ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಶಾಖದ ಮನೆ

Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ತೋಟಗಾರಿಕೆ ಬೆಳೆಗಳಿಗೆ ಉಪಯೋಗಿಸುವ ಪಾಲಿಹೌಸ್ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ತಂತ್ರಜ್ಞಾನ. ಇದೇ ತಂತ್ರಜ್ಞಾನ ಈಗ ಕೃಷಿ ಉತ್ಪನ್ನಗಳನ್ನು ಒಣಗಿಸಲು ಬಳಕೆಯಾಗುತ್ತಿದೆ. ಮಲೆನಾಡಿನಲ್ಲಿ ಈಗಾಗಲೇ ಪ್ರಸಿದ್ಧಿ ಪಡೆದಿರುವ ಈ ಪ್ಲಾಸ್ಟಿಕ್ ಶಾಖದ ಮನೆ (ಪಾಲಿಟನಲ್‌ ಡ್ರೈಯರ್) ಬಗ್ಗೆ ಕೃಷಿ ಇಲಾಖೆ ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

*ಪ್ಲಾಸ್ಟಿಕ್ ಶಾಖದ ಮನೆ ಕಲ್ಪನೆ ಹುಟ್ಟಿದ್ದು ಹೇಗೆ?
ಆಯಾ ಋತುಮಾನಕ್ಕೆ ತಕ್ಕಂತೆ ಮಳೆ ಬೀಳುವ ಕಾಲ ಇದಲ್ಲ. ಅಕಾಲಿಕ ಮಳೆಯಿಂದಾಗಿ ಹೆಚ್ಚಿನ ನಷ್ಟ ಆಗುತ್ತಿರುವುದು ರೈತಾಪಿ ವರ್ಗದವರಿಗೆ. ಅಷ್ಟೇ ಅಲ್ಲದೇ, ಸಣ್ಣ ಪುಟ್ಟ ಗೃಹೋದ್ಯಮಗಳಲ್ಲಿ ತೊಡಗಿಸಿಕೊಂಡಿರುವವರ ಸಮಸ್ಯೆಯೂ ಇದಕ್ಕೆ ಹೊರತಾಗಿಲ್ಲ. ಹಪ್ಪಳ, ಸಂಡಿಗೆ, ಹಣ್ಣು ಇತ್ಯಾದಿಗಳನ್ನು ಹೊರಗಡೆ ಒಣಗಿಸಿದರು ಎಂದಿಟ್ಟುಕೊಳ್ಳಿ. ಸ್ವಲ್ಪವೇ ಮಳೆ ಬಿದ್ದರೂ ಎಲ್ಲವೂ ನಷ್ಟ. ಅದೇ ರೀತಿ ರೈತರಿಗೆ ಅಡಿಕೆ, ಕೊಬ್ಬರಿ ಇತ್ಯಾದಿಗಳನ್ನು ಮನೆಯಂಗಳದಲ್ಲಿ ಒಣಗಿಸಿದರೂ ಇದೇ ಸಮಸ್ಯೆ. ಇದಕ್ಕೆಲ್ಲ ಪರಿಹಾರ ಎಂಬಂತೆ ಬಂದಿರುವುದೇ ಪ್ಲಾಸ್ಟಿಕ್ ಶಾಖದ ಮನೆ ಅರ್ಥಾತ್ ಪಾಲಿಟನಲ್ ಡ್ರೈಯರ್.

*ಇದರಿಂದ ಆಗುವ ಪ್ರಯೋಜನಗಳೇನು?
ಅಕಾಲಿಕ ಮಳೆಯಿಂದ ಮಾತ್ರವಲ್ಲದೇ, ಗಾಳಿ, ದೂಳಿನಿಂದಲೂ ಉತ್ಪನ್ನಗಳನ್ನು ರಕ್ಷಿಸಬಹುದು. ಅಷ್ಟೇ ಏಕೆ, ಪ್ರಾಣಿ, ಪಕ್ಷಿಗಳ ಭಯವೂ ಇರುವುದಿಲ್ಲ, ದಾರಿಹೋಕರು ಒಣಗಿಸಿಟ್ಟ ಉತ್ಪನ್ನಗಳನ್ನು ಕದಿಯುತ್ತಾರೆ ಎಂಬ ಹೆದರಿಕೆಯೂ ಇರುವುದಿಲ್ಲ. ಇವೆಲ್ಲಕ್ಕಿಂತ ಹೆಚ್ಚಾಗಿ, ಸಾಮಾನ್ಯ ಡ್ರೈಯರ್‌ಗಳಿಗೆ ಅಗತ್ಯ ಇರುವ ಇಂಧನವೂ ಇದಕ್ಕೆ ಬೇಕಾಗುವುದಿಲ್ಲ. ಮನೆಯ ಛಾವಣಿ ಮೇಲೆ ಕಟ್ಟಿದರೆ ಮಳೆಗಾಲದಲ್ಲಿ ಮನೆಯೊಳಕ್ಕೆ ನೀರು ಸೋರುವುದೂ ತಪ್ಪುತ್ತದೆ, ಉತ್ಪನ್ನಗಳೂ ಒಣಗುತ್ತವೆ.

*ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ನಿರ್ಮಿಸಲಾಗುವ ಪಾಲಿಹೌಸ್‌ಗೂ ಇದಕ್ಕೂ ವ್ಯತ್ಯಾಸವೇನು?
ಎರಡಕ್ಕೂ ಹೆಚ್ಚಿಗೆ ವ್ಯತ್ಯಾಸವೇನೂ ಇಲ್ಲ. ತಂತ್ರಜ್ಞಾನ ಬಹುಪಾಲು ಒಂದೇ ತೆರನಾಗಿದೆ. ಆದರೆ ಈ ಡ್ರೈಯರ್‌ನಲ್ಲಿ ಸಾಮಾನ್ಯ ಜಿ.ಐ ಪೈಪ್ ಬಳಸಿ ಹಂದರ ನಿರ್ಮಿಸಲಾಗುವುದು. ಇದಕ್ಕೆ ಅತಿ ನೇರಳೆ ಕಿರಣ ತಡೆದುಕೊಳ್ಳುವ ದಪ್ಪನೆ ಪ್ಲಾಸ್ಟಿಕ್ ಶೀಟು ಹೊದಿಸಲಾಗುವುದು. ಇದರಿಂದ ಬಿಸಿಲಿಗೆ ಈ ಶೀಟು ಸುಡುವುದಿಲ್ಲ. ತೋಟಗಾರಿಕಾ ಪಾಲಿಹೌಸ್‌ಗಳಿಗೆ ಮಧ್ಯಮ ಪ್ರಮಾಣದ ಉಷ್ಣತೆ ಹಾಗೂ ಅಧಿಕ ಪ್ರಮಾಣದ ತೇವ ಇರುವ ಶೀಟು ಬೇಕಾಗುತ್ತದೆ. ಆದರೆ ಇಲ್ಲಿ ಬಳಸುವುದು ಅಧಿಕ ಉಷ್ಣತೆ ಮತ್ತು ಕಡಿಮೆ ತೇವ  ಇರುವ ಶೀಟುಗಳನ್ನು. ಏಕೆಂದರೆ ತೋಟಗಾರಿಕೆ ಬೆಳೆಗಳು ಹಸಿರಾಗಿ ಇಡಲು ಇದರ ನಿರ್ಮಾಣ ಮಾಡಿದರೆ ಇಲ್ಲಿ ಇದು, ಪದಾರ್ಥಗಳನ್ನು ಒಣಗಿಸಲು ಬಳಸಲಾಗುತ್ತದೆ.

*ಇದನ್ನು ನೆಲದ ಮೇಲೆ ನಿರ್ಮಿಸಬಹುದೇ?
ಇಲ್ಲ. ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಪಾಲಿಹೌಸ್‌ಗಳನ್ನು ಮಾತ್ರ ನೆಲದ ಮೇಲೆ ನೇರವಾಗಿ ಕಟ್ಟಲಾಗುತ್ತದೆ. ಆದರೆ ಈ ಪಾಲಿಟನಲ್, ಒಳಗೆ ಇರುವ ಉತ್ಪನ್ನಗಳು ಸುಲಭದಲ್ಲಿ ಒಣಗುವ ಸಂಬಂಧ ಬೇರೆ ತಂತ್ರಜ್ಞಾನ ಅಳವಡಿಸಲಾಗಿದೆ. ಇದನ್ನು ನೆಲದಿಂದ ಮೂರ್ನಾಲ್ಕು ಅಡಿ ಎತ್ತರದ ಅಟ್ಟಣಿಗೆಯ ಮೇಲೆ ಕಟ್ಟಲಾಗುತ್ತದೆ. ಮರದ ಅಥವಾ ಇಟ್ಟಿಗೆ ಕಂಬಗಳ ಮೇಲೆ ಪಾಲಿಟನಲ್ ನಿರ್ಮಿಸಿ ಕೆಳಗಡೆ ಖಾಲಿ ಜಾಗ ಬಿಡಲಾಗುವುದು. ಅಡಿಕೆ ಮರದ ದಬ್ಬೆ ಅಥವಾ ಮರದ ರೀಪಿನಿಂದ ಅಟ್ಟಣಿಗೆ ಕಟ್ಟಲಾಗುವುದು. ಇಲ್ಲಿರುವ ರೀಪು ಮಧ್ಯೆ ಅರ್ಧ ಇಂಚು ಎಡೆ ಬಿಡಲಾಗಿದೆ. ಇದರಿಂದ ಅಟ್ಟಣಿಗೆಯ ಮೇಲೆ ಶೇಡ್‌ನೆಟ್ ಅಥವಾ ಚಾಪೆ ಹಾಕಿದರೆ ಸರಾಗವಾಗಿ ಗಾಳಿಯಾಡುತ್ತದೆ.

*ಒಳಗಿರುವ ಪದಾರ್ಥಗಳು ಒಣಗುವುದು ಹೇಗೆ?
ಬಿಸಿಲಿನಿಂದ ಪಾಲಿಟನಲ್ ಮನೆಯೊಳಗಿನ ಗಾಳಿ ಬಿಸಿಯಾಗಿ ಮೇಲೇರಿದಂತೆ ತಂಪು ಗಾಳಿ ಕೆಳಗಿನಿಂದ ಮನೆಯೊಳಗೆ ನುಗ್ಗುತ್ತದೆ. ಬಿಸಿಲು ಏರಿದಂತೆ ಈ ಗಾಳಿಯ ಪ್ರವಾಹ ವೇಗ ಪಡೆಯುತ್ತದೆ. ಬಿಸಿಗಾಳಿಯು ಮೇಲಿರುವ ಕಿಂಡಿಗಳ ಮೂಲಕ ಹೊರ ಹೋಗುತ್ತದೆ. ಇದರಿಂದ ಒಳಗಡೆ ಇರುವ ಉತ್ಪನ್ನ ಒಣಗುತ್ತದೆ. ಇದೇ ಇದರ ಸರಳ ತತ್ವ.

*ಹೊರಗಿನ ವಾತಾವರಣಕ್ಕೂ, ಒಳಗಿರುವ ಬಿಸಿಲಿನ ತಾಪಕ್ಕೂ ವ್ಯತ್ಯಾಸ ಇದೆಯೇ?
ಖಂಡಿತ. ಪಾಲಿಟನಲ್ ಒಳಗಿನ ಉಷ್ಣತೆ ಹೊರಗಡೆ ಉಷ್ಣಕ್ಕಿಂತ ದುಪ್ಪಟ್ಟು ಭಾಗದಲ್ಲಿ ಇರುತ್ತದೆ. ಅಂದರೆ ಹೊರಗಡೆ ಬಿಸಿಲು 30 ಡಿಗ್ರಿ ಸೆಂಟಿಗ್ರೇಡ್‌ ಇದ್ದರೆ ಒಳಗಡೆ ಉಷ್ಣತೆ 60 ರಿಂದ 65ಡಿಗ್ರಿವರೆಗೂ ಏರುತ್ತದೆ. ಮಳೆಗಾಲದಲ್ಲಿ ಕೂಡ ಒಳಗಡೆ ದುಪ್ಪಟ್ಟು ಉಷ್ಣತೆ ಇರುತ್ತದೆ.

*ಬಿಸಿಲು ಅಧಿಕವಾದರೆ ಒಳಗಿರುವ ಪದಾರ್ಥಗಳಿಗೆ ಹಾನಿಯಾಗುವುದಿಲ್ಲವೇ?
ಬಿರುಬಿಸಿಲಿನಲ್ಲಿ ಹಾನಿ ಸಂಭವಿಸುವ ಎಲ್ಲ ಸಾಧ್ಯತೆಗಳೂ ಇವೆ. ಉಷ್ಣಾಂಶದ ಪ್ರಮಾಣ ಶೇ 60 ರಿಂದ 65ರ ಮಟ್ಟ ತಲುಪಿದರೆ ಒಳಗಡೆ ಇರುವ ಉತ್ಪನ್ನಗಳು ಬೆಂದು ಹೋಗಿ ಅದರ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ಇದಕ್ಕೆ ಹೆದರಬೇಕಿಲ್ಲ. ಏಕೆಂದರೆ ಇದಕ್ಕೂ ಪರಿಹಾರ ಇಲ್ಲಿದೆ.  ಉಷ್ಣತೆ ಹೆಚ್ಚಾದರೆ ಬಾಗಿಲು ತೆರೆದಿಟ್ಟರೆ ಸಾಕು. ಉಷ್ಣತೆ ಸರಿಹೋಗುತ್ತದೆ. ಸಂಜೆಯಾಗುತ್ತಿದ್ದಂತೆ ಬಾಗಿಲು ಮುಚ್ಚಬೇಕು. ಹೀಗೆ ಮಾಡಿದರೆ ಯಾವ ಹಾನಿಯೂ ಸಂಭವಿಸುವುದಿಲ್ಲ. ಮಳೆಗಾಲದಲ್ಲಿ ಉಷ್ಣಾಂಶ ಒಳಗಡೆ ಸಾಮಾನ್ಯವಾಗಿ ಇರುವ ಕಾರಣ ಉತ್ಪನ್ನಗಳಿಗೆ ಬೂಸ್ಟ್ ಹಿಡಿಯುವುದಿಲ್ಲ.

*ಎಷ್ಟು ವರ್ಷ ಬಾಳಿಕೆ ಬರುತ್ತದೆ? ಖರ್ಚು ಎಷ್ಟು?
ಇದಕ್ಕೆ ನೀರು ಸೋಕುವುದಿಲ್ಲ ಹಾಗೂ ಅಟ್ಟಣಿಗೆ ಯಿಂದಾಗಿ ಗಾಳಿ ಹೊಡೆತಕ್ಕೂ ಇದು ಬೀಳುವುದಿಲ್ಲ. ಆದ್ದರಿಂದ 5ರಿಂದ6 ವರ್ಷ ಇದು ಬಾಳಿಕೆ ಬರುತ್ತದೆ. 15/10 ಅಡಿ ಪಾಲಿಟನಲ್ ನಿರ್ಮಾಣಕ್ಕೆ ಸುಮಾರು 50ಸಾವಿರ ರೂಪಾಯಿ ವೆಚ್ಚ ಆಗುವುದು.

*ಸರ್ಕಾರದಿಂದ ಸಹಾಯಧನ (ಸಬ್ಸಿಡಿ) ದೊರಕುವುದೇ?
ಹೌದು. ಪಾಲಿಟನಲ್ ನಿರ್ಮಿಸಿಕೊಳ್ಳುವ ರೈತರಿಗೆ
ಶೇ 50ರಷ್ಟು ಸಹಾಯಧನವನ್ನು ಸರ್ಕಾರ ನೀಡಲಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಮೀಪದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದುಕೊಳ್ಳಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದ್ದಾರೆ ಶಿರಸಿಯ ರಾಘವೇಂದ್ರ ಭಟ್ ದೂ: 9480474916.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT