ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣ್ ಕುಮಾರ್ ಶರ್ಮ

ವ್ಯಕ್ತಿ ಸ್ಮರಣೆ: ಕಾಮಿಕ್ಸ್ ಜಗತ್ತಿನ ‘ಚಾಚಾ’
Last Updated 9 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಭಾರತೀಯ ಕಲಾಪ್ರಪಂಚದಲ್ಲಿ ಇಬ್ಬರು ಪ್ರಾಣ್‌ಗಳು. ಒಬ್ಬರು ಹಿಂದಿ ಚಿತ್ರರಂಗದ ಮಹಾನ್‌ ಕಲಾವಿದರಲ್ಲಿ ಒಬ್ಬರಾದ ಪ್ರಾಣ್‌. ಮತ್ತೊಬ್ಬರು ಕಾರ್ಟೂನಿಗ ಪ್ರಾಣ್‌. 2013ರ ಜುಲೈನಲ್ಲಿ ನಟ ಪ್ರಾಣ್‌ ಅವರು ಕೊನೆಯುಸಿರೆಳೆದಾಗ, ಆ ಸುದ್ದಿಯನ್ನು ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತ ಕಾರ್ಟೂನಿಸ್ಟ್‌ ಪ್ರಾಣ್‌ ಪತ್ರಿಕೆಯಲ್ಲಿ ಓದಿದ್ದರು. ಮತ್ತೊಬ್ಬ ಪ್ರಾಣ್‌ ಕೂಡ ಸರದಿಯಲ್ಲಿದ್ದಾನೆ ಎಂದು ಅವರಿಗನ್ನಿಸಿತ್ತು. ‘ನಿಮ್ಮ ಕಾರ್ಟೂನ್‌ಗಳನ್ನು ನೋಡಿ ಬೆಳೆದವನು ನಾನು. ನೀವು ನನ್ನ ಹೀರೊ. ನಿಮ್ಮನ್ನು ಬಿಟ್ಟುಕೊಡುವುದಿಲ್ಲ’ ಎಂದು ವೈದ್ಯರು ಭರವಸೆಯ ಮಾತುಗಳನ್ನಾಡಿದ್ದರು. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡ ಪ್ರಾಣ್‌ ಮನೆಗೆ ಮರಳಿದ್ದರು. ಅದಾಗಿ, ಒಂದು ವರ್ಷವಾಗಿದೆ. ವರ್ಷದ ಅಂತರದಲ್ಲಿ ಭಾರತೀಯ ಕಲಾಪ್ರಪಂಚ ಮತ್ತೊಬ್ಬ ಪ್ರಾಣ್‌ರನ್ನೂ ಕಳೆದುಕೊಂಡಿದೆ.

ಪ್ರಾಣ್ ಕುಮಾರ್ ಶರ್ಮ (ಆಗಸ್ಟ್ 15, 1938 – ಆಗಸ್ಟ್ 5, 2014) ಅವರ ಬಗ್ಗೆ ಮಾತನಾಡುವಾಗ ಮೊದಲಿಗೆ ನೆನಪಿಸಿಕೊಳ್ಳಬೇಕಾದುದು ಚಾಚಾ ಚೌಧರಿಯನ್ನು. ಭಾರತೀಯ ಕಾಮಿಕ್ಸ್ ವಲಯದಲ್ಲಿ ಫ್ಯಾಂಟಮ್‌ ಮತ್ತು ಸೂಪರ್‌ಮ್ಯಾನ್‌ಗಳ ಪ್ರಭಾವಳಿ ತುಂಬಿಕೊಂಡಿದ್ದಾಗ, ಚಾಚಾ ಚೌಧರಿ ಎನ್ನುವ ಅಪ್ಪಟ ದೇಸಿ ಕಾಮಿಕ್ಸ್‌ ಪಾತ್ರವನ್ನು ಪ್ರಾಣ್‌ ಸೃಷ್ಟಿಸಿದ್ದರು. ಈ ದೇಸಿ ಹೀರೊ ತನ್ನ ಸೃಷ್ಟಿಕರ್ತನ ನಿರೀಕ್ಷೆಯನ್ನೂ ಮೀರಿ ಜನಪ್ರಿಯಗೊಂಡಿದ್ದು ಈಗ ಇತಿಹಾಸ. ಅನೇಕರು ವಿಶ್ಲೇಷಿಸುವಂತೆ, ಚಾಚಾನ ಸೃಷ್ಟಿ ಫ್ಯಾಂಟಮ್‌ ಅಥವಾ ಜೇಮ್ಸ್ ಬಾಂಡ್‌ 007ಗೆ ಭಾರತದ ಉತ್ತರ. ಈ ಹಿನ್ನೆಲೆಯಲ್ಲಿ ‘ದೇಸಿ ಕಾಮಿಕ್ಸ್‌ನ ಜನಕ’ ಎಂದು ಪ್ರಾಣ್‌ರನ್ನು ಅಭಿಮಾನದಿಂದ ಕರೆಯಬಹುದು. ಒಂದರ್ಥದಲ್ಲಿ ಈ ಚಾಚಾನ ವ್ಯಕ್ತಿತ್ವ ಪ್ರಾಣ್‌ ಅವರಿಗೆ ಹೊಂದುವಂತಹದ್ದು. ಭಾರತೀಯ ಕಾಮಿಕ್ಸ್‌ ವಲಯದಲ್ಲಿ ಪ್ರಾಣ್‌ ಅವರಿಗೆ ‘ಚಾಚಾ’ನ ಸ್ಥಾನ.

‘ಜನರನ್ನು ಅಳಿಸಿದಷ್ಟು ಸುಲಭವಾಗಿ ನಗಿಸಲು ಸಾಧ್ಯವಿಲ್ಲ. ಅದರಲ್ಲೂ ಪ್ರತಿದಿನವೂ ನಗಿಸುವುದು ಮತ್ತೂ ಸವಾಲಿನ ಸಂಗತಿ. ವರ್ಷದಿಂದ ವರ್ಷಕ್ಕೆ ನಗುವನ್ನು ಹಂಚಿಕೊಂಡು ಬರುವುದು ಮತ್ತೂ ಕಷ್ಟದ ಕೆಲಸ’ ಎಂದು ನಂಬಿದ್ದ ಪ್ರಾಣ್‌, ನಗೆ ಹಂಚುವ ಕೆಲಸವನ್ನು ದಶಕಗಳ ಕಾಲ ಯಶಸ್ವಿಯಾಗಿ ನಿಭಾಯಿಸಿದ್ದು ಅವರ ಬಹುದೊಡ್ಡ ಸಾಧನೆ. ಅಂದಹಾಗೆ, ಪ್ರಾಣ್‌ ಅವರ ತವರು ಈಗ ಪಾಕಿಸ್ತಾನದಲ್ಲಿರುವ ಕಸೂರ್‌ ಎನ್ನುವ ಪುಟ್ಟ ಪಟ್ಟಣ. ಭಾರತ–ಪಾಕಿಸ್ತಾನ ವಿಭಜನೆ ನಂತರ ಪ್ರಾಣ್‌ ಅವರ ಕುಟುಂಬ ಭಾರತದ ಗ್ವಾಲಿಯರ್‌ಗೆ ಬಂದು ನೆಲೆಸಿತು. ಪ್ರಾಣ್‌ ಅವರು ಮೊದಲಿಗೆ ಸ್ನಾತಕೋತ್ತರ ಪದವಿ ಪಡೆದುದು ರಾಜ್ಯಶಾಸ್ತ್ರ ವಿಷಯದಲ್ಲಿ. ಆನಂತರ ಮುಂಬಯಿಯ ‘ಜೆ.ಜೆ. ಸ್ಕೂಲ್‌ ಆಫ್‌ ಆರ್ಟ್ಸ್‌’ನಿಂದ ಪದವಿ ಪಡೆದರು.

ಕಾರ್ಟೂನ್‌ಗಳ ಬಗ್ಗೆ ಶಾಲಾ ದಿನಗಳಿಂದಲೇ ಪ್ರಾಣ್‌ ಅವರಿಗೆ ಒಲವಿತ್ತು. ಕಾಲೇಜ್‌ ಮ್ಯಾಗಜಿನ್‌ಗಳಲ್ಲಿ ಅವರ ಕೆಲವು ಕಾರ್ಟೂನ್‌ಗಳು ಪ್ರಕಟಗೊಂಡಿದ್ದವು. ಆದರೆ, ತಾನೊಬ್ಬ ವೃತ್ತಿಪರ ಕಾರ್ಟೂನಿಸ್ಟ್‌ ಆಗಬೇಕು ಎಂದವರು ಕನಸು ಕಂಡವರಲ್ಲ. ತನ್ನ ಓರಗೆಯ ಯುವಕರಂತೆ ಸುಭದ್ರವಾದ ಭವಿಷ್ಯವನ್ನು ಬಯಸಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಹುಶಃ, ಪ್ರಾಣ್‌ ಅವರಿಗೇ ತಿಳಿಯದಂತೆ ಅವರೊಳಗೊಬ್ಬ ಬಂಡುಕೋರ ಇರಬೇಕು. ಆ ಬಂಡುಕೋರ ಮನಸ್ಥಿತಿಯೇ ಕಾರ್ಟೂನ್‌ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂದು ಅವರಿಗನ್ನಿಸಲು ಕಾರಣವಾಗಿರಬೇಕು. ಆದರೆ, ಡೊಂಕು ರೇಖೆಗಳೊಂದಿಗಿನ ಸಖ್ಯದ ದಾರಿ ಸಲೀಸಾಗಿರಲಿಲ್ಲ. ‘ಕಾರ್ಟೂನ್‌ ರಚಿಸುವುದನ್ನೇ ನನ್ನ ವೃತ್ತಿಯಾಗಿಸಿಕೊಳ್ಳುತ್ತೇನೆ’ ಎಂದು ಪ್ರಾಣ್‌ ಹೇಳಿದಾಗ, ಮನೆ ಮಂದಿ ಬೆಚ್ಚಿಬಿದ್ದಿದ್ದರು. ಮಗ ಸರ್ಕಾರಿ ನೌಕರಿ ಹುಡುಕಿಕೊಂಡು ನೆಮ್ಮದಿಯಾಗಿರಲಿ ಎನ್ನುವುದು ಪೋಷಕರ ಹಂಬಲವಾಗಿತ್ತು.

ಕಾರ್ಟೂನಿಸ್ಟ್‌ ಆಗುವ ದಾರಿಯಲ್ಲಿ ಪ್ರಾಣ್‌ ಸಾಕಷ್ಟು ಸೈಕಲ್‌ ತುಳಿದರು. ಕಂಪ್ಯೂಟರ್‌ ಇಲ್ಲದ ದಿನಗಳಲ್ಲಿ, ಕಾಗದದ ಮೇಲೆ ಕಾಮಿಕ್ಸ್ ಸ್ಟ್ರಿಪ್‌ಗಳನ್ನು ರೂಪಿಸುವುದು ಹೆಚ್ಚು ಸಮಯ ಬೇಡುವ ಶ್ರಮದಾಯಕ ಕೆಲಸವಾಗಿತ್ತು. ಆದರೆ, ಈ ಕೆಲಸಕ್ಕೆ ದೊರೆಯುತ್ತಿದ್ದ ಸಂಭಾವನೆ ತೀರಾ ಕಡಿಮೆಯಿತ್ತು. ತಾವು ರಚಿಸಿದ ಕಾರ್ಟೂನ್‌ – ಕಾಮಿಕ್ಸ್‌ಗಳನ್ನು ಪತ್ರಿಕೆಗಳಿಗೆ ತಲುಪಿಸುವ ಕೆಲಸವನ್ನು ಆರಂಭದಲ್ಲಿ ಸ್ವತಃ ಪ್ರಾಣ್‌ ಅವರೇ ಮಾಡುತ್ತಿದ್ದರು. ಸೈಕಲ್‌ ತುಳಿದುಕೊಂಡು ಪತ್ರಿಕೆಯಿಂದ ಪತ್ರಿಕೆಗೆ ಅಲೆಯುತ್ತಿದ್ದ ಅವರ ಅನುಭವ ಚಿತ್ರಗಳನ್ನು ಕಾಮಿಕ್ಸ್‌ ಕಥನಗಳಲ್ಲೂ ಕಾಣಬಹುದು.

ಪ್ರಾಣ್‌ ಅವರ ವೃತ್ತಿಬದುಕು ಆರಂಭವಾದುದು 1960ರಲ್ಲಿ; ‘ಮಿಲಾಪ್‌’ ಎನ್ನುವ ಪತ್ರಿಕೆಯ ಮೂಲಕ. 1969ರಲ್ಲಿ ಅವರು ಚಾಚಾ ಚೌಧರಿ ಸೃಷ್ಟಿಸಿದರು. ಆರಂಭದಲ್ಲಿ ಅದು ಪ್ರಕಟಗೊಂಡಿದ್ದು ‘ಲಟಪಟ್‌’ ಎನ್ನುವ ಹಿಂದಿ ನಿಯತಕಾಲಿಕದಲ್ಲಿ. ಕಾರ್ಟೂನಿಸ್ಟ್‌ ಆಗಲು ಹೊರಟ ಪ್ರಾಣ್‌ ಅವರಿಗೆ ಎರಡು ಸಂಗತಿಗಳು ಸ್ಪಷ್ಟವಾಗಿದ್ದವು. ಆ ವೇಳೆಗಾಗಲೇ ಜನಪ್ರಿಯರಾಗಿದ್ದ ಕಾರ್ಟೂನಿಗರಂತೆ ತಾನು ಕೂಡ ರಾಜಕಾರಣ ಅಥವಾ ಸಾಮಾಜಿಕ ಸಮಸ್ಯೆಗಳನ್ನು ಆಧರಿಸಿ ಚಿತ್ರ ರಚಿಸಬಾರದು ಎನ್ನುವುದು ಮೊದಲ ಸಂಗತಿ. ಈ ನಿಟ್ಟಿನಲ್ಲಿ ಅವರು ಆರಿಸಿಕೊಂಡಿದ್ದು ನಗಿಸುವ ದಾರಿಯನ್ನು. ಎರಡನೆಯ ನಿರ್ಧಾರ, ಅಪ್ಪಟ ಭಾರತೀಯ ಸಂವೇದನೆಯನ್ನೇ ತನ್ನ ಚಿತ್ರಗಳು ಹೊಂದಿರಬೇಕು ಎನ್ನುವುದು.

ಭಾರತೀಯ ಸಂವೇದನೆಯನ್ನು ಕಾಮಿಕ್ಸ್‌ಗಳಲ್ಲಿ ಅಭಿವ್ಯಕ್ತಿಸುವ ನಿಟ್ಟಿನಲ್ಲಿ ಪ್ರಾಣ್‌ ಆರಿಸಿಕೊಂಡ ದಾರಿ ಕುತೂಹಲಕರವಾದುದು. ಅವರ ಮುಂದೆ ಸುಲಭಕ್ಕೆ ದೊರೆಯುವ ಪುರಾಣದ ಪಾತ್ರಗಳು ಸಾಕಷ್ಟಿದ್ದವು. ಆದರೆ, ಪ್ರಾಣ್‌ ಜನಸಾಮಾನ್ಯರ ಬದುಕುಗಳಿಂದಲೇ ತಮ್ಮ ಪಾತ್ರಗಳನ್ನು ಹೆಕ್ಕಿಕೊಂಡರು. ಕಂಪ್ಯೂಟರ್‌ಗಿಂತಲೂ ವೇಗವಾಗಿ ಯೋಚಿಸಬಲ್ಲ, ಕಾರ್ಯ ನಿರ್ವಹಿಸಬಲ್ಲ ಚಾಚಾ ಚೌಧರಿಯನ್ನೇ ನೋಡಿ; ಈ ಅಂಕಲ್‌ ಇತರ ಸೂಪರ್‌ ಹೀರೊಗಳಂತೆ ಚೆಲುವ ಚೆನ್ನಿಗನಲ್ಲ; ಮನೆಯ ಹಿರೀಕನನ್ನು ಹೋಲುವ ಚಾಚಾನಿಗೆ ಬುದ್ಧಿಶಕ್ತಿ ಮತ್ತು ಸಮಯಸ್ಫೂರ್ತಿಯೇ ಪ್ರಮುಖ ಶಕ್ತಿ. ಚೌಧರಿಗಿಂತಲೂ ಮೊದಲು ರೂಪುಗೊಂಡ ಶ್ರೀಮತಿ ಕೂಡ ನಮ್ಮ ನಡುವಿನ ಗೃಹಿಣಿಯರನ್ನು ಹೋಲುವಂತಹ ಹೆಣ್ಣುಮಗಳೇ. ಪಿಂಕಿ, ಬಿಲ್ಲೂ, ರಾಮನ್‌, ಪುಟ್ಟಿ– ಇವರೆಲ್ಲ ನಮ್ಮ ಬಾಲ್ಯದ ಗೆಳೆಯರು ಎನ್ನುವಂತಾಗಿರುವುದು ಪ್ರಾಣ್‌ ಅವರ ಕಾಮಿಕ್ಸ್‌ಗಳ ಜೀವಂತಿಕೆಗೆ ಉದಾಹರಣೆ.

ಅಂದಹಾಗೆ, ಅಷ್ಟೊಂದು ಐಡಿಯಾಗಳು ಪ್ರಾಣ್ ಅವರಿಗೆ ಬರುತ್ತಿದ್ದುದಾದರೂ ಹೇಗೆ? ಬೆಳಿಗ್ಗೆ 5.30ರ ವೇಳೆಗೆ ಅವರ ವಾಯುವಿಹಾರ ಶುರುವಾಗುತ್ತಿತ್ತು, ಈ ನಡಿಗೆಯ ಸಮಯದಲ್ಲೇ ಹೊಸ ಹೊಸ ಐಡಿಯಾಗಳು ಹೊಳೆಯುತ್ತಿದ್ದವಂತೆ. ಮನೆಗೆ ಮರಳಿದವರು ಕಿರು ಉಪಹಾರ ಮುಗಿಸಿದರೆಂದರೆ, ಕಾಗದದ ಮೇಲೆ ಐಡಿಯಾಗಳು ಜೀವತಾಳುತ್ತಿದ್ದವು. ಹೊಸ ಜಗತ್ತಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವುದು ಅವರ ಕಾಮಿಕ್ಸ್‌ಗಳ ಜನಪ್ರಿಯತೆಗೆ ಕಾರಣವೊಂದಾಗಿತ್ತು. ಆ ಕಾರಣದಿಂದಲೇ ಕಂಪ್ಯೂಟರ್‌, ಮೊಬೈಲ್‌ ಫೋನ್‌, ಫೇಸ್‌ಬುಕ್‌ಗಳು ಕೂಡ ಅವರ ಕಾಮಿಕ್ಸ್‌ ಕಥನಗಳ ಭಾಗವಾದುದು ಹಾಗೂ ಅವರು ಇಂದಿನ ಮಕ್ಕಳಿಗೂ ಪರಿಚಿತರಾಗಿರುವುದು ಸಾಧ್ಯವಾಗಿದೆ.

‘ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಟೂನಿಸ್ಟ್ಸ್‌’ ಬಳಗದಿಂದ ಜೀವಮಾನದ ಸಾಧನೆಗೆ ಪ್ರಶಸ್ತಿ, ಲಿಮ್ಕಾ ದಾಖಲೆ ಪುಸ್ತಕದ ಗೌರವ ಸೇರಿದಂತೆ ಅನೇಕ ಗೌರವಗಳು ಪ್ರಾಣ್‌ ಅವರಿಗೆ ಸಂದಿವೆ. ಆದರೆ, ಅವರಿಗೆ ಸಂದ ಬಹುದೊಡ್ಡ ಗೌರವ– ಬಹುತೇಕ ಪ್ರಮುಖ ಭಾರತೀಯ ಪತ್ರಿಕೆಗಳು ಪ್ರಾಣ್‌ ಅವರ ಕಾಮಿಕ್ಸ್‌ಗಳನ್ನು ಬಳಸಿಕೊಂಡಿರುವುದು. 600ಕ್ಕೂ ಹೆಚ್ಚು ಕಾಮಿಕ್ಸ್‌ ಪುಸ್ತಕಗಳು ಅವರ ಹೆಸರಿನಲ್ಲಿವೆ. ಆಹ್ವಾನಿತರಾಗಿ ಅನೇಕ ದೇಶಗಳನ್ನು ಸುತ್ತಿ, ಉಪನ್ಯಾಸಗಳನ್ನು ನೀಡಿದ್ದರು.

ವಯೋ ಸಹಜ ದಣಿವಿನಿಂದಾಗಿ ಈಚಿನ ವರ್ಷಗಳಲ್ಲಿ ಪ್ರಾಣ್‌ ಅವರು ಸಹಾಯಕರ ನೆರವಿನಿಂದ ಕಾಮಿಕ್ಸ್‌ಗಳನ್ನು ರಚಿಸುತ್ತಿದ್ದರು. ಅವರು ಕರಡು ರಚಿಸಿ ಕೊಟ್ಟರೆ, ಸಹಾಯಕರು ಬಣ್ಣ ತುಂಬುತ್ತಿದ್ದರು. ಕಾರ್ಟೂನಿಸ್ಟ್‌ ಆಗುತ್ತೇನೆ ಎಂದು ಹೇಳಿಕೊಂಡಾಗ ಅಣಕವಾಡಿದ ಬಂಧುಮಿತ್ರರು, ನಂತರದ ದಿನಗಳಲ್ಲಿ ತಮ್ಮೊಂದಿಗೆ ಹೆಮ್ಮೆಯಿಂದ ಗುರ್ತಿಸಿಕೊಂಡಿದ್ದು ಕೂಡ ಅವರಿಗೆ ಖುಷಿಕೊಟ್ಟಿತ್ತು. ‘ಕಾರ್ಟೂನ್‌ಗಳನ್ನು, ಕಾರ್ಟೂನಿಸ್ಟ್‌ರನ್ನು ಮುಂದಿನ ತಲೆಮಾರಿಗೂ ಉಳಿಸುವ ಮ್ಯೂಸಿಯಂ ದೇಶದಲ್ಲಿ ಆರಂಭಗೊಳ್ಳ ಬೇಕು’ ಎನ್ನುವುದು ಅವರ ಕನಸುಗಳಲ್ಲೊಂದಾಗಿತ್ತು.

ಜನಸಾಮಾನ್ಯರ ಮುಖದಲ್ಲಿ ಕಿರುನಗೆಯನ್ನು ಮೂಡಿಸುವುದು ತಮ್ಮ ಬದುಕಿನ ಸಾರ್ಥಕತೆಯೆಂದು ನಂಬಿದ್ದ ಪ್ರಾಣ್‌, ಕಾಮಿಕ್ಸ್‌ ರಚಿಸುವುದು ಯಾವಾಗ ಸಾಧ್ಯವಾಗುವುದಿಲ್ಲವೋ ಅದು ತಮ್ಮ ಪಾಲಿಗೆ ಸಾವು ಎಂದು ಹೇಳಿದ್ದರು. ಕಾಮಿಕ್ಸ್‌ಗಳ ಮೂಲಕ ಜೀವಂತವಾಗಿ ಉಳಿಯುವ ಅವರ ಮಾತಿನ ಧ್ವನಿಯನ್ನು ಹಿಡಿಯುವುದಾದರೆ, ‘ಚಾಚಾ ಚೌಧರಿ’, ‘ಶ್ರೀಮತಿ’, ‘ರಾಮನ್‌’ ಪಾತ್ರಗಳಂತೆ ಪ್ರಾಣ್‌ ಅವರು ಕೂಡ ಚಿರಾಯು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT