ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸೂತಿ ಸೌಲಭ್ಯಗಳ ಅನ್ವಯ-2

ನಿಮಗಿದು ತಿಳಿದಿರಲಿ
ಅಕ್ಷರ ಗಾತ್ರ

ಮಹಿಳಾ ಕಾರ್ಮಿಕರಿಗೆ ಪ್ರಸೂತಿ ಸೌಲಭ್ಯವಾಗಿ 12 ವಾರಗಳ ಮಜೂರಿಯನ್ನು ಸಂದಾಯ ಮಾಡಲಾಗುತ್ತದೆ. ಈ ಮಜೂರಿಯನ್ನು ಲೆಕ್ಕ ಹಾಕುವುದು ಹಿಂದೆ ಹೇಳಿದಂತೆ ರಜೆ ಹೋಗುವ ಹಿಂದಿನ ಮೂರು ತಿಂಗಳ ಮಜೂರಿಯ ಸರಾಸರಿಯ ಆಧಾರದ ಮೇಲೆ ಲೆಕ್ಕ ಹಾಕಿದ ಸರಾಸರಿ ದೈನಿಕ ಮಜೂರಿಯ ಆಧಾರದ ಮೇಲೆ.

12 ವಾರಗಳ ಮಜೂರಿಯನ್ನು ಲೆಕ್ಕ ಹಾಕುವಾಗ ವಾರಕ್ಕೆ ಆರು ದಿನಗಳ ಲೆಕ್ಕದಲ್ಲಿ ಮಜೂರಿ ಸಂದಾಯ ಮಾಡಿದುದನ್ನು ವಿರೋಧಿಸಿ ವಾರಕ್ಕೆ ಏಳು ದಿನಗಳ ಲೆಕ್ಕದಲ್ಲಿ ಮಜೂರಿಯನ್ನು ಸಂದಾಯ ಮಾಡಬೇಕೆಂಬ ನೆಡುತೋಪುಗಳ ಪರಿವೀಕ್ಷಕರ ಆದೇಶವನ್ನು ಪ್ರಶ್ನಿಸಿ ನೆಡುತೋಪು ಮಾಲೀಕರು ಕೇರಳ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿಯನ್ನು ಸಲ್ಲಿಸಿದರು. ಉಚ್ಚ ನ್ಯಾಯಾಲಯದ ಪೂರ್ಣ ಪೀಠ ಕಾನೂನಿನ ಅಕ್ಷರಶಃ ವ್ಯಾಖ್ಯಾನಕ್ಕೆ ಕಟ್ಟು ಬಿದ್ದು ವಾರಕ್ಕೆ ಆರು ದಿನಗಳ ಲೆಕ್ಕದಲ್ಲೇ ಮಜೂರಿ ಸಂದಾಯ ಮಾಡಬೇಕೆಂದು ತೀರ್ಪು ನೀಡಿತು.

ಆದರೆ ಇಂಥದ್ದೇ ಇನ್ನೊಂದು ಪ್ರಕರಣದಲ್ಲಿ ಇದೇ ಪ್ರಶ್ನೆ ಉಂಟಾಯಿತು. ಬಿ. ಷಾ. ಎಂಬುವವರಿಗೆ ಸೇರಿದ ‘ಮೌಂಟ್ ಸ್ಟುವರ್ಟ್’ ಎಸ್ಟೇಟಿನಲ್ಲಿ ಪ್ರಸೂತಿ ರಜೆ ಪಡೆದ ಮಹಿಳೆಗೆ ರಜೆಯ ಹನ್ನೆರಡು  ವಾರಗಳಿಗೆ ವಾರಕ್ಕೆ ಆರು ದಿನಗಳಂತೆ ಲೆಕ್ಕ ಹಾಕಿ 72 ದಿನಗಳ ಮಜೂರಿಯನ್ನು ಸಂದಾಯ ಮಾಡಲಾಗಿತ್ತು.

ಈಕೆ, ವಾರಕ್ಕೆ ಏಳು ದಿನಗಳ ಲೆಕ್ಕದಲ್ಲಿ ತನಗೆ 84 ದಿನಗಳ ಮಜೂರಿಯನ್ನು ಸಂದಾಯ ಮಾಡಬೇಕೆಂದು ಕೋರಿ ಕೊಯಂಬತ್ತೂರಿನ ಕಾರ್ಮಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಳು. ಈ ನ್ಯಾಯಾಲಯ ಆಕೆಯ ಬೇಡಿಕೆ ನ್ಯಾಯಬದ್ಧವಾಗಿದೆಯೆಂದು ಅಭಿಪ್ರಾಯಪಟ್ಟು ಆಕೆಯ ಪರವಾಗಿ ಎಂದರೆ ವಾರಕ್ಕೆ ಏಳು ದಿನಗಳೆಂದು ಪರಿಗಣಿಸಿ ಆಕೆಗೆ 84 ದಿನಗಳ ಮಜೂರಿಯನ್ನು ಸಂದಾಯ ಮಾಡಬೇಕೆಂದು ತೀರ್ಪು ನೀಡಿತು. ಆದರೆ ಮಾಲೀಕರು ಇದನ್ನೊಪ್ಪದೆ ಉಚ್ಚ ನ್ಯಾಯಾಲಯಕ್ಕೆ ಅಪೀಲು ಹೂಡಿದರು. ಉಚ್ಚ ನ್ಯಾಯಾಲಯವೂ ಸಹ ಕಾರ್ಮಿಕ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿಯಿತು. ಇದರ ವಿರುದ್ಧ ಮಾಲೀಕರು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದರು.

ಸರ್ವೋಚ್ಚ ನ್ಯಾಯಾಲಯ ಈ ಪ್ರಕರಣದಲ್ಲಿ ‘ವಾರ’ ಎಂಬುದಕ್ಕೆ ವಿವರವಾದ ವ್ಯಾಖ್ಯಾನವನ್ನು ನೀಡಿತು. ವಾರ ಎಂಬುದನ್ನು ಏಳು ದಿನಗಳ ಒಂದು ಆವರ್ತ ಎಂಬುದಾಗಿ ಪರಿಗಣಿಸಬೇಕು. ಆದ್ದರಿಂದ ಪ್ರಸೂತಿ ಸೌಲಭ್ಯವನ್ನು ಆ ಇಡೀ ಅವಧಿಗೆ ಎಂದರೆ ಹನ್ನೆರಡು ವಾರಗಳಲ್ಲಿ ಬರುವ ಭಾನುವಾರಗಳು ಮತ್ತು ಕಾನೂನಿನ ಮೂಲಕ ಘೋಷಣೆಯಾದ ರಜಾ ದಿನಗಳಿಗೂ ಸಹ ಕೊಡಬೇಕು. ಮಹಿಳಾ ಕಾರ್ಮಿಕರಿಗೆ ಸೌಲಭ್ಯ ಒದಗಿಸುವ ಇಂಥ ಕಾನೂನಿನ ಉದ್ದೇಶ ಸಾಮಾಜಿಕ ನ್ಯಾಯವನ್ನು ಸಾಧಿಸುವುದಾಗಿರುತ್ತದೆ ಮತ್ತು ಇದು ಸಂವಿಧಾನದ 42ನೇ ಅನುಚ್ಛೇದದ ಆಶಯವೂ ಸಹ ಆಗಿದೆ.

ನೌಕರರಿಗೆ ನ್ಯಾಯಯುತವಾದ ಮತ್ತು ಮಾನವೀಯ ವಾದ ಕೆಲಸದ ಪರಿಸರವನ್ನು ಸೃಷ್ಟಿಸುವುದು ಮತ್ತು ಪ್ರಸೂತಿ ಸೌಲಭ್ಯವನ್ನು ಕಲ್ಪಿಸುವುದು ಈ ಅನುಚ್ಛೇದದ ಆಶಯ. ಆದ್ದರಿಂದ, ರಜೆ ಹೋಗುವುದಕ್ಕೆ ಮುನ್ನ ಇದ್ದ ಮಟ್ಟದಲ್ಲಿಯೇ ಅವಳ ಕಾರ್ಯ ದಕ್ಷತೆಯನ್ನು  ಕಾಪಾಡಲು ಮತ್ತು ತನ್ನ ಹಾಗೂ ತನ್ನ ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವಂತೆ ಸೌಲಭ್ಯ ಕಲ್ಪಿಸುವ ಕಾನೂನನ್ನು ಅವಳಿಗೆ ಅನುಕೂಲವಾಗುವಂತೆ ವ್ಯಾಖ್ಯಾನಿಸುವುದು ಅಗತ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿತು. (ಬಿ.ಷಾ ವಿ ಕೊಯಂಬತ್ತೂರು ಕಾರ್ಮಿಕ ನ್ಯಾಯಾಲಯ).

ಮತ್ತೊಂದು ಪ್ರಕರಣದಲ್ಲಿ (ದೆಹಲಿ ಪುರಸಭೆ ವಿ ಮಹಿಳಾ ನೌಕರರು, 8 ಮಾರ್ಚ್, 2000) ಪ್ರಸೂತಿ ಸೌಲಭ್ಯವನ್ನು ತಾತ್ಕಾಲಿಕ (ಕ್ಯಾಷ್ಯುಯಲ್) ಮತ್ತು ದಿನಗೂಲಿ ನೌಕರರಿಗೂ ಅನ್ವಯಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಈ ತೀರ್ಪಿನಿಂದ ತಾತ್ಕಾಲಿಕ ಅಥವಾ ದಿನಗೂಲಿ ನೌಕರರೆಂಬ ಕಾರಣಕ್ಕಾಗಿ ಪ್ರಸೂತಿ ಸೌಲಭ್ಯದಿಂದ ವಂಚಿತರಾದ ಅಧಿಕ ಸಂಖ್ಯೆ ಮಹಿಳೆಯರಿಗೆ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT