ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಗಾಗಿ ರೂಪಿಸಿದ ಭಿನ್ನ ಶಬ್ದಚಿತ್ರ

Last Updated 24 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಹಿರಿಯ ಸಾಹಿತಿ ಯು.ಆರ್‌.ಅನಂತಮೂರ್ತಿ ಕುರಿತು ನಿರ್ದೇಶಿಸಿದ ಸಾಕ್ಯ್ಷಚಿತ್ರಕ್ಕೆ ಗಿರೀಶ ಕಾಸರವಳ್ಳಿ ಅವರಿಗೆ ೨೦೧೩ನೇ ಸಾಲಿನ ‘ತೀರ್ಪುಗಾರರ ವಿಶೇಷ ಪ್ರಶಸ್ತಿ’ ಸಂದಿದೆ. ‘ಅನಂತಮೂರ್ತಿಯವರ ಮೇಲಿನ ಪ್ರೀತಿಯಿಂದ ಈ ಸಾಕ್ಯ್ಷ ಚಿತ್ರ ತಯಾರಿಸಿಕೊಡಲು ಒಪ್ಪಿಕೊಂಡೆ’ ಎನ್ನುವ ಕಾಸರವಳ್ಳಿ, ಅನಂತಮೂರ್ತಿ ಹಾಗೂ ಸಾಕ್ಯ್ಷಚಿತ್ರದ ಕುರಿತು ತಮ್ಮ ಅನಿಸಿಕೆಗಳನ್ನು ‘ಸಿನಿಮಾ ರಂಜನೆ’ ಜತೆ ಹಂಚಿಕೊಂಡಿದ್ದಾರೆ.

ಇದಕ್ಕಿಂತ ಮೊದಲು ನೀವು ಸಾಕ್ಯ್ಷಚಿತ್ರ ಮಾಡಿದ್ದೀರಲ್ಲವೇ?
ಹೌದು. ಕಲಾವಿದ ಕೆ.ಕೆ. ಹೆಬ್ಬಾರ್ ಕುರಿತು ರಾಜ್ಯ ವಾರ್ತಾ ಮತ್ತು ಪ್ರಸಾರ ಇಲಾಖೆಯ ಪರವಾಗಿ ಮಾಡಿದ್ದೆ. ಚಿತ್ರ ಕಲಾವಿದ ಅಥವಾ ಸಿನಿಮಾ ಕಲಾವಿದನ ಬಗ್ಗೆ ಸಾಕ್ಯ್ಷಚಿತ್ರ ಮಾಡುವುದು ಸುಲಭ. ಏಕೆಂದರೆ ಕಲಾಕೃತಿ ಅಥವಾ ಚಿತ್ರದ ದೃಶ್ಯಗಳು ಇರುತ್ತವೆ. ಆದರೆ ಲೇಖಕನ ಕುರಿತು ಸಾಕ್ಯ್ಷಚಿತ್ರ ಮಾಡುವಾಗ ಶಬ್ದಗಳ ಜತೆಗೇ ಚಿತ್ರ ಕಟ್ಟುತ್ತ ಹೋಗಬೇಕು. ಅಂದಹಾಗೆ ಈ ಮೊದಲು ಶಿವರಾಮ ಕಾರಂತರ ಕುರಿತು ಸಾಕ್ಯ್ಷಚಿತ್ರ ಮಾಡಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆ. ಅಷ್ಟರಲ್ಲಿ ಕಾರಂತರು ನಮ್ಮನ್ನು ಅಗಲಿದರು. ಯೋಜನೆ ಮುಂದುವರಿಸಿ ಎಂಬ ಮನವಿ ಬಂದರೂ ನಾನು ಕೈಬಿಟ್ಟೆ.

ಅನಂತಮೂರ್ತಿ ಕುರಿತು ಸಾಕ್ಯ್ಷಚಿತ್ರ ನಿರ್ಮಾಣದ ಹಿನ್ನೆಲೆ ಏನು?
ನಾನೊಬ್ಬ ಚಲನಚಿತ್ರ ನಿರ್ದೇಶಕ. ಅನಂತಮೂರ್ತಿ ಕುರಿತು ಸಾಕ್ಯ್ಷಚಿತ್ರ ನಿರ್ಮಿಸಿ ಕೊಡಿ ಎಂಬ ಆಹ್ವಾನ ‘ಫಿಲ್ಮ್‌ ಡಿವಿಜನ್ಸ್‌’ನಿಂದ ಬಂದಾಗ ಇದು ನನ್ನಿಂದ ಸಾಧ್ಯವಾ ಎನ್ನುವ ಸಂಶಯ ಮೂಡಿತು. ಆದರೆ ಅನಂತಮೂರ್ತಿಯವರ ಮೇಲಿನ ಪ್ರೀತಿಯಿಂದ ಒಪ್ಪಿಕೊಂಡೆ. ಅದೊಂದು ಬಹಳ ಭಿನ್ನ ಪ್ರಯತ್ನ. ಅದಕ್ಕೆ ಮನ್ನಣೆ ಸಿಕ್ಕಿದ್ದು ಖುಷಿ ನೀಡಿದೆ.

ಸಿನಿಮಾ ನಿರ್ದೇಶನಕ್ಕೆ ಹೋಲಿಸಿದರೆ ಇದು ಯಾವ ರೀತಿ ಭಿನ್ನ?
ಸಿನಿಮಾದಲ್ಲಿ ಮೊದಲೇ ನಾವೆಲ್ಲ ಸಿದ್ಧತೆ ಮಾಡಿಕೊಂಡಿರುತ್ತೇವೆ. ಯಾವ ಸಂಭಾಷಣೆ, ಯಾವ ದೃಶ್ಯ ಹೇಗಿರಬೇಕು, ದೃಶ್ಯಗಳು ಹೇಗೆ ಬೆಳೆಯಬೇಕು ಎಂಬುದು ಮೊದಲೇ ನಿರ್ಧಾರ ಆಗಿರುತ್ತದೆ. ಆದರೆ ಸಾಕ್ಯ್ಷಚಿತ್ರದಲ್ಲಿ ಏನೂ ಗೊತ್ತಿರುವುದಿಲ್ಲ. ಸಂದರ್ಶನದಲ್ಲಿ ಯಾರು ಏನೇನೆಲ್ಲ ಹೇಳುತ್ತಾರೋ ಅದನ್ನೆಲ್ಲ ತೆಗೆದುಕೊಂಡು ನಿರೂಪಿಸಬೇಕು. ಸಿನಿಮಾಕ್ಕೆ ಹೋಲಿಸಿದರೆ ನಾನು ಅನುಭವಿಸಿರುವುದು, ಇದಕ್ಕಿರುವ ವೇಗದ ಕಲ್ಪನೆ.

ಅನಂತಮೂರ್ತಿಯವರ ಕುರಿತು ಡಾಕ್ಯುಮೆಂಟರಿ ಮಾಡುವ ಮುನ್ನ ನಡೆಸಿದ ಸಿದ್ಧತೆ ಏನೇನು?
ಈಗಾಗಲೇ ಹೇಳಿದ ಹಾಗೆ ಲೇಖಕನ ಕುರಿತ ಸಾಕ್ಯ್ಷಚಿತ್ರ ಸ್ವಲ್ಪ ಕಷ್ಟದ್ದು. ಇಲ್ಲಿ ಅನಂತಮೂರ್ತಿ ಆಡಿದ್ದು ಶಬ್ದಗಳ ಜತೆಗೆ ಆಟ. ಅವರನ್ನು ಹೇಗೆ ಹಿಡಿಯುವುದು ಎಂಬ ಚಿಂತೆ ನನ್ನನ್ನು ಕಾಡಿತ್ತು. ಭಾಷೆ, ಗ್ರಾಮೀಣ ಸಂಸ್ಕೃತಿ, ಜಗಲಿ ಸಂಸ್ಕೃತಿ, ಹಿತ್ತಿಲು ಸಂಸ್ಕೃತಿ ಕುರಿತು ಏನು ಹೇಳಿದ್ದಾರೆ? ಅವರ ಮಾತುಗಳ ಮಹತ್ವ ಏನು? ಅದನ್ನು ನಾವು ಹೇಗೆ ನೋಡಬೇಕು? ಇವೆಲ್ಲವನ್ನೂ ಅರಿತುಕೊಳ್ಳಬೇಕು. ನನಗೆ ಮಹತ್ವ ಅನಿಸಿದ ಅವರ ಕೃತಿಗಳ ಮುಖ್ಯ ಭಾಗ ಇಟ್ಟುಕೊಂಡು ಚಿತ್ರ ಕಟ್ಟುತ್ತ ಹೋದೆ.

ಈ ಹಿಂದೆ ಅನಂತಮೂರ್ತಿ ಕಥೆಯಿಟ್ಟುಕೊಂಡು ಮಾಡಿದ ಸಿನಿಮಾಕ್ಕೂ ಇದಕ್ಕೂ ವ್ಯತ್ಯಾಸವಿದೆ. ‘ಘಟಶ್ರಾದ್ಧ’ ಕೃತಿಯನ್ನು ಸಿನಿಮಾ ಮಾಡಿದಾಗ ಅದರಲ್ಲಿನ ಪಾತ್ರಗಳು ಮಾತಾಡುವ ಸಂಭಾಷಣೆ ನನ್ನದು. ಇಲ್ಲಿ ಹಾಗೆ ಮಾಡಿಲ್ಲ. ನೋಡುಗರಿಗೆ ಅನಂತಮೂರ್ತಿ ವಾಕ್ಯಗಳ ಸೊಗಸು ಗೊತ್ತಾಗಬೇಕು. ಅವರ ಭಾಷೆ ಬಹಳ ಸುಂದರ. ವಾಕ್ಯ ತುಂಬ ಕಠಿಣ ಅನಿಸಿದಾಗ ಸರಳೀಕರಣ ಮಾಡಿಕೊಳ್ಳಲೂ ಬಿಟ್ಟಿಲ್ಲ. ಆ ಸ್ವಾತಂತ್ರ್ಯ ತೆಗೆದುಕೊಂಡಿಲ್ಲ ನಾನು. ಅವರು ರಚಿಸಿದ ವಾಕ್ಯಗಳ ಓದು, ಶಬ್ದ ಬಳಕೆ ಹೇಗೆ ಎಂಬುದು ಗೊತ್ತಾಗಬೇಕು. ಹೀಗಾಗಿ ಮುಖ್ಯವಾಗಿ ಭಾರತೀಪುರ, ಸಂಸ್ಕಾರ ಕಾದಂಬರಿ ಹಾಗೂ ಒಂದೆರಡು ಪದ್ಯ ತೆಗೆದುಕೊಂಡಿದ್ದೇನೆ. ಕೆಲವು ಸಾಲುಗಳನ್ನು ಅವರಿಂದಲೂ ಓದಿಸಿದ್ದೇನೆ.

‘ಘಟಶ್ರಾದ್ಧ’ ಸಿನಿಮಾದಿಂದ ಶುರುವಾಗಿ ದಶಕಗಳ ಕಾಲ ಅನಂತಮೂರ್ತಿಯವರನ್ನು ನೋಡಿಕೊಂಡು ಬಂದಿದ್ದೀರಿ. ಒಟ್ಟಾರೆಯಾಗಿ ಅವರನ್ನು ಗ್ರಹಿಸಿದ್ದು?
ಆಗ–ಈಗ ಬೇರೆ ರೀತಿಯಾಗಿಯೇ ಅವರನ್ನು ನೋಡುತ್ತಿದ್ದೇನೆ. ಆರಂಭದಲ್ಲಿ ನಮಗೆ ಕಾಣಿಸುತ್ತಿದ್ದುದು ವ್ಯವಸ್ಥೆ, ಜಾತಿ ಭೇದ ಟೀಕಿಸುತ್ತಿದ್ದ ಅನಂತಮೂರ್ತಿ. ಈಗ ಅವರು ತುಂಬ ಸಂಕೀರ್ಣ ವ್ಯಕ್ತಿಯಂತೆ ಕಾಣುತ್ತಾರೆ. ಹಳತು-ಹೊಸತನ್ನು ಒಟ್ಟಿಗೇ ನೋಡುವುದು; ಪೂರ್ವ-ಪಶ್ಚಿಮವನ್ನು ಒಟ್ಟಿಗೇ ನೋಡುವುದು; ಪಾರಂಪರಿಕ ಸಂಗತಿ ನೋಡುತ್ತ ನಮ್ಮತನವನ್ನು ಕಳೆದುಕೊಳ್ಳಬಾರದು, ಅದಕ್ಕಾಗಿ ಹುಡುಕಾಟ ನಡೆಸಬೇಕು ಎನ್ನುವ ಅನಂತಮೂರ್ತಿ, ಪಶ್ಚಿಮದತ್ತ ನೋಡುವ ಪ್ರವೃತ್ತಿಗಿಂತ ನಮ್ಮೊಳಗೆ ನೋಡುವ ಅಗತ್ಯ ಪ್ರತಿಪಾದಿಸುತ್ತಾರೆ. ಈ ಹುಡುಕಾಟ ಸದಾ ಅವರಲ್ಲಿ ಜಾಗೃತವಾಗಿರುತ್ತದೆ. ಒಂದೇ ಸ್ಪಷ್ಟ ನಿಲುವನ್ನಿಟ್ಟುಕೊಂಡು ಇಪ್ಪತ್ತು ವರ್ಷಗಳ ಕಾಲ ಹೇಳಿದ್ದನ್ನೇ ಹೇಳುವವರ ಬಗ್ಗೆ ನನಗೆ ಅನುಮಾನ! ಅನಂತಮೂರ್ತಿ ಅವರಲ್ಲಿ ತನ್ನ ನಿಲುವುಗಳನ್ನೇ ಪರಿಷ್ಕರಿಸುವ, ಪರೀಕ್ಷೆಗೊಡ್ಡುವ ದೊಡ್ಡತನ ಇದೆ.

ಅನಂತಮೂರ್ತಿಯವರ ಬಗ್ಗೆ ಏನನ್ನು ಈ ಸಾಕ್ಯ್ಷಚಿತ್ರದಲ್ಲಿ ನೋಡಬಹುದು?
ಒಂದು ವಿಷಯ ಸ್ಪಷ್ಟಪಡಿಸುವೆ. ಇದು ಅನಂತಮೂರ್ತಿ ಕುರಿತು ಸಾಕ್ಯ್ಷಚಿತ್ರ ಅಂತ ಹೇಳಿದರೆ ಅಷ್ಟು ಸರಿ ಹೊಂದಲಾರದು. ‘ನಾನು ಗ್ರಹಿಸಿದಂತೆ ಅನಂತಮೂರ್ತಿ’ ಎಂದರೆ ಸರಿಯಾದೀತು. ಮೊನ್ನೆಯಷ್ಟೇ ಕೆಲವರು, ಅನಂತಮೂರ್ತಿಯವರ ಆ್ಯಕ್ಟಿವಿಸಮ್ ಯಾಕೆ ಇದರಲ್ಲಿ ತೋರಿಸಿಲ್ಲ ಅಂತ ಕೇಳಿದರು. ಯಾಕೆಂದರೆ ಅದು ನನ್ನ ಮೇಲೆ ಪ್ರಭಾವ ಬೀರಿಲ್ಲ, ಅಷ್ಟೇ! ಹಾಗಾಗಿ ಅದಿಲ್ಲ ಇದಿಲ್ಲ ಅನ್ನುವ ಮಾತು ನನಗೆ ಒಪ್ಪಿಗೆಯಿಲ್ಲ. ಅಂದರೆ, ನನ್ನ ಮೇಲೆ ಪ್ರಭಾವ ಬೀರಿದ್ದನ್ನು ಈ ಚಿತ್ರಕ್ಕಾಗಿ ಹೆಕ್ಕಿಕೊಂಡಿದ್ದೇನೆ. ಹಾಗಾಗಿಯೇ ಇದರ ಶೀರ್ಷಿಕೆ ‘ಅನಂತಮೂರ್ತಿ: ನಾಟ್ ಎ ಬಯಾಗ್ರಫಿ, ಬಟ್ ಎ ಹೈಪಾಥಿಸೀಸ್’ ಅಂತ ಇಟ್ಟಿದ್ದೇನೆ. ಅಂದರೆ ಇದು ಜೀವನಚರಿತ್ರೆ ಅಲ್ಲ. ಅವರ ಆಲೋಚನೆಗಳು ಒಂದು ಸಿದ್ಧಾಂತ ಕ್ರಮವನ್ನು ರೂಪಿಸುತ್ತಿವೆ. ಅವು ಪೂರ್ಣವಾಗಿ ಇನ್ನೂ ರೂಪುಗೊಂಡಿಲ್ಲ; ರೂಪುಗೊಳ್ಳದೆಯೂ ಹೋಗಬಹುದು. ಆದರೆ ಅವರ ಚಿಂತನೆಗಳಿಂದ ಹೊಸ ಬೆಳಕು ಕಾಣಲು ಸಾಧ್ಯವಾಗಬಹುದು.

ಅವರು ನೀಡುವ ‘ವಿವಾದಾತ್ಮಕ’ ಹೇಳಿಕೆಗಳ ಹಿಂದೆಯೂ ಚಿಂತನೆಗಳಿವೆಯೇ?
ಅವರ ಹೇಳಿಕೆಗಳನ್ನು ಸರಿಯಾದ ನೆಲೆಯಲ್ಲಿ ಅರ್ಥ ಮಾಡಿಕೊಳ್ಳದೇ ಇರುವವರಿಂದ ಈ ವಿವಾದಗಳು ಸೃಷ್ಟಿಯಾಗುತ್ತಿವೆ. ಉದಾಹರಣೆಗೆ, ಮೋದಿ ಮಂತ್ರಿಯಾಗುವ ಸ್ಥಿತಿ ನೋಡಲಾರೆ ಎಂಬರ್ಥದ ಹೇಳಿಕೆ. ‘ಇರಲಾರೆ’ ಎಂದ ಕೂಡಲೇ ದೇಶ ಬಿಟ್ಟು ಹೋಗಿ ಎಂದು ಹೇಳುವುದು ಸರಿಯಲ್ಲ. ಮೋದಿ ಹಾಗೂ ಗಾಂಧೀಜಿ ಇಬ್ಬರ ರಾಷ್ಟ್ರದ ಕಲ್ಪನೆಯೂ ಬೇರೆ ಬೇರೆ. ಗಾಂಧೀಜಿ ಕಲ್ಪನೆಯ ರಾಷ್ಟ್ರದಲ್ಲಿ ವಿಭಿನ್ನ ಸಂಪ್ರದಾಯ, ಸಂಸ್ಕೃತಿ, ಭಾಷೆ ಇರಬೇಕು. ಸಮುದಾಯದ ಕೊನೇ ವ್ಯಕ್ತಿ ಕೂಡ ಎಲ್ಲರಿಗೆ ಸಮಾನ. ಆದರೆ ಮೋದಿ ರಾಷ್ಟ್ರದಲ್ಲಿ ಅದಿಲ್ಲ! ಎಲ್ಲ ವರ್ಗಗಳನ್ನೂ ಒಳಗೊಳ್ಳದ ಹಾಗೂ ಕೇವಲ ರಸ್ತೆ, ಕೈಗಾರಿಕೆಗಳನ್ನೇ ಪ್ರಮುಖವಾಗಿ ಇಟ್ಟುಕೊಂಡು ರೂಪಿಸಿದ ‘ಅಭಿವೃದ್ಧಿ’ ತಪ್ಪು ಎಂದ ಕೂಡಲೇ ಅವರನ್ನು ವಿರೋಧಿಸುವುದರಲ್ಲಿ ಅರ್ಥವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT