ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ಗೆ ಕಡಿವಾಣ: ನಗರಸಭೆ ನಿರ್ಣಯ

40 ಮೈಕ್ರಾನ್‌ಗಿಂತ ಕಡಿಮೆ ಸಾಂದ್ರತೆ ಇರುವ ವಸ್ತುಗಳ ನಿಷೇಧ: ಚನ್ನಪಟ್ಟಣ ಸದಸ್ಯರ ತೀರ್ಮಾನ
Last Updated 3 ಜುಲೈ 2015, 7:29 IST
ಅಕ್ಷರ ಗಾತ್ರ

ಚನ್ನಪಟ್ಟಣ: ಪಟ್ಟಣದಲ್ಲಿ ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್ ವಸ್ತುಗಳನ್ನು ಮಾರುವವರು ಹಾಗೂ ಬಳಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಗರಸಭಾ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಗುರುವಾರ ನಡೆದ ನಗರಸಭೆ ಸ್ಥಾಯಿ ಸಮಿತಿ ಸಭೆಯಲ್ಲಿ ಪಟ್ಟಣದ ಮಿತಿಮೀರುತ್ತಿರುವ ಪ್ಲಾಸ್ಟಿಕ್ ಬಳಕೆಯ ಬಗ್ಗೆ ಚರ್ಚೆ ನಡೆದು ಅಚಿತಿಮವಾಗಿ 40 ಮೈಕ್ರಾನ್ ಗಿಂತ ಕಡಿಮೆ ಸಾಂದ್ರತೆ ಇರುವ ಪ್ಲಾಸ್ಟಿಕ್ ವಸ್ತುಗಳನ್ನು ಪಟ್ಟಣದಲ್ಲಿ ನಿಷೇಧಿಸಲು ತೀರ್ಮಾನಿಸಲಾಯಿತು.

ಸದಸ್ಯ ರಾಮು ಮಾತನಾಡಿ, ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿದ್ದರೂ ಅದನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಆಗಾಗ ನೆಪಮಾತ್ರಕ್ಕೆ ಮಾತ್ರ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಾರೆ. ಆದರೆ ಯಾರ ಮೇಲೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸದಸ್ಯ ಉಮಾಶಂಕರ್ ಮಾತನಾಡಿ, ಪಟ್ಟಣದಲ್ಲಿ ತ್ಯಾಜ್ಯ ಸಮಸ್ಯೆ ತೀವ್ರಗೊಳ್ಳಲು ಪ್ಲಾಸ್ಟಿಕ್ ಬಳಕೆ ಕಾರಣವಾಗಿದೆ. ಕೂಡಲೇ ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಯಂತ್ರಣ ಮಾಡಬೇಕು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಆಡಳಿತದಲ್ಲಿರುವವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಆರೋಗ್ಯ ನಿರೀಕ್ಷಕ  ಶಿವಕುಮಾರ್, ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇದರಿಂದಾಗಿ ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಷೇಧ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಉತ್ತರ ನೀಡಿದರು. ಇದಕ್ಕೆ ಕೆಂಡಮಂಡಲವಾದ ಸದಸ್ಯರು ಆರೋಗ್ಯ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟೇಶ್, ಅಧಿಕಾರಿಗಳು ಮೊದಲು ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು. ಅದನ್ನು ಪಾಲಿಸದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸುಚನೆ ನೀಡಿದರು.

ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್ ಬಳಕೆ ಮಾಡುವ ಕಲ್ಯಾಣ ಮಂಟಪಗಳಿಗೆ ₹ 1 ಸಾವಿರ, ಮಾರಾಟ ಮಾಡುವ ಅಂಗಡಿಗಳಿಗೆ ₹ 500ವರೆಗೆ ದಂಡ ವಿಧಿಸಬೇಕು. ಅಧಿಕಾರಿಗಳು ಕೂಡಲೆ ಕಾರ್ಯಪ್ರವೃತ್ತರಾಗಬೇಕು ಎಂದು ವೆಂಕಟೇಶ್ ಸೂಚಿಸಿದರು.

ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿರುವ ಬಗ್ಗೆ ಚರ್ಚೆ ನಡೆಯಿತು. ಆಸ್ಪತ್ರೆಗೆ 13 ಮಂದಿ ವೈದ್ಯರ ಅವಶ್ಯಕತೆ ಇದ್ದು, ಸದ್ಯ 6 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದುರಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಿವಸ್ವಾಮಿ ಸಭೆಗೆ ತಿಳಿಸಿದರು.

ಕೆಲವು ವಾಣಿಜ್ಯ ಮಳಿಗೆ ಹಾಗೂ ಕೆಲವು ಖಾಸಗಿ ನರ್ಸಿಂಗ್ ಹೋಂಗಳು ನಗರಸಭೆಯ ನಿಯಮಗಳನ್ನು ಪಾಲಿಸಿಲ್ಲ, ಎರಡು ಅಂತಸ್ತು ನಿರ್ಮಾಣ ಮಾಡುವುದಾಗಿ ಅನುಮತಿ ಪಡೆದು ನಾಲ್ಕು ಅಂತಸ್ತು ನಿರ್ಮಿಸಿದ್ದಾರೆ. ಇಂಥವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕೆಲವು ಸದಸ್ಯರು ಆರೋಪಿಸಿದರು.

ಈ ಬಗ್ಗೆ ಕಂದಾಯ ಇಲಾಖೆಗೆ ತಿಳಿಸಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಸೂಕ್ತ ಕಂದಾಯ ವಸೂಲಿ ಮಾಡುವಂತೆ ಸೂಚನೆ ನೀಡಲು ಸದಸ್ಯರು ಅಧ್ಯಕ್ಷರನ್ನು ಒತ್ತಾಯಿಸಿದರು. ಸ್ಥಾಯಿಸಮಿತಿ ಅಧ್ಯಕ್ಷ ವೆಂಕಟೇಶ್ ಅಧ್ಯಕ್ಷತೆಯನ್ನು ವಹಿಸಿದ್ದರು, ನಗರಸಭೆ ಅಧ್ಯಕ್ಷೆ ಅಖಿಲಾಬಾನು, ಉಪಾಧ್ಯಕ್ಷ ಮುದ್ದುಕೃಷ್ಣೇಗೌಡ ಹಾಜರಿದ್ದರು.

ತ್ಯಾಜ್ಯ ಸಮಸ್ಯೆ ಎದುರಾಗಲು ಪ್ಲಾಸಿಕ್ ಬಳಕೆ ಹೆಚ್ಚು ಕಾರಣವಾಗಿದೆ. ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆ ಮಾಡದಂತೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ
- ಲೋಕೇಶ್, ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT