ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಭಾಷೆ ಅಪ್ಪುತ್ತಾ; ವ್ಯಾಪಾರಿ ಭಾಷೆಯ ಒಪ್ಪುತ್ತಾ...

ಭಾಷೆ ಕಲಿಕೆ ಬಿಕ್ಕಟ್ಟು
Last Updated 23 ಜನವರಿ 2015, 19:46 IST
ಅಕ್ಷರ ಗಾತ್ರ

ಮಕ್ಕಳ ಕಲಿಕೆ ಕನ್ನಡದಲ್ಲಿ ಪ್ರಾರಂಭವಾಗ­ಬೇಕೋ ಅಥವಾ ವ್ಯಾವಹಾರಿಕ ಜಗತ್ತಿಗೆ ಒಗ್ಗುವ ಜಗತ್ ಭಾಷೆಯಾದ ಇಂಗ್ಲಿಷಿನಲ್ಲಾ­ಗ­ಬೇಕೋ ಎನ್ನುವ ಚರ್ಚೆ ಹಳೆಯದು. ಅದು ಈ ಕ್ಷಣಕ್ಕೆ ಇತ್ಯರ್ಥವಾಗುವಂತೆ ಕಾಣುತ್ತಿಲ್ಲ. ಈ ಬಗ್ಗೆ ಭಾಷಾ ವಿಜ್ಞಾನಿಗಳೂ, ಶಿಕ್ಷಣ ತಜ್ಞರೂ ಸಾಕಷ್ಟು ಬರೆದಿದ್ದಾರೆ.

ಇಂಗ್ಲಿಷ್ ಮಾಧ್ಯಮದಲ್ಲಿಯೇ ಓದಿದ ನನಗೆ, ಕನ್ನಡ ಮಾಧ್ಯಮದಲ್ಲಿ ಓದಿದ ನನ್ನ ವಾರಗೆಯವರಿಗೆ ನನ್ನ ವೃತ್ತಿಯ ಈ ಘಟ್ಟದಲ್ಲಿ ಹೆಚ್ಚಿನ ವ್ಯತ್ಯಾಸ­ವೇನೂ ಕಾಣುತ್ತಿಲ್ಲ. ಆದರೆ ಶಾಲೆಯಲ್ಲಿ ಮಾಧ್ಯಮವಾಗಿಯೂ, ಭಾಷೆಯಾಗಿಯೂ ಕಲಿಯದ ಕನ್ನಡ ನನ್ನ ಸುತ್ತಲಿನ ಪರಿಸರ­ದಲ್ಲಿತ್ತು. ನಾನು ಇಂಗ್ಲಿಷಿನಲ್ಲಿ ಬರೆಯಲು ಪ್ರಾರಂಭಿಸಿದೆನಾದರೂ ಅದು ಸರಿಹೋಗಲಿಲ್ಲ. ಯಾಕೆಂದರೆ ನಾನು ನನ್ನವರಿಗೇ ಅನ್ಯನಾಗು­ತ್ತಿದ್ದೇನೆ ಅನ್ನಿಸಿತು. ಹೀಗಾಗಿ ಬರೆಯಬೇಕೆಂಬ ಆಸಕ್ತಿ ಮತ್ತು ಬರೆದದ್ದಕ್ಕೆ ಒಂದು ಪ್ರಸ್ತುತತೆ ಇರಬೇಕೆಂಬ ಹಂಬಲ­ದಿಂ­ದಾಗಿ ನಾನು ಕನ್ನಡದಲ್ಲಿ ಬರ­ವಣಿಗೆ­ಯನ್ನು ರೂಢಿಸಿಕೊಳ್ಳಬೇಕಾಯಿತು.

ಇದು ಉಲ್ಟಾ ಆಗಿದ್ದರೆ ನನ್ನ ವೃತ್ತಿಜೀವನ­ದಲ್ಲಿ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ. ಬದಲಿಗೆ ನನ್ನ ಕನ್ನಡವು ಇನ್ನಷ್ಟು ಉತ್ತಮ­ವಾಗಿ, ಕನ್ನಡಿಗನಾಗಿ ನನ್ನ ಆತ್ಮವಿಶ್ವಾಸ ಹೆಚ್ಚುವ ಸಾಧ್ಯತೆಯಿತ್ತು. ನಾನು ಕನ್ನಡ ಕಲಿತ ಹಾಗೆಯೇ ಕನ್ನಡ ಮಾಧ್ಯಮದ ನನ್ನ ವಾರಗೆಯವರೂ ವೃತ್ತಿ ರೀತ್ಯಾ ಇಂಗ್ಲಿಷನ್ನು ಕಲಿತರು. ಜೊತೆಗೆ ಇನ್ನಷ್ಟು ಸಂವಹನದ ಪರಿಕರಗಳನ್ನೂ ತಮ್ಮ­ದಾ­ಗಿಸಿ­ಕೊಂಡರು. ಈ ದಿನಗಳಲ್ಲಿ ವಾಟ್ಸ್ಆ್ಯಪ್ ಮತ್ತು ಎಸ್ಸೆ­ಮ್ಮೆಸ್ ಮಾಡುವುದನ್ನು ಕಲಿಯು­ವುದು ಎಷ್ಟು ಅವಶ್ಯಕವೋ, ಸಂವ­ಹನ­ಕ್ಕಾಗಿ ಭಾಷೆ ಕಲಿಯುವುದೂ ಅಷ್ಟೇ ಅವಶ್ಯಕ.

ಕಲಿಕೆಯ ಹೂರಣ ನಮ್ಮಲ್ಲಿ ಅಂತರ್ಗತವಾಗುವುದು ಸ್ಥಳೀಯತೆಯಿಂದ, ಸ್ಥಳೀಯ ಉದಾಹರಣೆಗಳಿಂದ, ನಾವು ಗುರುತಿಸಿಕೊಳ್ಳಬಹುದಾದ ಕಥೆಗಳ -ಪಾತ್ರ,- ಪದ ಸಮುಚ್ಚಯ­ದಿಂದ. ಬಾಲ್ಯಕಾಲದ ವ್ಯಕ್ತಿ ವಿಕಸನಗೊಳ್ಳುವುದು ಈ ಕಲಿಕೆಯ ಅನುರಣನೆಯಿಂದ. ಹೀಗಾಗಿ ಶಾಲೆಯಲ್ಲಿ ಕಲಿತದ್ದು, ತರಗತಿಯಾಚೆ ಮಾತನಾಡಿದ್ದು ಹಾಗೂ ಸಮಾಜದಲ್ಲಿ ವ್ಯವಹರಿಸಿದ್ದಕ್ಕೆ ಒಂದು ಕೊಂಡಿಯನ್ನು ಏರ್ಪಡಿಸುವುದಕ್ಕೆ ಭಾಷಾ ಸಂವಹನ ಮುಖ್ಯವಾಗುತ್ತದೆ. ಶಾಲೆಯಲ್ಲಿ ‘ಎ ಫಾರ್ ಆ್ಯಪಲ್‌’ ಎಂದು ಕಲಿತು, ಹೊರಗದು ಸೇಬಾಗಿ ಪರಿವರ್ತನೆಗೊಳ್ಳುವುದರ ಚಮತ್ಕಾರವನ್ನು ಪುಟ್ಟ ಮನಸ್ಸುಗಳು ಹೇಗೆ ಸ್ವೀಕರಿಸಬಹುದು? ಈಗ ಆ್ಯಪಲ್‌ ಎಂದೇ  ನಾವು ಸೇಬನ್ನು ಕನ್ನಡದಲ್ಲೂ ಕರೆಯುತ್ತೇವೆ ಎಂದು ವಾದಿಸೋಣ.

ಆದರೆ ಬದನೆಕಾಯಿಯನ್ನು ಬ್ರಿಂಜಾಲ್‌ ಎನ್ನುತ್ತೇವೆಯೇ? ಕನ್ನಡವನ್ನು ಶಾಲೆಯಲ್ಲಿ ಕಲಿಯದಿದ್ದದ್ದು ನನಗೊಂದು ಮಿತಿಯಾಗಿ ಇನ್ನೂ ಮುಂದುವರಿದಿದೆ. ಹಾಗೆಂದು ನಾನು ಇಂಗ್ಲಿಷ್‌ ಲೋಕವನ್ನು ಗೆಲ್ಲುವ ಗಡಿಯಿಂದ ಪಾರಾಗಿದ್ದೇನೆ ಎಂದೇನೂ  ಇಲ್ಲ. ಸಹಜವಾಗಿ ಕನ್ನಡದಿಂದ ಇಂಗ್ಲಿಷಿಗೆ ರಾಮಾನುಜನ್ ರೀತಿಯಲ್ಲಿ ಭಾಷಾಂತರಿಸಲು ಸಾಧ್ಯವಾದ ದಿನವೇ ನಾವು ಆ ಭಾಷೆಯ ಪ್ರಭುತ್ವವನ್ನು ಗಳಿಸಿದ್ದೇವೆ ಎಂದು ಹೇಳಬಹುದೇನೋ.

ಕಲಿಕೆಯ ಆತ್ಮವಿಶ್ವಾಸಕ್ಕೆ ಹೂರಣವೇ ಮುಖ್ಯ. ಈ ಹೂರಣವನ್ನು ತುಂಬಿದ ನಂತರ ಅದನ್ನು ಬೇರೆ ಬೇರೆ ರೀತಿಯಲ್ಲಿ, ಭಿನ್ನ ಭಾಷೆಗಳಲ್ಲಿ ಅಡಕ ಮಾಡಬಹುದು. ಕಲಿಸುವವರಿಗೂ ಹಿತವಲ್ಲದ, ಕಲಿತವರಿಗೂ ಕಷ್ಟವಾದ ಭಾಷೆಯಲ್ಲಿ ಕಲಿಕೆಯನ್ನು ಕೈಗೊಳ್ಳುವ ಹಿಂಸೆಯೇಕೆ?

‘ಜಾಗತೀಕರಣದ ಈ ಯುಗದಲ್ಲಿ ಇಂಗ್ಲಿಷನ್ನು ತಪ್ಪಿಸಿ ನಡೆಯುವುದು ಸಾಧ್ಯವಿಲ್ಲ. ಆದ್ದರಿಂದ ಅದನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನಮ್ಮ ಕಲಿಕೆಯಲ್ಲಿ ಸೇರಿಸಬೇಕು. ಇಂಗ್ಲಿಷು ಎಲ್ಲರೂ ಬಯಸುವ ಭಾಷೆ, ಹೀಗಾಗಿ ಆ ಸತ್ಯವನ್ನು ಕಡೆಗಣಿಸಬಾರದು’ ಎಂಬಂತಹ ವಾದಗಳು ನಿಜವೇ. ಕಂಪ್ಯೂಟರುಗಳಿಲ್ಲದೇ ಇಂದು ನಮ್ಮ ಕೆಲಸ ನಡೆಯುವುದಿಲ್ಲ. ಮೊಬೈಲಿಲ್ಲದೇ ಮುಂದೆ ಹೋಗಲು ಸಾಧ್ಯವಿಲ್ಲ.

ಯೂಟ್ಯೂಬು, ಫೇಸ್ ಬುಕ್ಕು, ವಾಟ್ಸ್ಆ್ಯಪ್, ಗೂಗಲ್ಲು ನಮಗೆ ಗಾಳಿ, ಬೆಳಕಿನಷ್ಟೇ ಅವಶ್ಯಕ ಆಗಿಬಿಡುತ್ತವೆ. ರೋಟಿ– ಕಪಡಾ– ಮಕಾನ್ ಔರ್ ಬ್ಯಾಂಡ್‌ವಿಡ್ತ್ ಎಂದು ಹೇಳಿದ ದೇವಾಂಗ ಮೆಹತಾರ ಮಾತುಗಳೂ ಮುಖ್ಯವೇ. ಆದರೆ ಎಲ್ಲಕ್ಕೂ ಒಂದು ಸಂದರ್ಭ, ಘಟ್ಟ ಹಾಗೂ ಮನಸ್ಸಿನ ಪಕ್ವತೆ ಬೇಕಲ್ಲವೇ? 

ಮಗು ಬೆಳೆದು ದೊಡ್ಡದಾದ ಮೇಲೆ ಕಂಪ್ಯೂಟರಿಲ್ಲದೇ ಕೆಲಸ ಮಾಡಲು ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಅಕ್ಷರಾಭ್ಯಾಸವನ್ನೂ ಕಂಪ್ಯೂಟರಿನ ಮೇಲೇ ಮಾಡಿಸಲು ಸಾಧ್ಯವೇ ಅಥವಾ ಮೊಬೈಲಿನ ಸಾಧ್ಯತೆಗಳನ್ನು ಮೂರನೇ ಇಯತ್ತೆಯಲ್ಲಿಯೇ ಮಕ್ಕಳಿಗೆ ನಾವು ತೋರಿಸಿಕೊಡಬೇಕೇ?

ಮೊದಲು ಅವರು ಅದನ್ನು ಉಪಯೋಗಿಸುವ ಮಟ್ಟಕ್ಕೆ ಬೆಳೆಯಲಿ. ಪುಟ್ಟ ಮಕ್ಕಳ ಬೆರಳುಗಳು ತಮ್ಮ ಮುದ್ದು ಗುಂಡುತನವನ್ನು ಕರಗಿಸಿಕೊಂಡು ನೆಟ್ಟಗೆ ನಿಲ್ಲುವಂತಾಗಲಿ, ಯಂತ್ರವನ್ನು ಜವಾಬ್ದಾರಿ­ಯುತವಾಗಿ ಉಪಯೋಗಿಸಲು ಸಾಧ್ಯ­ವಾಗಲಿ ಎಂದು ಕಾಯುವಾಗ, ಪರಿಸರ­ದ್ದಲ್ಲದ ಒಂದು ಭಾಷೆಯನ್ನು ಕಲಿಸುವ ತುರ್ತು ನಮಗೇಕೆ?

ಆ್ಯಸ್ಪಿರೇಷನಲ್‌ ಲ್ಯಾಂಗ್ವೇಜನ್ನು (aspirational language)  ಆ್ಯಸ್ಪೈರ್‌ (aspire) ಮಾಡುವ ಹೊತ್ತಿಗೆ  ನಮ್ಮದಾಗಿಸಿಕೊಂಡರೆ ಸಾಲದೇ? ಅಲ್ಲಿಯವರೆಗೂ ನಮ್ಮ ಪರಿಸರದ ಆತ್ಮವಿಶ್ವಾಸವನ್ನು ತುಂಬಿಕೊಳ್ಳುವತ್ತ, ನಮಗೆ ಗೊತ್ತಿರುವುದರ ಮೂಲಕ ನಮ್ಮ ಬಲವನ್ನು ವೃದ್ಧಿಪಡಿಸಿಕೊಳ್ಳುವುದರತ್ತ ಯಾಕೆ ಗಮನ ಹರಿಸುತ್ತಿಲ್ಲ?

ಜಾಗತೀಕರಣದ ಪ್ರಕ್ರಿಯೆಯಲ್ಲಿ ಆಗುತ್ತಿರುವ ಈ ಕೊಡುಕೊಳ್ಳುವಿಕೆಯಲ್ಲಿ ನಾವು ನಮ್ಮನ್ನು ರಫ್ತು ಮಾಡಿಕೊಳ್ಳುವ ದೃಷ್ಟಿಯಿಂದಷ್ಟೇ ಇಂಗ್ಲಿಷ್‌ ಭಾಷೆಯನ್ನು ನೋಡುತ್ತಿದ್ದೇವೆ. ಆದರೆ ಈ ಪ್ರಕ್ರಿಯೆಯಲ್ಲಿ ಜಾಗತೀಕರಣದ ಆಮದಿನ ವ್ಯಾಪಾರದಲ್ಲೂ ತೊಡಗಿದ್ದೇವೆ. ಈ ಬಗೆಯ ವ್ಯಾಪಾರದಲ್ಲಿ ಸ್ಥಳೀಯತೆಯ ಪ್ರಾಮುಖ್ಯತೆಯನ್ನು ಸಾರುವುದೂ ಒಂದು ಮುಖ್ಯವಾದ ಜವಾಬ್ದಾರಿ.  ಬೆಂಗಳೂರಿನ ಹಾಗೂ ಕರ್ನಾಟಕದ ಇತರ ನಗರಗಳ ಪುನರ್‌ ನಾಮಕರಣದ ಮಹತ್ವವನ್ನು ನಾವು ಈ ಹಿನ್ನೆಲೆಯಿಂದ ನೋಡಬೇಕಾಗುತ್ತದೆ.

ಹಾಗಿದ್ದರೆ, ಜಾಗತೀಕರಣದ ಕಾರಣದಿಂದ ನಮ್ಮೂರುಗಳಿಗೆ ಬರುತ್ತಿರುವ ಹೊರನಾಡಿಗರನ್ನು ನಾವು ಹೊರನಾಡಿಗರಾಗಿಯೇ ನೋಡಬೇಕೇ? ಕನ್ನಡಿಗರು-- -ಕನ್ನಡತನ-- ಭಾಷೆ-- ಸಂಸ್ಕೃತಿಯ ಬೆಳವಣಿಗೆಯಾಗುವುದು ಹೊರನಾಡಿಗರನ್ನು ಹೊರನಾಡಿಗ­ರನ್ನಾಗಿ ಇರಿಸುವುದರಿಂದಲೇ ಅಥವಾ ಅವರನ್ನು  ಸ್ಥಳೀಕರಣ­ಗೊಳಿಸಿ  ನಮ್ಮದಾಗಿಸಿಕೊಳ್ಳುವ ಪ್ರಕ್ರಿಯೆಯಲ್ಲಿಯೇ? ಪಂಜಾಬಿನ ಚಿರಂಜೀವ್ ಸಿಂಗ ಅವರು ಕನ್ನಡದ ಚಿರಂಜೀವಿ ಆಗಿರುವುದರಿಂದ ನಮಗೆ ಲಾಭವೇ ಆಗಿದೆ.

ಉನ್ನತ ಸರ್ಕಾರಿ ಹುದ್ದೆಗೇರುವ ಐಎಎಸ್ ಅಧಿಕಾರಿಗಳು ಕಡ್ಡಾಯವಾಗಿ ತಮಗೆ ಲಗತ್ತಿಸುವ ಕೇಡರಿನ ರಾಜ್ಯದ ಭಾಷೆ ಕಲಿತು ಸ್ಥಳೀಯತೆಯನ್ನು ತಮ್ಮದಾಗಿಸಿ­ಕೊಳ್ಳುವಾಗ, ಈ ಥರದ ಪ್ರಕ್ರಿಯೆ ಮಿಕ್ಕ ಕ್ಷೇತ್ರಗಳಿಗೂ ಹಬ್ಬುವಂತಹ ಪ್ರೀತಿಯ ಕೆಲಸವನ್ನು ಮಾಡುವುದು ಹೇಗೆ? ಹೊರನಾಡಿಗರ ಮಕ್ಕಳು ಪರಿಸರದ ಭಾಷೆಯನ್ನು, ಸ್ಥಳೀಯ ಸಂಸ್ಕೃತಿಯನ್ನು ತಮ್ಮ­ದಾಗಿಸಿ­ಕೊಳ್ಳುವ ಸಂದರ್ಭ ಒದಗಿದರೆ ಅವರ ಅಪ್ಪ- ಅಮ್ಮಂದಿರು ಎಷ್ಟು ದಿನ ತಾನೇ ಅದರಿಂದ ಹೊರಗೆ ಉಳಿದಾರು? ಹೀಗಾ­ಗಿಯೇ ಕಲಿಕೆಯ ಮಾಧ್ಯಮದ ವಿಷಯಕ್ಕೆ ಬಂದಾಗ ನಾವು ಒಡ್ಡುತ್ತಿರುವ ಮಾತೃಭಾಷೆಯ ಕಲಿಕೆಯ ವಾದವನ್ನು ಹಿಡಿದು ಹೊರಟರೆ, ಬೆಂಗಳೂರಿನಂತಹ ನಗರದಲ್ಲಿಯೇ ಕನ್ನಡ ಇಲ್ಲವಾಗಬಹುದು.

ಏಕೆಂದರೆ ಇಲ್ಲಿ ಮಾತೃಭಾಷೆಯು ಹಲವು ಹತ್ತಿವೆ. ತಮಿಳು, ಮರಾಠಿ, ತುಳು, ಕೊಂಕಣಿ, ತೆಲುಗು, ಮಲಯಾಳ, ಕೊಡವ, ಬ್ಯಾರಿ, ಉರ್ದು ಮಾತೃಭಾಷೆ ಹೊಂದಿರುವ ಅನೇಕ ಕನ್ನಡಿಗರನ್ನು ಕಾಣುವ ಈ ವೈವಿಧ್ಯಮಯ ನಾಡಿನಲ್ಲಿ, ಪರಿಸರದ ಭಾಷೆಯಾಗಿ, ಈ ವಿವಿಧ ಮನೆಮಾತುಗಳಿರುವ ಜನರಿಗೆ ಮೂಲ ಸಂಪರ್ಕ ಭಾಷೆಯಾಗಿ, ಈ ನಾಡಿನ ಭಾಷೆಯಾಗಿ ಕನ್ನಡವಿದೆ. ಆ ಕೊಂಡಿ­ಯನ್ನು ಪ್ರಾಥಮಿಕ ಹಂತದಿಂದಲೇ ಕಿತ್ತೊಗೆದರೆ ಅದಕ್ಕಂಟಿ ನಿಂತ ಒಂದು ಸಂಸ್ಕೃತಿ, ಸಂಸ್ಕೃತಿಗಂಟಿನಿಂತ ಚರಿತ್ರೆಯೂ ಮರೆಯಾ­ಗುತ್ತದೆ. ನಮಗೆ ನಮ್ಮ ಸಂಸ್ಕೃತಿ ಎಷ್ಟು ಬೇಕೋ ನಮ್ಮವರಾಗು­ವವರಿಗೂ ಸಂಸ್ಕೃತಿ ಮತ್ತು ಭಾಷೆ ಅಷ್ಟೇ ಮುಖ್ಯವೆಂದು ಮನವರಿಕೆ ಮಾಡುವ ಕೆಲಸ ಪ್ರಮುಖವಾಗಿ ಆಗಬೇಕಿದೆ.

ಮಕ್ಕಳು ಬೆಳೆಯುವಾಗ ಬೇಕಾದದ್ದು ಪರಿಸರದ ಪ್ರೀತಿಯ ಭಾಷೆಯೋ, ಮಾರುಕಟ್ಟೆಯ ವ್ಯವಹಾರದ ಭಾಷೆಯೋ ಎಂಬುದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ವ್ಯವಹಾರದ, -ವ್ಯಾಪಾರದ ಭಾಷೆಯನ್ನು ಯಾವ ಮಟ್ಟದಲ್ಲಿ, ಪ್ರಬುದ್ಧತೆಯ ಯಾವ ಘಟ್ಟದಲ್ಲಿ ಮಕ್ಕಳ ಮಸ್ತಕದಲ್ಲಿ ತೂರಿಸಬೇಕು ಎಂಬುದನ್ನು ನಾವು ಕಂಡುಕೊಂಡ ದಿನ, ನಮ್ಮ ಸಮಾಜವೂ ಪ್ರಬುದ್ಧವಾಗುತ್ತದೆ ಜೊತೆಗೆ ವ್ಯಾಪಾರವೂ ಸಶಕ್ತವಾಗುತ್ತದೆ.

ಮೂರ್ತಿ ಮತ್ತು ಮಾಧ್ಯಮ
ಜಾಗತಿಕ ಪ್ರಪಂಚವನ್ನು ಗೆಲ್ಲಲು, ಅವಕಾಶಗಳನ್ನು ಹಿಗ್ಗಿಸಿ­ಕೊಳ್ಳಲು ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಬೇಕು, ಅದರಿಂದ ಪ್ರಪಂಚದಲ್ಲಿ ಅವಕಾಶಗಳು ಹಿಗ್ಗುತ್ತವೆ ಎಂದು ವಾದಿಸುವ ನಮ್ಮ ನಾರಾಯಣಮೂರ್ತಿಗಳೇ ಖುದ್ದು ಹತ್ತನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದವರು.

ಅವರು ಜೀವನದಲ್ಲಿ ಸರಳತೆಯನ್ನು ಮೈಗೂಡಿಸಿಕೊಂಡಿ­ರುವುದು ಎಲ್ಲರೊಡನೆ ಬೆರೆತು ಬೆಳೆದ ತಮ್ಮ ಬಾಲ್ಯದ ಸಂಸ್ಕಾರದ ಫಲವಾಗಿ ಇರಬಹುದು. ಜಗತ್ತಿನ ಗೌರವವನ್ನು ಪಡೆಯಬಹುದಾದ ಇನ್ಫೊಸಿಸ್ ಅಂತಹ ಮಹತ್ವದ ಕಂಪೆನಿಯನ್ನು ಕಟ್ಟಲು ಅವರಿಗೆ  ಕನ್ನಡ ಮಾಧ್ಯಮದಿಂದ ತೊಡಕೇನೂ ಆದಂತೆ ಕಾಣುವುದಿಲ್ಲ. ಬದಲಿಗೆ ಅದನ್ನು ಒಂದು ನೀತಿಯುತ ಸಂಸ್ಥೆಯಾಗಿ ಕಟ್ಟಲು ತಮ್ಮ ಬಾಲ್ಯದ ಮೌಲ್ಯಗಳ ಮುಖ್ಯ ಪಾತ್ರವನ್ನು ಅವರು ಅಲ್ಲಗಳೆಯಲಾರರು.
(ಲೇಖಕರು ಕಥೆಗಾರರು ಮತ್ತು ಆರ್ಥಿಕ ವಿಷಯ ಪರಿಣತರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT