ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮದ ಅಮಲು, ಗೋಜಲು...

‘ಉಸಿರಿಗಿಂತ’
Last Updated 10 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನಿರ್ಮಾಪಕರು: ರವಿಕುಮಾರ್, ರಮೇಶ್ ಎಚ್.ಕೆ.
ನಿರ್ದೇಶನ: ಸೂರ್ಯ ಕಿರಣ್
ತಾರಾಗಣ: ಸೂರ್ಯ ಕಿರಣ್, ಎಸ್ತರ್ ನರೋನಾ, ವಿದ್ಯಾ, ಶರತ್ ಲೋಹಿತಾಶ್ವ, ರಮೇಶ್ ಭಟ್, ರಾಮಕೃಷ್ಣ, ನಾಗಿಣಿ ಭರಣ, ಸಂಕೇತ್ ಕಾಶಿ, ಮತ್ತಿತರರು


ಏಳು ವರ್ಷಗಳ ಹಿಂದೆ ತಮ್ಮ ಸ್ನೇಹಿತನೊಬ್ಬನ ಬದುಕಿ­ನಲ್ಲಿ ಘಟಿಸಿದ ದುರಂತ ಪ್ರೇಮಕಥೆಯನ್ನು ‘ಉಸಿರಿಗಿಂತ’ ಶೀರ್ಷಿ­ಕೆ­ಯಡಿ ಚಿತ್ರ­ರೂಪಕ್ಕಿಳಿಸಿದ್ದಾರೆ ನಿರ್ದೇ­ಶಕ ಸೂರ್ಯ ಕಿರಣ್. ಇದು ಅವರ ಮೊದಲ ನಟನೆ–ನಿರ್ದೇ­ಶನದ ಚಿತ್ರ. ಪ್ರೇಮದ ಉನ್ಮಾದ ಸ್ಥಿತಿ ತಲುಪಿ ಹುಚ್ಚನಾದ ಪ್ರಿಯ­­ಕರ­ನೊಬ್ಬನ ಸ್ಥಿತಿ–ಗತಿಯ ಚಿತ್ರ­ಣವೇ ‘ಉಸಿರಿಗಿಂತ’. ಎಷ್ಟರ ಮಟ್ಟಿಗೆ, ಯಾವ ಪ್ರಮಾಣದಲ್ಲಿ ನೈಜ ಘಟನೆ­ಗಳನ್ನು ಚಿತ್ರ­­ದಲ್ಲಿ ಬಳಸಿಕೊಳ್ಳ­ಲಾಗಿದೆ; ಕಾಲ್ಪನಿಕ ಅಂಶಗಳೆಷ್ಟು ಎನ್ನು­ವು­ದನ್ನು ನಿರ್ದೇಶಕರು ಮಾತ್ರ ಬಲ್ಲರು. ‘ಹುಚ್ಚು ಕೋಡಿ ಮನಸ್ಸು ಇದು ಹದಿನಾರರ ಹರೆಯ’ ಎನ್ನುವಂತೆ ಕಾಲೇಜು ಹಂತ­­ದ­ಲ್ಲಿನ ವಯೋಸಹಜ­ವಾದ ಪ್ರೀತಿ–ಪ್ರೇಮ, ಆಶಾ­ಭಂಗ, ನೋವಿನ ತಲ್ಲಣಗಳು ಇಲ್ಲಿ ನಿರೂಪಿತವಾಗಿವೆ.

ಶೀರ್ಷಿಕೆಯ ಕಾರಣದಿಂದ ಪ್ರೀತಿಯ ಮಧುರ ಅನು­ಭೂತಿಯ; ಯಶಸ್ವಿ ಪ್ರೇಮಕಥೆಯ ಚಿತ್ರ ಎಂದುಕೊಂಡು ಚಿತ್ರ­­­­ಮಂದಿರ­ದೊಳಗೆ ಪ್ರವೇಶಿಸುವ ಪ್ರೇಕ್ಷಕನಿಗೆ ಉಸಿರಿಗಿಂತ ‘ತಲೆ­ಭಾರ’­ವಾಗಿ  ಕಾಣಿಸುತ್ತದೆ. ರಕ್ತ ಹರಿಯು­ವಂತೆ ಹೊಡೆ­ದಾಡುವ, ಎಲ್ಲಿಂದ ಎಲ್ಲೆಲ್ಲಿಗೋ ಓಡುವ, ಅನಗತ್ಯವಾಗಿ ಬರುವ ಸನ್ನಿವೇಶಗಳೇ ಇದಕ್ಕೆ ಕಾರಣ. ಕೆಲವೆಡೆಗಳಲ್ಲಿ ಸನ್ನಿ­ವೇಶ­ಗಳನ್ನು ತುರು­ಕಿ­ರುವುದು ನೇರವಾಗಿಯೇ ಅನುಭವಕ್ಕೆ ಬರು­ತ್ತದೆ. ಈಗಾಗಲೇ ತೆರೆಯಲ್ಲಿ ಕಂಡಿ­ರುವ ದುರಂತ ಪ್ರೇಮ­­ಕಥೆ ಸಿನಿಮಾಗಳ ಸಾಲಿಗೆ ಇದನ್ನೂ ಸೇರಿಸ­ಬ­ಹುದು. 

ಶ್ರೀಮಂತರ ಮನೆಯ ಹುಡುಗ ಸೂರ್ಯ, ಬಡತನದ ಹುಡುಗಿ ರಶ್ಮಿ­ಯನ್ನು ಪ್ರೀತಿಸುವನು. ಆಕೆಗೆ ನೆರವಾ­ಗು­­ವನು. ಈ ನಡುವೆ ತನ್ನನ್ನು ಪ್ರೇಮಿ­ಸುವ ಬಾಲ್ಯದ ಗೆಳತಿಯ ಒಲವು­ಗ­ಳನ್ನು ನಿರಾಕರಿಸುವನು. ಈ ಹಂತದ ಸಿನಿಮಾ­ದಲ್ಲಿ ಕಾಣುವುದು ತ್ರಿಕೋನ ಪೇಮ­ಕಥೆಯ ತಿರುಳು. ದೇವ­ದಾಸಿಯ ಮಗಳನ್ನು ಪರಿಶುದ್ಧ ಮನಸ್ಸಿನ ಸೂರ್ಯ ಮದುವೆ­ಯಾಗುವುದು ಒಳಿ­ತಲ್ಲ ಎನ್ನುವ ಭಾವದಲ್ಲಿ ರಶ್ಮಿಯ ತಾಯಿ ತಾನು ಸಾಯುವಾಗ ಭಾಷೆ­ಯನ್ನು ತೆಗೆದುಕೊಳ್ಳುವಳು.

ತಾಯಿಗೆ ಕೊಟ್ಟ ಮಾತಿನಿಂದ ರಶ್ಮಿಯ ಮನಸ್ಸು ಕದಡಿ ಸೂರ್ಯ­ನನ್ನು ದೂರ ಮಾಡಲು ಯತ್ನಿಸುವಳು. ನಿದ್ದೆಯಲ್ಲಿ ನಡೆ­ಯುವ ರೋಗವುಳ್ಳ ಸೂರ್ಯ ಪ್ರೀತಿಯ ಅಮಲಿನಲ್ಲಿ ಹುಚ್ಚ­ನಾಗು­ವನು. ಈ ‘ಪಾಗಲ್‌’ ಸ್ಥಿತಿಯಿಂದ ಆತನನ್ನು ಹೊರತರುವುದು ಬಾಲ್ಯದ ಗೆಳತಿ!

ಸೂರ್ಯ ಪುನಃ ರಶ್ಮಿಯ ಪ್ರೇಮವನ್ನು ಅರಸುವನು. ರಶ್ಮಿ ಮತ್ತೊ­ಬ್ಬನನ್ನು ವಿವಾಹವಾದಾಗ ಮತ್ತದೆ ಹುಚ್ಚನ ಸ್ಥಿತಿ! ಹೀಗೆ ಅನಗತ್ಯ ಸನ್ನಿ­ವೇಶಗಳ ನಡುವೆ ಒಂದು ನೈಜಕಥೆ­ಯನ್ನು ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ. ಗಂಭೀರವಾದ ‘ದೇವ­ದಾಸಿ’ ಸಮಸ್ಯೆಯನ್ನೂ ಒಳಗೊಳ್ಳುತ್ತದೆ.      

ಆದಿಯಿಂದ ಅಂತ್ಯದವರೆಗೂ ಕಾಣಿ­ಸುವ ‘ಒಂದು ಕ್ಷಣ ನಿನ್ನ ಮಿಸ್ ಮಾಡ್ಕೊಂಡ್ರೆ ಅಳು ಬಂದು ಬಿಡುತ್ತೆ’, ‘ನಿನ್ನ ಕೊನೆ ಉಸಿರು ಇರೋವರೆಗೂ ಪ್ರೀತಿ ಮಾಡುತ್ತೇನೆ’ ಇಂಥ ಸವಕಲು, ಕ್ಲೀಷೆಯ  ಸಂಭಾಷಣೆಗಳು ಚಿತ್ರದು­ದ್ದಕ್ಕೂ ತುಂಬಿ­ರು­ವುದರಿಂದ ಸಂಭಾ­ಷಣೆ ಹಿತ ಎನಿಸುವುದಿಲ್ಲ.

ನಾಯಕ ಸೂರ್ಯ ಕಿರಣ್ ಸಾಹಸ ದೃಶ್ಯಗಳಲ್ಲಿ ಮಿಂಚುವರೇ ಹೊರತು ನಟನೆಯಲ್ಲಿ ಅಲ್ಲ. ನಾಯಕಿ ಎಸ್ತರ್ ನರೋನಾ ನಾಯ­ಕನ ಮನನೋಯಿ­ಸಲು ಹೇಳುವ ಸಂಭಾಷಣೆಗಳಲ್ಲಿ ಚುರು­ಕಾಗಿ ಕಾಣುವರೇ ಹೊರತು ನಟನೆ­ಯಲ್ಲಿ ಅಲ್ಲ. ಸಾಮಾ­ನ್ಯ­­ವಾಗಿ ಪ್ರೇಮ­ಕಥೆ­ಗಳಲ್ಲಿ ಹಾಡುಗಳಿಗೆ ಪ್ರಾಧಾನ್ಯ­ವಿ­ರು­ತ್ತದೆ. ಇಲ್ಲಿ ಪ್ರೇಕ್ಷಕನ ಉಸಿರನ್ನು ಆಹ್ಲಾದಗೊಳಿಸುವ ಸಾಹಿತ್ಯ–ಸಂಗೀತವೂ ಗೌಣ. ಅದೇ ಹಳೆಯ ಭಗ್ನ­ಪ್ರೇಮ­ಕಥೆಗೆ ಹೊಸ ಲೇಬಲ್ ಅಂಟಿಸಿದ್ದಾರೆ ನಿರ್ದೇಶಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT