ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಬೆಂಕಿಯಲ್ಲಿ ಮಿಂದೆದ್ದ ಮಾನಸಿ, ಹುಟ್ಟುವಾಗಲೇ ಹೋರಾಡಿ ಬದುಕನ್ನು ಗೆದ್ದ ಶೌರ್ಯ

ಮುಸಾಫಿರ್
Last Updated 23 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಆ ಯುವತಿ ಮತ್ತು ಆಕೆಯ ಹೊಟ್ಟೆಯಲ್ಲಿರುವ ಮಗು ಬದುಕುಳಿಯಲು ಸಾಧ್ಯವೇ? ನಡು ಮಧ್ಯಾಹ್ನ... ಎಲೆಕ್ಟ್ರಾನಿಕ್ಸ್ ಸಿಟಿಯಿಂದ ದೊಡ್ಡಬಳ್ಳಾಪುರ ರಸ್ತೆಯಲ್ಲಿನ ಆ ಅಪಾರ್ಟ್‌ಮೆಂಟ್ ಬ್ಲಾಕ್‌ನ ಕಡೆಗೆ ಕಾರಿನಲ್ಲಿ ಧಾವಿಸುವಾಗ ಮೇಲಿನ ಪ್ರಶ್ನೆ ಮನದಲ್ಲಿ ಕ್ಷಣ-ಕ್ಷಣಕ್ಕೂ ಪ್ರತಿಧ್ವನಿಸುತ್ತಿತ್ತು. ಕಚೇರಿಯಲ್ಲಿ ಕುಳಿತು ಕೆಲಸದಲ್ಲಿ ನಿರತನಾಗಿದ್ದ ವೇಳೆ ಬಂದ, ‘‘ದಯವಿಟ್ಟು ಕೂಡಲೇ ಬಂದು ನಮ್ಮನ್ನು ಕಾಪಾಡಿ’’ ಎಂಬ ಆಕ್ರಂದನವನ್ನು ಕೇಳಿದ ಮರುಕ್ಷಣವೇ ಕಾರನ್ನೇರಿ ವೇಗವಾಗಿ ಅತ್ತ ಧಾವಿಸಿದ್ದೆ.

ಸತ್ಯಾಸತ್ಯತೆ, ಸರಿ-ತಪ್ಪು, ತಾರ್ಕಿಕ ನಿರ್ಧಾರ ಯಾವುದನ್ನೂ ತೆಗೆದುಕೊಳ್ಳುವ ಕಾಲ ಅದಾಗಿರಲಿಲ್ಲ. ಮನಸ್ಸಿಗೆ ಕೆಲಸ ಕೊಡದೇ, ಹೃದಯದ ಮಾತಿಗೆ ಓಗೊಟ್ಟು ಹೊರಟ ಕ್ಷಣ ಅದಾಗಿತ್ತು. ತುಂಬಿ ತುಳುಕುತ್ತಿದ್ದ ಟ್ರಾಫಿಕ್ ನಡುವೆ ಕಾರು ಚಲಾಯಿಸುತ್ತಿರುವಾಗಲೇ, ಮನದಲ್ಲಿ ಕಳೆದೊಂದು ದಿನದಿಂದ ನಡೆದ ಘಟನೆಗಳು ಸಾಲು-ಸಾಲಾಗಿ ಮನದಲ್ಲಿ ಹಾದು ಹೋದವು. ಒಂದು ದಿನ ಮೊದಲು. ಸಂಜೆ ಐದರ ಹೊತ್ತು. ಗೊತ್ತಿಲ್ಲದ ಒಂದು ಸಂಖ್ಯೆಯಿಂದ ಮೊಬೈಲ್‌ಗೆ ಕರೆ ಬಂದಾಗ ಸಹಜವಾಗಿಯೇ ಸ್ವೀಕರಿಸಿಬಿಟ್ಟಿದ್ದೆ.

‘‘ನೀವು ಸಿಂಬಾಯಸಿಸ್ ಇನ್‌ಸ್ಟಿಟ್ಯೂಟ್ ಆಫ್ ಮೀಡಿಯ ಅಂಡ್ ಕಮ್ಯುನಿಕೇಷನ್‌ನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾಗ ಮಥಾನ್ (ಈಗಿನ ಸ್ಟರ್ಲಿಂಗ್ ಮ್ಯಾಕ್) ಹೊಟೇಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮ್ಮೇಳನವೊಂದರಲ್ಲಿ ನಿಮ್ಮನ್ನು ಭೇಟಿಯಾಗಿದ್ದೆ. ಇಂಟರ್ನಿಯಾಗಿದ್ದ ನಾನು ನಿಮ್ಮ ವಿಸಿಟಿಂಗ್ ಕಾರ್ಡ್ ಕೂಡ ತೆಗೆದುಕೊಂಡಿದ್ದೆ. ಆನಂತರ ನಿಮ್ಮ ಬರವಣಿಗೆಗಳನ್ನು ಕೂಡ ಸಾಕಷ್ಟು ಓದಿದ್ದೇನೆ. ನಿಮ್ಮಿಂದ ನನಗೊಂದು ಉಪಕಾರ ಆಗಬೇಕು’’– ಆ ಬದಿಯಿಂದ ಮಾತು ಆರಂಭಿಸಿದ ಯುವತಿ ನನಗೆ ಅವಕಾಶ ಕೊಡದೇ, ಅವರ ಜೀವನದ ಪುಟಗಳನ್ನು ಪಟಪಟನೆ ತೆರೆದಿಟ್ಟು ಬಿಟ್ಟರು.

ಹೆಸರು ಮಾನಸಿ. ವಯಸ್ಸು 23. ಹುಟ್ಟಿ ಬೆಳೆದದ್ದು ಕೋಲ್ಕತ್ತದಲ್ಲಿ. ತಂದೆ-ತಾಯಿಯ ಒಬ್ಬಳೇ ಒಬ್ಬ ಮಗಳು. ತಂದೆ-ತಾಯಿ ಮದುವೆಯಾಗಿ ಬಹಳ ವರ್ಷಗಳ ನಂತರ, ಅಂದರೆ ಅವರ ಇಳಿ ವಯಸ್ಸಿನಲ್ಲಿ ದೇವರು ಕೊಟ್ಟ ಅಪರೂಪದ ವರ! ಆದ್ದರಿಂದ ಮಗಳಿಗೆ ಅವಳ ಬದುಕನ್ನು ರೂಪಿಸಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯ. ಮಾನಸಿ ಬೆಂಗಳೂರಿನಲ್ಲಿಯೇ ಓದಿ ಇಲ್ಲಿಯೇ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯೊಂದರಲ್ಲಿ ಟೀಮ್ ಲೀಡರ್ ಆಗಿದ್ದರು. ಡಿಸೈನರ್, ಪೈಂಟರ್, ಫೋಟೊಗ್ರಾಫರ್, ಮ್ಯೂಸಿಷಿಯನ್, ಡಿಜೆ... ಹೀಗೆ ಸರಾಗವಾಗಿ ಸಾಗಿದ್ದ ಸೃಜನಶೀಲ ಜೀವನ ಮತ್ತು ವೃತ್ತಿ ಬದುಕಿಗೆ ಬೆಂಕಿ ಹಾಕಿದ್ದು ಪ್ರೀತಿ.

ಕಾಲೇಜಿನಲ್ಲಿದ್ದಾಗಲೇ ಮಾನಸಿ ಬದುಕನ್ನು ಪ್ರವೇಶಿಸಿದ ಆಕಾಶ್ ಎಂಬ ವ್ಯಕ್ತಿ ಅವರನ್ನು ಆವರಿಸಿಕೊಂಡು ಬಿಟ್ಟ. ಸ್ನೇಹ ಪ್ರೀತಿಯಾಯಿತು. ಪ್ರೀತಿ ಮನೆಯಲ್ಲಿ ಗೊತ್ತಾಯಿತು. ತಂದೆ-ತಾಯಿಯ ಒಪ್ಪಿಗೆಯಿಂದಲೇ ಇಬ್ಬರೂ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿ ಬದುಕು ಸಾಗಿಸಲಾರಂಭಿಸಿದರು. ಸುಮಾರು ಆರು ವರ್ಷಗಳಿಂದ ಒಂದೇ ಮನೆಯಲ್ಲಿ ಜೀವಿಸಿದ್ದ ಅವರಿಬ್ಬರ ಬದುಕಲ್ಲಿ ಬಿರುಕು ಮೂಡಿದ್ದು, ಮಾನಸಿ ಗರ್ಭಿಣಿ ಎಂಬ ವಿಷಯ ಗೊತ್ತಾದಾಗ!

ಯಾವಾಗ ಗರ್ಭಿಣಿ ಎಂದು ಗೊತ್ತಾಯಿತೋ ಆ ಕ್ಷಣದಿಂದಲೇ ಮಾನಸಿ ಮದುವೆಗೆ ಒತ್ತಾಯ ಮಾಡಲಾರಂಭಿಸಿದರು. ಕೆಲವು ದಿನಗಳ ಕಾಲ ಅದು-ಇದು ಎಂದು ಅವರ ಬೇಡಿಕೆ ತಿರಸ್ಕರಿಸಿದ ಆಕಾಶ್ ಕ್ರಮೇಣ ಈ ಸಂಬಂಧವೇ ಬೇಡ ಎನ್ನಲಾರಂಭಿಸಿದ. ಅಕಸ್ಮಾತ್ ಸಂಬಂಧ ಮುಂದುವರಿಯಬೇಕು ಎಂದರೆ ಗರ್ಭಪಾತ ಮಾಡಿಸಿಕೋ ಎಂದು ಬೆದರಿಕೆ ಕೂಡ ಹಾಕಿದ. ಯಾವಾಗ ಮಾನಸಿ ಒಲ್ಲೆ ಎಂದಳೋ, ಅವಳ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ. ಮಾನಸಿ ಕೆಲಸ ಹೋಯಿತು.

ನಿರಂತರ ದೈಹಿಕ ಹಲ್ಲೆ, ಮಾನಸಿಕ ಹಿಂಸೆ ಶುರುವಾಯಿತು. ಆತನ ಯಾವುದೇ ಒತ್ತಡಕ್ಕೆ ಮಣಿಯದ ಮಾನಸಿ ಏನೇ ಆದರೂ ನಾನು ಗರ್ಭಪಾತ ಮಾಡಿಸೊಲ್ಲ, ಮಗುವಿಗೆ ಜನ್ಮ ನೀಡಿಯೇ ನೀಡುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬಂದಿದ್ದರು. ದಿನದಿಂದ ದಿನಕ್ಕೆ ಆಕಾಶ್ ಕ್ರೂರವಾಗತೊಡಗಿದ. ಏಕೆಂದರೆ ಆತ ಈಗಾಗಲೇ ಮೂರು ಬೇರೆ ಬೇರೆ ಊರುಗಳಲ್ಲಿ ಮೂವರು ಬೇರೆ, ಬೇರೆ ಯುವತಿಯರ ಪಾಲಿಗೆ ಫಿಯಾನ್ಸಿಯಾಗಿದ್ದ! ನೀನು-ನಿನ್ನ ಮಗು ಇಬ್ಬರೂ ಬದುಕಿ ಉಳಿಯೊಲ್ಲ ಎಂಬ ಬೆದರಿಕೆ!

ಕೊನೆಗೆ ಬೇರೆ ದಾರಿ ಕಾಣದೇ ಬೆಂಗಳೂರು ಬಿಟ್ಟು, ದೊಡ್ಡಬಳ್ಳಾಪುರ ರಸ್ತೆಯಲ್ಲಿನ ಆ ಅಪಾರ್ಟ್‌ಮೆಂಟ್ ಬ್ಲಾಕ್‌ನಲ್ಲಿ ಮಾನಸಿ ಭೂಗತವಾಗಬೇಕಾಯಿತು. ಏಳು ತಿಂಗಳಾಗುವವರೆಗೆ ಮನೆಯಿಂದಲೇ ಆನ್‌ಲೈನ್‌ನಲ್ಲಿ ಕೆಲಸ ಮಾಡಿ ಹಣ ಸಂಪಾದನೆ ಮಾಡಿ ಜೀವನ ಸಾಗಿಸುತ್ತಿದ್ದ ಮಾನಸಿ, ಕಳೆದ ಎರಡು ತಿಂಗಳಿಂದ ಬಸವಳಿದು ಕೂತಿದ್ದರು. ಆದರೆ, ಯಾವುದೇ ಕಾರಣಕ್ಕೆ ಹೊಟ್ಟೆಯೊಳಗಿದ್ದ ಭ್ರೂಣಕ್ಕೆ ನೋವಾಗದಂತೆ ಆಕೆ ನೋಡಿಕೊಂಡಿದ್ದರು. ಈ ನಡುವೆ ಮಾನಸಿ ಚೆಕ್ ಅಪ್‌ಗೆ ಹೋಗಬೇಕೆಂದಾಗ ಕೆಲವು ಆಸ್ಪತ್ರೆಗಳಲ್ಲಿ ಆಕೆಯನ್ನು ಒಳಗೆ ಕೂಡ ಸೇರಿಸಲಿಲ್ಲ.

ಕಾರಣ, ಆಕೆ ಒಬ್ಬಂಟಿ ಪೋಷಕಿ (ಸಿಂಗಲ್ ಪೇರೆಂಟ್). ಕೊನೆಗೆ ಸಹಕಾರನಗರದಲ್ಲಿರುವ ಖಾಸಗಿ ಆಸ್ಪತ್ರೆಯವರು ಗರ್ಭಿಣಿ ಮಾನಸಿಯ ಚೆಕ್ ಅಪ್ ಮಾಡಲು ಮತ್ತು ಹೆರಿಗೆಗೆ ಒಳರೋಗಿಯಾಗಿ ಅಡ್ಮಿಟ್ ಮಾಡಿಕೊಳ್ಳಲು ಒಪ್ಪಿಕೊಂಡರಂತೆ. ಅದು ಯಾವುದೇ ಅಡ್ವಾನ್ಸ್ ಪೇಮೆಂಟ್ ಇಲ್ಲದೇ! ‘‘ನಿಮ್ಮ ತಂದೆ-ತಾಯಿಗೆ ವಿಷಯ ತಿಳಿಸಬಹುದಿತ್ತಲ್ಲಾ?’’ ಪ್ರಶ್ನಿಸಿದೆ. ‘‘ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಇಬ್ಬರಿಗೂ ಈಗ 70 ದಾಟಿದೆ. ಇಬ್ಬರೂ ಹಾರ್ಟ್ ಪೇಷೆಂಟ್. ನಾನೇ ಅವರನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದೇನೆ. ಈಗ ನಾನು ಎಂಟು ತಿಂಗಳು ಗರ್ಭಿಣಿ ಎಂಬ ವಿಷಯ ತಿಳಿಸಿದರೆ ಇಬ್ಬರೂ ಕುಸಿದು ಬಿದ್ದು ಸತ್ತು ಹೋಗಬಹುದು’’ ಎಂದು ಮಾನಸಿ ಹೇಳಿದಾಗ ನಂಬದೇ ಇರಲಾಗಲಿಲ್ಲ. ಏಕೆಂದರೆ ಆ ದನಿಯಲ್ಲಿ ನೋವಿನ ಜೊತೆ ಪ್ರಾಮಾಣಿಕತೆ ಕೂಡ ಮನೆ ಮಾಡಿತ್ತು.

‘‘ನನ್ನಿಂದ ನೀವು ಯಾವ ಸಹಾಯ ನಿರೀಕ್ಷಿಸುತ್ತಿದ್ದೀರಿ?’’ ‘‘ಈಗ ನನ್ನ ಕೈಯಲ್ಲಿ ಒಂದು ಪೈಸೆ ಹಣವಿಲ್ಲ. ಆಕಾಶ್ ಮಾಡಿದ ಗಲಾಟೆಗಳಿಂದ ಯಾವುದೇ ಸ್ನೇಹಿತರೂ ಕೂಡ ನನ್ನ ನೆರವಿಗೆ ಬರುತ್ತಿಲ್ಲ. ಇಷ್ಟರವರೆಗೆ ಕೈಯಲ್ಲಿದ್ದ ಹಣವೆಲ್ಲ ಆಸ್ಪತ್ರೆಗೆ ಖರ್ಚಾಗಿದೆ. ನನ್ನ ಈಗಿನ ಪರಿಸ್ಥಿತಿಯಲ್ಲಿ ಮನೆಯಿಂದಲೇ ಕೆಲಸ ಮುಂದುವರಿಸಿ ಸಂಪಾದನೆ ಮಾಡುವ ಶಕ್ತಿ ಕೂಡ ನನಗಿಲ್ಲ. ಹೆರಿಗೆಯಾಗಿ ಮಗುವಿಗೆ ಒಂದೆರಡು ತಿಂಗಳಾಗುವವರೆಗೆ ಯಾವುದಾದರೂ ಸ್ವಸಹಾಯ ಸಂಸ್ಥೆಯವರಿಂದ ಒಂದಿಷ್ಟು ಹಣದ ಮತ್ತು ಮಾನಸಿಕ ಬೆಂಬಲ ಕೊಡಿಸಿ’’. ದಯನೀಯವಾಗಿ ಮಾನಸಿ ಬೇಡಿಕೊಂಡರು. ಆ ಕ್ಷಣ ಯಾವುದೇ ಉತ್ತರ ನೀಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಗುರುತು ಪರಿಚಯವಿಲ್ಲದ ಯುವತಿ. ಜವಾಬ್ದಾರಿ ಅಷ್ಟು ಸುಲಭದ್ದಲ್ಲ. ಆದರೂ, ಎರಡು ಜೀವಗಳ ಅಳಿವು-ಉಳಿವಿನ ಪ್ರಶ್ನೆ!

‘‘ಒಂದೆರಡು ದಿನ ಅವಕಾಶ ನೀಡಿ. ಯಾವುದಾದರೂ ಸ್ವಯಂಸೇವಾ ಸಂಸ್ಥೆಯವರನ್ನು ಸಂಪರ್ಕಿಸಿ ಅವರನ್ನು ಜೊತೆಯಲ್ಲಿಯೇ ಕರೆದುಕೊಂಡು ನಿಮ್ಮ ಮನೆಗೆ ಬಂದು ಪರಿಚಯ ಮಾಡಿಕೊಡುತ್ತೇನೆ’’ ಎಂದೆ. ‘‘ನನಗೆ ಆಗಾಗ ನೋವು ಕಾಣಿಸಿಕೊಳ್ಳುತ್ತಿದೆ. ಈಗ ಎಂಟು ತಿಂಗಳು ಒಂದು ವಾರ. ಅಕಸ್ಮಾತ್ ಪ್ರಿಮೆಚ್ಯೂರ್ ಡೆಲಿವರಿ ಆದರೆ ಏನು ಮಾಡುವುದು ಎಂದು ಗೊತ್ತಿಲ್ಲ. ಆದಷ್ಟು ಬೇಗ ನನಗೆ ಸಹಾಯ ಮಾಡಿ’’ ಎಂದು ಫೋನ್ ಇಟ್ಟಿದ್ದರು. ತಕ್ಷಣವೇ ನಾನು ನನಗೆ ಗೊತ್ತಿದ್ದ ಮೂರ್ನಾಲ್ಕು ಸ್ವಯಂಸೇವಾ ಸಂಸ್ಥೆಗಳನ್ನು ಸಂಪರ್ಕಿಸುವ ಯತ್ನ ಮಾಡಿದೆ. ಎಲ್ಲರಿಂದಲೂ ನೂರಾರು ಪ್ರಶ್ನೆಗಳು ಕೇಳಿಬಂದವು, ಹೊರತೂ ತತ್‌ಕ್ಷಣದ ನೆರವಿನ ಭರವಸೆ ಸಿಗಲಿಲ್ಲ.

ನಡುವೆ ಪತ್ರಕರ್ತನ ಬುದ್ಧಿ ಕೆಲಸ ಮಾಡಿತು. ಮಾನಸಿ ಫೇಸ್‌ಬುಕ್‌ಗೆ ಹೋಗಿ ಅಲ್ಲಿದ್ದ ಪೋಸ್ಟ್‌ಗಳು ಮತ್ತು ಅವರು ಹೇಳಿದ್ದ ಕಥೆಗೆ ಕೊಂಡಿ ಹಾಕಿ ನೋಡಿದೆ. ಆಕೆ ಹೇಳಿದ್ದರಲ್ಲಿ ಬಹಳಷ್ಟು ಸತ್ಯವಿದೆ ಎಂದು ಸ್ಪಷ್ಟವಾಯಿತು. ಆದರೆ ಹೇಗೆ ಸಹಾಯ ಮಾಡುವುದು!? ಯಾರ ಮೂಲಕ ಅವರಿಗೆ ನೆರವಾಗುವುದು!? ಬೆಳಿಗ್ಗೆಯಿಂದ ಮನಸ್ಸಲ್ಲಿ ಮಾನಸಿ ಕಥೆ ಬಿರುಗಾಳಿಯೆಬ್ಬಿಸುತ್ತಿದ್ದರೂ, ಕಚೇರಿಯಲ್ಲಿ ಬಹಳ ಕೆಲಸವಿದ್ದದ್ದರಿಂದ ಒಂದೆರಡು ಗಂಟೆ ಎಲ್ಲವನ್ನೂ ಮರೆತಿದ್ದೆ. ಆದರೆ, ಇದ್ದಕ್ಕಿದ್ದಂತೆ ಬಂದು ಜೀವವುಳಿಸಿ ಎಂಬ ಕರೆಗೆ ಓಗೊಡದೇ ಇರಲಾಗಲಿಲ್ಲ. ಎರಡು ಗಂಟೆಯ ಪಯಣದ ನಂತರ ಕಾರನ್ನು ಅಪಾರ್ಟ್‌ಮೆಂಟ್ ಬ್ಲಾಕ್‌ನ ಆವರಣದಲ್ಲಿ ನಿಲ್ಲಿಸಿ, ಅಂಜುತ್ತಲೇ ಮಾನಸಿ ಮನೆ ಬಾಗಿಲು ತಟ್ಟಿದೆ.

ಒಳಗಿನಿಂದ ಕ್ಷೀಣವಾಗಿ ‘‘ಅಮ್ಮ ನನ್ನ ಕೈಯಲ್ಲಿ ತಡೆಯೋಕೆ ಆಗೊಲ್ಲ. ಪ್ಲೀಸ್ ಕಮ್ ಅಂಡ್ ಹೆಲ್ಪ್ ಮಿ’’ ಎಂಬ ಆಕ್ರಂದನ. ಮೂರ್ನಾಲ್ಕು ನಿಮಿಷ ಸುಮ್ಮನಿದ್ದವ ಜೋರಾಗಿ ಕಾಲಿಂಗ್ ಬೆಲ್ ಬಜಾಯಿಸಿದೆ. ‘‘ಬಾಗಿಲು ತೆಗೆದೇ ಇದೆ. ಒಳಗೆ ಬನ್ನಿ’’– ಒಳಗಿನಿಂದ ನೋವಿನ ಚೀತ್ಕಾರ. ಬಾಗಿಲು ತೆರೆದು ಒಳಗಡಿಯಿಟ್ಟವ ದಂಗಾಗಿ ನಿಂತೆ. ಹಾಲ್‌ನ ಮೂಲೆಯಲ್ಲಿ ಇದ್ದ ದೀವಾನದ ಮೇಲೆ ಮುದುಡಿ ಮಲಗಿ ನೋವಿಂದ ಒದ್ದಾಡುತ್ತಿದ್ದರು ಒಂಟಿ ಜೀವಿ ಮಾನಸಿ. ಅಲೆ ಅಲೆಯಾಗಿ ಅಪ್ಪಳಿಸುತ್ತಿದ್ದ ನೋವನ್ನು ತಡೆದುಕೊಳ್ಳಲಾರದೇ ಕ್ಷಣ-ಕ್ಷಣಕ್ಕೂ ಅಮ್ಮ, ಅಮ್ಮ ಎಂದು ನರಳುತ್ತಿದ್ದ ಮಾನಸಿ, ನನ್ನನ್ನು ಕಂಡ ಕೂಡಲೇ ಹೆಸರು ಹೇಳಿ, ಗುರುತು ಹಿಡಿದು, ‘‘ಕ್ಷಮಿಸಿ ನಿಮಗೆ ಸುಮ್ಮನೇ ತೊಂದರೆ ಕೊಟ್ಟೆ.

ಆಗಾಗ ಬಂದು ನನಗೆ ಸಹಾಯ ಮಾಡುತ್ತಿದ್ದ ಗೆಳತಿಯ ಅಣ್ಣ ಕೂಡ ಈವತ್ತು ನನ್ನ ಫೋನ್ ಸ್ವೀಕರಿಸುತ್ತಿಲ್ಲ. ಅನಿವಾರ್ಯವಾಗಿ ನಿಮಗೆ ಫೋನ್ ಮಾಡಿದೆ’’ ಎಂದು ಏಳುವ ಯತ್ನ ಮಾಡಿದರು. ‘‘ಪರವಾಗಿಲ್ಲ ನೀವು ಮಲಗಿಯೇ ಇರಿ’’ ಎಂದು ಎದುರಿದ್ದ ಬೀನ್ ಬ್ಯಾಗ್‌ನಲ್ಲಿ ಕೂತೆ. ಏನು ಮಾಡಬೇಕು ಎಂದರ್ಥವಾಗಲಿಲ್ಲ. ನೋವಿನ ನಡುವೆಯೂ ನರಳುತ್ತಲೇ ಮತ್ತೊಮ್ಮೆ ಕಥೆ ಹೇಳಿದ ಮಾನಸಿ, ‘‘ನಾನು ಸತ್ತರೂ ಪರವಾಗಿಲ್ಲ. ನನ್ನ ಮಗು ಬದುಕಬೇಕು’’ ಎಂದು ಪದೇ ಪದೇ ಹೇಳಲಾರಂಭಿಸಿದರು. ಐದು ನಿಮಿಷ ಸಮಾಧಾನದಿಂದ ಮಾತನಾಡುತ್ತಿದ್ದ ಆಕೆ ಒಡಲಲ್ಲಿ ನೋವಿನ ಅಲೆಯೆದ್ದಾಗ ಚೀರುತ್ತಾ ಒದ್ದಾಡುತ್ತಿದ್ದರು.

ಆ ವಿಚಿತ್ರ ಸನ್ನಿವೇಶದ ನಡುವೆಯೇ ಆಕೆ ದೀವಾನದ ಬಳಿಯಲ್ಲಿಯೇ ಇದ್ದ ಎಲ್ಲ ಮೆಡಿಕಲ್ ರಿಪೋರ್ಟ್‌ಗಳನ್ನು ನನ್ನ ಕೈಗಿತ್ತರು. ಒಮ್ಮೆ ಆ ರಿಪೋರ್ಟ್‌ಗಳ ಮೇಲೆ ಕಣ್ಣು ಹಾಯಿಸಿದ ಮೇಲೆ ಮಾನಸಿ ಹೇಳಿದ್ದೆಲ್ಲ ಸತ್ಯ ಎನ್ನುವುದು ಸಾಬೀತಾಯಿತು. ‘‘ಆಂಬುಲೆನ್ಸ್‌ಗೆ ಫೋನ್ ಮಾಡಿ, ತಕ್ಷಣ ಆಸ್ಪತ್ರೆಗೆ ಸೇರಿಸಲೇ?’’ ಎಂದು ಕೇಳಿದಾಗ ಅವರು, ‘‘ಡ್ಯು ಡೇಟ್‌ಗೆ ಇನ್ನೂ ಮೂರು ವಾರವಿದೆ. ಅಡ್ಮಿಟ್ ಆದರೆ ಸುಮ್ಮನೇ ಹಣ ದೋಚುತ್ತಾರೆ. ನನ್ನ ಹತ್ತಿರ ಈಗ ಹಣ ಕೂಡ ಇಲ್ಲ. ಆಗಾಗ ಈ ನೋವು ಕಾಡುತ್ತಲೇ ಇದೆ. ಆದರೆ ಅದೇನೂ ಹೆರಿಗೆ ನೋವಲ್ಲ. ಅಲ್ಲಿ ಎರಡು ಮಾತ್ರೆಯಿದೆ.

ಅದನ್ನು ತೆಗೆದುಕೊಂಡರೆ ನೋವು ಕಡಿಮೆಯಾಗುತ್ತೆ. ಸಂಜೆ ನನ್ನ ಗೆಳತಿಯ ಅಣ್ಣ ಬಂದು ಊಟ ಕೊಟ್ಟು ಹೋಗುತ್ತಾನೆ. ಒಂದೆರಡು ದಿನಗಳಲ್ಲಿ ಹೇಗಾದರೂ ಮಾಡಿ ಯಾವುದಾದರೂ ಸ್ವಯಂಸೇವಾ ಸಂಸ್ಥೆಯ ಸಂಪರ್ಕ ಮಾಡಿಸಿಕೊಡಿ. ಹೇಗೋ ನನ್ನ ಮಗುವನ್ನು ಉಳಿಸಿಕೊಳ್ಳುತ್ತೇನೆ’’ ಎಂದರು. ಮಾತ್ರೆ ಕೊಟ್ಟ ಹತ್ತು ನಿಮಿಷಗಳಲ್ಲಿ ಆಕೆ ಸಂಪೂರ್ಣವಾಗಿ ಸುಧಾರಿಸಿಕೊಂಡರು. ‘‘ನಾನೀಗ ಆರಾಮವಾಗಿದ್ದೇನೆ. ನೀವು ತುಂಬಾ ದೂರ ಹೋಗಬೇಕು. ಈಗ ಹೊರಡಿ. ಪರವಾಗಿಲ್ಲ. ಇನ್ನೆರಡು ಗಂಟೆಗಳೊಳಗೆ ನನ್ನ ಸ್ನೇಹಿತೆಯ ಅಣ್ಣ ಬಂದು ಊಟ ಕೊಡುತ್ತಾರೆ’’ ಎಂದಾಗ ಇಲ್ಲೇ ಇರಲೋ? ವಾಪಸು ಹೋಗಲೋ? ಎಂಬ ದ್ವಂದ್ವದ ನಡುವೆಯೇ ಆ ಮನೆಯಿಂದ ಹೊರಗೆ ಹೆಜ್ಜೆ ಹಾಕಿದೆ.

ಮರುದಿನ ಬೆಳಿಗ್ಗೆ ಸ್ನೇಹಿತರೂ ಮತ್ತು ಹೆಸರಾಂತ ಕಥೆಗಾರ್ತಿಯಾದ ಸುನಂದ ಅವರನ್ನು ಸಂಪರ್ಕಿಸಿ, ಮಾನಸಿಯ ಕಥೆ ಹೇಳಿ, ಯಾವುದಾದರೂ ಸ್ವಯಂಸೇವಾ ಸಂಸ್ಥೆಯನ್ನು ಹುಡುಕಿ ಎಂದೆ. ಅವರು ಕೂಡ ಸಾಕಷ್ಟು ಪ್ರಯತ್ನ ಮಾಡಿದರು. ನಾನು ಕೂಡ ಹಲವು ಮೂಲಗಳ ಮೂಲಕ ಹುಡುಕಾಟ ನಡೆಸಿದರೂ ಫಲ ಮಾತ್ರ ದೊರಕಲಿಲ್ಲ. ಪ್ರಯತ್ನ ಮುಂದುವರಿಯಿತು. ಸಂಜೆಯ ಹೊತ್ತಿಗೆ ಫೋನ್ ರಿಂಗಾಯಿತು. ಆತಂಕದಿಂದಲೇ ಕೈಗೆತ್ತಿಕೊಂಡೆ.

‘‘ಹೆರಿಗೆಯಾಯಿತು. ಗಂಡು ಮಗು’’.

ಮಾನಸಿಯ ಆನಂದಬಾಷ್ಪ ಕಿವಿಗೆ ಅಪ್ಪಳಿಸಿದಾಗ, ಅದುರಿ ಹೋದೆ!

‘‘ಯಾವಾಗ? ಎಲ್ಲಿ? ನೀವಿಬ್ಬರು ಈಗ ಹೇಗಿದ್ದೀರಾ?’’

‘‘ನಿನ್ನೆ ಸಂಜೆ ನೀವು ಹೊರಟ ಅರ್ಧ ಗಂಟೆಯ ನಂತರ ಮತ್ತೊಮ್ಮೆ ನೋವು ಜಾಸ್ತಿಯಾಯಿತು. ಏನಾಗುತ್ತಿದೆ ಎಂದು ಅರಿವಾಗುವ ಮೊದಲೇ ಶೌರ್ಯ (ಅವರು ಮಗನಿಗೆ ಹೆಸರು ಇಟ್ಟಾಗಿತ್ತು!) ನನ್ನ ಹೊಟ್ಟೆಯಿಂದ ಹೊರಗೆ ಬಂದೇ ಬಿಟ್ಟಿದ್ದ! ಅದೇ ದೀವಾನದ ಮೇಲೆ ಕೂತು, ಕೈಯಲ್ಲಿ ಅವನನ್ನು ಹಿಡಿದುಕೊಂಡೇ ನನ್ನ ಸ್ನೇಹಿತೆಯ ಅಣ್ಣನಿಗೆ ಫೋನ್ ಮಾಡಿದೆ. ಯಲಹಂಕ ದಾಟಿ ನಮ್ಮ ಮನೆಗೆ ಹೊರಟಿದ್ದ ಅವರು ಕೂಡಲೇ ಧಾವಿಸಿ ಬಂದರು. ಅವರ ಕಾರಿನಲ್ಲಿಯೇ ಕರುಳ ಬಳ್ಳಿ ಶೌರ್ಯನ ಹೊಕ್ಕುಳಿಗೆ ಅಂಟಿಕೊಂಡು ಇರುವಂತೆಯೇ ಸಹಕಾರನಗರದ ಆಸ್ಪತ್ರೆ ತಲುಪಿದೆವು. ಆಸ್ಪತ್ರೆ ಸೇರಿದ ಮೇಲೆ ಕರುಳಬಳ್ಳಿ ತುಂಡರಿಸಿ, ನಮ್ಮಿಬ್ಬರನ್ನು ಅಡ್ಮಿಟ್ ಮಾಡಿಕೊಂಡರು. ಈಗ ನಾನು ಆರಾಮವಾಗಿದ್ದೇನೆ.

ಶೌರ್ಯನಿಗೆ ಜಾಂಡೀಸ್ ಇತ್ತು. ಎನ್‌ಐಸಿಯುಗೆ ಶಿಫ್ಟ್ ಮಾಡಿದ್ದಾರೆ’’. ಮಾನಸಿ ಜೋರಾಗಿ ಅಳಲಾರಂಭಿಸಿದರು. ನಾನು ದಂಗಾಗಿ, ಮೂಕನಾಗಿ ಹೋದೆ! ಇನ್ನರ್ಧ ಗಂಟೆ ನಾನೇ ಆ ಮನೆಯಲ್ಲಿ ಇದ್ದಿದ್ದರೆ!? ನನ್ನ ಕೈಯಲ್ಲಿಯೇ ಶೌರ್ಯನ ಹೆರಿಗೆಯಾಗಿರುತ್ತಿತ್ತು! ಸಾವರಿಸಿಕೊಂಡು, ‘‘ಏನಾದರೂ ತಕ್ಷಣದ ಅಗತ್ಯ ಇದ್ದರೆ ಹೇಳಿ?’’ ಎಂದಾಗ ಆಕೆ ಸಂಕೋಚದಿಂದಲೇ, ‘‘ಆಸ್ಪತ್ರೆಯವರು ಒಂದಿಷ್ಟು ಹಣ ಕಟ್ಟಿ ಎಂದು ಹೇಳುತ್ತಿದ್ದಾರೆ. ಔಷಧಿಗೆ ಕೂಡ ಹಣ ಬೇಕು. ಸಾಧ್ಯವಾದಲ್ಲಿ ಸ್ವಲ್ಪ ಸಹಾಯ ಮಾಡಿ’’ ಎಂದು ಕೇಳಿಕೊಂಡರು.

ಜೊತೆಯಲ್ಲಿಯೇ ಇದ್ದ ಗಿರೀಶ್, ವಿನಯ್ ‘‘ಕ್ರೌಡ್ ಸೋರ್ಸಿಂಗ್ ಮಾಡೋಣ’’ ಎಂದರು. ಯಾಕೋ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿ, ಮಾನಸಿಯನ್ನು ಸಂಪೂರ್ಣ ಎಕ್ಸ್‌ಪೋಸ್ ಮಾಡುವ ಮನಸ್ಸಾಗಲಿಲ್ಲ. ನಾವು ಮೂವರು ಒಂದಿಷ್ಟು ಹಣ ಜೊತೆ ಹಾಕಿದೆವು. ಹೃದಯಕ್ಕೆ ಹತ್ತಿರವಾದ ಒಂದಿಷ್ಟು ಗೆಳೆಯರಿಗೆ ಫೋನ್ ಮಾಡಿದೆ. ಅವರ ಪೈಕಿ ಚಿತ್ರ ನಿರ್ದೇಶಕರಾದ ಪಿ. ಶೇಷಾದ್ರಿ, ಬಿ. ಸುರೇಶ್; ಆಹಾರ ತಜ್ಞ–ಅಂಕಣಕಾರ ಕೆ.ಸಿ. ರಘು, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಒಂದೇ ಕರೆಗೆ ಸ್ಪಂದಿಸಿ ಉದಾರವಾಗಿ ಹಣ ಸಹಾಯ ಒದಗಿಸಿದರು. ಹಾಗೆ ಒಟ್ಟು ಹಾಕಿದ ಮೊತ್ತವನ್ನು ತಕ್ಷಣ ಮಾನಸಿ ಕೈಸೇರಿಸಿದೆವು. ಅದು ಔಷಧಿ ಮತ್ತು ಆಸ್ಪತ್ರೆಗೆ ಸರಿ ಹೋಯಿತು.

ಇನ್ನೇನು ತಾಯಿ-ಮಗು ಇಬ್ಬರೂ ಸುರಕ್ಷಿತ ಅಂದುಕೊಂಡಿದ್ದಾಗಲೇ ಮರುದಿನ ಬರಸಿಡಿಲು ಬಡಿಯಿತು! ಶೌರ್ಯನಿಗೆ ದೊಡ್ಡ ಪ್ರಮಾಣದ ಇನ್‌ಫೆಕ್ಷನ್ ಆಗಿತ್ತು. ಅವನನ್ನು ಉಳಿಸಿಬೇಕಿದ್ದರೆ, ತಕ್ಷಣ ವೆಂಟಿಲೇಟರ್ ಮತ್ತು ಎಲ್ಲ ಅತ್ಯಾಧುನಿಕ ಸೌಲಭ್ಯ ಇರುವ ದೊಡ್ಡ ಆಸ್ಪತ್ರೆಗೆ ಶಿಫ್ಟ್ ಮಾಡಲೇಬೇಕು ಎಂದು ವೈದ್ಯರು ಎಚ್ಚರಿಕೆ ನೀಡಿದರು. ಖಾಸಗಿ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿದ್ದರೆ ಕೈಯಲ್ಲಿ ಲಕ್ಷ-ಲಕ್ಷ ಬೇಕು. ಏಕೆಂದರೆ ಸಾವು-ಬದುಕಿನ ನಡುವೆ ಹೋರಾಟ ಆರಂಭಿಸಿದ್ದ ಶೌರ್ಯನ ಚಿಕಿತ್ಸೆಗೆ ದೊಡ್ಡಾಸ್ಪತ್ರೆಯವರು ನೀಡಿದ ಅಂದಾಜು ವೆಚ್ಚ ದಿನಕ್ಕೆ 25 ಸಾವಿರ ರೂಪಾಯಿ. ಮಾನಸಿ ಮತ್ತೊಮ್ಮೆ ಕುಸಿದುಹೋದರು. ಜೊತೆಗೆ ನಾವು ಕೂಡ!

ಆಗ ಅನಿವಾರ್ಯವಾಗಿ ಪತ್ರಕರ್ತ ಗೆಳೆಯರೊಬ್ಬರ ಬಳಿ ನಾನು ಮಾನಸಿ ವಿಷಯ ಪ್ರಸ್ತಾಪ ಮಾಡಿದೆ. ಅಯ್ಯೋ ಅಷ್ಟೇ ತಾನೇ, ಈ ವಿಷಯ ನನಗೆ ಬಿಟ್ಟು ಬಿಡಿ ಎಂದ ಅವರು, ತಕ್ಷಣ ಸಂಬಂಧಿಸಿದ ಸಚಿವರೊಬ್ಬರಿಗೆ ಒಂದು ವಿವರವಾದ ಕರೆ ಮಾಡಿದರು. ಮರುಕ್ಷಣ ಸಹಕಾರನಗರದ ಖಾಸಗಿ ಆಸ್ಪತ್ರೆಯ ಮುಂದೆ 108 ಆಂಬುಲೆನ್ಸ್ ಹೋಗಿ ನಿಂತಿತು. ಸ್ಥಳೀಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಕೂಡ ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆ ಹೋಗಿ ಮಾತನಾಡಿದರು.

ಮೊದಲು ‘‘ಹಣ ಕೊಟ್ಟು ಮಗು ಹೊರಗೆ ತೆಗೆದುಕೊಂಡು ಹೋಗಿ’’ ಎಂದು ಅಬ್ಬರಿಸುತ್ತಿದ್ದ ಖಾಸಗಿ ಆಸ್ಪತ್ರೆಯವರು ತಾಯಿ-ಮಗುವನ್ನು ಅಂಬುಲೆನ್ಸ್‌ಗೆ ಹತ್ತಿಸಿದರು. ಮಾನಸಿ- ಶೌರ್ಯ ಇಬ್ಬರೂ ಅಂಬುಲೆನ್ಸ್‌ನಲ್ಲಿ ಕೆ.ಸಿ. ಜನರಲ್ ಆಸ್ಪತ್ರೆ ತಲುಪುವಷ್ಟರಲ್ಲಿ ವೆಂಟಿಲೇಟರ್ ಸಿದ್ಧವಾಗಿತ್ತು. ಸರ್ಕಾರಿ ಆಸ್ಪತ್ರೆಯ ಡಾಕ್ಟರ್‌ಗಳು, ನರ್ಸ್‌ಗಳ ಮುತುವರ್ಜಿ ಮತ್ತು ಮಾನಸಿಯ ಹಗಲು-ರಾತ್ರಿಯ ಪ್ರಯತ್ನದ ನಡುವೆ, ಹತ್ತು ದಿನಗಳ ದೀರ್ಘ ಹೋರಾಟ ನಡೆಸಿದ ಶೌರ್ಯ ಬದುಕನ್ನು ಗೆದ್ದು ನಿಂತ! ಪ್ರೀತಿಯ ಬೆಂಕಿಯಲ್ಲಿ ಬೆಂದಿದ್ದರೂ, ಪಟ್ಟು ಹಿಡಿದಿದ್ದ ಮಾನಸಿ ಒಡಲ ಕುಡಿಯನ್ನು ಉಳಿಸಿಕೊಂಡೇ ಬಿಟ್ಟರು!

(ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಯುವಕ ಮತ್ತು ಯುವತಿಯ ನಿಜವಾದ ಹೆಸರಿನ ಬದಲು, ಬದಲಿ ಹೆಸರುಗಳನ್ನು ಬಳಸಲಾಗಿದೆ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT