ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮದ ಪರಿ ಗೊತ್ತೆ?

Last Updated 6 ಫೆಬ್ರುವರಿ 2016, 10:32 IST
ಅಕ್ಷರ ಗಾತ್ರ

ನನ್ನೊಳು ನಾ ನಿನ್ನೊಳು ನೀ
ಒಲಿದ ಮೇಲಿಂತೆ ನಾ ನೀ?

ಸಂಸಾರ ನೌಕೆ ಹಿತವಾಗಿ ಸಾಗಬೇಕೆಂದರೆ ಅದಕ್ಕೆ ಒಲವಿನ ಇಂಧನ ತುಂಬಿಸುವುದು ಅನಿವಾರ್ಯ. ಒಲವಿನ ಸಿಹಿಯ ಜತೆಗೆ ಒಂದಷ್ಟು ಶಿಸ್ತುಗಳೂ ಕೂಡಾ ಸಂಸಾರ ಸಾಗಿಸಲು ಬೇಕಾಗುತ್ತವೆ. ಇಂಥ ಶಿಸ್ತು ಒಲಿದವಳನ್ನು ಮೆಚ್ಚಿಸಲು ಮಾತ್ರವಲ್ಲ, ಸಂಸಾರದ ಹೊರಗೂ ಪತಿದೇವರನ್ನು ಕಾಯಬಲ್ಲವು. ಕಷ್ಟಪಟ್ಟು ದುಡಿದರೆ, ಇಲ್ಲವೆ ಲಾಟರಿ ಹೊಡೆದರೆ ಕೋಟ್ಯಾಧಿಪತಿಯಾಗಬಹುದು. ಆದರೆ, ಹೆಂಡತಿಯಿಂದ ‘ಉತ್ತಮಪತಿ’ ಆಗುವುದು ಸುಲಭದ ಮಾತಲ್ಲ.

ಮದುವೆಯಾದ ಹೊಸತರಲ್ಲಿ ‘ಚಿನ್ನಾ.., ರನ್ನಾ..’ ಎಂದು ಮುದ್ದಾಡುತ್ತಿದ್ದ ಪತಿ ವರ್ಷ ಕಳೆದಂತೆ ಅಸಡ್ಡೆ ತೋರುತ್ತಾನೆಂಬ ದೂರು ಬಹುತೇಕ ಪತ್ನಿಯರದ್ದು. ಆಫೀಸಿನ ಭಾರವನ್ನು ಮನೆಗೆ ಹೊತ್ತು ತಂದು ಮನೆಯಲ್ಲೂ ತಲೆ ಬಿಸಿ ಮಾಡಿಕೊಳ್ಳುವ, ಹೆಂಡತಿಯ ಮೇಲೆ ರೇಗುವ ಪತಿ ಕ್ರಮೇಣ ಅವಳ ಮನದಲ್ಲಿ ಗೊಡ್ಡಾಗುತ್ತಾನೆ.

ಮನೆಯ ಬಗ್ಗೆ ಕಾಳಜಿ ತೋರದ, ಮನೆಯ ಸಣ್ಣ ಸಣ್ಣ ಜವಾಬ್ದಾರಿಗಳನ್ನೂ ಸಮರ್ಥವಾಗಿ ನಿಭಾಯಿಸಲಾರದ, ಮಕ್ಕಳ ಪಾಲನೆ, ಓದಿನ ಬಗ್ಗೆ ತಲೆಕೆಡಿಸಿಕೊಳ್ಳದ ಗಂಡ ತನ್ನ ಹೆಂಡತಿಯ ಮನಸ್ಸಿನಲ್ಲಿ ಯಾವ ಮೃದು ಕೋಮಲ ಭಾವನೆಗಳನ್ನೂ ಅರಳಿಸಲಾರ.

ಹಾಗಾದರೆ ಮನದರಸಿಯ ಮನದಲ್ಲಿ ಪತಿದೇವ ಸದಾ ಹಸಿರಾಗಿರುವುದು ಹೇಗೆ? ಉತ್ತಮಪತಿಯಾಗುವ ಮಾರ್ಗ ಯಾವುದು? ಒಳ್ಳೆಯ ಗಂಡನಾಗಲು ಏನೇನು ಮಾಡಬೇಕು?

ಇಲ್ಲಿವೆ ಒಂದಷ್ಟು ಸಲಹೆಗಳು

* ಪ್ರೀತಿಸಿ, ಪ್ರೀತಿಸಿ, ಪ್ರೀತಿಸಿ: ಮದುವೆಗೂ ಮುನ್ನಾ, ಮದುವೆಯಾದ ಹೊಸತರಲ್ಲಿ ಹೆಂಡತಿಯ ಮೇಲೆ ಪ್ರೇಮ ಜಲಪಾತವನ್ನೇ ಹರಿಸುವ ಅನೇಕರ ಪ್ರೇಮಧಾರೆ ದಿನಕಳೆದಂತೆ ಬತ್ತಿ ಹೋಗುತ್ತದೆ. ಮದುವೆಯಾಗಿ ವರ್ಷಗಳು ಕಳೆದ ಬಳಿಕ ಅನೇಕರು ‘ತಮ್ಮ’ ಪತ್ನಿಯರನ್ನು ಪ್ರೀತಿಸುವುದನ್ನೇ ಮರೆತಿರುತ್ತಾರೆ! ಪ್ರೀತಿಸಿ ಮದುವೆ ಯಾದ ಕೆಲವರೂ ಆ ಬಳಿಕ ಪ್ರೀತಿಸುವುದನ್ನು ಪಕ್ಕಕ್ಕಿಟ್ಟಿರುತ್ತಾರೆ.  ಒಳ್ಳೆಯ ಗಂಡನಾಗಬೇಕಾದರೆ ಮೊದಲು ಪ್ರೀತಿಸುವುದನ್ನು ಕಲಿಯಿರಿ. ಒಳ್ಳೆಯ ಗಂಡನಾಗುವ ಸುಲಭದ ಮಾರ್ಗ ಎಂದರೆ ತಮ್ಮ ಹೆಂಡತಿಯನ್ನು ಪ್ರೀತಿಸುವುದು, ಪ್ರೀತಿಸುವುದು ಮತ್ತು ಪ್ರೀತಿ ಸುವುದು.

* ಪ್ರೀತಿ ಹೇಳಿಕೊಳ್ಳಿ: ಪ್ರೀತಿಯನ್ನು ಮನದಲ್ಲೇ ಉಕ್ಕಿಹರಿಸಿದರೆ ಹೆಚ್ಚೇನೂ ಪ್ರಯೋಜನವಾಗಲಾರದು. ನೀವು ಆಕೆಯನ್ನೆಷ್ಟು ಪ್ರೀತಿಸುತ್ತೀರಿ ಎಂಬುದನ್ನು ಹೇಳಿ. ಮನಸ್ಸಿನಲ್ಲಿ ಪ್ರೀತಿ ಬೆಟ್ಟದಷ್ಟಿದ್ದರೂ ಹೇಳಿಕೊಳ್ಳಲು ಹಿಂಜರಿಯಬಾರದು. ಪ್ರೀತಿಸುವುದನ್ನು ನಿಮ್ಮ ಹೆಂಡತಿ ಬಳಿ ಹೇಳಿಕೊಳ್ಳಲು ಬಿಗುಮಾನವೇಕೆ? ದಿನಕ್ಕೊಮ್ಮೆಯಾದರೂ ‘ಐ ಲವ್‌ ಯೂ’ ಎಂದು ಅಪ್ಪಿ, ಹಣೆ, ಗಲ್ಲಕ್ಕೊಂದು ಮುತ್ತುಕೊಟ್ಟರೆ ಕಳೆದುಕೊಳ್ಳುವುದಾದರೂ ಏನು?

* ಮೆಚ್ಚುಗೆಯ ಮಾತಾಡಿ: ಹೆಂಡತಿಗೆ ಅಕ್ಕರೆಯ ಮಾತಿನ ಜತೆಗೆ ಮೆಚ್ಚುಗೆಯ ಮಾತೂ ಹಿತವಾಗುತ್ತದೆ. ಆಕೆ ಮಾಡಿದ ಕೆಲಸಗಳಿಗೆ ಮೆಚ್ಚುಗೆ ಸೂಚಿಸುವುದು, ಅಡುಗೆ ಚೆನ್ನಾಗಿದೆ, ಮೇಕಪ್‌ ಚೆನ್ನಾಗಿದೆ, ಉಡುಗೆ ಚೆನ್ನಾಗಿದೆ ಎಂಬ ಮಾತುಗಳು ಆಕೆಯನ್ನು ಇನ್ನಷ್ಟು ಹತ್ತಿರವಾಗಿಸುತ್ತವೆ. ಪತ್ನಿಯ ಪ್ರತಿಭೆಯನ್ನು ಹೊಗಳಿ, ಆಕೆಯ ಕೌಶಲದ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿ. ಆಕೆಯೂ ಕೆಲಸಕ್ಕೆ ಹೋಗುತ್ತಿದ್ದರೆ ಆಕೆಯ ಕೆಲಸಕ್ಕೆ ನಿಮ್ಮಿಂದಾಗುವ ಸಹಾಯ ಮಾಡಿ. ಇದರಿಂದ ನಿಮ್ಮ ಬಗ್ಗೆ ಆಕೆಗೆ ಪ್ರೀತಿ, ಗೌರವ ಹೆಚ್ಚಾಗುತ್ತದೆ.

* ಕೆಲಸ ಹಂಚಿಕೊಳ್ಳಿ: ಇಬ್ಬರೂ ದುಡಿಮೆಯಲ್ಲಿರುವ ದಂಪತಿ ಸಂಜೆ ಮನೆಗೆ ಮರಳುವ ವೇಳೆಗೆ ದಣಿದಿರುವುದು ಸಾಮಾನ್ಯ. ದುಡಿದು ದಣಿದು ಬಂದ ಹೆಂಡತಿ ಅಡುಗೆ ಮನೆಯಲ್ಲಿ ಬೇಯುತ್ತಿದ್ದರೆ ಪತಿರಾಯ ಸೋಫಾ ಮೇಲೆ ಕುಂತು ಟಿ.ವಿ ನೋಡುವುದು ತರವೇ? ಮನೆಯ ಕೆಲಸಗಳನ್ನು ಹಂಚಿಕೊಳ್ಳಬೇಕು. ಯಾರು ಯಾವ ಯಾವ ಕೆಲಸಗಳನ್ನು ಮಾಡಬೇಕೆಂದು ಮೊದಲೇ ನಿಶ್ಚಯಿಸಿಕೊಳ್ಳುವುದೂ ಒಳಿತೇ.

ಆಕೆ ಅಡುಗೆ ಮಾಡುವಾಗ ನೀವು ತರಕಾರಿ ಹೆಚ್ಚಿಕೊಡಿ, ಆಕೆ ಪಾತ್ರೆ ತೊಳೆದರೆ ನೀವು ಅವನ್ನು ಜೋಡಿಸಿಡುವ ಕೆಲಸವನ್ನಾದರೂ ಮಾಡಿ. ಹೆಂಡತಿ ಅಡುಗೆ ಕೋಣೆಯಲ್ಲಿ ತನ್ನೊಂದಿಗೆ ಕೆಲಸ ಹಂಚಿಕೊಳ್ಳುವ ಪತಿಯನ್ನು ಮೆಚ್ಚಿಕೊಳ್ಳುತ್ತಾಳೆಯೇ ಹೊರತು, ‘ಹಾಗೆ ಮಾಡು, ಹೀಗೆ ಮಾಡು, ಇಷ್ಟು ಉಪ್ಪು ಹಾಕು, ಅಷ್ಟು ಖಾರ ಹಾಕು’ ಎಂದು ಅಪ್ಪಣೆ ಹೊರಡಿಸುವ ಗಂಡನ್ನನ್ನಲ್ಲ! ಅಡುಗೆ ಮನೆ ಕಡೆ ತಲೆ ಹಾಕದಿದ್ದರೆ ಕನಿಷ್ಠ ಮಕ್ಕಳ ಓದು, ಮನೆ ಪಾಠದ ಜವಾಬ್ದಾರಿಯಾದರೂ ತೆಗೆದುಕೊಳ್ಳಿ.

* ಅಚ್ಚುಕಟ್ಟಾಗಿರಿ: ದೇಹದ ಶುಚಿತ್ವ ಕಾಪಾಡಿಕೊಳ್ಳುವುದು ಎಲ್ಲಾ ದೃಷ್ಟಿಯಿಂದಲೂ ಮುಖ್ಯ. ಮುಖದ ಮೇಲೆ ಅಸಹ್ಯ ಎನಿಸುವಹಾಗೆ ಗಡ್ಡ, ತಲೆಗೂದಲು ಬೆಳೆಸುವುದು ಇತರರಿಗಿಂತ ನಿಮ್ಮೊಡನೆ ಹೆಚ್ಚು ಒಡನಾಡುವ ಪತ್ನಿಗೆ ಹಿಂಸೆಯಾಗುತ್ತದೆ ಎಂಬುದು ನೆನಪಿನಲ್ಲಿರಲಿ. ದೇಹ ಶುಚಿಯಾಗಿದ್ದರೆ ಮನಸ್ಸೂ ಪ್ರಫುಲ್ಲವಾಗಿರುತ್ತದೆ. ಹೀಗಾಗಿ ದಿನಕ್ಕೆ ಒಮ್ಮೆಯಾದರೂ ಸ್ನಾನ ಮಾಡಿ.

* ಮಿಲನ: ಪತಿ ಪತ್ನಿ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಶಕ್ತಿ ಮಿಲನಕ್ಕಿದೆ. ಹೆಂಡತಿಯ ಇಚ್ಛೆ ಅರಿತು ಕೂಡಿಕೊಳ್ಳುವುದು ಆಕೆಗೆ ನಿಮ್ಮ ಮೇಲಿನ ನಂಬಿಕೆ ಹೆಚ್ಚು ಮಾಡುತ್ತದೆ. ನಿಯಮಿತವಾಗಿ ಕೂಡುವುದರಿಂದ ಮಾನಸಿಕ ಒತ್ತಡವನ್ನೂ ದೂರವಿಡಬಹುದು. ಪತ್ನಿಯ ದೇಹದ ಮೇಲೆ ತಾತ್ಸಾರ ತೋರುವುದು, ಉಬ್ಬರ ಬಂದಂತೆ ಅಬ್ಬರಿಸಿ ಕೆಲಸ ಮುಗಿಸಿ ಮಗ್ಗಲು ಬದಲಿಸುವುದು ಸರಿಯಲ್ಲ. ಮಿಲನದಲ್ಲೂ ಅಕ್ಕರಾಸ್ಥೆ ಕಾಯ್ದುಕೊಳ್ಳಬೇಕಾದ್ದು ಅನಿವಾರ್ಯ.

* ಅರ್ಥ ಮಾಡಿಕೊಳ್ಳಿ, ಅರ್ಥ ಮಾಡಿಸಿ: ನಿಮ್ಮಾಕೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ನೀವು ಏನು ಎಂಬುದನ್ನು ಆಕೆಗೆ ಅರ್ಥ ಮಾಡಿಸಲು ಯತ್ನಿಸಿ. ಬಾಂಧವ್ಯ ಬಿಗಿಯಾಗುತ್ತದೆ. ವಿನಾಕಾರಣ ತಗಾದೆ ತೆಗೆಯುವುದು, ಸಣ್ಣ ತಪ್ಪಿಗೆ ವಾರಗಟ್ಟಲೆ ಮುನಿಯುವುದು, ಜಗಳಕ್ಕೆ ಕಾರಣ ಹುಡುಕುವುದು ವಿರಸಕ್ಕೆ ನಾಂದಿಯಾಗಬಲ್ಲದು.

* ಮಾಡಬಾರದ್ದು
ಒಳ್ಳೆಯ ಗಂಡನಾಗಲು ಮಾಡಬೇಕಾದ ಕೆಲಸಗಳಿಗಿಂತ ಹೆಚ್ಚಿನ ಗಮನ ನೀಡಬೇಕಿರುವುದು ಈ ಮಾಡಬಾರದ ಕೆಲಸಗಳ ಕಡೆಗೆ. ನಿಮ್ಮಾಕೆಗೆ ಇಷ್ಟವಾಗದ, ಆಕೆಗೆ ಇರಿಸುಮುರಿಸು ತರುವ ಕೆಲಸಗಳನ್ನು ಮಾಡಲೇಬೇಡಿ.

* ಮೂಗಿಗೆ ಕೈ ಹಾಕಬೇಡಿ:  ಗಂಡ ಮೂಗಿಗೆ ಕೈ ಹಾಕುವುದು ಪತ್ನಿಗೆ ಅಸಹ್ಯ ತರುತ್ತದೆ. ಬೆರಳು ತಿರುವುತ್ತಾ ಮೂಗು ತೋಡುವುದನ್ನು ಬಿಟ್ಟುಬಿಡಿ.

* ಬಾಯಿಯ ದುರ್ನಾತ ತಪ್ಪಿಸಿ:  ನಿಮ್ಮಾಕೆಯ ಮುಖದ ಬಳಿಗೆ ಮುಖ ತಂದಾಗ ನಿಮ್ಮ ಬಾಯಿಯ ಕೆಟ್ಟ ವಾಸನೆ ಆಕೆಗೆ ಹಿಂಸೆಯಾಗಬಾರದು.  ಆದರೆ, ತುಟಿಗೆ ತುಟಿ ಸೇರಿಸುವಾಗ... ಹೇಳುವ ಅಗತ್ಯವಿಲ್ಲ ತಾನೆ?  ಚೆನ್ನಾಗಿ ಹಲ್ಲುಜ್ಜಿ, ಮೌತ್‌ ಫ್ರೆಷ್ನರ್‌ ಬಳಸಿ, ಆಗಾಗ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ, ಬಾಯಿಗೆ ಏಲಕ್ಕಿ ಹಾಕಿಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ಏನಾದರೂ ಮಾಡಿ ಒಟ್ಟಿನಲ್ಲಿ ಬಾಯಿಯ ದುರ್ನಾತದಿಂದ ದೂರವಿರಿ. ಅಗತ್ಯ ಬಿದ್ದರೆ ದಂತವೈದ್ಯರಿಂದ ಸಲಹೆ ಪಡೆಯಿರಿ.

* ಗೊರಕೆ ನಿಯಂತ್ರಿಸಿ: ಪತ್ನಿ ಸಹಿಸಲಾರದ ಅಂಶಗಳಲ್ಲಿ ಗೊರಕೆ ಕೂಡ ಮುಖ್ಯವಾದುದು. ಗೊರಕೆ ಹೊಡೆಯುವ ಗಂಡ ಪತ್ನಿ ಪಾಲಿಗೆ ಪೀಡಕನೇ. ಗೊರಕೆಯ ಸಮಸ್ಯೆ ಇದ್ದರೆ ಮೊದಲು ಅದನ್ನು ಒಪ್ಪಿಕೊಳ್ಳಿ. ‘ನಾನು ಗೊರಕೆ ಹೊಡೆಯೋದೆ ಇಲ್ಲ’ ಎಂದು ವಾದ ಮಾಡಿ ಜಗಳ ತೆಗೆಯಬೇಡಿ.  ಗೊರಕೆ ನಿಯಂತ್ರಣಕ್ಕೆ ವೈದ್ಯರನ್ನು ಕಾಣಿ.

* ಎಲ್ಲೆಂದರಲ್ಲಿ ಬಿಸಾಡಿ ಹುಡುಕಬೇಡಿ: ಕೀ, ಮೊಬೈಲ್‌, ವಾಚ್‌, ಪುಸ್ತಕ, ರಸೀದಿಯನ್ನು ಎಲ್ಲೆಂದರಲ್ಲಿ ಬಿಸಾಡಿ ಕೊನೆಗೆ ಹುಡುಕಾಡುವುದು ಪತ್ನಿಗೆ ಹೆಚ್ಚು ಕಿರಿಕಿರಿ ಉಂಟುಮಾಡುತ್ತದೆ. ಹೀಗಾಗಿ ಎಲ್ಲೆಂದರಲ್ಲಿ ಬಿಸಾಡುವ ಪರಿಪಾಠ ಬಿಟ್ಟುಬಿಡಿ.

* ರಿಮೋಟ್‌ ಮೇಲೆ ಅಧಿಕಾರ ಬೇಡ: ಇದು ಸಣ್ಣ ವಿಷಯ ಎಂದುಕೊಂಡರೂ ಸೂಕ್ಷ್ಮವಾದ ವಿಚಾರ. ಅವರವರ ಅಭಿರುಚಿಗೆ ಅನುಗುಣವಾಗಿ ಚಾನೆಲ್‌ ವೀಕ್ಷಿಸುವ ಸ್ವಾತಂತ್ರ್ಯ ಪತಿ ಪತ್ನಿ ಇಬ್ಬರಿಗೂ ಇದೆ. ಹೀಗಾಗಿ ರಿಮೋಟ್‌ ಮೇಲೆ ಅಧಿಕಾರ ಸ್ಥಾಪಿಸುವ ಹಟಬೇಡ. ಇದರಿಂದ ನಿಮ್ಮಾಕೆ ಮನೆಯಲ್ಲಿರುವ ಬಹುಸಮಯ ನಿಮ್ಮಿಂದ ದೂರ ಉಳಿಯಬಹುದು. ರಿಮೋಟ್‌ ಮೋಹ ನಿಮ್ಮ ಮನದನ್ನೆಯ ಸಾಮೀಪ್ಯವನ್ನೇ ಕಿತ್ತುಕೊಳ್ಳಬಲ್ಲದು.

ಮರೆಯದಿರಿ ಈ ಅಂಶಗಳ...

* ತಾತ್ಸಾರ ಬೇಡ: ಹೆಂಡತಿಯನ್ನು ದ್ವಿತೀಯ ದರ್ಜೆಗೆ ಸೇರಿಸಬೇಡಿ. ಆಕೆ ಮಾಡಿದ ಕೆಲಸಗಳು ಕನಿಷ್ಠ ಎಂಬ ಭಾವನೆ ಸಲ್ಲ. ಹೆಂಡತಿಯ ಬಗ್ಗೆ ಅಸಡ್ಡೆ ಬೇಡ. ಆಕೆ ಮಾಡಿದ ಕೆಲಸಗಳನ್ನು ಮೆಚ್ಚಿಕೊಳ್ಳದಿದ್ದರೂ ಪರವಾಗಿಲ್ಲ, ಅಸಡ್ಡೆ ಮಾಡಬೇಡಿ. ಆಕೆಯ ಭಾವನೆ, ಚಿಂತನೆಗಳಿಗೆ ಗೌರವ ಕೊಡಿ. ತಾತ್ಸಾರ ಮಾಡಿ, ಅಣಕಿಸಿ ನಕ್ಕು ಆಕೆಯನ್ನು ಅವಮಾನಿಸಬೇಡಿ.

ಇನ್ನು, ಒದ್ದೆ ಟವೆಲ್‌  ಅನ್ನು ಸೋಫಾ, ಮಂಚದ ಮೇಲೆ ಬಿಸಾಡುವುದು, ಟೀಪಾಯಿ ಮೇಲೆ ಕಾಲು ಚಾಚಿ ಕೂರುವುದು, ಅಡುಗೆ ಮನೆಯ ಸಿಂಕ್‌ನಲ್ಲಿ ಉಗಿ ಯುವುದು, ಪತ್ನಿ ಜೊತೆಯಲ್ಲಿದ್ದರೂ ಚಾಟಿಂಗ್‌, ಫೇಸ್‌ಬುಕ್‌ನಲ್ಲಿ ಮುಳು ಗುವುದನ್ನು ಬಿಟ್ಟುಬಿಡಿ. ಇವೆಲ್ಲ ಸಣ್ಣಸಣ್ಣ ಸಂಗತಿಗಳೆನಿಸಿದರೂ ಸಂಸಾರಕ್ಕೆ ಮಾರಕವಾಗಬಲ್ಲವು ಎಂಬುದು ನೆನಪಿರಲಿ. ಹೆಂಡತಿ ಎಂದರೆ ನಿಮ್ಮ ದಾಸಿಯಲ್ಲ, ಆಕೆ ನಿಮ್ಮೊಂದಿಗೆ ನಿಮ್ಮ ಬಾಳನ್ನು ಹಂಚಿಕೊಳ್ಳುತ್ತಿರುವ ಅರ್ಧಾಂಗಿ ಎಂಬ ಅರಿವು ಸದಾ ಜಾಗೃತ ವಾಗಿರಲಿ.

* ಸುಳ್ಳನ್ನಾಡಬೇಡಿ: ಸುಳ್ಳನ್ನಾಡುವ ಗಂಡ ಹೆಂಡತಿಗೆ ಅಪ್ರಿಯ ನಾಗುತ್ತಾನೆ. ಮೊದ ಮೊದಲು ಪರಿಸ್ಥಿತಿ ನಿಭಾಯಿಸಲು ಹೇಳುವ ಸಣ್ಣ ಸುಳ್ಳುಗಳೇ ಮುಂದಿನ ದೊಡ್ಡ ಸುಳ್ಳುಗಳಿಗೆ ತಳಪಾಯವಾಗ ಬಹುದು. ಹೀಗಾಗಿ ಸುಳ್ಳು ಹೇಳ ದೆಯೇ ಪರಿಸ್ಥಿತಿ ನಿಭಾಯಿಸಲು, ನಿಮ್ಮಿಂದಾದ ತಪ್ಪನ್ನು ಒಪ್ಪಿಕೊಂಡು ಸಂದರ್ಭವನ್ನು ಆಕೆಗೆ ಶಾಂತವಾಗಿ ಅರ್ಥ ಮಾಡಿಸಲು ಪ್ರಯತ್ನಿಸಿ. ಒಂದೊಮ್ಮೆ ಅಪ್ರಿಯವಾದ ಸತ್ಯ ಹೇಳದಿದ್ದರೂ ಪರವಾಗಿಲ್ಲ ಪ್ರಿಯ ವಾದ ಸುಳ್ಳಿನಿಂದ ಆಕೆಯನ್ನು ಮೆಚ್ಚಿಸುವ ಕೆಲಸ ಮಾಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT