ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕ ಅಹಂ!

Last Updated 5 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಚಿತ್ರೀಕರಣ, ಡಬ್ಬಿಂಗ್ ಸೇರಿದಂತೆ ಎಲ್ಲ ತಾಂತ್ರಿಕ ಕೆಲಸಗಳು ಮುಗಿದು, ಇನ್ನೇನು ಚಿತ್ರ ತೆರೆ ಕಾಣಲು ಸಿದ್ಧವಾಗಿದೆ. ಈ ಸುದ್ದಿಯನ್ನು ಹಂಚಿಕೊಳ್ಳುವುದರ ಜತೆಗೆ ಎರಡು ಹಾಡುಗಳನ್ನು ತೋರಿಸುವ ಉದ್ದೇಶದಿಂದ ‘ಅಹಂ’ ಚಿತ್ರತಂಡವು ಸುದ್ದಿಮಿತ್ರರನ್ನು ಆಹ್ವಾನಿಸಿತ್ತು.

ಮನುಷ್ಯನಲ್ಲಿ ‘ಅಹಂ’ ಇರಬೇಕೇ ಬೇಡವೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆ ಬಗ್ಗೆ ತಾವೇನೂ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ ನಿರ್ದೇಶಕ ಜಯಗಜ ವೆಂಕಟೇಶ್, ಇರುವುದನ್ನು ಇದ್ದಂತೆ ಚಿತ್ರದಲ್ಲಿ ತೋರಿಸಿರುವುದಾಗಿ ಹೇಳುತ್ತಾರೆ. ಪ್ರೀತಿ–ಪ್ರೇಮದ ಕಥೆಯನ್ನು ಆಯ್ದುಕೊಂಡಿರುವ ಅವರು, ಇದರಲ್ಲಿ ಚಾರ್ಲಿ ಚಾಪ್ಲಿನ್ ಜೀವನಕ್ಕೆ ಸಂಬಂಧಿಸಿದ ಒಂದಷ್ಟು ಘಟನೆಗಳನ್ನು ತೆಗೆದುಕೊಂಡಿರುವುದಾಗಿ ಹೇಳಿ ಕುತೂಹಲ ಮೂಡಿಸಿದರು.

‘ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದೆ. ಪ್ರೇಕ್ಷಕರೇ ನನ್ನ ದೇವರು. ಅವರ ಆಶೀರ್ವಾದ ಇದ್ದರೆ ಸಿನಿಮಾ ಗೆಲುವು ಖಚಿತ’ ಎಂದ ವೆಂಕಟೇಶ್, ಮನುಷ್ಯನಲ್ಲಿ ಇರುವ ಅಹಂ ಏನೆಲ್ಲ ಪರಿಣಾಮ ಉಂಟುಮಾಡಬಹುದು ಎಂಬುದನ್ನು ಚಿತ್ರರೂಪದಲ್ಲಿ ತೋರಿಸಿದ್ದಾರಂತೆ. ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ತಮ್ಮದೇ ಆಗಿದ್ದು, ಪ್ರೇಕ್ಷಕರನ್ನು ಸೆಳೆಯುವ ಎಲ್ಲ ಅಂಶಗಳೂ ಚಿತ್ರದಲ್ಲಿವೆ ಎಂದರು.

ಹಾಡುಗಳಿಗೆ ಸಂಗೀತ ನೀಡಿರುವ ನಂದು ಹಾಗೂ ತಿಪ್ಪೇಶ್, ‘ಅಹಂನ ಹಾಡುಗಳು 80ರ ದಶಕದ ಮಧುರ ಗೀತೆಗಳನ್ನು ನೆನಪಿಸುವಂತಿವೆ. ಚಿತ್ರಮಂದಿರದಿಂದ ಹೊರಬಂದ ಮೇಲೆಯೂ ಪ್ರೇಕ್ಷಕ ಅವುಗಳ ಮಾಧುರ್ಯದ ಗುಂಗಿನಿಂದ ಹೊರಬರಲಾರ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನವೀನ್‌ಕೃಷ್ಣ, ಭೂಮಿಕಾ ಜೋಡಿಯ ಜತೆಗೆ ಹೊಸಬರಾದ ದೇವು, ಅರ್ಚನಾ ಅಭಿನಯಿಸಿದ್ದಾರೆ. ಅಕ್ಕನ ಮಗ ದೇವುನನ್ನು ತೆರೆ ಮೇಲೆ ನಾಯಕ ನಟನನ್ನಾಗಿ ತೋರಿಸುವ ಬಯಕೆಯಿಂದ ನಾಗರಾಜು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಪಿ.ಎಸ್. ಕುಮಾರ್ ಛಾಯಾಗ್ರಹಣದ ಹೊಣೆ ಹೊತ್ತಿದ್ದರೆ, ಜಾನಿ ನೃತ್ಯ ನಿರ್ದೇಶನ ಮಾಡಿದ್ದಾರೆ.

ನಿರ್ಮಾಪಕ ಭಾ.ಮಾ. ಹರೀಶ್, ನಟ ದೀಪು ಚಿತ್ರತಂಡಕ್ಕೆ ಶುಭಹಾರೈಸಲು ಬಂದಿದ್ದರು. ಇದಕ್ಕೂ ಮೊದಲು  ಸಿನಿಮಾದ ಎರಡು ಹಾಡು ಮತ್ತು ಟ್ರೇಲರ್ ಪ್ರದರ್ಶಿಸಲಾಯಿತು. ಮುಂದಿನ ತಿಂಗಳು ‘ಅಹಂ’ ತೆರೆ ಮೇಲೆ ಬರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT