ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫತ್ವಾ ಕಾನೂನುಬಾಹಿರ

ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು
Last Updated 7 ಜುಲೈ 2014, 19:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಸ್ಲಿಂ ಧಾರ್ಮಿಕ ನಾಯಕರು ನಡೆಸುವ ಶರಿಯತ್‌ ನ್ಯಾಯ­ಪಂಚಾಯ್ತಿಗಳಿಗೆ (ದಾರುಲ್‌ಖ್ವಾಜಾ)  ಹಾಗೂ ಅವು ಹೊರಡಿಸುವ ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲ  ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಆದರೆ, ಫತ್ವಾ ಹೊರಡಿಸುವ ಪದ್ಧತಿ­ಯನ್ನು ಕಾನೂನುಬಾಹಿರ ಎಂದು ಘೋಷಿಸಲು ಕೋರ್ಟ್‌ ನಿರಾಕರಿಸಿದೆ. ಸಂವಿಧಾನದ ಅಡಿ ವ್ಯಕ್ತಿಗೆ ನೀಡಲಾದ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದಾ­ದಲ್ಲಿ ಫತ್ವಾ ಹೊರಡಿಸುವು­ದರಲ್ಲಿ ಯಾವುದೇ ತಪ್ಪಿಲ್ಲ. ದಾರುಲ್‌ಖ್ವಾಜಾಗಳು  ಮನಸ್ತಾಪಕ್ಕೆ ಒಳಗಾದ ಎರಡು ಬಣಗಳ ನಡುವೆ ರಾಜೀ ಪಂಚಾಯ್ತಿ ಮಾಡಿಸುವ ಅನೌಪಚಾರಿಕ ನ್ಯಾಯಾಂಗ ವ್ಯವಸ್ಥೆಯಾಗಿರುತ್ತದೆ. ಅದನ್ನು ಸ್ವೀಕರಿಸುವುದು, ನಿರ್ಲಕ್ಷಿಸು­ವುದು ಅಥವಾ ತಿರಸ್ಕರಿಸುವುದು ಆಯಾ ವ್ಯಕ್ತಿಗಳಿಗೆ ಬಿಟ್ಟದ್ದು ಎಂದೂ ಕೋರ್ಟ್‌ ಹೇಳಿದೆ.

ಹಾಗೆಯೇ ದಾರುಲ್‌ಖ್ವಾಜಾ­ದಂತಹ ಮುಸ್ಲಿಂ ಧಾರ್ಮಿಕ ಮಂಡಳಿಗಳು ಅವುಗಳ ಮುಂದೆ ಹಾಜ­ರಾಗದ ಮೂರನೇ ವ್ಯಕ್ತಿಯ ವಿರುದ್ಧ

ತೀರ್ಪಿನಲ್ಲಿ ಏನಿದೆ...?
*ಖಾಜಿ ಅಥವಾ ಮುಫ್ತಿಗೆ ಇನ್ನೊಬ್ಬರ ಮೇಲೆ ತಮ್ಮ ಅನಿಸಿಕೆಗಳನ್ನು ಹೇರುವ ಅಧಿಕಾರ ಇಲ್ಲ
*ಫತ್ವಾ ಜಾರಿಗೊ­ಳಿಸಲು ಬಲವಂತವಾಗಿ ಯತ್ನಿಸಿದಲ್ಲಿ ಕಾನೂನು ಕ್ರಮ

***
ಮೊಘಲ್‌ ಅಥವಾ ಬ್ರಿಟಿಷ್‌ ಆಳ್ವಿಕೆಯಲ್ಲಿ ಫತ್ವಾಗಳ ಪ್ರಾಮುಖ್ಯ ಏನೇ ಇದ್ದಿರಲಿ, ಸ್ವತಂತ್ರ ಭಾರತದಲ್ಲಿ ಇದಕ್ಕೆ ಸ್ಥಾನವಿಲ್ಲ. ಅವುಗಳಿಗೆ ಸಂವಿಧಾನದ ಮಾನ್ಯತೆಯೂ ಇಲ್ಲ. ಇಸ್ಲಾಂ ಸೇರಿದಂತೆ ಯಾವುದೇ ಧರ್ಮವೂ ಮುಗ್ಧರನ್ನು ಶಿಕ್ಷಿಸು­ವುದಿಲ್ಲ. ಧರ್ಮವೊಂದು ಸಂತ್ರಸ್ತರ ವಿರುದ್ಧ ಅಮಾನವೀಯವಾಗಿ ನಡೆದು­ಕೊಳ್ಳುವಂತಿಲ್ಲ

***
ಫತ್ವಾ ಅಂದರೇನು?
ಮುಸ್ಲಿಂ ವೈಯಕ್ತಿಕ ಕಾನೂನಿಗೆ ಸಂಬಂಧಿಸಿದಂತೆ ಮುಫ್ತಿಗಳು (ಮುಸ್ಲಿಂ ಧಾರ್ಮಿಕ ನಾಯಕರು) ನೀಡುವ ಅರ್ಥವಿವರಣೆ ಅಥವಾ ಅಭಿಪ್ರಾಯಕ್ಕೆ ಫತ್ವಾ ಎನ್ನುತ್ತಾರೆ.

ಫತ್ವಾ ಹೊರಡಿ­ಸು­ವಂತಿಲ್ಲ ಎಂದೂ ನ್ಯಾಯಮೂರ್ತಿ ಸಿ.ಕೆ. ಪ್ರಸಾದ್‌ ಮತ್ತು ಪಿನಾಕಿ ಚಂದ್ರ ಘೋಷ್‌ ಅವರನ್ನೊಳಗೊಂಡ ನ್ಯಾಯ­ಪೀಠ ಅಭಿಪ್ರಾಯಪಟ್ಟಿದೆ.

ಕಾನೂನುಕ್ರಮ: ಫತ್ವಾಗಳಿಗೆ ಕಾನೂನಿನ ಮಾನ್ಯತೆ ಇಲ್ಲದ ಕಾರಣ ಅವುಗಳನ್ನು ಜಾರಿಯಲ್ಲಿ ತರಲು ಬಲ ಪ್ರಯೋಗಿಸುವಂತಿಲ್ಲ. ಯಾರಾದರೂ ಫತ್ವಾಗಳನ್ನು ಜಾರಿಗೊ­ಳಿಸಲು ಬಲವಂತವಾಗಿ ಯತ್ನಿಸಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಕೋರ್ಟ್‌ 20 ಪುಟಗಳ ತೀರ್ಪಿನಲ್ಲಿ ವಿವರಿಸಿದೆ.

ಶರಿಯತ್‌ ನ್ಯಾಯಪಂಚಾಯ್ತಿಗಳ ಸಂವಿಧಾನ ಬದ್ಧತೆ­ಯನ್ನು ಪ್ರಶ್ನಿಸಿ ವಕೀಲ ವಿಶ್ವಲೋಚನ್ ಮದನ್‌ ಅವರು 2005ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾ­ಸಕ್ತಿ ಅರ್ಜಿ (ಪಿಐಎಲ್‌)ಯನ್ನು ಇತ್ಯರ್ಥ­ಗೊಳಿಸುವಾಗ ಕೋರ್ಟ್‌ ಹೀಗೆ ಹೇಳಿದೆ.

ಈ ಶರಿಯತ್‌ ನ್ಯಾಯಪಂಚಾಯ್ತಿ­ಗಳು  ದೇಶ­ದಲ್ಲಿ ಪರ್ಯಾಯ ನ್ಯಾಯ ವ್ಯವಸ್ಥೆಯಾಗಿವೆ. ಇವು ಫತ್ವಾ ಹೊರಡಿಸುವ ಮೂಲಕ ಮುಸ್ಲಿಮರ ಮೂಲ­ಭೂತ ಹಕ್ಕುಗಳನ್ನು ನಿಯಂತ್ರಿ­ಸುವ, ಹಕ್ಕುಗಳನ್ನು ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿವೆ ಎಂದು ಅರ್ಜಿದಾರರು ದೂರಿದ್ದರು.

ತನ್ನ ಮೇಲೆ ಅತ್ಯಾಚಾರ ಎಸಗಿದ ಮಾವನ ಜತೆಗೆ  ವಾಸಿಸುವಂತೆ ಮತ್ತು ಗಂಡ ಮತ್ತು ಮಕ್ಕಳನ್ನು ತೊರೆ­ಯುವಂತೆ ಮುಸ್ಲಿಂ ಮಹಿಳೆ­ಯೊಬ್ಬರಿಗೆ ಶರಿಯತ್‌ ಪಂಚಾಯ್ತಿ ಫತ್ವಾ ಹೊರಡಿಸಿದ್ದನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ವಿಚಾರಣೆ ಆರಂಭದಲ್ಲಿ ನ್ಯಾಯ­ಪೀಠಕ್ಕೆ ಪ್ರತಿಕ್ರಿಯೆ ಸಲ್ಲಿಸಿದ್ದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ‘ಫತ್ವಾ ಪಾಲನೆ ಕಡ್ಡಾಯ­ವೇನೂ ಅಲ್ಲ. ಇದು ಮುಫ್ತಿ (ಮೌಲ್ವಿ) ಅವರ ಅಭಿಪ್ರಾಯ­ವಷ್ಟೆ. ಅವರಿಗೆ ಇದನ್ನು ಅನುಷ್ಠಾನಕ್ಕೆ ತರುವ ಯಾವುದೇ ಅಧಿಕಾರ ಇಲ್ಲ’ ಎಂದು ಹೇಳಿತ್ತು.

ಕೋರ್ಟ್‌ ಹೇಳಿದ್ದೇನು?: ಮುಗ್ಧ ವ್ಯಕ್ತಿಗಳನ್ನು ಶಿಕ್ಷಿಸಲು ಫತ್ವಾ ಹೊರಡಿಸುವಂತಿಲ್ಲ. ಇಸ್ಲಾಂ ಸೇರಿ­ದಂತೆ ಯಾವುದೇ ಧರ್ಮವೂ ಮುಗ್ಧರನ್ನು ಶಿಕ್ಷಿಸು­ವುದಿಲ್ಲ. ಯಾವುದೇ ಶಾಸಕಾಂಗ ರೂಪಿಸಿರುವ  ಕಾನೂ­ನಿನ ಅಡಿ ದಾರುಲ್‌ಖ್ವಾಜಾ ರಚಿಸಿಲ್ಲ. ಹಾಗಾಗಿ ಖಾಜಿ ಅಥವಾ ಮುಫ್ತಿ ತನ್ನ ಅಭಿಪ್ರಾಯ­ವನ್ನು  ಬಲವಂತವಾಗಿ ಹೇರುವಂತಿಲ್ಲ.  ಶರಿಯತ್‌ ನ್ಯಾಯ­­ಪಂಚಾಯ್ತಿ ಸ್ಥಾಪನೆಯ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ, ಅವುಗಳಿಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಫತ್ವಾ ಪ್ರತಿಕ್ರಿಯೆಗಳು
ಷರಿಯತ್‌ಗೆ ಸಂವಿಧಾನ ಹಕ್ಕು

ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ಕಾರ್ಯನಿರ್ವಹಿಸಲು  ಮುಸ್ಲಿಂರಿಗೆ ಸಂವಿಧಾನದತ್ತವಾದ ಹಕ್ಕು ಇದೆ.
– ಜಫರ್‌ಯಾಬ್‌ ಜಿಲಾನಿ ಸದಸ್ಯ, ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

ವ್ಯಾಜ್ಯ ಇತ್ಯರ್ಥ ಅಂತಿಮ ಗುರಿ

ನ್ಯಾಯಾಂಗ ವ್ಯವಸ್ಥೆಗೆ ಸಮಾನಾಂತರವಾಗಿ ನಾವು ಏನನ್ನೂ ಮಾಡುತ್ತಿಲ್ಲ. ಖಾಜಿ­­­ಗಳು ನೀಡಿದ ಆದೇಶ ಎಲ್ಲರಿಗೂ ಅನ್ವಯಿಸುತ್ತವೆ ಎಂದು ನಾವು ಎಲ್ಲಿಯೂ ಹೇಳಿಲ್ಲ.  ಎರಡೂ ಕಡೆಯ ವ್ಯಕ್ತಿಗಳ ಒಪ್ಪಿಗೆ ಪಡೆದ ನಂತ­­ರವೇ ವ್ಯಾಜ್ಯ­­ ಇತ್ಯರ್ಥಗೊಳಿಸುತ್ತೇವೆ. 
– ಖಾಲಿದ್‌ ರಶೀದ್‌ ಫರಂಗಿ, ಮುಸ್ಲಿಂ ವಿದ್ವಾಂಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT