ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಡ್ನವೀಸ್‌ ಸಂಪುಟ ಅಸ್ತಿತ್ವಕ್ಕೆ

Last Updated 31 ಅಕ್ಟೋಬರ್ 2014, 19:32 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಇಲ್ಲಿಯ ಪ್ರಸಿದ್ಧ ವಾಂಖೆಡೆ ಕ್ರೀಡಾಂ­ಗ­­ಣ­­ದಲ್ಲಿ ಶುಕ್ರ­ವಾರ ನಡೆದ ಅದ್ಧೂರಿ ಸಮಾ­ರ­ಂ­ಭದಲ್ಲಿ ಬಿಜೆಪಿಯ  ದೇವೇಂದ್ರ ಫಡ್ನವೀಸ್‌ (44) ಅವರು ಮಹಾ­ರಾಷ್ಟ್ರದ ಹೊಸ ಮುಖ್ಯಮಂತ್ರಿ­ಯಾಗಿ  ಪ್ರಮಾಣವಚನ ಸ್ವೀಕರಿ­ಸಿದರು.

ಪ್ರಧಾನಿ ನರೇಂದ್ರ ಮೋದಿ,  ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ, ಮೋದಿ ಸಂಪುಟದ ಹಿರಿಯ ಸಚಿವರು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯ­ಮಂತ್ರಿಗಳು, ಪಕ್ಷದ ರಾಷ್ಟ್ರೀಯ ನಾಯ­ಕರು, ಚಿತ್ರತಾರೆಯರು, ವಿವಿಧ ಕ್ಷೇತ್ರಗಳ ಗಣ್ಯರು ಸೇರಿದಂತೆ ಸಾವಿ­ರಾರು ಜನರು ಈ ಸಮಾರಂಭಕ್ಕೆ ಸಾಕ್ಷಿಯಾರು. ಮಹಾರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿಯ ಮೊದಲ ಮುಖ್ಯಮಂತ್ರಿ ಫಡ್ನವೀಸ್‌ ಅವ­ರಿಗೆ ರಾಜ್ಯಪಾಲ ವಿದ್ಯಾಸಾಗರ್‌ ರಾವ್ ಪ್ರಮಾಣವಚನ ಬೋಧಿಸಿ­ದರು.

ಮುನಿಸು ಮರೆತು ಬಂದ ಉದ್ಧವ್: ಬಿಜೆಪಿ­ಯಿಂದ ಪದೇಪದೇ  ಮುಜುಗರ­ವಾ­ಗುತ್ತಿದೆ ಎಂದು ದೂರಿದ್ದ ಶಿವಸೇನಾ, ಪ್ರಮಾಣ ವಚನ ಸಮಾರಂಭ ಬಹಿ­ಷ್ಕ­ರಿ­ಸಲು ನಿರ್ಧರಿಸಿತ್ತು. ಇದರಿಂದಾಗಿ ಪಕ್ಷದ ಮುಖ್ಯಸ್ಥ ಉದ್ಧವ್‌ ಠಾಕ್ರೆ ಸಮಾರಂಭಕ್ಕೆ ಹಾಜರಾ­ಗುವ ಬಗ್ಗೆ ಕೊನೆಯ ಕ್ಷಣದ­ವ­ರೆಗೂ ಸಂದೇಹ­ವಿತ್ತು.

ಆದರೆ, ಅಂತಿಮ ಹಂತದಲ್ಲಿ ನಡೆದ ನಾಟಕೀಯ ಬೆಳವಣಿ­ಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ,  ಉದ್ಧವ್‌ ಅವ­ರನ್ನು ಆಹ್ವಾನಿಸಿ  ಸಮಾ­ರಂ­ಭಕ್ಕೆ ಕರೆತರುವಲ್ಲಿ ಯಶಸ್ವಿ­ಯಾ­ದರು. ಸಮಾರಂಭಕ್ಕೆ ಉದ್ಧವ್‌ ಬರುತ್ತಿ­ದ್ದಂ­ತೆ ಮೋದಿ ಹಾಗೂ ಉದ್ಧವ್‌ ಪರ­ಸ್ಪರ ಕೈ­ಕುಲುಕಿ ಶುಭಾಶಯ ವಿನಿಮಯ ಮಾಡಿ­ಕೊಂಡರು. ಎಲ್ಲರ ಕಣ್ಣುಗಳು ಈ ಇಬ್ಬರು ನಾಯಕರ ಮೇಲೆಯೇ ನೆಟ್ಟಿದ್ದವು.
ಉದ್ಧವ್‌ ಠಾಕ್ರೆ ಸಮಾರಂಭದಲ್ಲಿ ಕಾಣಿಸಿಕೊಂಡಿರುವುದು ಬಿಜೆಪಿ ಮತ್ತು ಶಿವಸೇನಾ ಮಧ್ಯೆ ಸಂಧಾನದ ಸಾಧ್ಯ­ತೆಯ ಸಂದೇಶ ರವಾನಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಫಡ್ನವೀಸ್‌ ಜತೆ 9 ಸಚಿವರ ಪ್ರಮಾಣ
ಮುಂಬೈ(ಪಿಟಿಐ): ಮಹಾರಾಷ್ಟ್ರ ಮುಖ್ಯಮಂತ್ರಿ­ಯಾಗಿ ಶುಕ್ರವಾರ ಅಧಿಕಾರ ವಹಿಸಿ­ಕೊಂಡ ದೇವೇಂದ್ರ ಫಡ್ನವೀಸ್‌ ಜತೆ 9 ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಿದರು. ದಿವಂಗತ ನಾಯಕ ಗೋಪಿನಾಥ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ, ಹಿರಿಯ ನಾಯಕ ಏಕನಾಥ್ ಖಡ್ಸೆ, ಸುಧೀರ್‌ ಮುಂಗಂಟಿವಾರ್‌, ವಿನೋದ್‌ ತಾವ್ಡೆ, ಪ್ರಕಾಶ್‌ ಮೆಹ್ತಾ, ಚಂದ್ರಕಾಂತ್ ಪಾಟೀಲ, ವಿಷ್ಣು ಸಾವರಾ ಸಂಪುಟ ದರ್ಜೆಯ ಸಚಿವ­ರಾಗಿ ಮತ್ತು ದಿಲೀಪ್‌ ಕಾಂಬ್ಳೆ ಹಾಗೂ ವಿದ್ಯಾ ಠಾಕೂರ್‌ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಫಡ್ನವೀಸ್ ಮಹಾರಾಷ್ಟ್ರದ 27ನೇ ಮುಖ್ಯಮಂತ್ರಿ. ಬಿಜೆಪಿ ಹಾಗೂ ಮಿತ್ರ­ಪಕ್ಷದ ಮುಖ್ಯಮಂತ್ರಿಗಳಾದ ಆನಂದಿ­ಬೆನ್‌ ಪಟೇಲ್‌,  ಮನೋಹರ್ ಪರಿಕ್ಕರ್‌,   ವಸುಂಧರಾರಾಜೇ,  ರಮ­ಣ­­­­­ಸಿಂಗ್,  ಪ್ರಕಾಶ್‌ ಸಿಂಗ್ ಬಾದಲ್‌, ಚಂದ್ರಬಾಬು ನಾಯ್ಡು  ಸಮಾರಂಭದ ಮೆರಗು ಹೆಚ್ಚಿಸಿದರು.

11ರಂದು   ವಿಶ್ವಾಸಮತ: ಮಹಾ­ರಾಷ್ಟ್ರ ನೂತನ ಮುಖ್ಯ­ಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ನ.೧೧­ರಂದು ವಿಧಾನಸಭೆ ವಿಶೇಷ ಅಧಿ­ವೇಶ­ನ­ದಲ್ಲಿ ವಿಶ್ವಾಸಮತ ಕೋರಲಿ­ದ್ದಾರೆ. ಶನಿವಾರ ನಡೆಯಲಿರುವ ರಾಜ್ಯ ಸಂಪುಟ ಸಭೆ ಬಳಿಕ ಈ ಸಂಬಂಧ ಅಧಿಕೃತ ಹೇಳಿಕೆ ಹೊರಬೀಳಲಿದೆ. ಮೂರು ದಿನಗಳವರೆಗೆ ವಿಶೇಷ ಅಧಿವೇಶನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT