ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಥಮಿಕ ಶಿಕ್ಷಣ: ಮಕ್ಕಳ ಸಮಯ ಲೆಕ್ಕಕ್ಕಿಲ್ಲವೇ?

Last Updated 10 ಫೆಬ್ರುವರಿ 2016, 19:48 IST
ಅಕ್ಷರ ಗಾತ್ರ

ಅಯ್ಯೋ ಪಾಪ! ಸರ್ಕಾರಿ ಶಾಲೆಯ ಬಡತಾಯಿ ಕನ್ನಡಮ್ಮನ ಮಕ್ಕಳು ಎಂಬ ಲೇವಡಿಯನ್ನು ಯಾವ ಸರ್ಕಾರದಿಂದಲಾದರೂ ಅಳಿಸಲು ಸಾಧ್ಯವೇ? ಅದು ಸಾಧ್ಯವಾದರೆ  ಮಾತ್ರ ಸರ್ಕಾರವು ಆಗಲೇ ಬೇಕಾದ್ದನ್ನು ಸಾಧಿಸಿದೆ ಎನ್ನಬಹುದು. ಇಲ್ಲವಾದರೆ ಸಾಧನೆಯ ಲೆಕ್ಕಾಚಾರ ಯಾಕೆ?

ಐದನೇ ತರಗತಿಗೆ ಬಂದರೂ ಎರಡನೇ ತರಗತಿಯ ಪುಸ್ತಕವನ್ನು ಓದಲು ಬಾರದ, ಏಳನೇ ತರಗತಿಯಲ್ಲಿದ್ದರೂ ಕಾಗುಣಿತ ತಿಳಿಯದ, ಒಂಬತ್ತನೇ ತರಗತಿಯಲ್ಲಿದ್ದವರಿಗೆ ಸರಿಯಾಗಿ ಕೂಡಿಸು- ಕಳೆ ಲೆಕ್ಕ ಗೊತ್ತಿಲ್ಲದ ಬಹುವ್ಯಾಪಕ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವೇ? ಇಂತಹ ಪರಿಸ್ಥಿತಿಯ ಮಕ್ಕಳು ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾಗಿ ಅನಕ್ಷಸ್ಥರ ಗುಂಪಿಗೆ ಸೇರುವುದನ್ನು ತಪ್ಪಿಸಲು ಸಾಧ್ಯವೇ? ಅವರ ‘ಬಾಲ್ಯದ ಸಮಯಕ್ಕೆ ಬೆಲೆ ಇಲ್ಲದಂತೆ’ ಮಾಡುವ ಚಾಲ್ತಿ ಶಿಕ್ಷಣ ವ್ಯವಸ್ಥೆಗೆ ಕಾಯಕಲ್ಪ ಸಾಧ್ಯವೇ?

‘ಸರ್ಕಾರಿ ಶಾಲೆಯಲ್ಲಿ ಎಲ್ಲವೂ ಇದೆ; ಶಿಕ್ಷಣ ಮಾತ್ರ ಇಲ್ಲ’ ಎಂಬ ಸಾರ್ವತ್ರಿಕ ದೂರು ಇದೆ. ‘ಅಲ್ಲಿ ನಮ್ಮ ಮಕ್ಕಳ ಸಮಯ ಹಾಳು’ ಎಂದು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಲು ಬಡ ಹೆತ್ತವರೂ ಅಂಜುತ್ತಾರೆ. ಈ ಅಂಜಿಕೆಯನ್ನು ಹೋಗಲಾಡಿಸಲು ಸಾಧ್ಯವೇ?  

ಇವೆಲ್ಲವೂ ಆಗಬೇಕಿದ್ದರೆ ಮುಂದಿನ ಕಠಿಣ ಪ್ರಶ್ನೆಗಳಿಗೆ ಉತ್ತರವಾಗಿ ‘ಸಾಧ್ಯ’ ಎನ್ನಬೇಕಾಗುತ್ತದೆ.

ಪ್ರಶ್ನೆಗಳು ಹೀಗಿವೆ: ಪ್ರಾಥಮಿಕ ವಿದ್ಯಾರ್ಥಿಗಳಿಗೆ ಈಗ ನೀಡುತ್ತಿರುವ ಎಲ್ಲಾ ಭಾಗ್ಯಗಳನ್ನು ಕೊಡುತ್ತಲೇ ತರಗತಿಗೊಬ್ಬರಂತೆ ಶಿಕ್ಷಕರ ಭಾಗ್ಯವನ್ನೂ ನೀಡಲು ಸರ್ಕಾರದಿಂದ ಸಾಧ್ಯವೇ?

ಮಕ್ಕಳ ದೈಹಿಕ ದೃಢತೆಗಾಗಿ ಶಾಲೆಗೊಬ್ಬರಂತೆ ದೈಹಿಕ ಶಿಕ್ಷಣ ಶಿಕ್ಷಕರನ್ನು ನೀಡಲು ಸಾಧ್ಯವೇ?

ಕಿರಿಯ ಪ್ರಾಥಮಿಕ ಹಂತದಲ್ಲಿ ಅಳವಡಿಸಿರುವ ನಲಿ-ಕಲಿ ವಿಧಾನದಲ್ಲಿ ಏನೊಂದೂ ಚ್ಯುತಿ ಇಲ್ಲದಂತೆ ಮಾಡಿ, ಅಂದರೆ ಪ್ರತಿ ತರಗತಿಗೆ ನಲಿ-ಕಲಿ ಪದ್ಧತಿಯಲ್ಲಿ ನುರಿತ ಶಿಕ್ಷಕರನ್ನು ಒದಗಿಸಿ, ಮಕ್ಕಳ ಕಲಿಕಾ ಪ್ರಕ್ರಿಯೆಗೆ ಭದ್ರ ಬುನಾದಿ ಹಾಕಲು ಸಾಧ್ಯವೇ?

ಮೂರನೇ ತರಗತಿಯ ತನಕ ಕ್ರಿಯಾತ್ಮಕ ಕಲಿಕೆ ನೀಡಿ ನಾಲ್ಕನೇ ತರಗತಿಯಿಂದ ಇರುವ ಬೋರ್ ಹೊಡೆಸುವಂತಹ ಪಾಠ ಪಟ್ಟಿಯನ್ನು ಬದಲಿಸಲು ಸಾಧ್ಯವೇ?

ಮಕ್ಕಳ ಪ್ರಗತಿಯ ಬಗ್ಗೆ ಲೆಕ್ಕ ಹಾಕಿ ಹೆತ್ತವರಿಗೆ ಹಿಮ್ಮಾಹಿತಿ ನೀಡಬೇಕಾದ ಶಿಕ್ಷಕರನ್ನು ಅಕ್ಕಿ ಬೇಳೆ ಲೆಕ್ಕದಿಂದ ಮುಕ್ತಗೊಳಿಸಲು ಸಾಧ್ಯವೇ?
‘ನಮ್ಮ ಬೇರೆಲ್ಲಾ ಹೊಣೆ ತಪ್ಪಿಸಿ ಶಾಲಾ ಮಕ್ಕಳೊಂದಿಗೆ ಇರಲು ಬಿಡಿ’ ಎನ್ನುವ ಶಿಕ್ಷಕರ ಅಭಿಲಾಷೆಯನ್ನು ಈಡೇರಿಸಲು ಸಾಧ್ಯವೇ? ಇದಕ್ಕಾಗಿ ಅಕ್ಷರ ದಾಸೋಹ, ಕ್ಷೀರಭಾಗ್ಯ ಮುಂತಾದ ಸೌಲಭ್ಯಗಳ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಿ ಶಿಕ್ಷಕರನ್ನು ಕಲಿಸುವ ಕೆಲಸಕ್ಕೇ ಬಿಡಲು ಸಾಧ್ಯವೇ?

ಎಲ್ಲಾ ಸರ್ಕಾರಿ ನೌಕರರು ಸರ್ಕಾರಿ ಶಾಲೆಗಳಿಗೇ ಮಕ್ಕಳನ್ನು ಸೇರಿಸಲು ಆಸಕ್ತಿ ಪಡುವಂತೆ ಮಾಡಿ, ‘ನಾನು ನನ್ನ ಸರ್ಕಾರಿ ಶಾಲೆಯ ಬಗ್ಗೆ ಹೆಮ್ಮೆ ಪಡುತ್ತೇನೆ’ ಎಂದು ವಿದ್ಯಾರ್ಥಿಗಳು ಹೇಳುವಂತೆ ನಮ್ಮ ಶಾಲೆಗಳನ್ನು ಉನ್ನತೀಕರಿಸಲು ಸಾಧ್ಯವೇ?

ಸಾಧಿಸಿದ್ದರೆ?:  ಇವುಗಳಲ್ಲಿ ಕನಿಷ್ಠ ಮೊದಲ ನಾಲ್ಕನ್ನು ಮಾಡಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು  ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರರು ಶಿಕ್ಷಣ ವ್ಯವಸ್ಥೆಗೆ ಏರುಗತಿ  ನೀಡಿದಂತಾಗುತ್ತಿತ್ತು.

ಪ್ರತಿಯೊಬ್ಬ ಶಿಕ್ಷಕನೂ ಶಾಲೆಯಲ್ಲಿದ್ದು ಪ್ರತಿ ಮಗುವಿಗೂ 6 ರಿಂದ 14 ವರ್ಷದ ವರೆಗೆ ಉತ್ತಮ ಗುಣಮಟ್ಟದ ಉಚಿತ ಪ್ರಾಥಮಿಕ ಶಿಕ್ಷಣ ನೀಡಬೇಕೆಂಬುದು ನಮ್ಮ ಸರ್ಕಾರದ ಘೋಷಿತ ನೀತಿ. ‘ಸಮಾನ ಶಿಕ್ಷಣ ನೀತಿ’ ಎಂಬ ಅಂಶ ಇಲ್ಲದಿರುವುದರಿಂದಲೋ ಏನೋ ಈ ಹಿಂದಿನ ಯಾವ ಸರ್ಕಾರಗಳೂ ಆ ಬಗ್ಗೆ ಯೋಚಿಸಿದಂತಿಲ್ಲ. ಹಾಗಾಗಿ ಈ ಮೊದಲೇ ತುಕ್ಕು ಹಿಡಿದ ಮಚ್ಚಿನಂತಾಗಿತ್ತು ನಮ್ಮ ಸರ್ಕಾರಿ ಶಿಕ್ಷಣ ವ್ಯವಸ್ಥೆ. ಸಾಲದ್ದಕ್ಕೆ ಖಾಸಗಿಯವರು ಇಂಗ್ಲಿಷ್ ಮಾಧ್ಯಮದ ಬೇಗಡೆ ಹಚ್ಚಿ ಅದಾಗಲೇ ಖಡ್ಗವನ್ನು ಝಳಪಿಸಲಾರಂಭಿಸಿದ್ದರು.

ವ್ಯಾಪಾರೀಕರಣಗೊಂಡ ಶಿಕ್ಷಣ ಕ್ಷೇತ್ರದಲ್ಲಿ ಬಂಡವಾಳ ಹೂಡಿ ಲಾಭ ಮಾಡಲು ಬೇರೆ ರಾಜ್ಯಗಳ ಕ್ಯಾಪಿಟಲಿಸ್ಟರೂ ಇಲ್ಲಿ ತಳವೂರಿದ್ದರು. ಇವರ ಬಲವರ್ಧನೆಗೆ ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಕೆಂಪುಗಂಬಳಿ ಹಾಸಿ ಸ್ವಾಗತಿಸಿದ್ದೂ ಒಂದು ಕಾರಣವಾಯಿತು. ಹಾಗಾಗಿ ಇತ್ತೀಚೆಗೆ ಕಣ್ಮರೆಯಾದ ದಿ. ಗೋವಿಂದೇಗೌಡರ (ಮಾಜಿ ಶಿಕ್ಷಣ ಸಚಿವ) ಬಳಿಕ ಶಿಕ್ಷಣ ಇಲಾಖೆ ಹಳಿ ತಪ್ಪಿದ್ದು ಮತ್ತೆ ಹಳಿಗೆ ಬರಲೇ ಇಲ್ಲ. 

ಇದಕ್ಕಾಗಿ ಯಾರೂ ನೊಂದು ಕೊಳ್ಳಲಿಲ್ಲ. ಏಕೆಂದರೆ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳನ್ನು ಸ್ಥಾಪಿಸಿ ಬಂಡವಾಳ ತೆಗೆಯುತ್ತಿದ್ದವರಲ್ಲಿ ಎಲ್ಲಾ ಪಕ್ಷಗಳ ಮುಖಂಡರೂ ಇದ್ದರು. ಇವರೇ ಆಂಗ್ಲ ಮಾಧ್ಯಮದ ಗೀಳನ್ನು ಸಮಾಜದಲ್ಲಿ ಹಬ್ಬಿಸಿದ್ದರು. ಶಾಲೆಗಳ ಮಾನ್ಯತೆಯ ಕುಣಿಕೆ ಹಿಡಿದುಕೊಂಡಿದ್ದ ಶಿಕ್ಷಣ ಇಲಾಖಾಧಿಕಾರಿಗಳ ಹಂಗಿನಲ್ಲಿ ಬಿದ್ದರು. ಪರಿಣಾಮವಾಗಿ ಲಾಭದಲ್ಲಿ ಹಂಚೋಣವಾಯಿತು.

ಹಾಗಾಗಿಯೇ ಬೆಂಗಳೂರಿನಲ್ಲಿ ಡಿ.ಡಿ.ಪಿ.ಐ. ಮತ್ತು ಬಿ.ಇ.ಒ. ಆಗುವುದು ಹಣಮಾಡುವ ಜಾಗ ಎನಿಸಿತು. ಇದರಿಂದಾಗಿ  ಸರ್ಕಾರಿ ಶಾಲೆಗಳು ಸೊರಗಿದವು. ಅವು ಕಡಿಮೆ ಶಿಕ್ಷಕರುಳ್ಳ ಬಡ ಮಕ್ಕಳ ಗಂಜಿ ಕೇಂದ್ರಗಳಾದವು. ಇಂತಹ ದುಸ್ಥಿತಿಯಿಂದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆಯ ಹಳಿಗೆ ತರುವ ಹೊಣೆ ಸಿದ್ದರಾಮಯ್ಯ ಸರ್ಕಾರದ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರರ ಮೇಲೆ ಬಿತ್ತು. ಆದರೆ ಅವರಿಗೂ ಸಾಮಾಜಿಕ ಸಮಾನತೆಗೆ ಶಿಕ್ಷಣ ಕ್ಷೇತ್ರವನ್ನು ಆಯ್ದು ಕೊಳ್ಳಬೇಕೆಂಬ ಸವಾಲಾಗಲೀ ಪ್ರೇರಣೆಯಾಗಲೀ ಮೂಡಲಿಲ್ಲವೆಂಬುದೇ ನನ್ನ ಅನಿಸಿಕೆ.

ಶಿಕ್ಷಣಕ್ಕೆ ಹಣ ಕಡಿಮೆ: ಸಿದ್ದರಾಮಯ್ಯ ಸರ್ಕಾರವು ತನ್ನ ಬಜೆಟ್‌ಗಳಲ್ಲಿ ಸಮಾನ ಶಿಕ್ಷಣ ನೀತಿಯ ಬಗ್ಗೆ ಪ್ರಸ್ತಾಪವನ್ನೇ ಮಾಡಿಲ್ಲ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಮೀಸಲಿಡುವ ಮೊತ್ತವು 2014–15 ರಲ್ಲಿ ₹17,425 ಕೋಟಿ ಇದ್ದದ್ದು 2015–16ನೇ ಸಾಲಿಗೆ ₹16,204 ಕೋಟಿಗೆ ಇಳಿಕೆಯಾಗಿದೆ. ಅಂದರೆ ಸುಮಾರು ₹1,221 ಕೋಟಿ  ಕಡಿತಗೊಳಿಸುವುದಕ್ಕೆ ಬಜೆಟ್‌ನಲ್ಲಿ ಯಾವ ಕಾರಣವನ್ನೂ ನೀಡಿಲ್ಲ. ಶಿಕ್ಷಕರಿಲ್ಲದೆ ಶಾಲೆಗಳು ಸೊರಗುತ್ತಿರುವಾಗ ಈ ರೀತಿ ಕಡಿತದ ಬದಲು ಶಿಕ್ಷಕರ ನೇಮಕಾತಿಗಾದರೂ ಉಪಯೋಗಿಸುವುದು ಸೂಕ್ತವಾಗುತ್ತಿತ್ತಲ್ಲವೆ?

ಸರ್ವ ಶಿಕ್ಷಾ ಅಭಿಯಾನದಲ್ಲಿ ಕೇಂದ್ರದಿಂದ ಬರುವ ಹಣದಲ್ಲಿ ಶಿಕ್ಷಕರ ನೇಮಕಾತಿಗೆ ಒತ್ತು ನೀಡಬಹುದಿತ್ತು. ಈ ಮೊದಲು ಸರ್ವ ಶಿಕ್ಷಾ ಅಭಿಯಾನದ ಹಣವನ್ನು ಶಾಲೆಗಳ ಭೌತಿಕ ಸೌಲಭ್ಯಗಳ ಪೂರೈಕೆಗೆ ವಿನಿಯೋಗಿಸಿರುವಾಗ ಇನ್ನು ಈಗ ಬರುತ್ತಿರುವ ಹಣವನ್ನು ಶಿಕ್ಷಕರ ನೇಮಕಾತಿಯ ಮೂಲಕ ಶಾಲೆಗಳ ಸಬಲೀಕರಣಕ್ಕೆ ಉಪಯೋಗಿಸಬಹುದಿತ್ತು. ಅಂತಹ ಚಿಂತನೆ ಸ್ವಲ್ಪ ಮಟ್ಟಿಗೆ ಇದೆಯೆಂದು ಈ ಜನವರಿ ತಿಂಗಳಲ್ಲಿ ಕಂಡು ಬರುತ್ತಿದೆ. ಸುಮಾರು 9000 ಶಿಕ್ಷಕರ ನೇಮಕಾತಿ ಮುಗಿದಿರುವುದು ಒಂದು ಗುಣಾತ್ಮಾಕ ಬೆಳವಣಿಗೆ ಎನ್ನ ಬಹುದು.

ಲಭ್ಯ ಅಂಕಿ ಅಂಶಗಳ ಪ್ರಕಾರ, 2013ರಲ್ಲಿ ರಾಜ್ಯದಲ್ಲಿದ್ದ ಒಟ್ಟು 60,036 ಪ್ರಾಥಮಿಕ ಶಾಲೆಗಳಲ್ಲಿ 2,04,295 ಅನುಮೋದಿತ ಹುದ್ದೆಗಳಿದ್ದರೂ ಶಿಕ್ಷಕರಿದ್ದದ್ದು 1,81,423 ಮಾತ್ರ. ಅಂದರೆ 22,872 ಹುದ್ದೆಗಳನ್ನು ಭರ್ತಿ ಮಾಡುವ ಹೊಣೆ ಈ ಸರ್ಕಾರಕ್ಕಿತ್ತು.  ಆದರೂ ಕೇವಲ 9405 ಪ್ರಾಥಮಿಕ ಹಾಗೂ 1137 ಪ್ರೌಢ ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡುವ ಭರವಸೆಯನ್ನು 2014–15ರ ಬಜೆಟಲ್ಲಿ ಹೇಳಲಾಗಿತ್ತು. ಆದರೆ ಮರುವರ್ಷದ ಬಜೆಟ್ ನಲ್ಲಿ ಅದರ ಸುದ್ದಿಯೇ ಇಲ್ಲ. ಅಗತ್ಯವಿರುವಷ್ಟು ಹುದ್ದೆಗಳಿಗೆ ನೇಮಕಾತಿ ಮಾಡುವ ಇಚ್ಛೆ ಸರ್ಕಾರಕ್ಕೆ ಯಾಕಿಲ್ಲ? ಶಿಕ್ಷಣ ಇಲಾಖೆ ಈ ಬಗ್ಗೆ ಸರ್ಕಾರದೊಡನೆ ಏಕೆ  ಅವಶ್ಯಕತೆಯನ್ನು ಮಂಡನೆ ಮಾಡುತ್ತಿಲ್ಲ?

ಪ್ರಾಯೋಗಿಕವಾಗಿ ಹೈದರಾಬಾದ್ ಕರ್ನಾಟಕದ 100 ಗ್ರಾಮ ಪಂಚಾಯ್ತಿಗಳಲ್ಲಿ 100 ಮಾದರಿ ಶಾಲೆಗಳನ್ನು ಸ್ಥಾಪಿಸುವುದಾಗಿ 2014–15 ಬಜೆಟ್‌ನಲ್ಲಿ ಹೇಳಿರುವ ಸರ್ಕಾರ ಮರುವರ್ಷದ ಬಜೆಟ್‌ನಲ್ಲಿ ಅವುಗಳ ಬಗ್ಗೆ ಏನೂ ಪ್ರಸ್ತಾಪ ಮಾಡಿಲ್ಲ. ಇದನ್ನು ನೋಡಿದರೆ ಈ ಸರ್ಕಾರವು ಪ್ರಾಥಮಿಕ ಶಿಕ್ಷಣದ ಸುಧಾರಣೆಯನ್ನು ಗಂಭೀರವಾಗಿ ತೆಗೆದು ಕೊಂಡಿಲ್ಲವೆಂದೇ ಹೇಳಬಹುದು.

2013–14ನೇ ಸಾಲಿನಲ್ಲಿ 393 ಸರ್ಕಾರಿ ಶಾಲೆಗಳು ಬಂದಾಗಿದ್ದು  ಅನುದಾನರಹಿತ ಖಾಸಗಿ ಶಾಲೆಗಳು 972  ಅಂದರೆ ಶೇ 6.27 ಹೆಚ್ಚಿವೆ. ಅಂದರೆ ಶಿಕ್ಷಣದ ಖಾಸಗೀಕರಣದ ಪ್ರಕ್ರಿಯೆಗೆ ವೇಗ ಸಿಕ್ಕಿದೆ. ಇದರ ವಿರುದ್ಧ ಈ ಸರ್ಕಾರ ಯಾವುದೇ ಯೋಜನೆಗಳನ್ನು ಕೈಗೊಂಡಂತಿಲ್ಲ.

ಈಗಲೂ 1465 ಏಕೋಪಾಧ್ಯಾಯ ಶಾಲೆಗಳಿದ್ದು 797 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಇದಕ್ಕೆ ಕುಟುಂಬ ಯೋಜನೆಯೂ ಕಾರಣವೆಂದು ಹೇಳಲಾಗುತ್ತಿದ್ದರೂ ಸ್ಥಳೀಯ ಶಾಲೆಗಳ ದುರವಸ್ಥೆಯಿಂದಾಗಿ ದೂರದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಪೋಷಕರು ಆಯ್ಕೆ ಮಾಡಿಕೊಂಡಿರುವುದೂ ಕಾರಣವಾಗಿದೆ. ಜೊತೆಯಲ್ಲಿ, ಈಗಲೂ ಶಾಲೆ ಬಿಡುವ ಮಕ್ಕಳು ಇದ್ದರೂ ಅಂತಹವರನ್ನು ಶಾಲೆಯಲ್ಲಿ ಉಳಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ ಎನ್ನಲಾಗುತ್ತದೆ. 2014–15ರಲ್ಲಿ 1.20 ಲಕ್ಷ ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ ಎಂದಿರುವುದು ಗಮನೀಯ.

ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯು 2005 ರಿಂದ ಬಾಕಿ ಇದ್ದದ್ದು ಈ ಸರ್ಕಾರ ಬಂದ ಬಳಿಕವೂ ಹಾಗೆಯೇ ಇದೆ.  ಪ್ರತಿ ಶಾಲೆಗೆ ಒಬ್ಬ ದೈಹಿಕ ಶಿಕ್ಷಣ ಶಿಕ್ಷಕ ಬೇಕೆಂದಿದ್ದರೂ, ಹಿರಿಯ ಪ್ರಾಥಮಿಕ ಹಂತದಲ್ಲಿ 2007 ರಿಂದ ದೈಹಿಕ ಶಿಕ್ಷಣವು ಪಠ್ಯ ವಿಷಯವಾಗಿದ್ದರೂ ಸುಮಾರು 43 ಸಾವಿರ ಶಾಲೆಗಳಲ್ಲಿ ಈ ಹುದ್ದೆ ಖಾಲಿ ಇರಲು ಬಿಟ್ಟಿರುವುದು ಪ್ರಾಥಮಿಕ ಶಿಕ್ಷಣದ ಕುರಿತಾದ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗದೇ? ಇನ್ನು ಎಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆಯೇ ಅಂಥಲ್ಲಿ ಅವರು  ಬೇರೆ ಪಠ್ಯಗಳನ್ನು ಕಲಿಸುವ ಅನಿವಾರ್ಯತೆಗೂ ಸಿಕ್ಕಿರುತ್ತಾರೆ.

ಸಂಪನ್ಮೂಲದ ನಿರ್ವಹಣೆ:  ಯಾವುದೇ ಸೌಲಭ್ಯವನ್ನು ಪೂರ್ಣವಾಗಿ ಶಾಲೆಗೆ ತಲುಪಿಸಬೇಕು. ಉದಾಹರಣೆಗೆ ಕಂಪ್ಯೂಟರ್ ನೀಡಿದಲ್ಲಿ ಯು.ಪಿ.ಎಸ್ ನೀಡಿಲ್ಲ. ಕೆಲವು ಕಡೆ ಯು.ಪಿ.ಎಸ್ ಮಾತ್ರ ನೀಡಿ ಅದು ಚಾಲೂ ಆಗದೆ ಹಾಳಾಗಿದೆ. ಈ ರೀತಿ ಹಣ ಪೋಲಾಗುವುದನ್ನು ತಪ್ಪಿಸಬೇಕು. ಅನಗತ್ಯವಾದ ಮೌಲ್ಯಾಂಕನದಂತಹ ಘಟಕಗಳಿವೆ. ಸರ್ಕಾರಿ ಶಾಲೆಗಳ ವಾಸ್ತವ ಪರಿಸ್ಥಿತಿ ಎಲ್ಲರಿಗೂ ಗೊತ್ತಿರುವಾಗ ಅವುಗಳ ಮೌಲ್ಯಾಂಕನವೇಕೆ? ‘ಇದು ಮೇಲೆ ನೋಡಿ ಉಗುಳಿ ಎಂಜಲನ್ನು ಮುಖಕ್ಕೆ ಬೀಳಿಸಿಕೊಳ್ಳುವ’ ದುಸ್ಸಾಹಸ. ಅಲ್ಲೇ ತಳವೂರಿ ಕೆಲಸವಿಲ್ಲದೆ ಆರಾಮವಾಗಿರುವವರನ್ನು ಬೇರೆಡೆಗೆ ವರ್ಗಾಯಿಸಿ ಕೆಲಸ ತೆಗೆದುಕೊಳ್ಳುವುದು ಉಪಯುಕ್ತ. ನಮ್ಮಲ್ಲಿ ಆಗಬೇಕಾದ್ದು ಶಿಕ್ಷಕರ ಮೌಲ್ಯಮಾಪನ. ಅದರ ಬಗ್ಗೆ ವಿಸ್ತೃತ ತಯಾರಿ ಅಗತ್ಯ.

ಉಳಿತಾಯದ ದೃಷ್ಟಿಯಿಂದ ಜರೂರಾಗಿ ಯೋಚಿಸಬೇಕಾದ್ದು ಆರ್. ಟಿ. ಇ (ಶಿಕ್ಷಣ ಹಕ್ಕು) ಮುಂದುವರಿಸುವ ಬಗ್ಗೆ. ಸದ್ಯದ ಪರಿಸ್ಥಿತಿಯಲ್ಲಿ ಅದರ ಲಾಭ ಪಡೆಯುವವರಲ್ಲಿ ಆರ್ಥಿಕ ಭದ್ರತೆ ಇರುವವರು ಅನೇಕರಿದ್ದಾರೆ. ಇದನ್ನು ಅನ್ವಯಿಸುವಲ್ಲಿ ಶಿಕ್ಷಣ ಇಲಾಖೆ ತಳೆದಿದ್ದ ಉತ್ಸಾಹ ಅಚ್ಚರಿಪಡುವಂತಿತ್ತು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಉಳಿಸಲು ಬೇಕಾದ ಯಾವುದೇ ತಯಾರಿಗಳು ಅವರಲ್ಲಿರಲಿಲ್ಲ. ಈಗ ಸರ್ಕಾರಿ ಶಾಲೆಗಳಿಗೆ ಬರಬೇಕಾದ ಮಕ್ಕಳನ್ನು ಅರ್. ಟಿ. ಇ. ಅಡಿಯಲ್ಲಿ ಖಾಸಗಿ ಶಾಲೆಗಳಿಗೆ ಕಳಿಸಿ ಕನ್ನಡದ ತೆರಿಗೆ ಹಣವನ್ನು ಸರ್ಕಾರವೇ ಇಂಗ್ಲಿಷ್ ಶಾಲೆಗಳಿಗೆ ನೀಡುವುದಾಗಿದೆ.

ಈಗಲೇ ಆರ್‌ಟಿಇ ಮಕ್ಕಳು ಮೂರನೇ ತರಗತಿಗೆ ಬಂದಿದ್ದು, ವರ್ಷಕ್ಕೆ ಸುಮಾರು ₹ 400 ಕೋಟಿಯನ್ನು ಖಾಸಗಿಯವರಿಗೆ ಸರ್ಕಾರ ಕೊಡಬೇಕಾಗಿದೆ. ಇನ್ನು ಇದೇ ಮಕ್ಕಳು ಎಂಟನೇ ತರಗತಿಗೆ ಬರುವಷ್ಟರ ಹೊತ್ತಿಗೆ ಖಾಸಗಿ ಶಾಲೆಗಳಿಗೆ ಸರ್ಕಾರ ಕೊಡಬೇಕಾದ ಮೊತ್ತ ₹1500 ಕೋಟಿ ಮೀರಬಹುದು. ಯಾಕೆ ಬೇಕು ಈ ವೆಚ್ಚ? ಬದಲಿಗೆ ಇದೇ ಹಣದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿ ಮಕ್ಕಳನ್ನು ಆಕರ್ಷಿಸುವುದೇ ಮರ್ಯಾದೆಯ ಕೆಲಸವಲ್ಲವೇ?

ಇನ್ನೂ ಕೆಲವು ಉಳಿತಾಯದ ಬಾಬತ್ತುಗಳಿರಬಹುದು. ಅವು ಗೊತ್ತಾಗಬೇಕಿದ್ದರೆ ಶಿಕ್ಷಣ ಇಲಾಖೆಯೊಳಗೆ ಒಂದಿಷ್ಟು ನುಗ್ಗಿ ನೋಡಬೇಕು. ಅದೊಂದು ವಿಸ್ತಾರವಾದ ಸಮುದ್ರ. ಸಣ್ಣ ಮೀನುಗಳೂ ಇವೆ, ತಿಮಿಂಗಿಲಗಳೂ ಇವೆ. ಮಧ್ಯದಲ್ಲಿ ಅನೇಕ ಜಲಚರಗಳಿವೆ. ಇದರ ಶುದ್ಧೀಕರಣ ಬಹಳ ಕಷ್ಟ. ಏಕೆಂದರೆ ಆಯಕಟ್ಟಿನಲ್ಲಿರುವವರು ಶಿಕ್ಷಣ ಸುಧಾರಣೆಯ ಕಾಳಜಿ ಹೊಂದಿದವರಲ್ಲ. ಕಾಲಾನುಗತಿಗೆ ಅನುಸಾರವಾಗಿ ನಿಯಮಾವಳಿಗಳನ್ನು ಬದಲಾಯಿಸುವಷ್ಟು ಉತ್ಸಾಹ ಅವರಲ್ಲಿಲ್ಲ. ಹಾಗೆ ಮಾಡಿದರೆ ತಮ್ಮ ಕೈಯಲ್ಲಿರುವ ಶಾಲೆಗಳ ಮಾನ್ಯತೆಯ ಕುಣಿಕೆಯನ್ನು ದೂರ ಎಸೆಯ ಬೇಕಾಗುತ್ತದೆ. ಮತ್ತೆ ಅವರಿಗೇನು ದಕ್ಕುತ್ತದೆ?

ಅಂತೂ ದೂರದೃಷ್ಟಿ ಇಲ್ಲದೆ, ಬಡವರ ಬಗ್ಗೆ, ಪ್ರಾಮಾಣಿಕರ ಬಗ್ಗೆ ಪ್ರೀತಿ ಇಲ್ಲದೆ ಕೇವಲ ಅಧಿಕಾರ ಚಲಾಯಿಸುವ ಆಯುಕ್ತರು, ನಿರ್ದೇಶಕರುಗಳು ಮತ್ತು ಉಪ ನಿರ್ದೇಶಕರುಗಳು ಪ್ರಾಥಮಿಕ ಶಿಕ್ಷಣಕ್ಕೆ ಕಾಯಕಲ್ಪ ನೀಡಲಾರರು. ಅವರು ಶಾಲೆಗಳಿಗೆ ಶಿಕ್ಷಕರನ್ನು ನೀಡುವ ಯೋಜನೆ ತಯಾರಿಸುವುದಿಲ್ಲ. ಬದಲಿಗೆ ಇರುವಷ್ಟು  ಶಿಕ್ಷಕರೇ ಎಲ್ಲಾ ಪಾಠ ಮಾಡಿ ಎಸ್. ಎಸ್. ಎಲ್.ಸಿ  ಯಲ್ಲಿ ಶೇಕಡ 100 ಫಲಿತಾಂಶ ಸಾಧಿಸಿ ಎಂದು ಡಿಮಾಂಡ್ ಮಾಡುತ್ತಾರೆ.  ಇಂತಹವರನ್ನು ದೇಶನಿಷ್ಠೆಯಿಂದ ದುಡಿಯುವಂತೆ ಮಾಡಲು ನಮ್ಮ ಶಿಕ್ಷಣ ಸಚಿವರಿಗೆ ಸಾಧ್ಯವಾದರೆ ಅದೇ ಒಂದು ಪವಾಡವೆನ್ನಬೇಕು.

ಈಗ ಆಗ ಬೇಕಾದ್ದೇನು?: ‘ಈಗ ನಮ್ಮ ಶಾಲೆಗೆ ನಮ್ಮೂರಿನ ಕೆಲವೇ ಮಕ್ಕಳು ಬರುತ್ತಾರೆ. ಉಳಿದಂತೆ ಪರವೂರುಗಳಿಂದ ಕೆಲಸದಾಳುಗಳಾಗಿ ಬಂದವರ ಮಕ್ಕಳೇ ಬರುವುದು.  ಅವರೂ ನಿಗದಿತವಾಗಿ ಬರಬೇಕಿದ್ದರೆ ನಾವು ಆದಿತ್ಯವಾರಗಳಲ್ಲಿ ಅವರ ಬಾಡಿಗೆ ಮನೆ ಹುಡುಕಿಕೊಂಡು ಹೋಗುತ್ತೇವೆ’ ಎನ್ನುತ್ತಾರೆ ನಮ್ಮ ಊರಿನ ಗಣ್ಯಾತಿ ಗಣ್ಯರು ಕಲಿತ ಹಳೆಯ ಹೆಮ್ಮೆಯ ಶಾಲೆಯ ಮುಖ್ಯೋಪಾಧ್ಯಾಯಿನಿ.

ಇಂತಹ ಶಾಲೆಗಳ ರಿಪೇರಿ ವೆಚ್ಚಗಳಿಗೆ ಹಣಬೇಕು. ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಬಂದ ಕೋಟಿಗಟ್ಟಲೆ ಹಣ ಶಾಲೆಗಳ ಮೂಲ ಸೌಲಭ್ಯಗಳ ನಿರ್ಮಾಣಕ್ಕೆ ವೆಚ್ಚವಾಗಿದೆ. ಕೆಲವು ಜಿಲ್ಲೆಗಳಲ್ಲಿ ಅದು ಗೋಚರಿಸುತ್ತದೆ. ಇನ್ನು ಕೆಲವು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಹಣ ಮುಗಿದಿದ್ದರೂ ಕಟ್ಟಡ ಗೋಚರಿಸುವುದಿಲ್ಲ. ಈ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಬೇಕು.

ಶಾಲೆಗಳಲ್ಲಿ ಕಡಿಮೆ ಶಿಕ್ಷಕರಿರುವುದರಿಂದ ಇದ್ದ ಶಿಕ್ಷಕರೂ ಕೆಲಸ ಮಾಡದೆ ಇರುವ ಪರಿಸ್ಥಿತಿ ಇದೆ. ಅಲ್ಲದೆ ಶಿಕ್ಷಕರ ಕಲಿಸುವ ಕೌಶಲ ಹಾಗೂ ಕರ್ತವ್ಯ ಪರತೆಯ ಬಗ್ಗೆ ನಿಗದಿತವಾಗಿ ಪರಿಶೀಲನೆ ಇರಬೇಕು. ಬಿ.ಎ. ಬಿ.ಎಡ್. ಆದವರೆಲ್ಲರಿಗೂ ಇಂಗ್ಲಿಷ್ ಬರುವುದಿಲ್ಲ. ಆದರೆ ಈ ಸಲ ಅವರ ನೇಮಕಾತಿ ಇಂಗ್ಲಿಷ್ ಕಲಿಸುವುದಕ್ಕಾಗಿ ಆಗಿದೆ. ಅವರೆಂತಹ ಶಿಕ್ಷಣ ನೀಡಬಹುದು? ತಪ್ಪು ಕಲಿಸುವುದಕ್ಕೆ ಪರ್ಯಾಯವೇನು? ಈ ಕುರಿತಾಗಿಯೂ ಸರ್ಕಾರಕ್ಕೆ ಜವಾಬ್ದಾರಿ ಇದೆ.

ಕೊನೆಯ ಮಾತು: ನನಗೆ ಪ್ರಾಥಮಿಕ ಶಿಕ್ಷಣ ಎಂದಾಗ ದೊಡ್ಡ ತಲೆಯ ಕಡ್ಡಿ ಮೈಯ ಎಂಡೊಸಲ್ಫಾನ್ ಪೀಡಿತ ಮಗು ನೆನಪಾಗುತ್ತದೆ. ನಮ್ಮ ಶಿಕ್ಷಣದ್ದೂ ಶಿರೋಭಾರದ ಕ್ಷೀಣದೇಹದ ವ್ಯವಸ್ಥೆ. ಎಂಡೊಸಲ್ಫಾನ್ ಪೀಡಿತ ಮಗುವನ್ನು ಹುಷಾರು ಮಾಡುವುದು ಕಷ್ಟ. ಆದರೆ ಮನಸ್ಸು ಮಾಡಿದರೆ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬಹುದು.

ಅಪ್ಪ ಸತ್ರೆ!
ಕೆಲವು ಸಮಯದ ಹಿಂದೆ ಮಕ್ಕಳ ಶೈಕ್ಷಣಿಕ ಸಾಮರ್ಥ್ಯದ ಕುಸಿತದ ಬಗ್ಗೆ ಸ್ವತಃ ಶಿಕ್ಷಣ ಸಚಿವರೇ ಒಂದು ಉದಾಹರಣೆಯನ್ನು ಹಂಚಿಕೊಂಡಿದ್ದರು. ಐದನೇ ತರಗತಿಯ ಹುಡುಗನಿಗೆ ಶಾಲೆಯೊಂದರಲ್ಲಿ ಸಚಿವರೇ ‘ಆಸ್ಪತ್ರೆ’ ಎಂದು ಬರೆಯಲು ಹೇಳಿದರೆ ಆತ ‘ಅಪ್ಪ ಸತ್ರೆ’ ಎಂದು ಬರೆದನಂತೆ. ಹೀಗೆ ದುರಂತ ಸ್ಥಿತಿಗೆ ಕನ್ನಡಿ ಹಿಡಿದ ಸಚಿವರು ವ್ಯವಸ್ಥೆಯ ಲೇವಡಿ ಮಾಡಿದರಷ್ಟೇ ಹೊರತು ಅದರ ಸುಧಾರಣೆಗೆ ತೀವ್ರತರವಾದ ಯಾವ ಹೆಜ್ಜೆಯನ್ನೇ ಇಟ್ಟ ಕುರುಹು ಸಿಗಲಿಲ್ಲ. ತಮ್ಮ ಸಚಿವರೇ ಹೀಗೆ ಹೇಳಿದ ಬಳಿಕ ನಾವೇನಾದರೂ ಮಾಡೋಣವೆಂದು ಶಿಕ್ಷಣ ಇಲಾಖೆ ಒಂದಾದರೂ ಸಭೆ ನಡೆಸಿ ಹೊಸ ಕಾರ್ಯ ಯೋಜನೆಗಳನ್ನು ಜಾರಿ ಮಾಡಿದ್ದು ವರದಿಯಾಗಿಲ್ಲ.

ಸರ್ಕಾರದ ಸಾಧನೆಗಳಿವು
* ಶಿಕ್ಷಕರ ಕೊರತೆಯನ್ನು ನೀಗಿಸಲು ಪ್ರಸ್ತುತ ಸರ್ಕಾರವು ಮಾಸಿಕ ರೂ ₹5,500 ನೀಡಿ ಪ್ರಾಥಮಿಕ   ಶಾಲೆಗಳಿಗೆ ಹಾಗೂ ಮಾಸಿಕ ₹6500 ನೀಡಿ ಪ್ರೌಢ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಇದು ಮೂರ್ಛೆ ತಪ್ಪಿದವನ ಮುಖಕ್ಕೆ ನೀರು ಚಿಮುಕಿಸಿದಂತಾಗಿದೆ. ಅನೇಕ  ಏಕೋಪಾಧ್ಯಾಯ ಶಾಲೆಗಳು ಉಸಿರಾಡುವಂತಾಗಿದೆ. ಅಲ್ಲದೆ ಶಿಕ್ಷಕ ತರಬೇತಿ ಪಡೆದು ನಿರುದ್ಯೋಗಿಗಳಾಗಿದ್ದವರಿಗೂ ಒಂದು ಚಲನೆ ಸಿಕ್ಕಿದೆ. ಆದರೆ ಹೀಗೆ ನೇಮಿಸಿಕೊಂಡವರನ್ನು ಕರುಣೆ ಇಲ್ಲದೆ ದುಡಿಸಲಾಗಿದೆ ಎಂಬ ದೂರುಗಳು ಕೂಡಾ ಇವೆ.

*   ಅನುದಾನಿತ ಶಾಲೆಗಳಿಗೂ ಮಧ್ಯಾಹ್ನದ ಊಟದ ವಿಸ್ತರಣೆ.

*   ಕಾಮಗಾರಿಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ಹೆಜ್ಜೆ ಇರಿಸಿದ್ದು.

*   ಆಧಾರ್‌ಗೆ ಡೈಸ್‌ಕೋಡ್ ಜೋಡಿಸಿ ಚೈಲ್ಡ್  ಟ್ರ್ಯಾಕಿಂಗ್ ಮಾಡಿ ಶಾಲೆಗಳಿಂದ ಹೊರಗುಳಿಯುವ ಮಕ್ಕಳ ಬಗ್ಗೆ ನಿಗಾ ಇಡಲಾಗಿದೆ.

*   ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗೆ ವೈದ್ಯರ ತಂಡಗಳನ್ನು ನೇಮಿಸಿ ಶಾಲೆಗಳಿಗೆ ಕಳಿಸುವ ವ್ಯವಸ್ಥೆ.

* ಕಲಿಕೆಗೆ ಸಂಬಂಧಿಸಿ ಶಿಕ್ಷಕರಿಗೆ ಸೆಟೆಲೈಟ್ ಮೂಲಕ ‘ಜ್ಞಾನಧಾರಾ’ ಹಾಗೂ ಸ್ಪರ್ಧಾ ಕಲಿಕೆಯ ಯೋಜನೆಗಳು.

*   ಪ್ರಸ್ತುತ ಸರ್ಕಾರವು ಶಾಲಾ ಮಕ್ಕಳ ಆರೋಗ್ಯಕ್ಕಾಗಿ ಕ್ಷೀರ ಭಾಗ್ಯ ಒದಗಿಸಿದೆ. ಆದರೆ ದೈಹಿಕ ರಕ್ಷಣೆಗಾಗಿ ಮತ್ತು ಏಕತೆಯನ್ನು ಮೂಡಿಸಲು 1 ರಿಂದ 10ನೇ ತರಗತಿವರೆಗಿನ 54.54 ಮಕ್ಕಳಿಗೆ ಶೂ ಭಾಗ್ಯ ಒದಗಿಸಲು ₹120 ಕೋಟಿ ಅನುದಾನವನ್ನು ನಿಗದಿ ಪಡಿಸಿದ್ದರೂ ಶೂ ಭಾಗ್ಯ ಶಾಲೆಗಳನ್ನು ಇನ್ನೂ ತಲುಪಿಲ್ಲ.

* ಲೇಖಕ ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT