್ನು ಪ್ರಕಟಿಸಿವೆ. ಅವುಗಳೆಂದರೆ TATA Megrahill, Arihant, Golden Bell, GRB ಇತ್ಯಾದಿ. ಅಲ್ಲದೆ ಹಲವಾರು ಸಂಸ್ಥೆಗಳು ಈ ಪರೀಕ್ಷೆಗಳಿಗೆ ಬೇಕಾದ ತರಬೇತಿ ನೀಡುತ್ತವೆ. ಅವುಗಳೆಂದರೆ BASE, ACE, FITJEE, TIME ಇತ್ಯಾದಿ. ಈ ಸಂಸ್ಥೆಗಳು ಪ್ರಮುಖವಾಗಿ ಬೆಂಗಳೂರಿನಲ್ಲಿ ಇವೆ.

ಪ್ರಸನ್ನ ಬಜ್ಜಪ್ಪ
*ನಾನು ಬಿ.ಇ ಮೆಕ್ಯಾನಿಕಲ್ ಮುಗಿಸಿದ್ದೇನೆ. ನನಗೆ ಎನ್.ಸಿ.ಸಿ ‘ಸಿ’ ಸರ್ಟಿಫಿಕೇಟ್ ಪಡೆಯ­ಬೇಕೆಂಬ ಹಂಬಲ ಇದೆ.  ಎಂ.ಟೆಕ್ ಸೇರಿದರೆ ಎನ್.ಸಿ.ಸಿ ‘ಸಿ’ ಸರ್ಟಿಫಿಕೇಟ್ ಪಡೆಯಬಹುದೇ? ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ.

– ಎನ್.ಸಿ.ಸಿ ಸರ್ಟಿಫಿಕೇಟ್ ಪಡೆಯಲು ನೀವು ಪದವಿ ಪೂರ್ವ ಮತ್ತು ಪದವಿ ತರಗತಿಯಲ್ಲಿ ಅಭ್ಯಾಸ ಮಾಡುವಾಗ ಎನ್.ಸಿ.ಸಿಗೆ ನೊಂದಾಯಿಸಿಕೊಂಡು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ ಈ ಸರ್ಟಿಫಿಕೇಟ್ ಪಡೆಯುವ ಅವಕಾಶ ಇರುತ್ತದೆ. ಆದರೆ ಎಂ.ಟೆಕ್ ಪದವಿಯಲ್ಲಿ ಅಭ್ಯಾಸ ಮಾಡುವಾಗ ಈ ಅವಕಾಶ ಇರಲಾರದು.

ಸಂಧ್ಯಾ, ನಮೃತಾ
*ನಾನು ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಬಿ.ಇ ಮುಗಿಸಿದ್ದೇನೆ. ನನಗೆ ಇದು ಕಷ್ಟವೆನಿಸಿ ಮುಂದೆ ನನಗೆ ಇಷ್ಟವಾದ ಗಣಿತ ವಿಷಯದಲ್ಲಿ ಎಂ.ಎಸ್ಸಿ ಮಾಡುವ ಯೋಚನೆ ಇದೆ. ಇದು ಸರಿಯೇ?

– ಯಾವುದೇ ವಿಷಯವನ್ನು ವಿದ್ಯಾಭ್ಯಾಸಕ್ಕೆ ಆಯ್ಕೆ ಮಾಡಿಕೊಳ್ಳುವ ಮೊದಲೇ ಯೋಚಿಸಿ ಆಸಕ್ತಿಗೆ ಅನುಗುಣವಾದ ವಿಷಯವನ್ನೇ ಅಧ್ಯಯನ ಮಾಡಬೇಕು. ಆದರೆ ಕಂಪ್ಯೂಟರ್‌ ವಿಜ್ಞಾನದಲ್ಲಿ ಪದವಿ ಪಡೆದಿರುವ ನೀವು ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ನೇರವಾಗಿ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಅದರ ಹೊರತಾಗಿ ದೂರಶಿಕ್ಷಣದ ಮೂಲಕ ಅಭ್ಯಾಸ ಮಾಡಿ. ನೀವು ಪದವಿಯನ್ನು ಗಳಿಸಬಹುದು.

ಯತೀಶ್, ತುಮಕೂರು
*ನಾನು ದ್ವಿತೀಯ ಪಿ.ಯು ವಿಜ್ಞಾನ ಓದುತ್ತಿದ್ದೇನೆ. ದಯಮಾಡಿ ನನಗೆ 5 ವರ್ಷಗಳ ಎಂ.ಎಸ್ಸಿ ಕುರಿತು ಮಾಹಿತಿ ಒದಗಿಸಿ ಕೊಡಿ.

–ಪಿ.ಯು.ಸಿ ನಂತರ ಐದು ವರ್ಷಗಳ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ವಿಜ್ಞಾನ ವಿಷಯಗಳಲ್ಲಿ ಪಡೆಯಲು ಕೇಂದ್ರ ಸರಕಾರವು ಸ್ಥಾಪಿಸಿರುವ  ISERS (Indian Institute of Science Education and Research) ಸಂಸ್ಥೆಗಳಲ್ಲಿ ಅವಕಾಶ ಇರುತ್ತದೆ. ಇದಕ್ಕೆ ನೀವು ಪಿ.ಯು.ಸಿ ಪದವಿ ಪೂರ್ವ ಶಿಕ್ಷಣ ಮಂಡಳಿಯ ವಾರ್ಷಿಕ ಪರೀಕ್ಷೆಯ ನಂತರ ಜೆ.ಇ.ಇ ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಅಂಕಗಳು ಅಥವಾ  KVPY ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ ಅಥವಾ ಪದವಿ ಪೂರ್ವ ಮಂಡಳಿಯ ಪರೀಕ್ಷೆಯಲ್ಲಿ ಟಾಪರ್ ಆಗಿದ್ದರೆ  ಪ್ರವೇಶ ಪಡೆಯುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲ ತಾಣ http://www.iisermohali.ac.in/ ಭೇಟಿಕೊಡಿ

ಸೂರ್ಯ ಶೆಟ್ಟಿ, ಮಂಗಳೂರು
*ನಾನು ದ್ವಿತೀಯ ಪಿ.ಯು. ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದೇನೆ. ಹತ್ತನೇ ತರಗತಿ ಓದುತ್ತಿದ್ದಾಗ ಕಾರ್ ವಿನ್ಯಾಸದ ಬಗ್ಗೆ ಆಸಕ್ತಿ ಹುಟ್ಟಿ ಮುಂದೆ ಎಂಜಿನಿಯರಿಂಗ್ ಮಾಡಬೇಕೆಂದು ಕನಸು ಕಂಡಿದ್ದೇನೆ. ಈಗಾಗಲೇ ಬ್ಲೆಂಡರ್ ಎಂಬ 3ಡಿ ಪ್ರೋಗ್ರಾಮ್ ಕಲಿತಿದ್ದೇನೆ.  ಕಾರ್ ವಿನ್ಯಾಸ ಮಾಡಬಲ್ಲೆ. ಹಾಗಾಗಿ ನಾನು ಮುಂದೆ ಎಂಜಿನಿಯರಿಂಗ್‌ನಲ್ಲಿ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು. ಜೊತೆಗೆ ಮುಂದಿರುವ ಉದ್ಯೋಗಾವಕಾಶಗಳ ಕುರಿತಾಗಿಯೂ ಮಾಹಿತಿ ನೀಡಿ.

– ತಾಂತ್ರಿಕ ಪದವಿಗೆ ನೀವು ಮೆಕ್ಯಾನಿಕಲ್ ಅಥವಾ ಆಟೋಮೊಬೈಲ್ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಕಾರುಗಳ ಉತ್ಪಾದನೆ ಮಾಡುವ ಅನೇಕ ಹೆಸರಾಂತ ದೇಶೀಯ ಮತ್ತು ವಿದೇಶೀಯ ಸಂಸ್ಥೆಗಳು ಭಾರತದಲ್ಲಿ ಇವೆ. ಅವುಗಳಲ್ಲಿ ಕೆಲವೆಂದರೆ,  TATA, Maruthi Suzuki, Toyota, Hundai, Ford, General Motors, Mahindra & Mahindra ಇತ್ಯಾದಿ. ಈ ಸಂಸ್ಥೆಗಳಲ್ಲಿ ವಿಪುಲವಾದ ಉದ್ಯೋಗಾವಕಾಶಗಳು ಇರುತ್ತವೆ.

ಶಿಲ್ಪ ಎಸ್.
*ನಾನು ಇ.ಸಿ.ಇ. ವಿಚಾರದಲ್ಲಿ ಬಿ.ಇ. ಮುಗಿಸಿದ್ದೇನೆ. ಇದೇ ಕ್ಷೇತ್ರದಲ್ಲಿ ಒಂದು ವರ್ಷದ ಅನುಭವವೂ ಇದೆ. ಆದರೆ ನನಗೆ ಇದಕ್ಕಿಂತ ನಿರ್ವಹಣಾ ಕ್ಷೇತ್ರ ಹೆಚ್ಚು ಇಷ್ಟದಾಯಕವಾಗಿದೆ. ರಚನಾತ್ಮಕವಾಗಿ ಯೋಚಿಸುವ ಕಲೆ, ಉತ್ತಮವಾಗಿ ಮಾತನಾಡುವ ಕಲೆ, ಉತ್ತೇಜನ ನೀಡುವಿಕೆ ಇನ್ನಿತರ ವಿಶೇಷ ಜ್ಞಾನ ಇದೆ. ಆದ್ದರಿಂದ ನಾನು ಎಂ.ಬಿ.ಎ. ಮಾಡಬೇಕೆಂದಿದ್ದೇನೆ. ಇದರಲ್ಲಿ ಯಾವ ವಿಷಯ ತೆಗೆದುಕೊಳ್ಳಬೇಕೆಂದು ತಿಳಿಯುತ್ತಿಲ್ಲ. .

– ನಿಮ್ಮ ಆಸಕ್ತಿಗೆ ಅನುಗುಣವಾದ ಎಂ.ಬಿ.ಎ. ವಿಷಯವನ್ನು ತೆಗೆದುಕೊಳ್ಳುವುದು ಒಳ್ಳೆಯದು. ಆದರೂ ನೀವು ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಗೆ ಭೇಟಿ ನೀಡಿ, ಅಲ್ಲಿನ ಪ್ರಾಧ್ಯಾಪಕರಲ್ಲಿ ವಿಚಾರ ಮಾಡಿ ಸಲಹೆ ಪಡೆಯುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT