ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ, ಪ್ರಣಯದ ದಾರಿ; ‘ಮತಾಂತರ’ಕ್ಕೆ ಹಾದಿ

ನಾಪತ್ತೆಯಾಗಿ ಐಎಸ್‌ ಸೇರ್ಪಡೆ ಶಂಕೆ; ಪ್ರಕರಣದ ತನಿಖೆಗೆ ಹೊಸ ದಿಕ್ಕು
Last Updated 28 ಜುಲೈ 2016, 19:30 IST
ಅಕ್ಷರ ಗಾತ್ರ

ಪಡನ್ನ (ಕಾಸರಗೋಡು ಜಿಲ್ಲೆ/ಕೇರಳ): ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌) ಸೇರಲು ತೆರಳಿದ್ದಾರೆ ಎಂದು ಶಂಕಿಸಲಾದ 21 ಮಂದಿಯಲ್ಲಿ ಹಿಂದೂ ಮತ್ತು ಕ್ರೈಸ್ತ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರು ಇದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೆ ‘ಮತಾಂತರ’ ವಿಷಯ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ನಾಪತ್ತೆಯಾದವರ ಪೈಕಿ, ಇಬ್ಬರು ಯುವತಿಯರು ನಿಮಿಷಾ (ಫಾತಿಮಾ) ಮತ್ತು ಮೆರಿನ್‌ ಜೋಸೆಫ್‌ (ಮರಿಯಾ) ಮತಾಂತರಗೊಳ್ಳಲು ಕಾರಣವಾದ ಸಂದರ್ಭ ಮತ್ತು ನಂತರದ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿ ಮುಂಬೈಯಲ್ಲಿ ಬಂಧಿತರಾಗಿರುವ ಆರ್‌.ಸಿ. ಖುರೇಷ್‌ ಮತ್ತು ರಿಜ್ವಾನ್ ಖಾನ್ ಎಂಬಿಬ್ಬರು ವಿಚಾರಣೆ ವೇಳೆ ಮತಾಂತರಕ್ಕೆ ಸಂಬಂಧಿಸಿದ ಹಲವು ಮಹತ್ವದ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ.

ವಿವಾದಾತ್ಮಕ ಧಾರ್ಮಿಕ ಪ್ರವಚನಕಾರ ಡಾ. ಝಾಕೀರ್‌ ನಾಯ್ಕ ನಡೆಸುವ ಇಸ್ಲಾಮಿಕ್‌ ಗೈಡೆನ್ಸ್‌ ಸೆಂಟರ್‌ ಜೊತೆ ಸಂಪರ್ಕ ಹೊಂದಿರುವ ರಿಜ್ವಾನ್‌, ಹಿಂದೂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದ 800ಕ್ಕೂ ಹೆಚ್ಚು ಯುವಕ–ಯುವತಿಯರನ್ನು ಇಸ್ಲಾಂಗೆ ಮತಾಂತರಗೊಳಿಸಿರುವ ಬಗ್ಗೆ ಮತ್ತು ಹೀಗೆ ಮತಾಂತರಗೊಂಡವರ ಮದುವೆಗೆ ವ್ಯವಸ್ಥೆ ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ.

ಮುಂಬೈನ ಹೊರವಲಯದಲ್ಲಿರುವ ಕಲ್ಯಾಣನಗರದ ತನ್ನ ನಿವಾಸದಲ್ಲಿ ಮ್ಯಾರೇಜ್‌ ಬ್ಯೂರೋ ನಡೆಸುತ್ತಿದ್ದ ಬಗ್ಗೆಯೂ ಈತ ಮಾಹಿತಿ ನೀಡಿದ್ದಾನೆ’ ಎಂದು ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ನಾಪತ್ತೆಯಾದವರ ಜಾಡು ಹಿಡಿದಿರುವ ತನಿಖಾ ತಂಡಕ್ಕೆ ಕಾಸರಗೋಡು, ಕಣ್ಣೂರು, ಆಲಪ್ಪುಳ, ತಿರುವನಂತಪುರ ಮತ್ತು ಪಾಲಕ್ಕಾಡ್‌ ಜಿಲ್ಲೆಯಲ್ಲಿ ಹಿಂದೂ ಮತ್ತು ಕ್ರೈಸ್ತ ಸಮುದಾಯದ ನೂರಾರು ಮಂದಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ಮಾಹಿತಿ ಪ್ರಾಥಮಿಕ ಹಂತದ ತನಿಖೆ ಸಂದರ್ಭದಲ್ಲೇ ಲಭ್ಯ ಆಗಿದೆ.

ಮುಖ್ಯವಾಗಿ ನಿಮಿಷಾ ಮತ್ತು ಮೆರಿನ್‌ ಜೋಸೆಫ್‌ ಅವರನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ ಎಂದೂ ಮೂಲಗಳು ತಿಳಿಸಿವೆ.

ನಿಮಿಷಾ 2015ರ ನವೆಂಬರ್‌ನಲ್ಲಿ ನಾಪತ್ತೆಯಾಗಿದ್ದಾಗ ಆಕೆಯ ತಾಯಿ ಬಿಂದು ದೂರು ನೀಡಿದ್ದರು. ಆಗ ತನಿಖೆ ನಡೆಸಿದ್ದ ಪೊಲೀಸರಿಗೆ ಮತಾಂತರ ಕುರಿತು ಕೆಲವು ಸುಳಿವುಗಳು ಲಭ್ಯ ಆಗಿತ್ತು. ಈ ಬಗ್ಗೆ ಸಮಗ್ರ ತನಿಖೆಗೆ ಶಿಫಾರಸು ಮಾಡಲಾಗಿತ್ತು ಎಂದೂ ತನಿಖಾ ತಂಡದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಇದೀಗ ನಾಪತ್ತೆಯಾಗಿರುವವರಲ್ಲಿ ನಿಮಿಷಾಳ ಹೆಸರು ಕೂಡಾ ಇರುವುದನ್ನು ಕಂಡು ತೀವ್ರವಾಗಿ ನೊಂದುಕೊಂಡಿರುವ ಆಕೆಯ ತಾಯಿ, ‘ನಾನು ದೂರು ನೀಡಿದ ಸಂದರ್ಭದಲ್ಲೇ ತೀವ್ರ ತನಿಖೆ ನಡೆದಿದ್ದರೆ ಮಗಳು ಈಗ ನಾಪತ್ತೆಯಾಗುವ ಪ್ರಮೇಯ ಬರುತ್ತಿರಲಿಲ್ಲ’ ಎಂದು ಪೊಲೀಸರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ನಿಮಿಷಾ ಮತಾಂತರ ಪ್ರಕರಣದ ಕುರಿತು ಅಂದು ತನಿಖೆ ನಡೆಸಿದ ಕಾಸರಗೋಡು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಎ. ಶ್ರೀನಿವಾಸ್‌, ‘ಮತಾಂತರ ದೇಶದ ಆಂತರಿಕ ಭದ್ರತೆ, ಧಾರ್ಮಿಕ ಸಮತೋಲನ ಮತ್ತು ಧಾರ್ಮಿಕ ಸೌಹಾರ್ದಯತೆಯ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆ ಇದೆಯೇ? ಎಂಬ ಬಗ್ಗೆ ರಾಜ್ಯ ವಿಶೇಷ ಪೊಲೀಸ್ (ಎಸ್‌ಎಸ್‌ಪಿ) ತುರ್ತಾಗಿ ಪರಿಶೀಲಿಸುವ ಅಗತ್ಯ ಇದೆ’ ಎಂದು ವರದಿ ಸಲ್ಲಿಸಿದ್ದರು.

ಆದರೆ ಸರ್ಕಾರ, ಈ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಪೊಲೀಸ್‌ ಮೂಲಗಳೇ ಹೇಳಿವೆ.
ರಾಜ್ಯ ಗುಪ್ತಚರ ದಳ ಏಳು ತಿಂಗಳ ಹಿಂದೆ ಕೇರಳ ಅಲ್ಲಿನ ಪೊಲೀಸ್‌ ಮಹಾನಿರ್ದೇಶಕರಿಗೆ ಸಲ್ಲಿಸಿದ ವರದಿಯಲ್ಲಿ 2011–15ರ ಅವಧಿಯಲ್ಲಿ ಕೋಯಿಕ್ಕೋಡು ಮತ್ತು ಮಲಪ್ಪುರ ಜಿಲ್ಲೆಗಳ ಯುವಕ– ಯುವತಿಯರು ಸೇರಿದಂತೆ ಒಟ್ಟು 5,793 ಮಂದಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ತಿಳಿಸಿತ್ತು.

ಮತಾಂತರಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರು. ಅಲ್ಲದೆ, ಶೇ 76ರಷ್ಟು ಮಂದಿ 35 ವರ್ಷ ಒಳಗಿನವರು. ಈ ಪೈಕಿ 4,719 ಮಂದಿ ಹಿಂದುಗಳು, ಉಳಿದ 1,074 ಕ್ರೈಸ್ತ ಧರ್ಮೀಯರು. ಇದು ಅಧಿಕೃತ ಅಂಕಿಅಂಶ, ಆದರೆ ಅನಧಿಕೃತ ಮತಾಂತರ ಕೇಂದ್ರಗಳ ಮೂಲಕ ಮತಾಂತರಗೊಂಡವರ ಸಂಖ್ಯೆ ಇನ್ನೂ ಹೆಚ್ಚು ಎನ್ನುವ ಅನುಮಾನ ಪೊಲೀಸರದ್ದು.

ಕೋಯಿಕ್ಕೋಡ್‌ ಜಿಲ್ಲೆಯಲ್ಲಿರುವ ತರ್ಬಯುತುಲ್‌ ಇಸ್ಲಾಂ ಮತ್ತು ಮಲಪ್ಪುರದ ಪೊನ್ನಾನಿಯಲ್ಲಿರುವ ಮೊನುಸ್ತಿಲ್ ಇಸ್ಲಾಂ ಸಭಾ ಕೇರಳ ರಾಜ್ಯದಲ್ಲಿರುವ ಎರಡು ಅಧಿಕೃತ ಇಸ್ಲಾಂ ಮತಾಂತರ ಕೇಂದ್ರಗಳು.

ಈ ಎರಡೂ ಕೇಂದ್ರಗಳಲ್ಲಿ 2011–15ರಲ್ಲಿ ನಡೆದ ಮತಾಂತರದ ಲೆಕ್ಕ ಇದು. ರಾಜ್ಯದಲ್ಲಿ ಇನ್ನೂ ಹಲವು ಅನಧಿಕೃತ ಮತಾಂತರ ಕೇಂದ್ರಗಳಿವೆ. ಈ ಕೇಂದ್ರಗಳಲ್ಲಿ ನಡೆದಿರುವ ಮತಾಂತರಗಳ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂಬ ಮಾಹಿತಿಯೂ ಈ ವರದಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

‘ಮತಾಂತರ ನಮ್ಮ ದೇಶದಲ್ಲಿ ಅಪರಾಧ ಅಲ್ಲ. ಆದರೆ ಅದು ವೈಯಕ್ತಿಕ ಸಹಮತದ ಮೇಲೆ ನಡೆಯಬೇಕು. ಅಂದರೆ ಸ್ವಇಚ್ಛೆಯ ಮತಾಂತರಕ್ಕೆ ಯಾವುದೇ ಅಡ್ಡಿ ಇಲ್ಲ. ಆದರೆ ಆಮಿಷ ಒಡ್ಡಿ, ಬಲವಂತದ ಮತಾಂತರಕ್ಕೆ ಅವಕಾಶ ಇಲ್ಲ’ ಎಂದೂ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಕೇರಳದಲ್ಲಿನ ಮತಾಂತರ ವಿಷಯ ಈ ಹಿಂದೆಯೂ ಹಲವು ಬಾರಿ ಚರ್ಚೆಗೆ ವಸ್ತುವಾಗಿದೆ. 2012ರ ಜೂನ್‌ 25ರಂದು ವಿಧಾನ ಸಭೆಯಲ್ಲಿ ಮಾತನಾಡಿದ್ದ ಅಂದಿನ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ, ‘2006ರಿಂದ 2012ರವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ 2,687 ಯುವತಿಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ. ಅದರಲ್ಲಿ 2,195 ಹಿಂದೂಗಳು ಮತ್ತು 492 ಕ್ರೈಸ್ತ ಧರ್ಮೀಯರು’ ಎಂದು ಮಾಹಿತಿ ನೀಡಿದ್ದರು.

ಮತಾಂತರಕ್ಕೆ ಸಂಬಂಧಿಸಿದಂತೆ ಸಿಪಿಐ (ಎಂ) ಶಾಸಕಿ ಕೆ.ಕೆ. ಲತಿಕಾ ಅವರು ಚುಕ್ಕೆ ರಹಿತ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದ ಮುಖ್ಯಮಂತ್ರಿ, ‘2006–12ರ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 7,713 ಜನರನ್ನು ಮತಾಂತರಗೊಳಿಸಲಾಗಿದೆ.

ಈ ಪೈಕಿ 2,803 ಮಂದಿ ಹಿಂದೂಗಳು. ಇದೇ ಅವಧಿಯಲ್ಲಿ ಕ್ರೈಸ್ತ ಮತ್ತು ಹಿಂದೂ ಧರ್ಮಕ್ಕೆ ಮತಾಂತರಗೊಂಡವರು ಕ್ರಮವಾಗಿ 79 ಮತ್ತು ಇಬ್ಬರು. ಆದರೆ, ಅವರು ಯಾವ ಧರ್ಮದಿಂದ ಮತಾಂತರಗೊಂಡವರು ಎಂಬ ಬಗ್ಗೆ ಮಾಹಿತಿ ಇಲ್ಲ’ ಎಂದೂ ತಿಳಿಸಿದ್ದರು.

ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗುತ್ತಿದೆ ಎಂಬ ಆರೋಪ ಕೇರಳದಲ್ಲಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಹಿಂದು ಮತ್ತು ಕ್ರೈಸ್ತ ಸಂಘಟನೆಗಳು ಆಗ್ರಹಿಸುತ್ತಲೇ ಇವೆ. ಕೇರಳದ ಅಂದಾಜು 3.33 ಕೋಟಿ ಜನಸಂಖ್ಯೆಯಲ್ಲಿ ಹಿಂದು, ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಜನಸಂಖ್ಯೆ ಕ್ರಮವಾಗಿ ಶೇ 55, 25 ಮತ್ತು 19 ಆಗಿದೆ.

‘ಮತಾಂತರ ಎನ್ನುವಂಥದ್ದು ಕೇವಲ ಹಿಂದೂ ಅಥವಾ ಕ್ರೈಸ್ತ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಸೀಮಿತವಾಗಿ ಉಳಿದಿಲ್ಲ. ಮುಸ್ಲಿಂ ಧರ್ಮದ ಪ್ರತಿಷ್ಠಿತ ಕುಟುಂಬಗಳ ಉನ್ನತ ಶಿಕ್ಷಣ ಪಡೆದ ಹೆಣ್ಣು ಮಕ್ಕಳು ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಸಾಕಷ್ಟು ನಿದರ್ಶನಗಳಿವೆ, ಪ್ರೀತಿ, ಪ್ರಣಯವಷ್ಟೆ ಅದಕ್ಕೆ ಕಾರಣ; ಹೊರತು ಅದನ್ನು ಧರ್ಮದ ತಳಹದಿಯ, ಧಾರ್ಮಿಕತೆಗೆ ಸಂಬಂಧ ಕಲ್ಪಿಸಿ ಅರ್ಥೈಸಿಕೊಳ್ಳುವುದು ಸರಿಯಲ್ಲ. ಇಲ್ಲಿ ಆಕರ್ಷಣೆ, ಆಸಕ್ತಿ ವಿನಾ ಬೇರೆ ಏನೂ ಇಲ್ಲ. ಧರ್ಮ ಪ್ರಚಾರದ ಕೈವಾಡವೂ ಇಲ್ಲ’ ಎನ್ನುವುದು ಸಾಮಾಜಿಕ ಕಾರ್ಯಕರ್ತ ಷರೀಪ್ ಕೋಲೇರಿ ಅವರ ಅಭಿಮತ. 

ತನಿಖೆ ‘ಎನ್‌ಐಎ’ಗೆ?: ‘ನಾಪತ್ತೆ ಪ್ರಕರಣವನ್ನು ಎನ್‌ಐಎ ತನಿಖೆಗೆ ಒಪ್ಪಿಸುವಂತೆ ಕೇರಳ ಉತ್ತರ ವಲಯ ಎಡಿಜಿಪಿ ಸುದೇಶ್‌ಕುಮಾರ್‌ ಅಲ್ಲಿನ ಪೊಲೀಸ್‌ ಮಹಾನಿರ್ದೇಶಕ ಲೋಕನಾಥ ಬೆಹರ ಅವರಿಗೆ ತನಿಖಾ ವರದಿ ಸಲ್ಲಿಸಿದ್ದಾರೆ. ಬೆಹರ ಕೇರಳ ಸರ್ಕಾರಕ್ಕೆ ಈ ಬಗ್ಗೆ ಶಿಫಾರಸು ಮಾಡಲಿದ್ದು, ಬಳಿಕ ಸರ್ಕಾರ, ಕೇಂದ್ರಕ್ಕೆ ಪತ್ರ ಬರೆಯಲಿದೆ’
ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

ನಿಮಿಷಾಳ ಹಾದಿಯಲ್ಲಿ ಅಪರ್ಣಾ!
ತಿರುವನಂತಪುರ ಜಿಲ್ಲೆಯ ಆಟುಂಗಲ್‌ ನಿವಾಸಿಯಾಗಿದ್ದ ನಿಮಿಷಾ ನಾಪತ್ತೆಯಾಗಿ ಐಎಸ್‌ ಸೇರಿರಬೇಕು ಎಂಬ ಶಂಕೆಯ ಬೆನ್ನಲ್ಲೆ ಅದೇ ಜಿಲ್ಲೆಯ ಪಾಂಗೋಡು ಗ್ರಾಮದ ಅಪರ್ಣಾ ಎಂಬಾಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ವಿಷಯ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

‘ಕೊಚ್ಚಿಯಲ್ಲಿ ಏರೋನಾಟಿಕಲ್‌ ಎಂಜಿನಿಯರಿಂಗ್‌ ಕಲಿಯುತ್ತಿದ್ದ ಮಗಳು ಅಪರ್ಣಾಳನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಲಾಗಿದೆ’ ಎಂದು ಆರೋಪಿಸಿ ಆಕೆಯ ತಾಯಿ ಮಿನಿ ವಿಜಯನ್‌ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

‘ಅಪರ್ಣಾ ತನ್ನ ಹೆಸರನ್ನು ಶಹನ ಎಂದು ಬದಲಿಸಿಕೊಂಡಿದ್ದಾಳೆ. 2013ರ ಆಗಸ್ಟ್‌ನಲ್ಲಿ ಎರ್ನಾಕುಲಂನಲ್ಲಿ ಹಾಸ್ಟೆಲ್‌ನಲ್ಲಿದ್ದು ಜುಹಲ್‌ ಎಜುಕೇಷನ್‌ ಟ್ರಸ್ಟ್‌ನಲ್ಲಿ ಕಲಿಯುತ್ತಿದ್ದಾಗ ಆಕೆಯನ್ನು ಮತಾಂತರ ಮಾಡಲಾಗಿದೆ. ಮಲಪ್ಪುರಂನ ಮಂಜೇರಿ ಎಂಬಲ್ಲಿರುವ ಧಾರ್ಮಿಕ ಕೇಂದ್ರದಲ್ಲಿ ಅಪರ್ಣಾ ಇದ್ದಾಳೆ’ ಎಂದೂ ತಾಯಿ ದೂರಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಅಪರ್ಣಾ, ‘ನನ್ನನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಿರುವ ಸತ್ಯಸಾರಿಣಿ ಕೇಂದ್ರದ ಸುಮಯ್ಯಾ ಎಂಬಾಕೆಯ ಜೊತೆ ವಾಸಿಸುವೆ’ ಎಂದು ಹೇಳಿಕೆ ನೀಡಿದ್ದಾಳೆ.

ನ್ಯಾಯಾಲಯದಲ್ಲಿ ಆಕೆ ಈ ಹೇಳಿಕೆ ನೀಡಿರುವುದರಿಂದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪೊಲೀಸರು ಕೈ ಚೆಲ್ಲಿದ್ದಾರೆ. ನಿಮಿಷಾ ನಾಪತ್ತೆಯಾದ ಸುದ್ದಿ ಮಾಧ್ಯಮಗಳಲ್ಲಿ ಬಹಿರಂಗಗೊಳ್ಳುತ್ತಿದ್ದಂತೆ ಅಪರ್ಣಾ ತನ್ನ ತಾಯಿ ಜೊತೆಗಿನ ಸಂಪರ್ಕ ಕಡಿದುಕೊಂಡಿದ್ದಾಳೆ.

ಅಂತರ್ ಧರ್ಮೀಯರ ನಡುವಿನ ಪ್ರೀತಿ, ಪ್ರೇಮ, ಪ್ರಣಯವಷ್ಟೆ ಮತಾಂತರಕ್ಕೆ ಕಾರಣ; ಹೊರತು ಅದನ್ನು ಧರ್ಮದ ತಳಹದಿಯ ಮೇಲೆ ಅರ್ಥೈಸಿಕೊಳ್ಳುವುದು ಸರಿಯಲ್ಲ.
-ಷರೀಫ್ ಕೋಲೇರಿ, ಸಾಮಾಜಿಕ ಕಾರ್ಯಕರ್ತ

(ನಾಳಿನ ಸಂಚಿಕೆ ನೋಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT