ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ಬಯಸುವ ವಯಸ್ಸು ಮನಸ್ಸು

Last Updated 9 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮಧ್ಯವಯಸ್ಸು ಎಂಬುದು ಮನಸ್ಸುಗಳ ನಡುವೆ ಪ್ರೀತಿಯು ಪಕ್ವಗೊಳ್ಳುವ ಕಾಲಘಟ್ಟ. ಇಲ್ಲಿ ದೇಹ ಮನಸ್ಸುಗಳ ಮಿಲನ ಗಾಢವಾಗಿ ರೂಪುಗೊಳ್ಳುತ್ತದೆ. ದೈಹಿಕ ಆಸರೆಗಿಂತ ಮಾನಸಿಕ ಆಸರೆಯನ್ನು ಹೆಚ್ಚು ಬಯಸುತ್ತಾರೆ. ಮನಶಾಸ್ತ್ರಜ್ಞರ ಪ್ರಕಾರ ಮಧ್ಯವಯಸ್ಸು ಎಂಬುದು ಒಂದು ಅವಲಂಬನೆಯ ಕಾಲ. ಇಲ್ಲಿ ಅವರು ಆತಂಕ, ಭೀತಿಯನ್ನು ಹೊಂದುವ ಸಾಧ್ಯತೆ ಇರುತ್ತದೆ. ಅಲ್ಲದೆ ಅವರು ಮಾನಸಿಕ ನೆಮ್ಮದಿ ಮತ್ತು ಪ್ರೀತಿಯನ್ನು ಹಂಚಿಕೊಳ್ಳಲು ಒಬ್ಬ ಸಂಗಾತಿಯನ್ನು ಬಯಸುತ್ತಾರೆ.

ಈ ಕಾಲಘಟ್ಟದಲ್ಲಿ ಮಧ್ಯವಯಸ್ಕರು ಸಂಗಾತಿಯಿಂದ ವಿಯೋಗ ಹೊಂದಿದರೆ ತೀವ್ರ ಖಿನ್ನತೆಗೆ ಒಳಗಾಗುತ್ತಾರೆ. ತಾನು ಒಂಟಿ ಎಂಬ ಭಾವ ಮೂಡುತ್ತದೆ. ಪ್ರೀತಿಯು ಹೂವಾಗಿ ಅರಳುವ ಸಮಯದಲ್ಲಿ ಬಾಡಿದರೆ ಆ ಸಸಿಯೇ ಕೊಳೆಯುವ ಸಾಧ್ಯತೆ ಇರುತ್ತದೆ. ಅದೇ ಸಸಿಗೆ ಆಸರೆಯ ನೀರು ಹಾಕಿ ಬೆಳೆಸಿದರೆ ಪ್ರೀತಿಯ ಮೊಗ್ಗು ಅರಳಿ ಹೂವಾಗಿ ತನ್ನ ಸುಗಂಧ ಹರಡುತ್ತದೆ.

ನನ್ನ ಸ್ನೇಹಿತನ ಪಕ್ಕದ ಮನೆಯ ನಿರ್ಮಲಾ ಶಂಕರ್ ಮದುವೆಯಾಗಿ ಒಂಬತ್ತನೇ ವರ್ಷಕ್ಕೆ ತಮ್ಮ ಗಂಡನನ್ನು ಕಳೆದುಕೊಂಡರು. ಮೂರು ವರ್ಷದ ಪುಟ್ಟ ಮಗಳ ಜವಾಬ್ದಾರಿ ಇವರ ಹೆಗಲ ಮೇಲೆ ಬಿತ್ತು. ಒಂಟಿ ಜೀವನವನ್ನು ಬಾಳುತ್ತಿರುವ ಇವರು ಕೆಲವೊಮ್ಮೆ ಒಬ್ಬರೇ ಕುಳಿತು ಕಣ್ಣೀರು ಹಾಕುವುದನ್ನು ನಾನು ಗಮನಿಸಿದ್ದೇನೆ. ಅಕ್ಕಪಕ್ಕದ ಮನೆಯವರ ಮಾತಿನ ಬಾಣಗಳಿಂದ ಆಗಾಗ ಘಾಸಿಗೊಳ್ಳುತ್ತಾರೆ. ನಿರ್ಮಲಾ ಅವರಂಥ ಹೆಣ್ಣುಮಕ್ಕಳು ಆಸರೆಯನ್ನು ಬಯಸುತ್ತಾರೆ. ಪ್ರೀತಿಗಾಗಿ ಹಂಬಲಿಸುತ್ತಾರೆ. ಪ್ರೀತಿ ಹಂಚಿಕೊಳ್ಳಲು ಒಬ್ಬ ಸಂಗಾತಿಯ ಬಯಕೆಯಿದ್ದರೂ ಸಮಾಜದ ಕಣ್ಗಾವಲಿನಲ್ಲಿ ಹೇಳಿಕೊಳ್ಳಲಾಗದೆ ಬಿಡಲೂ ಆಗದೆ ಒದ್ದಾಡುತ್ತಾರೆ. ಅಂಥವರ ಪ್ರೀತಿಯನ್ನು ಅರ್ಥಮಾಡಿಕೊಳ್ಳುವ ಮತ್ತು ಅವರ ನೋವಿಗೆ ಸ್ಪಂದಿಸುವ ಒಬ್ಬ ಸಂಗಾತಿಯ ಅವಶ್ಯಕತೆ ಇದೆ. ಅವರನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಗಳು ಮುಂದೆ ಬರಬೇಕು. ಸಮಾಜವೂ ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕು.

ನಲವತ್ತು, ಐವತ್ತು ವರ್ಷದಲ್ಲಿ ಸಂಗಾತಿಯನ್ನು ಕಳೆದುಕೊಂಡವರಿಗೆ ಮದುವೆಯೇಕೆ ಬೇಕು..? ಎಂದು  ಮೂಗು ಮುರಿಯುವವರೇ ಜಾಸ್ತಿ. ಅವರ ಭಾವನೆ, ಮಾನಸಿಕ ತೊಳಲಾಟಗಳಿಗೆ ಯಾರೂ ಬೆಲೆ ಕೊಡುವುದಿಲ್ಲ. ಅವರು ತಮ್ಮ ನೋವು, ಸಂತೋಷಗಳನ್ನು ಹಂಚಿಕೊಳ್ಳಲು ಸದಾ ಒಬ್ಬ ಸಂಗಾತಿ ಹತ್ತಿರವಿರಬೇಕೆಂದು ಆಸಿಸುತ್ತಾರೆ. ಬಳ್ಳಿಗೆ ಮರದ ಆಸರೆಯಂತೆ ಪ್ರೀತಿಯಿಂದ ದೂರವಾದ ಮಧ್ಯವಯಸ್ಕರಿಗೂ ಒಬ್ಬ ಬಾಳ ಸಂಗಾತಿಯ ಅಗತ್ಯ ಖಂಡಿತ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT