ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಬಣ್ಣದ ಛಾಯೆಗಳು

ನಾದ ನೃತ್ಯ
Last Updated 31 ಜನವರಿ 2016, 19:30 IST
ಅಕ್ಷರ ಗಾತ್ರ

ನೂರಾರು ಕಲ್ಪನೆಗಳು ಹಾಗೂ ಭಾವನೆಗಳಿಂದ ಕೂಡಿರುವ ಪ್ರೀತಿಗೆ ವಿಶಾಲವಾದ ಅರ್ಥವಿದೆ. ಬಣ್ಣದ ಬದುಕಿದೆ, ಚಿತ್ತಾರವಿದೆ, ಲವಲವಿಕೆಯಿದೆ. ತಾಯಿ-ತಂದೆ, ಗೆಳೆಯ-ಗೆಳತಿ, ಅಕ್ಕ-ತಮ್ಮ, ಅಣ್ಣ-ತಂಗಿಯ ಪ್ರೀತಿ, ಹೀಗೆ ಪ್ರೀತಿಗೆ ನೂರಾರು ಮಜಲುಗಳಿವೆ. ಪದ್ಮಿನಿ ರಾವ್ ಅವರ ನೆನಪಿನಲ್ಲಿ ಪೊನ್ನಯ್ಯ ಲಲಿತಕಲಾ ಅಕಾಡೆಮಿ ವತಿಯಿಂದ ಬನಶಂಕರಿಯ ‘ಪರಂಪರ’ ರಂಗಮಂದಿರದಲ್ಲಿ ‘ಸಮರ್ಪಣ’ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮೊದಲ ದಿನ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ಎರಡನೆ ದಿನದ ಕಾರ್ಯಕ್ರಮದಲ್ಲಿ ಕಲಾವಿದೆ ಚಿತ್ರಾ ವಿನೋದ್ ತಂಡದ ನೃತ್ಯ ಕಲಾವಿದರು ಪ್ರೀತಿಯ ಛಾಯೆಗಳನ್ನು ರಾಮ ಮತ್ತು ಕೃಷ್ಣರಲ್ಲಿ ಪ್ರತಿಬಿಂಬಿಸಿದರು.

ಮೊದಲ ದೃಶ್ಯದಲ್ಲಿ ತಂದೆ-ಮಗನ ಪ್ರೀತಿಯನ್ನು ರಾಮ ಮತ್ತು ದಶರಥರ ನೃತ್ಯದ ಮೂಲಕ ತೋರಿಸಲಾಯಿತು. ಕೃಷ್ಣನೂ ದೇವರೇ ರಾಮನೂ ದೇವರೇ. ಆದರೆ ಕೃಷ್ಣ ಸೆರೆಮನೆಯಲ್ಲಿ ಜನಿಸಿದ. ರಾಮ ಹುಟ್ಟಿದ ಅ ಕ್ಷಣ ಇಡೀ ರಾಜ್ಯದಲ್ಲಿ ಹಬ್ಬದ ವಾತಾವರಣವಿತ್ತು. ಅಲ್ಲಿ ರಾಮನಿಗೆ ತಂದೆ ತಾಯಿಯ ಅಗಾಧವಾದ ಪ್ರೀತಿ ಇತ್ತು, ಕೃಷ್ಣ ತನ್ನ ತಂದೆ ತಾಯಿಯ ಪ್ರೀತಿಯಿಂದ ವಂಚಿತನಾದ.

ನಂತರದ ಭಾಗದಲ್ಲಿ ರಾಮ ಸಕಲ ವಿದ್ಯಾ ಪಾರಂಗತನಾದ. ತನ್ನ ಗುರು ವಶಿಷ್ಠರಿಂದ ಕಲಿತ ವಿದ್ಯೆಗಳನ್ನು ಪ್ರದರ್ಶಿಸುವುದಕ್ಕಾಗಿ ಕಾತುರನಾದ. ಕೃಷ್ಣ  ಪ್ರೀತಿಯಿಂದ ಎಲ್ಲರನ್ನೂ ಗೆಲ್ಲುತ್ತ, ಯಾವುದೇ ಆಯುಧವಿಲ್ಲದೆ ಕೇವಲ ಕೊಳಲಿನ ನಿನಾದದಲ್ಲಿ ಎಲ್ಲರನ್ನೂ ಮರುಳು ಮಾಡುತ್ತ ಹೋದ. ನಂತರದ ಭಾಗದಲ್ಲಿ ಒಂದು ಬಲು ಸುಂದರವಾದ ಉದ್ಯಾನವನ. ಅಲ್ಲಿ ರಾಮ ಮತ್ತು ಲಕ್ಷ್ಮಣರು ವಿರಮಿಸುತ್ತಿದ್ದಾರೆ. ತಂಪಾದ ತಂಗಾಳಿಗೆ ಮನ ಹಿತವಾಗಿದೆ. ಅವರ ಬಳಿ ಒಂದು ಚೆಂಡು ಬಂದು ಬೀಳುತ್ತದೆ. ಅದನ್ನು ತೆಗೆದುಕೊಂಡು ಶ್ರೀರಾಮ ಸುತ್ತಲೂ ನೋಡುತ್ತಾನೆ. ಆಗ ಮಹಡಿಯ ಮೇಲಿಂದ ಬಲು ಸುಂದರಿಯ ದರ್ಶನವಾಗುತ್ತದೆ. ಅದು ಸೀತೆ. ಮೊದಲ ನೋಟದಲ್ಲಿ ಪ್ರೇಮಾಂಕುರವಾಗುತ್ತದೆ. ಇತ್ತ ಕೃಷ್ಣ ರಾಧೆಯ ಮೊದಲ ನೋಟಕ್ಕೆ ಅವಳಲ್ಲಿ ಅನುರಕ್ತನಾಗುತ್ತಾನೆ. ಅವಳ ಪ್ರೀತಿಗೆ ಶರಣಾಗುತ್ತಾನೆ.

ದೃಶ್ಯ ನಾಲ್ಕರ ಭಾಗದಲ್ಲಿ ಜನಕ ಮಹಾರಾಜ ಸೀತೆಯ ಸ್ವಯಂವರ ಏರ್ಪಡಿಸಿರುತ್ತಾನೆ. ರಾಮ ಶಿವಧನಸ್ಸು ಮುರಿದು ಸೀತೆಯನ್ನು ಮದುವೆಯಾಗುವ ಪ್ರಸಂಗ ಜರಗುತ್ತದೆ. ಕೃಷ್ಣ ಗೋಪಿಕೆಯರ ಹೃದಯದಲ್ಲಿ ನೆಲೆಸುತ್ತಾನೆ. ಪ್ರತಿಯೊಬ್ಬರೂ ಕೃಷ್ಣನ ಪ್ರೀತಿಗೆ ಹಾತೊರೆಯುತ್ತಿರುತ್ತಾರೆ. ಅವನ ಕೊಳಲಿನ ನಿನಾದಕ್ಕೆ ಮೈ ಮರೆಯುತ್ತಾರೆ.

ದೃಶ್ಯ ಐದರಲ್ಲಿ ರಾಮನನ್ನು ಕಾಡಿಗೆ ಕಳುಹಿಸಬೇಕೆಂದು ಮತ್ತು ಭರತನಿಗೆ ಪಟ್ಟವನ್ನು ಕಟ್ಟಬೇಕೆಂದು ಕೈಕೆಯ ದಶರಥ ರಾಜನಲ್ಲಿ ವಿನಂತಿಸುತ್ತಾಳೆ. ಕೈಕೆಯಿಯ ಆಸೆಯಂತೆ ರಾಮನನ್ನು ಕಾಡಿಗೆ ಕಳುಹಿಸಲಾಗುತ್ತದೆ. ಕೃಷ್ಣ ರಾಧೆಯನ್ನು ಅರೆ ಕ್ಷಣ ಬಿಟ್ಟಿರಲಾರ. ಕೃಷ್ಣ ಆ ವಿರಹ ವೇದನೆಯನ್ನು ಸಹಿಸಲಾರ. ಆದರೆ ರಾಧೆಗೆ ತನ್ನ ಜೀವನದಲ್ಲಿ ವಿಶಿಷ್ಟವಾದ ಸ್ಥಾನವಿದೆ. ರಾಧೆಯ ಜೊತೆ ಕೃಷ್ಣ ಒಂದು ವಿನೂತನವಾದ ತುಂಟತನದ ಜಗಳವಾಡುತ್ತಿದ್ದಾನೆ.

ದೃಶ್ಯ ಆರರ ಭಾಗದಲ್ಲಿ ಕಗ್ಗತ್ತಲ ರಾತ್ರಿ ಇಡೀ ಕಾಡೇ ಕತ್ತಲಾಗಿದೆ. ಒಂದು ಭಯನಾಕ ವಾತಾವರಣವಿದೆ. ರಾಮ ಸೀತೆಯನ್ನು ಮದುವೆಯಾಗಿ  ಕಾಡಿಗೆ ಬಂದಿದ್ದಾನೆ. ಅವರು ಸುಂದರವಾದ ಕುಟೀರವನ್ನು ಪ್ರವೇಶ ಮಾಡಿದ್ದಾರೆ. ಕೃಷ್ಣ ರಾಧೆಯನ್ನು ಬಿಟ್ಟು ಬಲು ದೂರದ ಪ್ರಯಾಣ ಮಾಡಬೇಕಾಗಿದೆ. ಮಥುರಾ ರಾಜ್ಯ ಅವನಿಗಾಗಿ ಎದುರು ನೋಡುತ್ತಿದೆ. ರುಕ್ಮಿಣಿ ಮತ್ತು ಸತ್ಯಭಾಮೆ ಅವನಿಗಾಗಿ ಕಾಯುತ್ತಿದ್ದಾರೆ. ದೃಶ್ಯ ಏಳು ರಾಮ ಸೀತಾ ಒಬ್ಬರ ಬಳಿ ಒಬ್ಬರು ತಮ್ಮ ಆಸೆ, ಭಾವನೆಗಳನ್ನು ಹೇಳಿಕೊಳ್ಳಲಾಗಲಿಲ್ಲ. ರಾವಣ ಇವರಿಬ್ಬರನ್ನು ಬೇರೆ ಮಾಡಿದ.

ಪ್ರೀತಿಯೊಂದು ಸುಂದರವಾದ ಪಯಣ. ಅಲ್ಲಿ ನೋವಿದೆ, ದುಃಖವಿದೆ,  ಖುಷಿಯಿದೆ, ಪ್ರೇಮಿಯಿಂದ ದೂರವಾದಾಗ ನೋವು ತೀವ್ರವಾಗುತ್ತದೆ. ಹತ್ತಿರವಿದ್ದಾಗ ಸ್ವರ್ಗವೇ ಸಿಕ್ಕಂತಾಗುತ್ತದೆ. ಈ ಪ್ರೇಮದ ತಿರಳು ಸತ್ಯಭಾಮೆಗೆ ಮತ್ತು ರುಕ್ಮಿಣಿಗೆ ಅರಿವಾಗುತ್ತದೆ. ಕೊನೆಯ ದೃಶ್ಯದ ಭಾಗವಾಗಿ ರಾಮ ಕಾಡಿನಿಂದ ಅಯೋಧ್ಯೆಗೆ ಮರಳುತ್ತಾನೆ, ಅಯೋಧ್ಯೆಯಲ್ಲಿ ರಾಮನ ಬರುವಿಕೆಗಾಗಿ ಸಮಸ್ತ ಪ್ರಜೆಗಳು ಕಾಯುತ್ತಿರುತ್ತಾರೆ. ಅವನಿಗೆ ಪಟ್ಟಾಭಿಷೇಕ ಮಾಡಲಾಗುತ್ತದೆ.

ಕೃಷ್ಣ ಎಲ್ಲರನ್ನು ರಕ್ಷಿಸುವ ಸಲುವಾಗಿ ಜನ್ಮತಾಳಿದವನು. ಪ್ರತಿಯೊಬ್ಬರ ಬಗ್ಗೆಯೂ ಸಹಾನುಭೂತಿಯನ್ನು ಇಟ್ಟುಕೊಂಡಿರುವವನು. ಅವನ ಲೋಕ ಕಲ್ಯಾಣ ಸಾಗುತ್ತದೆ. ಮೂರು ಗಂಟೆಗಳ ನೃತ್ಯ ಕಣ್ಣಿಗೆ ರಸದೌತಣ ನೀಡಿತು. ಆಹಾರ್ಯ ಮತ್ತು ಬೆಳಕು  ಉತ್ತಮವಾಗಿತ್ತು. ಸಂಗೀತದಲ್ಲಿ ಚಿತ್ರಾ ವಿನೋದ್ (ನಟುವಾಂಗ), ರಘುರಾಮ್ (ಹಾಡುಗಾರಿಕೆ), ಲಿಂಗರಾಜು (ಮೃದಂಗ ಡೋಲು ಮತ್ತು ಪರಿಕಲ್ಪನೆ), ರಘುನಂದನ್ (ಕೊಳಲು), ಸುಮಾರಾಣಿ (ಸಿತಾರ್), ಕಾರ್ತಿಕ ವೈದಾತ್ರಿ (ರಿದಂ ಪ್ಯಾಡ್). ರಚನೆ ಷಡಕ್ಷರಿ.

ಕರ್ನಾಟಕ  ಕ್ಷೇತ್ರದ ವೈಭವ
ಇತ್ತೀಚೆಗೆ ಸಹಕಾರ ನಗರದ ಸ್ಕೂಲ್ ವಿವೇಕಾನಂದ ಸಭಾಂಗಣದಲ್ಲಿ ಕೃಷ್ವಿ ಆರ್ಟ್ಸ್ ಫೌಂಡೇಶನ್ ಸಂಸ್ಥೆಯ ನಿರ್ದೇಶಕಿ ಭವ್ಯಾ ಮಂಜುನಾಥ್ ಅವರು ತಮ್ಮ ಕಲಾ ಶಾಲೆಯ ಮೊದಲ ವಾರ್ಷಿಕೋತ್ಸವದ ಸವಿನೆನಪಿಗಾಗಿ ಹೆಸರಾಂತ ನೃತ್ಯ ಕಲಾವಿದರ ನೃತ್ಯಗಳನ್ನು ಕಲಾರಸಿಕರಿಗೆ ಪ್ರದರ್ಶಿಸಿದರು.

ಕಾರ್ಯಕ್ರಮದ ಮೊದಲ ಪ್ರಸ್ತುತಿಯಾಗಿ ‘ಮಾಯಾ ಡಾನ್ಸ್ ಅಸೆಂಬಲ್’ ತಂಡದವರು ಭರತನಾಟ್ಯವನ್ನು ಪ್ರಸ್ತುತಪಡಿಸಿದರು. ಪುಷ್ಪಾಂಜಲಿ (ರಾಗ ಸರಸ್ವತಿ, ಆದಿತಾಳ) ನೃತ್ಯವನ್ನು, ನಂತರದಲ್ಲಿ ಸ್ವರಗುಚ್ಚವನ್ನು ಪ್ರದರ್ಶಿಸಿದರು. ನೃತ್ಯ ಮೋಹಕವಾಗಿತ್ತು, (ಶೇಖರ್, ಸ್ನೇಹಾ ಭಾಗವತ್, ಅಂಜಲಿ ಶ್ರೀಕಾಂತ, ರೂಪೇಶ್) ಮತ್ತು ಸ್ವಪ್ನಾ ರಾಜೇಂದ್ರ ಅವರಿಂದ ಮೋಹಿನಿ ಆಟ್ಟಂ.

ಮೊದಲ ಭಾಗದಲ್ಲಿ ಮಧುರ ಅಷ್ಟಕಂ (ರಾಗಮಾಲಿಕೆ , ಆದಿತಾಳ) ಸುಧಾಮ ಮತ್ತು ಕೃಷ್ಣನ ಸ್ನೇಹ ಮತ್ತು ಪ್ರೀತಿಯ ಅನೇಕ ಮಜಲುಗಳನ್ನು ಅನಾವರಣಗೊಳಿಸಿದರು. ಮುಂದಿನ  ಭಾಗದಲ್ಲಿ  ಪದಂ ನ (ರಾಗ ಬೃಂದಾವನ ಸಾರಂಗ) ಪ್ರದರ್ಶನವನ್ನು ನೀಡಿದರು. ಮುಂದಿನ ಭಾಗದಲ್ಲಿ  ‘ಜೀವಾ’ ವನ್ನು ಪ್ರಸ್ತುತಪಡಿಸಲಾಯಿತು. (ರಾಗ ಆನಂದ ಭೈರವಿ, ಆದಿತಾಳ) ನೃತ್ತಭಾಗದಲ್ಲಿ ಕಲಾವಿದೆಯ ಪರಿಪಕ್ವತೆ ಎದ್ದು ಕಾಣುತ್ತಿತ್ತು.

ಕೊನೆಯದಾಗಿ ಸಂಜಯ್ ಶಾಂತಾರಾಂ (ಶಿವಪ್ರಿಯ ಸ್ಕೂಲ್ ಆಫ್ ಡ್ಯಾನ್ಸ್) ಮತ್ತು ತಂಡದವರಿಂದ ‘ಕರ್ನಾಟಕ ಐತಿಹಾಸಿಕ ಕ್ಷೇತ್ರದ ವೈಭವವನ್ನು’ ನೃತ್ಯ ರೂಪಕದಲ್ಲಿ ಪ್ರದರ್ಶಿಸಲಾಯಿತು. ಇದರಲ್ಲಿ ವಿಜಯನಗರ ಹಂಪಿಯ ವೈಭೋಗ, ಹೊಯ್ಸಳ ಸಾಮ್ರಾಜ್ಯ, ಶಂಕರಾಚಾರ್ಯರ ಶೃಂಗೇರಿ, ರಾಮಾನುಜಾಚಾರ್ಯರ ಮೇಲುಕೋಟೆ, ಮಧ್ವಾಚಾರ್ಯರ ಉಡುಪಿ ಕ್ಷೇತ್ರ, ಚಾಮುಂಡಿ - ಮಹಿಷಾಸುರನ ಸಂಹಾರ, ಇತ್ಯಾದಿಗಳನ್ನು ಪ್ರದರ್ಶಿಸಲಾಯಿತು.

ನೃತ್ಯ ಮತ್ತು ಸಂಗೀತವು ಮನಮುಟ್ಟುವಂತಿತ್ತು. ಸಾಹಿತ್ಯ ಮತ್ತು ಸಂಗೀತಗಳು ನೃತ್ಯಕ್ಕೆ ಪೂರಕವಾಗಿದ್ದವು. ನೃತ್ಯ ಸಂಯೋಜನೆ ಸಂಜಯ್ ಶಾಂತಾರಾಂ ಮತ್ತು ಸುಪ್ರಿಯ ದೇಸಾಯಿ. ಸಂಗೀತ ಪ್ರವೀಣ್ ಡಿ.ರಾವ್. ಕಥಕ್, ಕೂಚುಪುಡಿ, ಭರತನಾಟ್ಯ, ಜನಪದ ನೃತ್ಯಗಳಾದ,  ಡೊಳ್ಳು ಕುಣಿತ, ಕೋಲಾಟವನ್ನು ಸಹ ಕಾರ್ಯಕ್ರಮದ ಭಾಗಗಳಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT