ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಕ್ಷಕರ ಕೈಯಲ್ಲೇ ಇದೆ ರಿಮೋಟ್‌

Last Updated 23 ಜೂನ್ 2016, 19:30 IST
ಅಕ್ಷರ ಗಾತ್ರ

ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಇತ್ತೀಚಿನ ವಿವಾದಗಳನ್ನು ಗಮನಿಸುತ್ತಿದ್ದರೆ, ಅಲ್ಲಿನ ಅಧ್ಯಕ್ಷರು ಹಾಗೂ ಸದಸ್ಯರು ಯಾವ ಕಾಲಘಟ್ಟದಲ್ಲಿ ಇದ್ದಾರೆ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ಸುಮಾರು ಇಪ್ಪತ್ತೊಂಬತ್ತು ವರ್ಷಗಳ ಕಾಲ ನಿರ್ಮಾಪಕರಾಗಿ, ನಿರ್ದೇಶಕರಾಗಿದ್ದು ಅನೇಕ ಹಿಂದಿ ಸಿನಿಮಾಗಳ ಒಳ ಹೊರಗನ್ನು ಬಲ್ಲ ಮಂಡಳಿಯ ಅಧ್ಯಕ್ಷರಾದ ಪಹಲಾಜ್ ನಿಹಲಾನಿಯವರ ವಿವಾದಾತ್ಮಕ ಹೇಳಿಕೆಗಳು, ಅವರ ನಿಲುವುಗಳನ್ನು ಗಮನಿಸಿದಾಗ ಇಂತಹ ಪ್ರಶ್ನೆ ಸಹಜವಾಗಿಯೇ  ಪ್ರೇಕ್ಷಕರಲ್ಲಿ ಬರುತ್ತದೆ.

ಇತ್ತೀಚೆಗೆ ಬಿಡುಗಡೆಯಾದ ‘ಉಡ್ತಾ ಪಂಜಾಬ್’ ಚಲನಚಿತ್ರದ 87 ಭಾಗಗಳಿಗೆ ಕತ್ತರಿ ಪ್ರಯೋಗ ಮಾಡುವಂತೆ ಮಂಡಳಿ ಸೂಚಿಸಿತ್ತು. ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದ ವಿಷಯವನ್ನು ಒಳಗೊಂಡ ಈ ಚಲನಚಿತ್ರವನ್ನು ದೇಶದ ಜನ ನೋಡಿದ್ದೇ ಆದಲ್ಲಿ, ಅವರೆಲ್ಲ ಕುಲಗೆಟ್ಟು ಹೋಗುತ್ತಾರೆ ಎಂಬಂತಹ ಮಾತುಗಳನ್ನು ನಿಹಲಾನಿ ಮಾಧ್ಯಮಗಳ ಮುಂದೆ ಆಡಿದ್ದರು.

ಹಾಗಿದ್ದರೆ ನಿಹಲಾನಿ ಯಾವ ಶತಮಾನದಲ್ಲಿ ಜೀವಿಸುತ್ತಿದ್ದಾರೆ? ಇಂದಿನ ಯುವಕರಾಗಲಿ, ಪ್ರೇಕ್ಷಕರಾಗಲಿ ಪ್ರಜ್ಞಾವಂತರಲ್ಲ ಎಂದು ಅವರು ಅಂದುಕೊಂಡಿದ್ದಾರೆಯೇ? ಮಾದಕ ವಸ್ತುವಿನ ದುಷ್ಪರಿಣಾಮ, ಅದರಿಂದ ಯುವಜನರ ಮೇಲಾಗುತ್ತಿರುವ ಪರಿಣಾಮ, ಮಾದಕ ವಸ್ತುವಿನ ವಿಷ ವರ್ತುಲದಲ್ಲಿ ಸಿಲುಕಿ ಹಾಕಿಕೊಳ್ಳುವ ಅಮಾಯಕರು, ಅದರಲ್ಲಿ ರಾಜಕಾರಣಿಗಳು, ಪೊಲೀಸ್‌ ಇಲಾಖೆ ಕೈವಾಡ ಎಲ್ಲವನ್ನೂ ಲೇಖನದಲ್ಲಿ ಓದುವುದಕ್ಕಿಂತ ಚಲನಚಿತ್ರದಂತಹ ಮಾಧ್ಯಮದ ಮೂಲಕ ತಿಳಿಸಿದಲ್ಲಿ ಪರಿಣಾಮ ಪ್ರಭಾವಯುತವಾಗಿರುತ್ತದೆ. ಇದು ಮಂಡಳಿಯ ಅಧ್ಯಕ್ಷರಿಗೆ ಏಕೆ ತಿಳಿಯಲಿಲ್ಲ?

ಶ್ಲೋಕ್ ಶರ್ಮಾ ನಿರ್ದೇಶನದ ‘ಹರಾಮ್‌ಕೋರ್’ ಚಿತ್ರಕ್ಕೂ ಮಂಡಳಿ ಪ್ರಮಾಣಪತ್ರ ನೀಡಲು ನಿರಾಕರಿಸಿದೆ. ಚಿತ್ರದ ಕಥಾವಸ್ತು ಶಿಕ್ಷಕರ ಬಗ್ಗೆ ಕೀಳುಮಟ್ಟದ ಅಭಿಪ್ರಾಯ ಮೂಡಿಸುತ್ತದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ. 14 ವರ್ಷದ ಬಾಲಕಿ ಮತ್ತು ಮನೆಪಾಠದ ಶಿಕ್ಷಕನ ನಡುವಣ ಸಂಬಂಧ ಚಿತ್ರದ ಕಥಾವಸ್ತು.

ಇಲ್ಲಿ ಶಿಕ್ಷಕ ಪಾಠ ಮಾಡುವುದು ಬಿಟ್ಟು ಚಿಕ್ಕ ಹುಡುಗಿಯೊಂದಿಗೆ ಸಂಬಂಧ ಬೆಳೆಸಿಕೊಳ್ಳುವುದರಿಂದ ಸಮಾಜಕ್ಕೆ ಯಾವ ಸಂದೇಶ ರವಾನೆಯಾಗುತ್ತದೆ? ಇದರಿಂದ ಶಿಕ್ಷಕರ ಬಗ್ಗೆ ಸಮಾಜದಲ್ಲಿ ಅಗೌರವ ಉಂಟಾಗುತ್ತದೆ ಎಂಬ ಆತಂಕ ಮಂಡಳಿಗೆ ಇರಬಹುದು. ಹಾಗಿದ್ದರೆ, ಪುಟ್ಟ ಹಸುಳೆಗಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷಕರು ಭಾಗಿಯಾಗಿರುವುದನ್ನು ನಾವು ದಿನನಿತ್ಯ ಪತ್ರಿಕೆಗಳಲ್ಲಿ ನೋಡುತ್ತಿಲ್ಲವೇ?

ನಮ್ಮ ದೇಶದ ಪಾಲಕ, ಪೋಷಕರು ಮಕ್ಕಳನ್ನು ಶಾಲೆ-ಕಾಲೇಜುಗಳಿಗೆ ಕಳುಹಿಸದೆ ಮನೆಯಲ್ಲೆ ಇಟ್ಟುಕೊಂಡಿದ್ದಾರೆಯೇ?  ಅಬ್ದುಲ್‌ ಕಲಾಂ ಅವರಂತಹ ಗುರುವಿನ ಮೇಲೆ ತೋರುತ್ತಿದ್ದ ಗೌರವವನ್ನು ನಮ್ಮ ಯುವಕರು ಯಾವ ಮಾಧ್ಯಮಗಳಿಂದಲೂ ಕಲಿತದ್ದಲ್ಲ. ಕಲಾಂ ಅವರ ನಡೆ-ನುಡಿ, ಸರಳತೆ, ಸಜ್ಜನಿಕೆಯೇ ಅವರನ್ನು ಗೌರವಿಸುವಂತೆ ಮಾಡಿತ್ತು. ಅಂತಹ ಸಾವಿರಾರು ಶಿಕ್ಷಕರು ನಮ್ಮ ಮಧ್ಯದಲ್ಲಿಯೇ ಇದ್ದಾರೆ.

ಒಂದು ಚಲನಚಿತ್ರವನ್ನು ನೋಡುವ ಪ್ರೇಕ್ಷಕರು ಅದರಲ್ಲಿ ತಾವು ಯಾವುದನ್ನು ಸ್ವೀಕರಿಸಬೇಕು ಮತ್ತು ಯಾವುದನ್ನು ನಿರಾಕರಿಸಬೇಕೆಂಬ ನಿರ್ಣಯ ನೀಡುವಷ್ಟು ಯೋಚನಾಶಕ್ತಿ ಉಳ್ಳವರಾಗಿರುತ್ತಾರೆ. ಇಂದು ಅಂಗೈಯಲ್ಲಿ ವಿಶ್ವವನ್ನೇ ಅಡಗಿಸಿ ಇಟ್ಟುಕೊಂಡು ಓಡಾಡುತ್ತಿರುವ ಜನರು ‘ಪೋರ್ನ್‌ ವೆಬ್‌ಸೈಟ್’ಗಳನ್ನು ಹೊಕ್ಕರೆ ಎಂತೆಂಥ ಚಿತ್ರಗಳನ್ನು ನೋಡಬಹುದು ಎಂಬುದು ಮಂಡಳಿಗೆ ಗೊತ್ತಿಲ್ಲದೆ ಇಲ್ಲ. ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೂ ಇದನ್ನೆಲ್ಲ ನಿಯಂತ್ರಣ ಮಾಡುವುದು ಅಸಾಧ್ಯವಾಗಿದೆ.

ಇಂದು ಬಹಳಷ್ಟು ವಿಭಿನ್ನ ಬಗೆಯಲ್ಲಿ ಯೋಚಿಸುವ ನಿರ್ದೇಶಕರು, ಕಥೆಗಾರರು ಚಲನಚಿತ್ರ ಮಾಧ್ಯಮಕ್ಕೆ ಬರುತ್ತಿದ್ದಾರೆ. ಅವರ ಪ್ರಯತ್ನಗಳನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಿ
ದ್ದಾರೆ. ಒಪ್ಪದೆ ತಿರಸ್ಕರಿಸುವ ರಿಮೋಟ್ ಕೂಡ ಪ್ರೇಕ್ಷಕರಲ್ಲೇ ಇದೆ ಎಂಬುದನ್ನು ಮಂಡಳಿ ಮರೆತಿದೆಯೇ? ಇಂದು ಸಿಬಿಎಫ್‌ಸಿಯಿಂದಾಗಿ ಭಾರತೀಯ ಚಲನಚಿತ್ರರಂಗ ಅನೇಕ ತೊಂದರೆಗಳನ್ನು ಎದುರಿಸುತ್ತಿದೆ.

ಅವುಗಳಲ್ಲಿ ಪ್ರಮುಖವಾದದ್ದು, ಯುವ ಪ್ರೇಕ್ಷಕರು ಬಾಲಿವುಡ್ ಚಿತ್ರಗಳಿಂದ ವಿಮುಖರಾಗಿ ಹಾಲಿವುಡ್ ಚಿತ್ರಗಳನ್ನು ವೀಕ್ಷಿಸುತ್ತಿರುವುದು. ಸಿಬಿಎಫ್‌ಸಿ ನಡೆಯಿಂದ ಬೇಸತ್ತಿರುವ ನಿರ್ದೇಶಕರು ಪ್ರಯೋಗಾತ್ಮಕ ಚಿತ್ರಗಳಿಂದ ದೂರ ಸರಿಯುತ್ತಿದ್ದಾರೆ. ಹಾಗಾಗಿ ಭಾರತೀಯರು ಯಾವುದೇ ಕತ್ತರಿ ಪ್ರಯೋಗಕ್ಕೆ ಒಳಗಾಗದ ಹಾಲಿವುಡ್ ಚಿತ್ರಗಳನ್ನು ವೆಬ್‌ಸೈಟ್‌ಗಳಿಂದ ಕಾನೂನುಬಾಹಿರವಾಗಿ ನೋಡುತ್ತಿದ್ದಾರೆ. ಇದರಿಂದ ಭಾರತೀಯ ಚಲನಚಿತ್ರರಂಗಕ್ಕೆ ಬಹಳಷ್ಟು ನಷ್ಟವಾಗುತ್ತಿದೆ.

2014- 15ಕ್ಕೆ ಹೋಲಿಸಿದರೆ ಈ ವರ್ಷ ಬೆರಳೆಣಿಕೆಯಷ್ಟು ಚಲನಚಿತ್ರಗಳು ಬಾಕ್ಸ್‌  ಆಫೀಸ್‌ನಲ್ಲಿ ಗೆಲುವು ಸಾಧಿಸಿದ್ದರೆ, ಬಹುತೇಕ ಚಿತ್ರಗಳು ಸೋತಿವೆ. ಇದಕ್ಕೆ ಮಂಡಳಿಗೆ ಅಧ್ಯಕ್ಷರಾಗಿ ಬಂದ ನಿಹಲಾನಿಯವರು ಒಂದು ಕಾರಣ ಎಂಬುದು ಹಲವಾರು ಚಲನಚಿತ್ರ ಪರಿಣತರ ಅಭಿಪ್ರಾಯ. ಸೆನ್ಸಾರ್‌ ಮಂಡಳಿ ಪುನರ್‌ ರಚನೆಗಾಗಿ ಶ್ಯಾಮ್‌ ಬೆನಗಲ್ ಅವರು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ನೀಡಿರುವ ಸಲಹೆಗಳನ್ನು ಅನುಷ್ಠಾನಗೊಳಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ಸಮಿತಿ ನೀಡಿರುವ ಸಲಹೆಗಳೆಂದರೆ, ಸಿಬಿಎಫ್‌ಸಿ ಯಾವುದೇ ಚಲನಚಿತ್ರವನ್ನು ಸೆನ್ಸಾರ್ ಮಾಡುವಂತಿಲ್ಲ. ಬದಲಾಗಿ ಆಯಾ ಚಿತ್ರಗಳನ್ನು ವಿಭಾಗವಾರು ಪ್ರತ್ಯೇಕಿಸಿ ಅದಕ್ಕೆ ತಕ್ಕಂತೆ ಪ್ರಮಾಣಪತ್ರ ನೀಡಬೇಕು. ಅನೇಕ ದೇಶಗಳಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ವಿಭಾಗಗಳನ್ನು ಅಧ್ಯಯನ ನಡೆಸಿರುವ ಬೆನಗಲ್, ಚಲನಚಿತ್ರಗಳನ್ನು ‘ಯು’, ‘ಯುಎ’, ‘ಯುಎ 15’, ‘ಎ’, ‘ಎಇ’ ಎಂದೆಲ್ಲ ವಿಭಾಗಿಸಲು ಸಲಹೆ ನೀಡಿದ್ದಾರೆ.

ಭಾರತೀಯ ಚಲನಚಿತ್ರ ರಂಗ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಚಲನಚಿತ್ರ ಉದ್ಯಮವಾಗಿದೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯ ವಿವಾದಗಳನ್ನು ಬಗೆಹರಿಸಿ, ಕೋಟ್ಯಂತರ ರೂಪಾಯಿ ವ್ಯವಹಾರದ ಉದ್ದಿಮೆಯನ್ನು ಉಳಿಸಿ ಬೆಳೆಸುವ ಹೊಣೆ ವಹಿಸಿಕೊಳ್ಳಬೇಕಾಗಿದೆ.

ಇಲ್ಲವಾದಲ್ಲಿ ಕೋರ್ಟಿನ ಮೂಲಕ ಇಂಥ ವಿವಾದಗಳನ್ನು ಬಗೆಹರಿಸಿಕೊಳ್ಳುವಂತಾದರೆ ಸಿಬಿಎಫ್‌ಸಿಯ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗುತ್ತದೆ. ಸರ್ಕಾರಗಳು ಇಂಥ ಮಂಡಳಿಗಳಿಗೆ ಸದಸ್ಯರನ್ನು ನೇಮಿಸುವಾಗ ಈ ಕಾಲಘಟ್ಟಕ್ಕೆ ಸ್ಪಂದಿಸುವ, ಹೊಸ ವಿಚಾರಗಳಿಗೆ ದಾರಿ ಮಾಡಿಕೊಡುವ ಮನಸ್ಥಿತಿಯವರನ್ನು ಆಯ್ಕೆ ಮಾಡಬೇಕು. ಇಲ್ಲವಾದಲ್ಲಿ ವಿವಾದಗಳ ಸರಣಿ ಮುಂದುವರೆಯುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT