ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರನ್ನು ಆಕರ್ಷಿಸುತ್ತಿರುವ ಕಲಾಗ್ರಾಮ

Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನಗರದ ಪಶ್ಚಿಮ ಭಾಗಕ್ಕೆ ಬೆಂಗಳೂರು ವಿಶ್ವವಿದ್ಯಾಲಯದ ಪಕ್ಕದ ಮಲ್ಲತ್ತಹಳ್ಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಮಿಸಿರುವ ಸುಂದರ ಕಲಾಗ್ರಾಮ ಕ್ರಮೇಣ ನಾಟಕಕ್ಕೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಸಫಲವಾಗುತ್ತಿದೆ. ಕರ್ನಾಟಕ ನಾಟಕ ಅಕಾಡೆಮಿ ನಾಲ್ಕು ದಿನಗಳ ಕಾಲ ಈ ಕಲಾಗ್ರಾಮದಲ್ಲಿ ನಡೆಸಿದ ‘ಬಹುಮುಖಿ ನಾಟಕೋತ್ಸವ’ಕ್ಕೆ ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರೇಕ್ಷಕರೇ ಇದಕ್ಕೆ ಸಾಕ್ಷಿ. ಕಲಾಗ್ರಾಮವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ನಾಟಕ ಅಕಾಡೆಮಿ ಈ ಉತ್ಸವ ಹಮ್ಮಿಕೊಂಡಿತ್ತು.

’ಬಹುಮುಖಿ’ ಅರ್ಥವನ್ನು ನಿಜಗೊಳಿಸುವಂತೆ ಈ ಉತ್ಸವದಲ್ಲಿ ನಾಲ್ಕು ವೈವಿಧ್ಯಮಯ ನಾಟಕಗಳು ಪ್ರಯೋಗಗೊಂಡವು. ಉತ್ಸವಕ್ಕೆ ನಾಂದಿ ಹಾಡಿದ್ದು ಮಕ್ಕಳ ನಾಟಕ. ಸುಳ್ಯದ ರಂಗಮನೆ ನಾಟಕ ಶಾಲೆಯ ಮಕ್ಕಳು ‘ಮಕ್ಕಳ ಮನೋಲೋಕ’ವನ್ನು ಅದ್ಭುತವಾಗಿ ತೆರೆದಿಟ್ಟರು. ಸುಮಾರು ೩೦ ಮಕ್ಕಳು ಎರಡು ತಾಸು ರಂಗಸ್ಥಳದ ತುಂಬೆಲ್ಲ ಕುಣಿದರು, ನೆಗೆದರು, ಹಾಡಿದರು, ನರ್ತಿಸಿದರು, ಸ್ಫುಟವಾಗಿ ಸಂಭಾಷಣೆ ಹೇಳಿದರು. ಪಾದರಸದಂತಹ ಚಲನೆ ಅವರದು.

ಮಕ್ಕಳನ್ನು ಹಾಗೆ ಕಡೆದು ರೂಪಿಸಿದವರು ರಂಗಮನೆ ರೂವಾರಿ ಜೀವನರಾಂ ಸುಳ್ಯ ಅವರು. ಜೀವನರಾಂ ಅವರಿಗೆ ಸಂಗೀತ ಗೊತ್ತು, ಹಲವಾರು ವಾದ್ಯಗಳನ್ನು ನುಡಿಸಬಬಲ್ಲರು. ಬೆಳಕು ಗೊತ್ತು. ರಂಗಸಜ್ಜಿಕೆಯ ವಿನ್ಯಾಸವಂತೂ ಬಲು ಸೊಗಸು. ಪರದೆ, ಗೊಂಬೆಗಳ ತುಂಬಾ ಸರಳ ಪರಿಕರಗಳನ್ನಿಟ್ಟುಕೊಂಡು ಮಾಯಾಲೋಕವನ್ನೇ ಸೃಷ್ಟಿಸಬಲ್ಲರು. ಅಂತಹ ಮಾಯಾಲೋಕ ನೋಡಲು ಸೀಟುಗಳೆಲ್ಲ ಭರ್ತಿಯಾಗಿದ್ದವು. ಹತ್ತಾರು ಮಂದಿ ನಿಂತೇ ನಾಟಕ ವೀಕ್ಷಿಸಿದರು.

ಮಂಡ್ಯದ ಪ್ರಕಾಶ ಕಲಾಸಂಘ ಪೌರಾಣಿಕ ನಾಟಕ ಪ್ರಯೋಗಗಳಿಗೆ ಪ್ರಸಿದ್ಧಿ ಪಡೆದ ರಾಜ್ಯದ ಅತ್ಯಂತ ಹಳೆಯ ತಂಡ. ಉತ್ಸವದ ಎರಡನೇ ದಿನ ‘ಪಾದುಕೆ ಪಟ್ಟಾಭಿಷೇಕ’ ನಾಟಕವನ್ನು ಅವರು ಪ್ರಯೋಗಿಸಿದರು. ಕಣ್ಣು ಕೋರೈಸುವ ಪರದೆಗಳು ಇರಲಿಲ್ಲ. ಅವು ಇರದಿದ್ದುದೇ ಚೆನ್ನಾಯಿತು ಎನ್ನುವ ಹಾಗೆ ಸಾಂಪ್ರದಾಯಿಕ ವೇಷಭೂಷಣದಲ್ಲಿ ಪಾತ್ರಧಾರಿಗಳು ಎದ್ದುಕಂಡರು. ಒಂದು ಮಾತಿಗೆ ನಾಲ್ಕೈದು ಹಾಡುಗಳನ್ನು ಕೈಬಿಟ್ಟು, ಅಭಿನಯಕ್ಕೆ ಆದ್ಯತೆ ನೀಡಿ, ಸ್ಫುಟವಾಗಿ ಸಂಭಾಷಣೆ ನುಡಿಸಿದರೆ ಪೌರಾಣಿಕ ನಾಟಕಗಳು ಮತ್ತಷ್ಟು ಕಳೆಕಟ್ಟಬಹುದು.

ದಶರಥನ ಪಾತ್ರಧಾರಿ ಕೆಂಚಪ್ಪ, ಭರತ- ಶಿವಲಿಂಗೇಗೌಡ, ಕೈಕೇಯಿ- ಭವ್ಯರೈ ಅವರಲ್ಲಿ ಅಂತಹ ಸೂಚನೆಗಳು ಸಿಕ್ಕವು. ಮಂಥರೆಯಾಗಿ ಕೃಷ್ಣಮೂರ್ತಿ ಸೊಗಸಾಗಿ ಅಭಿನಯಿಸಿದರು.ಪೌರಾಣಿಕ ನಾಟಕಗಳಲ್ಲಿ ಹಾರ್ಮೋನಿಯಂ ನುಡಿಸುವ ಸಂಗೀತ ನಿರ್ದೇಶಕರೇ ನಾಟಕ ನಿರ್ದೇಶಕರು ಸಹ. ಕೆ.ಶ್ರೀಧರಮೂರ್ತಿ ಹಿತಮಿತವಾಗಿ ಆ ವಾದ್ಯ ನುಡಿಸಿದರು. ಕೃಷ್ಣಮೂರ್ತಿ ಅವರ ಕ್ಲಾರಿಯೋನೆಟ್ ವಾದನ ಸೊಗಸಾಗಿತ್ತು. ಕೆಲವು ಹಾಡುಗಾರರಿಂದ ರಣವಾದ್ಯ ಎನಿಸಿಕೊಂಡಿರುವ ಕೀಬೋರ್ಡ್(ಕ್ಯಾಷಿಯೊ)ನ ಅಬ್ಬರಕ್ಕಿಂತ ಪೌರಾಣಿಕ ನಾಟಕಗಳಿಗೆ ಕ್ಲಾರಿಯೋನೆಟ್ ವಾದನವೇ ಉತ್ತಮ. ಪಾತ್ರಗಳ ಹಾವಭಾವದ ಸೂಕ್ಷ್ಮಗಳಿಗೆ ಅತ್ಯಂತ ಸೂಕ್ತ ಸಾಥ್ ನೀಡುವ ಸಾಮರ್ಥ್ಯ ಆ ವಾದನಕ್ಕಿದೆ.

ನಗರದ ಅಖಿಲ ಕರ್ನಾಟಕ ರಂಗಭೂಮಿ ಪರಿಷತ್ ತಂಡ ಉತ್ಸವದ ಮೂರನೇ ದಿನ ‘ಕೃಷ್ಣ ಸಂಧಾನ’ ನಾಟಕ ಪ್ರದರ್ಶಿಸಿತು. ಕೃಷ್ಣನಾಗಿ ಅಭಿನಯಿಸುವ ಜತೆಗೆ ನಾಟಕ ನಿರ್ದೇಶಿಸಿದವರು ಎಚ್.ಜೆ.ಸಿದ್ದರಾಜಯ್ಯ. ಕೃಷ್ಣನ ಪಾತ್ರಕ್ಕೆ ರಸಿಕತೆಯ ಹಾವಭಾವದ ಜತೆಗೆ ಹಾಡುಗಳು ಬಹಳ ಮುಖ್ಯ. ಸಿದ್ದರಾಜಯ್ಯ ಅವರ ಹಾಡುಗಾರಿಕೆ ಚೆನ್ನಾಗಿತ್ತು. ದ್ರೌಪದಿ ಪಾತ್ರದಲ್ಲಿ ನಿರ್ಮಲಾ ಬೈಲಹೊಂಗಲ ಸಹಜ ಅಭಿನಯದ ಜತೆಗೆ ಉತ್ತಮವಾಗಿ ಹಾಡಿದರು. ಕೌರವನಾಗಿ ರಂಗರಾಮಯ್ಯ ಅಭಿನಯ ಅಮೋಘವಾಗಿತ್ತು. ಅರ್ಜುನನಾಗಿ ವೆಂಕಟೇಶ್, ವಿದುರನಾಗಿ ಬಿಬಿಎಂಪಿ ಕೆಂಚಪ್ಪ ಉತ್ತಮ. ಪ್ರಸಿದ್ಧ ಸಂಗೀತ ನಿರ್ದೇಶಕ ತಾವರಕೆರೆ ನಾಗರಾಜ್ ಅವರ ಹಾರ್ಮೋನಿಯಂ ವಾದನ ಕೀಬೋರ್ಡ್‌ನ ಅಬ್ಬರದಲ್ಲಿ ಕಾಣೆಯಾಯಿತು. ಅದನ್ನು ಮೀರಿ ತನ್ನ ಸೊಗಡನ್ನು ಬೀರಿದ್ದು ಶ್ರೀನಿವಾಸಮೂರ್ತಿ ಅವರ ತಬಲ ವಾದನ.

ಉತ್ತರ ಕರ್ನಾಟಕದ ಜನಪ್ರಿಯ ನಾಟಕ ‘ನೀನೂ ಸಾಹುಕಾರನಾಗು’ ಉತ್ಸವದ ಕೊನೆಯ ದಿನ ಪ್ರಯೋಗ ಕಂಡಿತು. ವಿಜಾಪುರದ ವೀರೇಶ್ವರ ನಾಟ್ಯಸಂಘ ನಾಲತ್ತವಾಡ ಅವರು ಈ ನಾಟಕ ಪ್ರಯೋಗಿಸಿದರು. ಬೆಳ್ಳಾವೆ, ಕಂದಗಲ್ಲ, ಪುಟ್ಟಸ್ವಾಮಯ್ಯ, ನಲವಡಿ, ಮಹಾಂತೇಶ ಶಾಸ್ತ್ರಿ, ಧುತ್ತರಗಿ ಮುಂತಾದ ಹೆಸರಾಂತ ವೃತ್ತಿರಂಗಭೂಮಿಯ ನಾಟಕಕಾರರ ಸಾಲಿನಲ್ಲಿ ನಿಲ್ಲುವ ಕೆ.ಎನ್.ಸಾಳುಂಕೆ ರಚಿಸಿದ ನಾಟಕ ಇದು. ಮುಖ್ಯ ಕಥೆಗೆ ಪರ್ಯಾಯವಾಗಿ ಹಾಸ್ಯ ಸನ್ನಿವೇಶಗಳನ್ನು ಸೃಷ್ಟಿಸುವ ರೂಢಿಗತ ಶೈಲಿಯನ್ನು ಕೈಬಿಟ್ಟು ಕಥೆಯ ಕಟುವಾಸ್ತವದ ಹೊಟ್ಟೆಯೊಳಗೇ ಹಾಸ್ಯವನ್ನು ಸ್ಫುರಿಸುವ ಒಬ್ಬ ಅದ್ಭುತ ನಾಟಕಕಾರ ಸಾಳುಂಕೆ.

ಲಂಬಾಣಿ ಸೋನಿ ಹಾಗೂ ಚಂದ್ರಮೌಳಿ ಪಾತ್ರದಲ್ಲಿ ಅಭಿನಯಿಸಿದ ಉಮಾರಾಣಿ ಇಳಕಲ್ಲ ಹಾಗೂ ಸಿದ್ಧು ನಾಲತ್ತವಾಡ ಉತ್ತರ ಕರ್ನಾಟಕದ ಹೆಸರಾಂತ ಹಾಸ್ಯ ಕಲಾವಿದರು. ಜಿದ್ದಿಗೆ ಬಿದ್ದವರಂತೆ ಅವರು ಅಭಿನಯಿಸಿ ನಕ್ಕು ನಲಿಸಿದರು. ಸಾಹುಕಾರ ನಂಜಪ್ಪನ ಪಾತ್ರಧಾರಿ ಮೃತ್ಯುಂಜಯಸ್ವಾಮಿ ಯರಗಟ್ಟಿ ತಮ್ಮ ವಿಶೇಷ ಹಾವಭಾವಗಳಿಂದ ಭಾರಿ ಚಪ್ಪಾಳೆ ಗಿಟ್ಟಿಸಿದರು. ಅನಿತಾ ಶೆಟ್ಟಿ ಹುಬ್ಬಳ್ಳಿ, ಮಹಬೂಬಸಾಬ್ ಗೊಳಸಂಗಿ, ಪ್ರಕಾಶ್ ರಾಯಚೂರು, ನಟರಾಜ, ಪದ್ಮಾವತಿ ಸೊಲ್ಲಾಪುರ, ರಾಜಮ್ಮ -ಎಲ್ಲರೂ ಪರಿಣತ ವೃತ್ತಿ ಕಲಾವಿದರು. ಮೂರು ತಾಸುಗಳ ಕಾಲ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟರು.

ಕೀಬೋರ್ಡ್ ಮತ್ತು ರಿದಂ ಪ್ಯಾಡ್ ಇದ್ದರೆ ಸಾಕು. ಕೊಂಡೊಯ್ಯಲು ಸರಳ ಎಂಬ ಕಾರಣಕ್ಕೆ ವಾದ್ಯಗಳನ್ನು ಕಡಿತಗೊಳಿಸಿದರೆ ನಾಟಕದ ಕಳೆಕಟ್ಟುವಿಕೆಗೆ ತುಸು ವ್ಯತ್ಯಯ ಬರುತ್ತದೆ. ರಾಜಣ್ಣ ವಿಜಾಪುರ ಹಾಗೂ ಗುರುರಾಜ ಸಪ್ಪಂಡಿ ನುಡಿಸಿದ ಈ ಎರಡು ವಾದ್ಯಗಳು ನಾಟಕಕ್ಕೆ ಸಾಕಾಗಲಿಲ್ಲ.

ಮಕ್ಕಳ ನಾಟಕ, ಮಹಾಭಾರತ, ರಾಮಾಯಣದ ತಲಾ ಒಂದು ಹಾಗೂ ಒಂದು ಸಾಮಾಜಿಕ ನಾಟಕ ಪ್ರಯೋಗದ ಕಾರಣಕ್ಕೆ ಬಹುಮುಖಿ ಅರ್ಥ ಸರಿ ಇತ್ತು. ಆದರೆ ಹವ್ಯಾಸಿ ತಂಡದ ಒಂದು ಪ್ರಯೋಗಶೀಲ ನಾಟಕವೂ ಇದ್ದಿದ್ದರೆ ಬಹುಮುಖಿ ಇನ್ನೂ ಹೆಚ್ಚಿನ ಸಾರ್ಥಕತೆ ಪಡೆಯುತ್ತಿತ್ತು.

ಸಂಸ್ಕೃತಿ ಇಲಾಖೆಯು ಕಲಾಗ್ರಾಮ ನಿರ್ಮಿಸಿ ಕೆಲವು ವರ್ಷಗಳೇ ಕಳೆದಿದ್ದರೂ, ಈಗಲಾದರೂ ಅಲ್ಲಿ ರಂಗ ಚಟುವಟಿಕೆಗಳು ಗರಿಗಟ್ಟಿಗೊಳ್ಳುತ್ತಿರುವುದು ಶುಭ ಸಂಕೇತ. ರಂಗಚೇತನ ಸೇರಿದಂತೆ ಹಲವು ರಂಗ ತಂಡಗಳು ಇಲ್ಲಿ ನಿರಂತರ ನಾಟಕವಾಡುವ ಮೂಲಕ ನಾಟಕ ಪ್ರಯೋಗಕ್ಕೆ ಮತ್ತೊಂದು ಸೊಗಸಾದ ತಾಣವನ್ನು ಪತ್ತೆಹಚ್ಚಿವೆ. ಬಡಾವಣೆ ರಂಗಮಂದಿರಗಳು ಈಗ ನಗರದಲ್ಲಿ ಜನಪ್ರಿಯತೆ ಪಡೆಯುತ್ತಿವೆ. ಆ ಸಾಲಿನಲ್ಲಿ ಇದೂ ಒಂದು ರಂಗಮಂದಿರ- ಅಷ್ಟೇ ಅಲ್ಲ, ರಾಜ್ಯದಲ್ಲೇ ಸೊಗಸಾದ ರಂಗಸ್ಥಳದ ಪೈಕಿ ಇದೂ ಒಂದು. ಕೆಂಗೇರಿ, ನಾಗರಬಾವಿ, ವಿಜಯನಗರ ಮುಂತಾದ ಬಡಾವಣೆಗಳಿಂದ ನಾಟಕ ನೋಡಲು ಇದೀಗ ಜನ ದೌಡಾಯಿಸುತ್ತಿದ್ದಾರೆ. ಹಾಗೆಯೇ ನಗರದ ಬಹುಭಾಗದ ವಾಸಿಗಳಿಗೆ ಇದು ಕೇಂದ್ರಸ್ಥಳವೂ ಹೌದು.

ಇಲ್ಲಿ ಸುಸಜ್ಜಿತ ರಂಗಮಂದಿರವಿದೆ, ಬಯಲು ರಂಗಮಂದಿರವಿದೆ, ವಿಶಾಲವಾದ ಅಂಗಳವಿದೆ, ವನರಾಶಿಯಿದೆ. ನಗರದ ಮಧ್ಯೆಯೇ ಈ ಕಲಾಗ್ರಾಮ ಇದೆ. ರಂಗರಸಿಕರ ಆಕರ್ಷಣೆಗೆ ಮತ್ತೇನು ಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT