ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲವಂತಿಕೆ: ಇನ್ನಷ್ಟು ಪ್ರಶ್ನೆಗಳು

Last Updated 20 ಮೇ 2016, 19:41 IST
ಅಕ್ಷರ ಗಾತ್ರ

ಗರ್ಭಧಾರಣೆಗೆ ಸಂಬಂಧಿಸಿದಂಥ ಕೆಲವು ಸಾಮಾನ್ಯ ಸಂಶಯಗಳನ್ನು ನಿವಾರಿಸುವ ಪ್ರಯತ್ನವನ್ನು ಕಳೆದೆರಡು ವಾರಗಳಿಂದ ಪ್ರಯತ್ನಿಸುತ್ತಿರುವೆ. ಈ ವಾರ ಓದುಗರು ಕಳುಹಿಸಿರುವ ಪ್ರಶ್ನೆಗಳನ್ನು ಪಟ್ಟಿ ಮಾಡಿ, ಉತ್ತರಿಸಲಾಗಿದೆ. ಈ ಪ್ರಶ್ನೋತ್ತರ ಮಾದರಿಯು ಹಲವರ ಸಂಶಯಗಳಿಗೆ ಪರಿಹಾರ ಒದಗಿಸಿರುತ್ತದೆ.

ನನ್ನ ಋತುಚಕ್ರವೇನೂ ಈ ತಿಂಗಳು ವಿಳಂಬವಾಗಿಲ್ಲ... ಆದರೂ ನನಗ್ಯಾಕೋ ನಾನು ಗರ್ಭಿಣಿಯಾಗಿರುವೆ ಎನಿಸುತ್ತದೆ... ಗರ್ಭಧಾರಣೆಯ ಪರೀಕ್ಷೆ ಕೈಗೊಳ್ಳಲು ಯಾವುದು ಸೂಕ್ತ ಸಮಯ? ಮನೆಯಲ್ಲಿಯೇ ಪರೀಕ್ಷೆ ಮಾಡಿಕೊಳ್ಳಲು ಇದು ಸಕಾಲವೇ?
ನಿಮ್ಮ ಋತುಚಕ್ರದ ಆರಂಭಿಕ ದಿನಗಳ ಸಂದರ್ಭದಲ್ಲಿ ಕೆಲವೊಮ್ಮೆ ನಿಮಗೆ ಇಂಥ ಅನುಭವವಾಗಬಹುದು. ಗರ್ಭಧಾರಣೆಯ ಪರಿಣಾಮಗಳು ಕಾಣಿಸಿಕೊಳ್ಳಬಹುದು. ಸ್ತನಗಳಲ್ಲಿ ಅಸಾಧ್ಯವಾದ ನೋವು ಕಾಣಿಸಿಕೊಳ್ಳಬಹುದು. ಈ ಸಮಯದಲ್ಲಿ ನೀವು ಮನೆಯಲ್ಲಿ ಪರೀಕ್ಷಿಸಬಹುದು. ನಿಖರವಾದ ಫಲಿತಾಂಶಕ್ಕಾಗಿ ರಕ್ತ ತಪಾಸಣೆ ಮಾಡಿಸಬಹುದು.

ಒಂದು ವೇಳೆ ನನ್ನ ಋತುಚಕ್ರ ನಿಯಮಿತವಾಗಿದ್ದಲ್ಲಿ ಅಂಡಾಣು ಬಿಡುಗಡೆಯಾಗುತ್ತಿದೆ ಹಾಗೂ ನಾನು ಫಲವಂತೆ ಎಂದು ಭಾವಿಸಬಹುದೇ?
ಸಾಮಾನ್ಯವಾಗಿ ಬಹುತೇಕ ಮಹಿಳೆಯರಲ್ಲಿ ಈ ಮಾತು ನಿಜ ಎಂದೇ ಭಾವಿಸಬಹುದಾಗಿದೆ. ಒಂದು ವೇಳೆ ನಿಯಮಿತವಾಗಿ ಋತುಚಕ್ರವಾಗದಿದ್ದಲ್ಲಿ ಅಂಡಾಣು ಬಿಡುಗಡೆಯೂ ಸಮರ್ಪಕವಾಗಿಲ್ಲ ಎಂದು ಖಂಡಿತವಾಗಿ ಹೇಳಬಹುದು.

ಆದರೆ ಕೆಲವೊಮ್ಮೆ ಮಾತ್ರ ಋತುಚಕ್ರ ನಿಯಮಿತವಾಗಿದ್ದರೂ ಪ್ರತಿ ಋತುಚಕ್ರದಲ್ಲಿಯೂ ಅಂಡಾಣು ಬಿಡುಗಡೆಯಾಗಿದೆ ಎಂದು ಖಚಿತವಾಗಿ ಹೇಳಲಾಗದು. ಕೆಲವೊಮ್ಮೆ ಅಂಡನಾಳದಲ್ಲಿಯೇ ಅಂಡಾಣು ಉಳಿಯಬಹುದು. ಇಲ್ಲವೇ ಪ್ರೊಜೆಸ್ಟರಾನ್ ಹಾರ್ಮೋನ್‌ ಸ್ರವಿಸುವ ಪ್ರಮಾಣ ಕಡಿಮೆ ಇದ್ದಾಗಲೂ ಈ ಸಮಸ್ಯೆ ಕಂಡು ಬರುತ್ತದೆ.

ಇದನ್ನು ಖಚಿತವಾಗಿ ಪತ್ತೆ ಮಾಡಲು ಅಂಡಾಣು ಬಿಡುಗಡೆಯ ಕಿಟ್‌ ತಂದು ಪರಿಶೀಲಿಸಬಹುದು. ನೀವು ಪರೀಕ್ಷೆ ಮಾಡಿರುವ ತಿಂಗಳಿನಲ್ಲಿ ಅಂಡಾಣು ಬಿಡುಗಡೆಯಾಗಿದ್ದರೆ ನಿಶ್ಚಿತವಾಗಿಯೂ ನಿಯಮಿತವಾಗಿ ಅಂಡಾಣು ಬಿಡುಗಡೆಯಾಗುತ್ತಿದೆ ಎಂದೇ ಅರ್ಥ.

ನನ್ನ ಋತುಚಕ್ರ ನಿಯಮಿತವಾಗಿಯೇ ಆಗುತ್ತದೆ. ಆದರೆ ಕಳೆದ ಸಲ ಮಾತ್ರ ತುಸು ತಡವಾಗಿ ಆಯಿತು. ಅದರರ್ಥ ನನಗೆ ಗರ್ಭಪಾತವಾಯಿತು ಎಂದೇ?
ಸಾಮಾನ್ಯವಾಗಿ ಇಂಥ ಸಾಧ್ಯತೆಗಳಿರುತ್ತವೆ. ಶೇ 10ರಿಂದ 25ರಷ್ಟು ಗರ್ಭಪಾತವಾಗುತ್ತವೆ.

ಹಲವಾರು ಗರ್ಭಧಾರಣೆಯ ಸ್ವರೂಪ ಪಡೆಯುವ ಮುನ್ನವೇ ಗರ್ಭಪಾತವಾಗಿರುತ್ತದೆ. ಆ ಬಗ್ಗೆ ಮಹಿಳೆಯರಿಗೆ ಗೊತ್ತೂ ಆಗುವುದಿಲ್ಲ. ಅಂಥ ಸಂದರ್ಭಗಳ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ವರ್ಷದಲ್ಲಿ ಒಂದೆರಡು ಸಲ ಇಂಥ ವಿಳಂಬ ಕಾಣಿಸಿಕೊಳ್ಳಬಹುದು.

ಅದಲ್ಲದೇ ಕೆಲವೊಮ್ಮೆ ಅನಾರೋಗ್ಯ ಕಾಡುತ್ತಿದ್ದರೆ, ಪ್ರವಾಸದಲ್ಲಿದ್ದರೆ, ಹೆಚ್ಚು ವ್ಯಾಯಾಮದಿಂದಾಗಿಯೂ ಇಂತ ಅನಿಶ್ಚಿತತೆ ಕಾಡಬಹುದು. ಅದಕ್ಕೆಲ್ಲ ಚಿಂತಿಸಬೇಕಾಗಿಲ್ಲ.

ಫಲವಂತಿಕೆ ಹೆಚ್ಚಿಸುವಂತಹ ವಿಶೇಷ ಆಹಾರಾಭ್ಯಾಸಗಳಿವೆಯೇ?
ವೀರ್ಯಾಣು ಹೋಗಿ ಅಂಡಾಣುವಿನೊಂದಿಗೆ ಸಂಯೋಗವಾಗುವಂಥ ವಿಶೇಷ ಆಹಾರ ಯಾವುದೂ ಇಲ್ಲ. ಪೋಷಕಾಂಶಗಳುಳ್ಳ, ನಾರಿನಾಂಶವುಳ್ಳ ಆಹಾರ ಹೆಚ್ಚುಹೆಚ್ಚಾಗಿ ಸೇವಿಸುವುದು ಒಳಿತು. ಸಿದ್ಧ ಆಹಾರ ಸೇವನೆ ಕಡಿಮೆ ಮಾಡುವುದು ಒಳಿತು. ಗರ್ಭಧಾರಣೆಗೆ ಪ್ರಯತ್ನಿಸುವಾಗ ದಂಪತಿ ಸಾಕಷ್ಟು ಫೋಲಿಕ್‌ ಆ್ಯಸಿಡ್‌ ಲಭ್ಯ ಇರುವಂಥ ಆಹಾರ ಅಥವಾ ಔಷಧಿ ಸೇವಿಸುವುದು ಒಳಿತು. ಇದು ಹುಟ್ಟು ದೋಷಗಳನ್ನು ತಡೆಯುತ್ತದೆ ಹಾಗೂ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಕೆಫಿನ್‌ ಸೇವನೆಯಿಂದ ಫಲವಂತಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆಯೆಂಬುದು ಎಲ್ಲರಿಗೂ ಗೊತ್ತು. ಹಾಗಾಗಿ ಮಿತಿ ಮೀರಿದ ಕಾಫಿ, ಟೀ ಸೇವನೆ ಒಳ್ಳೆಯದಲ್ಲ. ಮದ್ಯಪಾನ ಮತ್ತು ಧೂಮಪಾನ ಎರಡೂ ವರ್ಜಿಸಿದರೆ ಒಳಿತು.

ಸತುವಿನ ಸೇವನೆಯಿಂದ ವೀರ್ಯಾಣು ಸಂಖ್ಯೆಯು ಹೆಚ್ಚುತ್ತದೆ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಕೇವಲ ಒಂದೇ ಪೋಷಕಾಂಶವನ್ನು ಹೆಚ್ಚುಹೆಚ್ಚಾಗಿ ಸೇವಿಸುವುದು ಒಳ್ಳೆಯದಲ್ಲ. ಪೋಷಕಾಂಶ ಯಾವುದೇ ಆಗಿರಲಿ ಸಮತೋಲಿತ ಆಹಾರವಿದ್ದಲ್ಲಿ ಫಲವಂತಿಕೆಯ ಪ್ರಮಾಣ ಹೆಚ್ಚುತ್ತದೆ.

ಗರ್ಭನಿರೋಧಕಗಳ ಬಳಕೆಯಿಂದಾಗಿ ಫಲವಂತಿಕೆಯ ಮೇಲೆ ಪರಿಣಾಮ ಬೀರುತ್ತದೆಯೇ?
ಸ್ವಲ್ಪಮಟ್ಟಿಗೆ ಇದು ನಿಜವೆಂದು ಹೇಳಬಹುದು. ಆದರೆ ಬಂಜೆತನಕ್ಕೆ ಕಾರಣವಾಗುವುದಿಲ್ಲವೆಂದು ಖಂಡಿತವಾಗಿಯೂ ಹೇಳಬಹುದು. ಮಹಿಳೆಯು ಯಾವ ಬಗೆಯ ಗರ್ಭನಿರೋಧಕಗಳನ್ನು ಬಳಸುತ್ತಾರೆ ಎಂಬುದರ ಮೇಲೆ ಗರ್ಭ ಧಾರಣೆಯಾಗಲು ಎಷ್ಟು ಸಮಯವಾಗಬಹುದು ಎಂದು ಹೇಳಬಹುದಾಗಿದೆ.

ಒಂದು ವೇಳೆ ಪ್ರೊಜೆಸ್ಟರಾನ್‌ ಅಂಶವುಳ್ಳ ಇಂಜೆಕ್ಷನ್‌ ಬಳಸುವ ಮಹಿಳೆಯರು ಅದನ್ನು ಬಿಟ್ಟ ಮೇಲೆ 9ತಿಂಗಳುಗಳಿಂದ 1 ವರ್ಷದವರೆಗೆ ಸಹಜವಾಗಿ ಅಂಡಾಣು ಬಿಡುಗಡೆ ಹಾಗೂ ಋತುಚಕ್ರಕ್ಕಾಗಿ ಕಾಯಬೇಕಾಗುತ್ತದೆ. ಅದಾದ ನಂತರ ಗರ್ಭಧಾರಣೆಗೆ ಯಾವುದೇ ತೊಂದರೆಯಾಗುವುದಿಲ್ಲ.

ಇನ್ನಾವುದೇ ಮಾತ್ರೆಗಳನ್ನು ಸೇವಿಸುತ್ತಿದ್ದರೆ ಮಾತ್ರೆ ಸೇವನೆಯನ್ನು ಬಿಟ್ಟ ನಂತರ 6ರಿಂದ 9 ತಿಂಗಳವರೆಗೂ ಗರ್ಭಧಾರಣೆಗೆ ಪ್ರಯತ್ನಿಸಬೇಕಾಗುತ್ತದೆ. ಒಂದು ವರ್ಷದ ನಂತರವೂ ಗರ್ಭಧಾರಣೆಯಾಗದಿದ್ದಲ್ಲಿ ವೈದ್ಯರನ್ನು ಒಮ್ಮೆ ಭೇಟಿಯಾಗುವುದು ಒಳ್ಳೆಯದು.

ಗರ್ಭನಿರೋಧಕಗಳು ಫಲವಂತಿಕೆಯ ಮೇಲೆ ಪರಿಣಾಮ ಬೀರಲಿವೆಯೇ?
ಕೆಲವೊಮ್ಮೆ ಗರ್ಭನಿರೋಧಕಗಳ ಬಳಕೆ ನಿಲ್ಲಿಸಿದ ಕೂಡಲೇ ಅಂಡಾಣು ಬಿಡುಗಡೆ ಪ್ರಕ್ರಿಯೆ ಆರಂಭವಾಗಬಹುದು. ಗರ್ಭನಿರೋಧಕಗಳ ಬಳಕೆ ನಿಂತೊಡನೆಯೇ ಗರ್ಭಧಾರಣೆಗೆ ಯತ್ನಿಸುವುದರಲ್ಲಿ ತಪ್ಪೇನಿಲ್ಲ. ಕೆಲವು ಮಹಿಳೆಯರಿಗೆ ಹಾರ್ಮೋನಿನ ಪ್ರಚೋದನೆ ಕೂಡಲೇ ಕಂಡು ಬರುತ್ತದೆ. ಅಂತಹವರಲ್ಲಿ ಕೂಡಲೇ ಗರ್ಭಧಾರಣೆಯಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. 

ಮಾಹಿತಿಗೆ ಸಂಪರ್ಕಿಸಿ: 18002084444.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT